ಮಂಗಳವಾರ, ಆಗಸ್ಟ್ 4, 2020
22 °C

ಹಿರಿಯ ಮುಖಂಡರ ಬಂಡಾಯ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಹಿರಿಯ ಮುಖಂಡರ ಬಂಡಾಯ

ಚಿಂತಾಮಣಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಂಟಿಕೊಂಡಿದ್ದ ಭಿನ್ನಮತದ ಜಾಡ್ಯ ಇದೀಗ ಜೆಡಿಎಸ್‌ಗೂ ವ್ಯಾಪಿಸಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಬಲವಾದ ಬಿರುಕು ಕಾಣಿಸಿಕೊಂಡಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ. ಹಿಂದಿನಿಂದಲೂ ಸೋತರೂ ಗೆದ್ದರೂ ಜೆಡಿಎಸ್ ಪ್ರಬಲ ವಿರೋಧ ಪಕ್ಷವಾಗಿದೆ. ಶಾಸಕ ಎಂ.ಕೃಷ್ಣಾರೆಡ್ಡಿ ಹಾಗೂ ಮಾಜಿ ಮಂತ್ರಿ ಕೆ.ಎಂ.ಕೃಷ್ಣಾರೆಡ್ಡಿ ನಡುವೆ ಸ್ವಲ್ಪಮಟ್ಟಿಗೆ ಆರಂಭದಲ್ಲಿ ಭಿನ್ನಮತ ಇತ್ತು. ಅದನ್ನು ಹೊರತುಪಡಿಸಿ ಎಂದೂ ಭಿನ್ನಾಭಿಪ್ರಾಯಗಳು ಇರಲಿಲ್ಲ. ‌

ಶಾಸಕ ಎಂ.ಕೃಷ್ಣಾರೆಡ್ಡಿ ಗುಂಪು,ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್ ನೇತೃತ್ವದ ಹಿರಿಯ ನಾಯಕರ ಗುಂಪು, ಡಾ.ಎಂ.ಸಿ.ಸುಧಾಕರ್‌ ಬಣ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ಗುಂಪು ಹೀಗೆ ಸದ್ಯ ಜೆಡಿಎಸ್‌ನಲ್ಲಿ 3 ಗುಂಪುಗಳು ಇವೆ ಎಂದು ಆ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಶಾಸಕರು ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಮೌಲ್ಯಯುತವಾಗಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ಹಿರಿಯರನ್ನು ಬದಿಗಿಟ್ಟಿದ್ದಾರೆ. ತಮ್ಮ ಆಪ್ತ ಕಾರ್ಯದರ್ಶಿಗೆ ಮಾತ್ರ ಪ್ರಾಧಾನ್ಯ ನೀಡುತ್ತಿದ್ದಾರೆ ಎಂಬುದು ಹಿರಿಯ ಮುಖಂಡರ ಆರೋಪ.

ಶಾಸಕರ ಹಿಂದಿರುವ ಗುಂಪು ತಮಗೆ ಆಗದವರ ವಿರುದ್ಧ ವೈಯಕ್ತಿ‌ಕ ದ್ವೇಷ ಸಾಧಿಸುತ್ತದೆ. ಇವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸುವರು.

ಪಕ್ಷದ ಅತ್ಯಂತ ಹಿರಿಯ ನಾಯಕ ತಳಗವಾರ ಟಿ.ಎನ್‌.ರಾಜಗೋಪಾಲ್‌ ಮಾತಿಗೂ ಮನ್ನಣೆ ಇಲ್ಲದೆ ಆಪ್ತಕಾರ್ಯದರ್ಶಿ ವೈ.ಎಚ್‌.ನಜೀರ್‌ ಅಹಮದ್‌ ಹಾಗೂ ಕೆಲವು ನಗರಸಭೆ ಸದಸ್ಯರ ಮಾತಿಗೆ ಕೃಷ್ಣಾರೆಡ್ಡಿ ಮಣೆ ಹಾಕುತ್ತಾರೆ. ಈ ಮುಖಂಡರ ಕುರಿತು ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕಚೇರಿಗಳಲ್ಲಿ ಅಧಿಕಾರಿಗಳ ಮೇಲೆ ಆವಾಜ್‌ ಹಾಕಿ ದರ್ಬಾರ್‌ ಮಾಡುವುದು, ಭ್ರಷ್ಟಾಚಾರದ ಆರೋಪಗಳು ಇವೆ ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರೊಬ್ಬರು ದೂರುವರು.

ಟಿ.ಎನ್.ರಾಜಗೋಪಾಲ್, ರಾಜ್ಯ ಘಟಕದ ಉಪಾಧ್ಯಕ್ಷ ಕುರುಬೂರು ರವೀಂದ್ರಗೌಡ, ಯುವಜನತಾದಳದ ಅಧ್ಯಕ್ಷ ಗೋಪಲ್ಲಿ ರಘುನಾಥರೆಡ್ಡಿ ಪರ್ಯಾಯ ಅಭ್ಯರ್ಥಿಯ ಹುಡುಕಾಟ ದಲ್ಲಿ ನಿರತರಾಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಿಕಟವಾಗಿರುವ ನಿವೃತ್ತ ಡಿವೈಎಸ್‌ಪಿ‌ ಕೋನಪ್ಪ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ.

3 ಬಾರಿ ನಗರಸಭೆ ಸದಸ್ಯರಾಗಿರುವ ಹಿರಿಯ ಜೆಡಿಎಸ್ ಮುಖಂಡ ಅಬ್ಬುಗುಂಡು ಶ್ರೀನಿವಾಸರೆಡ್ಡಿ ನೇತೃತ್ವದ ಗುಂಪು ಗುರುವಾರ ಕಾಂಗ್ರೆಸ್‌ ಸೇರಿದೆ. ಇದು ಜೆಡಿಎಸ್‌ಗೆ ಬಲವಾದ ಹೊಡೆತ ಎಂದು ಕಾರ್ಯಕರ್ತರು ಅಭಿಪ್ರಾಯಪಡುವರು.

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಷ್ಠಾವಂತ ಕಾರ್ಯಕರ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಶಾಸಕ ಎಂ.ಕೃಷ್ಣಾರೆಡ್ಡಿ ಸಹ ಸೌಮ್ಯವಾಗಿಯೇ ಏಟಿಗೆ ಎದಿರೇಟು ನೀಡಲು ಸಜ್ಜಾಗಿದ್ದಾರೆ.

ಡಾ.ಎಂ.ಸಿ.ಸುಧಾಕರ್‌ ಸ್ವತಂತ್ರವಾಗಿ ಸ್ಪರ್ಧಿಸಿದರೆ ಎಂ.ಕೃಷ್ಣಾರೆಡ್ಡಿ ಕಾಂಗ್ರೆಸ್‌ ಸೇರುತ್ತಾರೆ. ಈ ಬಗ್ಗೆ ಈಗಾಗಲೇ ಸಂಸದ ಕೆ.ಎಚ್‌.ಮುನಿಯಪ್ಪ ಜತೆ ಮಾತುಕತೆ ನಡೆದಿದೆ ಎಂಬ ಊಹಾಪೋಹಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ಬೇರೆ ಪಕ್ಷ ಸೇರುವುದಿಲ್ಲ‌

‘ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿವೆ. ಅದನ್ನು ಶೀಘ್ರದಲ್ಲೇ ಸಭೆ ನಡೆಸಿ ಬಗೆಹರಿಸಲಾಗುವುದು’ ಎಂದು ಶಾಸಕ ಎಂ.ಕೃಷ್ಣಾ ರೆಡ್ಡಿ ಹೇಳಿದರು. ‘ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಅವರ ಗೆಲುವಿಗಾಗಿ ಕೆಲಸ ಮಾಡುತ್ತೇನೆ. ಬೇರೆ ಪಕ್ಷಕ್ಕೆ ಸೇರುವುದು ಅಥವಾ ಇನ್ನೊಂದು ಪಕ್ಷ ಕಟ್ಟುವ ಯಾವುದೇ ಯೋಚನೆ ಇಲ್ಲ. ಸುದ್ದಿಗಳು ಊಹಾಪೋಹ’ ಎಂದರು.

ಅಸಮಾಧಾನ ಶಮನಕ್ಕೆ ಯತ್ನ

‘ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನ ಇರುವುದು ನಿಜ. ಶಾಸಕರು ಮತ್ತು ಹಿರಿಯ ನಾಯಕರು ಸಭೆ ಸೇರಿ ಹಿರಿಯ ನಾಯಕರ ಅಸಮಾಧಾನವನ್ನು ಶಮನ ಮಾಡಲಾಗುವುದು’ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್‌ ತಿಳಿಸಿದರು. ‘ಪಕ್ಷ ತ್ಯಜಿಸಲು ನಿಶ್ಚಯಿಸಿರುವ ನಾಯಕರ ಜತೆ ‌ಮಾತುಕತೆ ನಡೆಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.