ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್‌ ಪಾಂಡ್ಯ ಕೆಚ್ಚೆದೆಯ ಬ್ಯಾಟಿಂಗ್‌: ಭಾರತಕ್ಕೆ ಇನಿಂಗ್ಸ್‌ ಹಿನ್ನಡೆ

Last Updated 6 ಜನವರಿ 2018, 14:54 IST
ಅಕ್ಷರ ಗಾತ್ರ

ಕೇಪ್‌ಟೌನ್: ಇಲ್ಲಿನ ನ್ಯೂಲ್ಯಾಂಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫ್ರೀಡಂ ಟೆಸ್ಟ್ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 209ರನ್‌ಗಳಿಗೆ ಆಲೌಟ್‌ ಆಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆತಿಥೇಯ ಆಫ್ರಿಕಾ ತಂಡ 286ರನ್‌ಗಳಿಗೆ ಇನಿಂಗ್ಸ್‌ ಮುಗಿಸಿತ್ತು. ಭಾರತ ಪರ ಉತ್ತಮ ದಾಳಿ ಸಂಘಟಿಸಿ ಫಾಫ್ ಡು ಪ್ಲೆಸಿ ಬಳಗವನ್ನು ಕಾಡಿದ್ದ ‘ಮೀರಠ್ ಎಕ್ಸ್‌ಪ್ರೆಸ್’ ಭುವನೇಶ್ವರ್ ಕುಮಾರ್‌ 87 ರನ್‌ ನೀಡಿ 4 ವಿಕೆಟ್‌ ಪಡೆದು ಮಿಂಚಿದ್ದರು.

ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಮಿಂಚಿನ ಬೌಲಿಂಗ್‌ ನಡೆಸಿದ ಆಫ್ರಿಕಾದ ವೇಗಿಗಳು ಮೊದಲ ದಿನವೇ ವಿರಾಟ್‌ ಬಳಗದ ಬ್ಯಾಟಿಂಗ್‌ ಬಲ ಕುಗ್ಗಿಸಿದ್ದರು.

ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ  3 ವಿಕೆಟ್‌ ಕಳೆದುಕೊಂಡು 28 ರನ್‌ ಗಳಿಸಿದ್ದ ಭಾರತ ತಂಡ ಎರಡನೇ ದಿನವೂ ಕಳಪೆ ಬ್ಯಾಟಿಂಗ್‌ ಮುಂದುವರಿಸಿತ್ತು. ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ಟೆಸ್ಟ್‌ ಪ‍ರಿಣಿತ ಚೇತೇಶ್ವರ್ ಪೂಜಾರ ಮತ್ತು ರೋಹಿತ್ ಶರ್ಮಾ ತಂಡದ ನಿರೀಕ್ಷೆ ಹುಸಿಗೊಳಿಸಿದರು.

ಶರ್ಮಾ 11ರನ್‌ ಗಳಿಸಿ ಔಟಾದರೆ ಪೂಜಾರ ಆಟ 25ರನ್‌ಗೆ ಸೀಮಿತವಾಯಿತು.

ಒಂದು ಹಂತದಲ್ಲಿ 92ರನ್‌ ಆಗುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿದ್ದ ವಿರಾಟ್‌ ಬಳಗವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಹರಿಣಗಳ ಲೆಕ್ಕಾಚಾರವನ್ನು ತಳಮೇಲು ಮಾಡಿದ್ದು ಬೌಲಿಂಗ್‌ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ.

ಏಕದಿನ ಕ್ರಿಕೆಟ್‌ನಂತೆ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಪಾಂಡ್ಯ 95 ಎಸೆತಗಳಲ್ಲಿ 93ರನ್‌ ಗಳಿಸಿದರು. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವು ನೀಡಿದ ಭುವೇಶ್ವರ್‌ ಕುಮಾರ್‌ 25ರನ್‌ ಗಳಿಸಿ ಪಾಂಡ್ಯಗೆ ಉತ್ತಮ ಬೆಂಬಲ ನೀಡಿದರು.

ಒಟ್ಟಾರೆ ಭಾರತ ತಂಡ 73.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು, 77ರನ್‌ಗಳ ಹಿನ್ನಡೆ ಅನುಭವಿಸಿತು. ದಕ್ಷಿಣ ಆಫ್ರಿಕಾ ಪರ ವೆರ್ನಾನ್ ಫಿಲಾಂಡರ್ ಹಾಗೂ ಕಗಿಸೊ ರಬಾಡ ತಲಾ ಮೂರು ವಿಕೆಟ್‌ ಕಬಳಿಸಿದರೆ, ಡೇಲ್ ಸ್ಟೇಯ್ನ್ ಮತ್ತು ಮಾರ್ನ್ ಮಾರ್ಕೆಲ್ ತಲಾ 2 ವಿಕೆಟ್ ಪಡೆದರು.

ಸದ್ಯ ದಕ್ಷಿಣ ಆಫ್ರಿಕಾ ತಂಡ ಎರಡನೇ ಇನಿಂಗ್ಸ್‌ ಆರಂಭಿಸಿದ್ದು, 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 13ರನ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT