ಸೋಮವಾರ, ಆಗಸ್ಟ್ 3, 2020
26 °C

ಪಾಕ್: ‘ಸರ್ಕಾರ–ಸೇನೆ ನಡುವೆ ಹೊಂದಾಣಿಕೆಯಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

ಪಾಕ್: ‘ಸರ್ಕಾರ–ಸೇನೆ ನಡುವೆ ಹೊಂದಾಣಿಕೆಯಿಲ್ಲ’

ವಾಷಿಂಗ್ಟನ್‌: ‘ಪಾಕಿಸ್ತಾನದಲ್ಲಿ ಸರ್ಕಾರ ಹಾಗೂ ಸೇನೆಯ ನಡುವೆ ಉದ್ವಿಗ್ನ ಪರಿಸ್ಥಿತಿಯಿದ್ದು, ಭಯೋತ್ಪಾದನೆ ನಿಗ್ರಹ ನಿಟ್ಟಿನಲ್ಲಿ ಆ ರಾಷ್ಟ್ರದ ಜತೆಗೆ ಪರಿಣಾಮಕಾರಿ ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಅಸ್ಥಿರತೆಯಿದ್ದು, ಆರೇಳು ತಿಂಗಳಲ್ಲಿ ಹೊಸತಾಗಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಕಾರಣದಿಂದ ಸೇನೆ ಹಾಗೂ ಸರ್ಕಾ

ರದ ನಡುವೆ ಉದ್ವಿಗ್ನತೆ ಮುಂದುವರಿದಿದೆ’ ಎಂದು ಅವರು ತಿಳಿಸಿದ್ದಾರೆ.

ತಾಲಿಬಾನ್ ಹಾಗೂ ಹಕ್ಕಾನಿ ಜಾಲದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದ ಪಾಕಿಸ್ತಾನದ ಮೇಲೆ ಅಮೆರಿಕವು ಒತ್ತಡ ಹೇರುತ್ತಿದ್ದು, ಅದರ ಬೆನ್ನಲ್ಲೇ ಟ್ರಂಪ್‌ ಸರ್ಕಾರದ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.

ಇನ್ನೊಂದೆಡೆ, ತಾಲಿಬಾನ್, ಹಕ್ಕಾನಿ ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಆ ದೇಶದ ಜೊತೆ ವ್ಯವಹರಿಸುವಾಗ ಎಲ್ಲ ಆಯ್ಕೆಗಳು ಮುಕ್ತವಾಗಿರಲಿವೆ ಎಂದು ಅಮೆರಿಕ ಶನಿವಾರ ಎಚ್ಚರಿಸಿದೆ.

ಪಾಕಿಸ್ತಾನ ಉಗ್ರರ ಸ್ವರ್ಗವಾಗುವುದನ್ನು ತಡೆಯಲು ವಿಫಲವಾಗಿದೆ ಎಂಬ ಕಾರಣಕ್ಕೆ ಸೇನಾ ನೆರವು ತಡೆಹಿಡಿಯುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಈ ಎಚ್ಚರಿಕೆ ನೀಡಿದೆ.

ನೆರವು ಕಡಿತ, ಮಸೂದೆಗೆ ಟ್ರಂಪ್ ಬೆಂಬಲ

ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ನೆರವನ್ನು ಸ್ಥಗಿತಗೊಳಿಸಿ, ಆ ಹಣವನ್ನು ಅಮೆರಿಕದಲ್ಲಿ ರಸ್ತೆ, ಸೇತುವೆಯಂತಹ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಮಸೂದೆಗೆ ಡೊನಾಲ್ಡ್ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸಂಸದ ರಾಂಡ್ ಪೌಲ್ ಅವರು ಪ್ರಸ್ತಾಪಿಸಿರುವ ಈ  ಮಸೂದೆಯನ್ನು ಮೆಚ್ಚಿರುವ ಟ್ರಂಪ್, ‘ಗುಡ್ ಐಡಿಯಾ ರಾಂಡ್’ ಎಂದು ಟ್ವೀಟ್ ಮಾಡಿದ್ದಾರೆ.

‘ಅಮೆರಿಕದ ಧ್ವಜ ಸುಡುವ ಪ್ರವೃತ್ತಿ ಇರುವ ಪಾಕಿಸ್ತಾನದಂತಹ ದೇಶಗಳಿಗೆ ಅಮೆರಿಕ ಒಂದು ನಯಾ ಪೈಸೆಯನ್ನೂ ನೀಡಬಾರದು. ಆ ಹಣವನ್ನು ದೇಶದ ಮೂಲಸೌಕರ್ಯಕ್ಕೆ ಬಳಸಿಕೊಳ್ಳಬೇಕು’ ಎಂಬ ಉದ್ದೇಶದಿಂದ ಈ ಮಸೂದೆಯನ್ನು ಮಂಡಿಸುತ್ತಿದ್ದೇನೆ’ ಎಂದ ರಾಂಡ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.