ಸೋಮವಾರ, ಜೂಲೈ 6, 2020
21 °C
ಮೇವು ಹಗರಣದ ಶಿಕ್ಷೆ ಪ್ರಮಾಣ ಪ್ರಕಟ

ಲಾಲು ಪ್ರಸಾದ್‌ಗೆ ಮೂರೂವರೆ ವರ್ಷ ಜೈಲು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಾಲು ಪ್ರಸಾದ್‌ಗೆ ಮೂರೂವರೆ ವರ್ಷ ಜೈಲು

ರಾಂಚಿ: ಮೇವು ಹಗರಣದ ತಪ್ಪಿತಸ್ಥ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಿದೆ.

ಒಟ್ಟು 16 ತಪ್ಪಿತಸ್ಥರ ವಿಚಾರಣೆ ಪೂರ್ಣಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್‌ ಸಿಂಗ್‌ ಅವರು ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು.

‘2014ರಲ್ಲಿ ಲಾಲು ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ 21 ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಹಲವು ಬಾರಿ ಜೈಲಿನಲ್ಲಿದ್ದರು. ಹಾಗಾಗಿ ಅವರ ಬಗ್ಗೆ ಔದಾರ್ಯ ತೋರಿ, ಕಡಿಮೆ ಶಿಕ್ಷೆ ವಿಧಿಸಬೇಕು’ ಎಂದು ಲಾಲು ಪರ ವಕೀಲರು ಕೋರಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಿಐ ವಕೀಲರು, ಲಾಲು ಪ್ರಸಾದ್‌ ಅವರ ಆರೋಗ್ಯ ಉತ್ತಮವಾಗಿದ್ದು, ಈಚೆಗೆ ರಾಜಕೀಯ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು.ಮೇವು ಹಗರಣ: ಅಂದಿನಿಂದ ಇಂದಿನವರೆಗೆ

ಜನವರಿ, 1996: ಚಾಯಿಬಾಸಾ ಜಿಲ್ಲಾಧಿಕಾರಿಯಾಗಿದ್ದ ಅಮಿತ್‌ ಖರೆ ಅವರು ಪಶುಸಂಗೋಪನಾ ಇಲಾಖೆಯಲ್ಲಿ ತಪಾಸಣೆ ನಡೆಸಿದಾಗ ಮೇವು ಹಗರಣ ಬಯಲಿಗೆ. ಶೋಧಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದ್ದ ದಾಖಲೆಗಳು ಹಗರಣ ನಡೆದಿರುವ ಬಗ್ಗೆ ಪುರಾವೆ ಒದಗಿಸಿತ್ತು

ಮಾರ್ಚ್‌, 1996: ಮೇವು ಹಗರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ ಪಟ್ನಾ ಹೈಕೋರ್ಟ್‌. ತೀರ್ಪಿನ ಅನುಸಾರ ಚಾಯಿಬಾಸಾ (ಅವಿಭಜಿತ ಬಿಹಾರ) ಖಜಾನೆಯಿಂದ ಹಣ ಪಡೆದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು‌

ಜೂನ್‌, 1997: ಆರೋಪಪಟ್ಟಿ ಸಲ್ಲಿಸಿದ ಸಿಬಿಐ. ಆರೋಪಿಗಳಲ್ಲಿ ಒಬ್ಬರಾಗಿ ಲಾಲು ಪ್ರಸಾದ್‌ ಹೆಸರು ದಾಖಲು

ಜುಲೈ, 1997: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಲಾಲು. ಪತ್ನಿ ರಾಬ್ಡಿದೇವಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ. ಸಿಬಿಐ ನ್ಯಾಯಾಲಯಕ್ಕೆ ಶರಣಾದ ಲಾಲು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ

ಏಪ್ರಿಲ್‌, 2000: ರಾಬ್ಡಿ ದೇವಿ ಕೂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದು ಹೆಸರಿಸಲಾಯಿತು. ಆದರೆ, ಅವರಿಗೆ ಜಾಮೀನು ಮಂಜೂರು

ಅಕ್ಟೋಬರ್‌, 2001: ರಾಜ್ಯ ವಿಭಜನೆ ನಂತರ ಜಾರ್ಖಂಡ್‌ ಹೈಕೋರ್ಟ್‌ಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಫೆಬ್ರುವರಿ, 2002: ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಡಿಸೆಂಬರ್‌, 2006: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಲಾಲು ಮತ್ತು ರಾಬ್ಡಿದೇವಿ ಅವರನ್ನು ಖುಲಾಸೆ ಮಾಡಿದ ಪಟ್ನಾದ ಅಧೀನ ನ್ಯಾಯಾಲಯ

ಮಾರ್ಚ್‌, 2012: ಲಾಲು ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಡಾ. ಜಗನ್ನಾಥ್‌ ಮಿಶ್ರಾ ವಿರುದ್ಧ ದೋಷಾರೋಪ ನಿಗದಿ

ಸೆಪ್ಟೆಂಬರ್‌ 30, 2013: ಮೇವು ಹಗರಣದ ಮತ್ತೊಂದು ಪ್ರಕರಣದಲ್ಲಿ (ಆರ್‌ಸಿ 20ಎ/96) ಲಾಲು, ಮಿಶ್ರಾ ಮತ್ತು ಇತರ 45 ಮಂದಿ ತಪ್ಪಿತಸ್ಥರು ಎಂದು ಸಾಬೀತು. ರಾಂಚಿ ಜೈಲಿಗೆ ಲಾಲು. ಲೋಕಸಭೆಯಿಂದ ಅನರ್ಹಗೊಂಡ ಆರ್‌ಜೆಡಿ ಮುಖ್ಯಸ್ಥ. ಚುನಾವಣೆ ಸ್ಪರ್ಧಿಸುವುದಕ್ಕೂ ನಿರ್ಬಂಧ

ಡಿಸೆಂಬರ್‌, 2013: ಲಾಲುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

ಮೇ, 2017: ಸುಪ್ರೀಂ ಕೋರ್ಟ್‌ನ ಮೇ 8ರ ತೀರ್ಪಿನ ನಂತರ ವಿಚಾರಣೆ ಪುನಾರರಂಭ. ದೇವಗಡ ಖಜಾನೆಯಿಂದ ಹಣ ಪಡೆದ ಪ್ರಕರಣಕ್ಕೆ (ಆರ್‌ಸಿ 64ಎ/96) ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಣೆ ಆರಂಭಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ ‘ಸುಪ್ರೀಂ’. ಒಂಬತ್ತು ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸಲು ನಿರ್ದೇಶನ

ಡಿಸೆಂಬರ್‌ 23, 2017: ಲಾಲು ಪ್ರಸಾದ್‌ ಮತ್ತು ಇತರ 15 ಆರೋಪಿಗಳು ಅಪರಾಧಿಗಳು ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ. ಒಟ್ಟು ಆರು ಪ್ರಕರಣಗಳ ಪೈಕಿ ಎರಡರಲ್ಲಿ ಲಾಲು ತಪ್ಪಿತಸ್ಥ ಎಂಬುದು ಸಾಬೀತು.

ಜನವರಿ 06, 2018: ಲಾಲು ಪ್ರಸಾದ್‌ಗೆ 3 ವರ್ಷ 6 ತಿಂಗಳು ಶಿಕ್ಷೆ, ₹ 5 ಲಕ್ಷ ದಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.