ಬುಧವಾರ, ಜೂಲೈ 8, 2020
29 °C

ಭಾರಿ ಮುನ್ನಡೆಗೆ ಆಸ್ಟ್ರೇಲಿಯಾ ತಳಪಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರಿ ಮುನ್ನಡೆಗೆ ಆಸ್ಟ್ರೇಲಿಯಾ ತಳಪಾಯ

ಸಿಡ್ನಿ: ನಾಲ್ಕು ಪಂದ್ಯಗಳಲ್ಲಿ ಪಾರಮ್ಯ ಮೆರೆದ ಆಸ್ಟ್ರೇಲಿಯಾ ಆ್ಯಷಸ್‌ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ತಂಡವನ್ನು ನಿರಾಸೆಯ ಕೂಪಕ್ಕೆ ತಳ್ಳಲು ತಯಾರಾಗಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉಸ್ಮಾನ್‌ ಖ್ವಾಜಾ ಅವರ ಶತಕ ಮತ್ತು ಮಾಷ್‌ ಸಹೋದರರಾದ ಶಾನ್

ಮತ್ತು ಮಿಚೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆತಿಥೇಯರು ಭಾರಿ ಮುನ್ನಡೆಗೆ ಅಡಿಪಾಯ ಹಾಕಿದ್ದಾರೆ.

ಮೂರನೇ ದಿನವಾದ ಶನಿವಾರ ದಿನದಾಟ ಮುಕ್ತಾಯಗೊಂಡಾಗ ಈ ತಂಡ ನಾಲ್ಕು ವಿಕೆಟ್‌ಗಳಿಗೆ 479 ರನ್‌ ಗಳಿಸಿದ್ದು 133 ರನ್‌ಗಳ ಮುನ್ನಡೆ ಗಳಿಸಿದೆ. ಶಾನ್ ಮಾರ್ಷ್‌ 98 ಮತ್ತು ಮಿಚೆಲ್ ಮಾರ್ಷ್‌ 63 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ ಮೊತ್ತವಾದ 346 ರನ್‌ಗಳನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಶುಕ್ರವಾರ ಒಂದು ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. 86 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡ ನಂತರ ಚೇತರಿಕೆ ಕಂಡಿತು.

ಉಸ್ಮಾನ್ ಖ್ವಾಜಾ ಮತ್ತು ನಾಯಕ ಸ್ಟೀವ್ ಸ್ಮಿತ್‌ ಇನಿಂಗ್ಸ್ ಕಟ್ಟಿದ್ದರು. ಶುಕ್ರವಾರ ಇವರಿಬ್ಬರು ತಲಾ 91 ಮತ್ತು 44 ರನ್‌ ಗಳಿಸಿ ಔಟಾಗದೆ ಉಳಿದಿದ್ದರು.

ಶನಿವಾರ ಬೆಳಿಗ್ಗೆ ಸ್ಮಿತ್‌ (83; 158 ಎ, 5 ಬೌಂ) ಅರ್ಧಶತಕ ಗಳಿಸಿ ಔಟಾದರೂ ಖ್ವಾಜಾ ಮೋಹಕ ಬ್ಯಾಟಿಂಗ್ ಮುಂದುವರಿಸಿದರು. ಆ್ಯಷಸ್‌ ಸರಣಿಯಲ್ಲಿ ಮೊದಲ ಶತಕ ಮತ್ತು ಒಟ್ಟಾರೆ ಆರನೇ ಶತಕ ಗಳಿಸಿದ ಅವರು 171 ರನ್‌ ಗಳಿಸಿದರು. ಇನ್ನೂ ಮೂರು ರನ್ ಗಳಿಸಿದ್ದರೆ ಜೀವನಶ್ರೇಷ್ಠ (174) ರನ್‌ಗಳ ಗಡಿಯನ್ನು ದಾಟುವ ಅವಕಾಶ ಅವರಿಗಿತ್ತು.

ಒಟ್ಟು 515 ನಿಮಿಷ ಕ್ರೀಸ್‌ನಲ್ಲಿದ್ದ ಈ ಎಡಗೈ ಬ್ಯಾಟ್ಸ್‌ಮನ್‌ 381 ಎಸೆತ ಎದುರಿಸಿ 18 ಬೌಂಡರಿ ಮತ್ತು ಒಂದು ಸಿಕ್ಸರ್‌ ಗಳಿಸಿದ್ದರು.

ಖ್ವಾಜಾ ವಿಕೆಟ್ ಕಬಳಿಸಿ ಲೆಗ್‌ ಸ್ಪಿನ್ನರ್‌ ಮೇಸನ್‌ ಕ್ರೇನ್‌ ಚೊಚ್ಚಲ ಟೆಸ್ಟ್ ಕ್ರಿಕೆಟ್ ಗಳಿಸಿದ ಸಂಭ್ರಮದಲ್ಲಿ ಮಿಂದೆದ್ದರು.

‘ಸ್ಟೀವ್ ಸ್ಮಿತ್ ಅವರಂಥ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಟೆಸ್ಟ್‌ನಲ್ಲಿ ಸಾಕಷ್ಟು ಬಾರಿ ಶತಕದ ಸಂಭ್ರಮ ಅನುಭವಿಸುವ ಅವಕಾಶ ಇರುತ್ತದೆ. ನಮ್ಮಂಥವರಿಗೆ ಇದು ಅಪರೂಪದ ಕ್ಷಣ. ಆದ್ದರಿಂದ ಇಂಥ ಸಾಧನೆ ಮಾಡಿದಾಗ ಮನಸಾರೆ ಖುಷಿ ಅನುಭವಿಸಬೇಕು’ ಎಂದು ಸ್ಮಿತ್ ಜೊತೆ 188 ರನ್‌ಗಳ ಜೊತೆಯಾಟ ಆಡಿದ ಖ್ವಾಜಾ ಹೇಳಿದರು.

ಮಾರ್ಷ್ ಸಹೋದರರ ಕಮಾಲ್‌

ಖ್ವಾಜಾ ಔಟಾದ ನಂತರ ಶಾನ್ ಮಾರ್ಷ್‌ ಮತ್ತು ಮಿಚೆಲ್‌ ಮಾರ್ಷ್‌ ಮಿಂಚಿನ ಆಟವಾಡಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ

ಪ್ರೇಕ್ಷಕರನ್ನು ರಂಜಿಸಿದ ಇವರಿಬ್ಬರು ಇಂಗ್ಲೆಂಡ್ ಬೌಲರ್‌ಗಳನ್ನು ಕಂಗೆಡಿಸಿದರು. ಖ್ವಾಜಾ ಜೊತೆ ನಾಲ್ಕನೇ ವಿಕೆಟ್‌ಗೆ 101 ರನ್‌ ಸೇರಿಸಿದ ಶಾನ್ ಮುರಿಯದ ಐದನೇ ವಿಕೆಟ್‌ಗೆ ಮಿಚೆಲ್ ಜೊತೆ 104 ರನ್‌ ಸೇರಿಸಿದರು. ಸರಣಿಯ ನಾಲ್ಕನೇ ಅರ್ಧಶತಕ ಗಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.