ಗುರುವಾರ , ಜೂಲೈ 9, 2020
24 °C

ಅಭಿವೃದ್ಧಿ ಮೆರೆತ ಕಾಂಗ್ರೆಸ್‌ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಮೆರೆತ ಕಾಂಗ್ರೆಸ್‌ ಸರ್ಕಾರ

ಬಳ್ಳಾರಿ: ‘ಬಳ್ಳಾರಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್‌ ತನ್ನ ಮಾತು ಮರೆತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸಿ ಮನೆಗೆ ಕಳಿಸಲು ನಿರ್ಧರಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

‘2009ರಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದರೂ, ಕ್ಷೇತ್ರವನ್ನು ಕೈಬಿಟ್ಟಿದ್ದ ಸೋನಿಯಾಗಾಂಧಿ ಜಿಲ್ಲೆಗೆ ಘೋಷಿಸಿದ್ದ ಅಭಿವೃದ್ಧಿ ಪ್ಯಾಕೇಜ್‌ ಇನ್ನೂ ಅನುಷ್ಠಾನಗೊಂಡಿಲ್ಲ. ಈಗ ಇದೇ ತಿಂಗಳು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಕರೆ ತರುತ್ತಿದ್ದಾರೆ. ಈ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

‘ತಮ್ಮ ಕ್ಷೇತ್ರದಲ್ಲಿ ವಿಳಾಸವೇ ಇಲ್ಲದಂತಾಗಿರುವ ರಾಹುಲ್‌ಗಾಂಧಿ ಮತ್ತೆ ಜಿಲ್ಲೆಯಲ್ಲಿ ಸ್ಪರ್ಧಿಸುವ ಉದ್ದೇಶವೂ ಇರಬಹುದು. ಅದಕ್ಕೆ ಅವಕಾಶನೀಡಬಾರದು. ನೀಡಿದರೂ ಸಂಸದ ಬಿ.ಶ್ರೀರಾಮುಲು ಅವರು ಒಂದು ಲಕ್ಷ ಮತಗಳಿಂದ ಅವರನ್ನು ಸೋಲಿಸುತ್ತಾರೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವ ರೀತಿ ಬೂತ್‌ಮಟ್ಟದಲ್ಲಿ ಸಂಘಟನೆ ಬಲಗೊಳಿಸಬೇಕು’ ಎಂದು ಅವರು ಸೂಚಿಸಿದರು.

‘ಜಿ.ಸೋಮಶೇಖರ ರೆಡ್ಡಿ ಅವರನ್ನು ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ’ ಎಂದು ಕರೆ ನೀಡುವ ಮೂಲಕ ಯಡಿಯೂರಪ್ಪ ನಗರ ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ‘ಬಿಜೆಪಿಯು ತನ್ನ ಖರ್ಚಿನಲ್ಲಿ ಪರಿವರ್ತನಾ ಯಾತ್ರೆ ಮಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಹಣ ಬಳಸಿ, ಅಧಿಕಾರಿಗಳ ಮೂಲಕ ಕಾಂಗ್ರೆಸ್‌ ಸಮಾವೇಶವನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜನವರಿಯಲ್ಲಿ ಹೊಸ ತಾಲ್ಲೂಕುಗಳ ಉದ್ಘಾಟನೆ ಮಾಡುವುದಾಗಿ ಘೋಷಿಸಿದ ಸರ್ಕಾರ ಅದಕ್ಕೆ ಬೇಕಾದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ತಹಶೀಲ್ದಾರ್‌ರ ನೇಮಕವೂ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ಬಳಿಕವೇ ನಡೆಯುತ್ತದೆ’ ಎಂದು ವ್ಯಂಗ್ಯವಾಡಿದರು.

‘ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆ ಜಾರಿಗೆ ಅಡ್ಡಿಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅಲೆಯನ್ನು ತಗ್ಗಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಮುಕ್ತ ವಾತಾವರಣ ಮಾಡುವುದು ನಮ್ಮ ಉದ್ದೇಶ. ಅದಕ್ಕೂ ಮುನ್ನ ಬಳ್ಳಾರಿಯನ್ನು ಕಾಂಗ್ರೆಸ್‌ಮುಕ್ತ ಮಾಡಬೇಕು’ ಎಂದು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಕರೆ ನೀಡಿದರು.

‘ಕುಡಿಯಲಿಕ್ಕೆ ಮಹಾದಾಯಿ ನೀರು ಕೊಡಲು ಸಿದ್ಧ ಎಂದು ಹೇಳಿರುವ ಗೋವಾ ಮುಖ್ಯಮಂತ್ರಿಯವರ ವಿರುದ್ಧ ಮಾತನಾಡಿರುವ ಅಲ್ಲಿನ ಕಾಂಗ್ರೆಸ್‌ ಮುಖಂಡರನ್ನು ಒಪ್ಪಿಸಿ ಬಂದರೆ ಮಾತ್ರ ರಾಜ್ಯದ ಜನ ಸಿದ್ದರಾಮಯ್ಯ ಅವರನ್ನು ನಂಬುತ್ತಾರೆ’ ಎಂದರು.

ಕಾಂಗ್ರೆಸ್‌ ಏಜೆಂಟರ ಮಾಫಿಯಾ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಏಜೆಂಟರೇ ಮರಳು ಮಾಫಿಯಾ ನಡೆಸುತ್ತಿದ್ದಾರೆ. ಪರಿಣಾಮವಾಗಿ ಬಡವರಿಗೆ ಮನೆ ಕಟ್ಟಲು ಮರಳಿಲ್ಲದಂತಾಗಿದೆ. ಕೂಲಿಕಾರರು ಉಪವಾಸ ಇರುವಂತಾಗಿದೆ’ ಎಂದು ಮುಖಂಡ ಜಿ.ಸೋಮಶೇಖರ ರೆಡ್ಡಿ ದೂರಿದರು.

ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಕಂಪ್ಲಿ ಶಾಸಕ ಟಿ.ಎಚ್‌.ಸುರೇಶ್‌ಬಾಬು, ಮುಖಂಡರಾದ ಸಣ್ಣ ಪಕ್ಕೀರಪ್ಪ, ರೇಣುಕಾಚಾರ್ಯ, ಹಾಲಪ್ಪ, ಜೆ.ಶಾಂತಾ, ಮೃತ್ಯುಂಜಯ ಜಿನಗಾ, ಅಬ್ದುಲ್‌ ಅಜೀಂ, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ, ರಾಮಲಿಂಗಪ್ಪ, ಎಸ್‌.ಗುರುಲಿಂಗನಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ ಮತ್ತು ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ ವೇದಿಕೆಯಲ್ಲಿದ್ದರು.

ಬೈಕ್‌ ರ‍್ಯಾಲಿ: ಸಮಾವೇಶಕ್ಕೂ ಮುನ್ನ ಎಚ್‌.ಆರ್‌.ಗವಿಯಪ್ಪ ವೃತ್ತದಿಂದ ಆರಂಭವಾದ ಬೈಕ್‌ ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿ ದ್ದರು. ನಗರದ ಎಲ್ಲ ದಿಕ್ಕುಗಳಿಂದಲೂ ಜನ ನಡೆದು ಬಂದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.

‘ತೆಂಗಿನಕಾಯಿ ಒಡೆಯುವ ಕೆಲಸ’

ಬಳ್ಳಾರಿ:  ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ತಮ್ಮ ಕೊಡುಗೆ ಎಂದು ಹೇಳಿಕೊಳ್ಳುತ್ತಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕರಾದ ಅನಿಲ್‌ ಲಾಡ್‌ ಮತ್ತು ಎನ್‌.ವೈ. ಗೋಪಾಲಕೃಷ್ಣ ಅವರು ತೆಂಗಿನಕಾಯಿ ಒಡೆಯುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ’ ಎಂದು ಸಂಸದ ಬಿ.ಶ್ರೀರಾಮುಲು ಟೀಕಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದೇವರಂತೆ ಕೊಟ್ಟಿದ್ದನ್ನು ನಾವು ಪೂಜಾರಿಗಳಂತೆ ತಂದು ಹಾಕಿದೆವು. ಅದು ತಮ್ಮದು ಎನ್ನುತ್ತಾ ಕಾಂಗ್ರೆಸ್‌ ಶಾಸಕರು ಉದ್ಘಾಟಿಸಿ ತೆಂಗಿನಕಾಯಿ ಒಡೆಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ತುಂಗಭದ್ರಾ–ಕೃಷ್ಣ ನದಿ ಜೋಡಿಸಿ’

‘ತುಂಗಭದ್ರಾ ಮತ್ತು ಕೃಷ್ಣಾ ನದಿ ಜೋಡಿಸಿ ಜಿಲ್ಲೆಯ ನೀರಿನ ಕೊರತೆಯನ್ನು ನೀಗಿಸಬೇಕು’ ಎಂದು ಮನವಿ ಸಲ್ಲಿಸಿದ ತುಂಗಭದ್ರಾ ರೈತ ಸಂಘದ ಮುಖಂಡರಿಗೆ ಭರವಸೆ ನೀಡಿದ ಯಡಿಯೂರಪ್ಪ, ‘ಅಧಿಕಾರಕ್ಕೆ ಬಂದರೆ ಈ ಯೋಜನೆಗಾಗಿ ಮೋದಿ ಅವರ ಕಾಲಿಗೆ ಬಿದ್ದಾದರೂ ₹1,000 ಕೋಟಿ ವಿನಿಯೋಗಿಸಲಾಗುವುದು’ ಎಂದು ಭರವಸೆ ನೀಡಿದರು. ಸಂಘದ ದರೂರು ಪುರುಷೋತ್ತಮಗೌಡ ಮನವಿ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.