ಸೋಮವಾರ, ಜೂಲೈ 6, 2020
21 °C

ಚುನಾವಣಾ ಸೈಬರ್ ಸಮರಕ್ಕೆ ₹150 ಕೋಟಿ !

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಚುನಾವಣಾ ಸೈಬರ್ ಸಮರಕ್ಕೆ ₹ 150 ಕೋಟಿ !

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪಕ್ಷಗಳು ಪ್ರಧಾನ ಅಸ್ತ್ರವಾಗಿ ಬಳಸುತ್ತಿದ್ದು, ಇದಕ್ಕಾಗಿ ಸುಮಾರು ₹ 100–150 ಕೋಟಿವರೆಗೆ ಖರ್ಚು ಮಾಡಲಿವೆ.

ಸಾಂಪ್ರದಾಯಿಕ ‘ಮೈದಾನ ರಾಜಕಾರಣ’ದ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಸಲು ಮಾಹಿತಿ ತಂತ್ರಜ್ಞಾನ, ಮಾಧ್ಯಮ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರನ್ನು ಮೂರೂ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಆಯಾ ಸಿದ್ಧಾಂತಕ್ಕೆ ಸರಿ ಹೊಂದುವವರನ್ನು ಆಯಾಯ ಪಕ್ಷಗಳು ಆಯ್ಕೆ ಮಾಡಿಕೊಂಡು ಅವುಗಳಿಗೆ ಹಣ ನೀಡುತ್ತಿವೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ ತಿಳಿಸಿವೆ.

ಈ ಸಮರದಲ್ಲಿ ಪ್ರಧಾನವಾಗಿ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ ಆಪ್‌ ಮತ್ತು ಇನ್‌ಸ್ಟಾಗ್ರಾಮ್ ಬಳಸಲಾಗುತ್ತಿದೆ. ಟ್ವಿಟರ್‌ ಮೂಲಕ ಯಾವುದೊ ಒಂದು ವಿಷಯವನ್ನು ‘ಟ್ರೆಂಡ್‌ ಸೆಟ್‌’ ಮಾಡಿ, ಅದರ ಮೇಲೆ ಚರ್ಚೆಯನ್ನು ಮುನ್ನಡೆಸುವ ತಂತ್ರವನ್ನು ಅನುಸರಿಸಲಾಗುತ್ತಿದೆ. ಅಭಿವೃದ್ಧಿ, ಹಿಂದುತ್ವ, ಮಠ– ಮಂದಿರ, ರಾಜಕೀಯ ಹತ್ಯೆ ಹೀಗೆ ವಿವಿಧ ವಿಷಯಗಳಲ್ಲಿ ಆಯಾ ದಿನದ ವಿದ್ಯಮಾನ ನೋಡಿ ಟ್ರೆಂಡ್‌ ಸೆಟ್‌ ಮಾಡಲಾಗುತ್ತದೆ ಎಂದು ರಾಜಕೀಯ ಪಕ್ಷವೊಂದರ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರೊಬ್ಬರು ತಿಳಿಸಿದರು.

ಎಲ್ಲವೂ ರಹಸ್ಯ

ಸಾಮಾಜಿಕ ಜಾಲತಾಣದಲ್ಲಿ ಪಕ್ಷಗಳನ್ನು ಮುನ್ನಡೆಸುವ ಗುಂಪುಗಳು ರಹಸ್ಯವಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಮೂರು ಪಕ್ಷಗಳ ಬೆರಳೆಣಿಕೆ ನಾಯಕರನ್ನು ಬಿಟ್ಟರೆ ಉಳಿದವರಿಗೆ ಸುಳಿವೂ ಇರುವುದಿಲ್ಲ. ಇದನ್ನು ಕಾರ್ಯಗತಗೊಳಿಸಲು ಮೂರು ಹಂತದ ತಂಡಗಳಿರುತ್ತವೆ. ಮೊದಲ ಹಂತದ ತಂಡ ಪ್ರತಿದಿನ ಹೊಸ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕುತ್ತದೆ. ಎರಡನೇ ಹಂತ ತಂಡ ಆ ಪರಿಕಲ್ಪನೆಗೆ ಜೀವ ತುಂಬುತ್ತದೆ. ಮೂರನೇ ತಂಡ ವಿವಿಧ ತಾಣಗಳಿಗೆ ಅಪ್‌ಲೋಡ್‌ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ.

ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಣ್ಣ– ಸಣ್ಣ ತಂಡಗಳನ್ನು ರಚಿಸಲಾಗಿದೆ. ಈ ಗುಂಪುಗಳು ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ತಂತ್ರ ಹೆಣೆಯುತ್ತವೆ. ಇವು ಅತ್ಯಂತ ರಹಸ್ಯವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಈ ಗುಂಪುಗಳಿಗೆ ಅವುಗಳ ಕ್ಷಮತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಪಕ್ಷಗಳು ಹಣ ಸಂದಾಯ ಮಾಡುತ್ತವೆ. ಕೆಲವು ತಂಡಗಳು ತಿಂಗಳಿಗೆ ₹ 2 ರಿಂದ ₹ 5 ಲಕ್ಷದವರೆಗೆ ಪ್ಯಾಕೇಜ್‌ ಪಡೆಯುತ್ತವೆ ಎಂದು ರಾಜಕೀಯ ಪಕ್ಷದ ಮೂಲಗಳು ತಿಳಿಸಿವೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ‘ಆಮ್‌ ಆದ್ಮಿ ಪಕ್ಷ’ದ ಸಾಮಾಜಿಕ ಜಾಲತಾಣ ಗುಂಪು ಬಿಜೆಪಿಯನ್ನೂ ಮೀರಿಸಿತ್ತು. ಆ ತಂಡವನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಂಜಾಬ್‌ ಮತ್ತು ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಂಡಿತ್ತು. ರಾಜ್ಯದ ಚುನಾವಣೆಗೂ ಆ ಗುಂಪಿನ ಬಳಕೆಯಾಗುತ್ತಿದೆ. ಈ ತಂಡ ನಿರಂತರವಾಗಿ ರಾಹುಲ್‌ಗಾಂಧಿ ವರ್ಚಸ್ಸು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದೆ. ರಾಹುಲ್‌ ಹೆಚ್ಚು ಪ್ರಬುದ್ಧರಾಗಿದ್ದಾರೆ ಎಂಬಂತೆ ಬಿಂಬಿಸುವ ಕಾರ್ಯ ಮಾಡಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಸೈಬರ್‌ ಅಲರ್ಟ್‌’ ತಂಡ: ರಾಜ್ಯದಲ್ಲಿ ಮೂರೂ ರಾಜಕೀಯ ಪಕ್ಷಗಳು ‘ಸೈಬರ್‌ ಅಲರ್ಟ್‌ ತಂಡ’ಗಳನ್ನು ಸಕ್ರಿಯಗೊಳಿಸಿವೆ. ಪಕ್ಷದ ನಾಯಕರ ವಿರುದ್ಧ ಅವಮಾನಕರ ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್‌ ಮಾಡಿದ ತಕ್ಷಣವೆ ಅದರ ಮಾಹಿತಿಯನ್ನು ಪಕ್ಷಕ್ಕೆ ತಿಳಿಸುತ್ತವೆ. ಪಕ್ಷದ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ ತಕ್ಷಣ ಆಕ್ಷೇಪಾರ್ಹ ವಿಷಯ ಹಾಕಿದ ಗುಂಪು ತಕ್ಷಣವೇ ತಟಸ್ಥಗೊಳ್ಳುತ್ತದೆ.

ಎಲ್ಲ ಮತಗಟ್ಟೆಗಳಲ್ಲಿ ವಾಟ್ಸ್ ಆ್ಯಪ್‌ ಗುಂಪು: ಬಿಜೆಪಿ ಬಹುತೇಕ ಎಲ್ಲ ಮತಗಟ್ಟೆಯಲ್ಲೂ ವಾಟ್ಸ್‌ಆ್ಯಪ್‌ ಗುಂಪನ್ನು ಹೊಂದಿದೆ. ಎರಡನೇ ಸ್ಥಾನ ಕಾಂಗ್ರೆಸ್‌ಗಿದೆ. ಜೆಡಿಎಸ್‌ ಇವೆರಡಕ್ಕೂ ಪೈಪೋಟಿ ನೀಡುತ್ತಿದೆ. ‘ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಬಳಸುವ 1 ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಿವೆ.

ಪ್ರತಿ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿಯನ್ನುಪ್ರಭಾವಗೊಳಿಸುವ ಉದ್ದೇಶ ಮೂರು ರಾಜಕೀಯ ಪಕ್ಷಗಳ ಗುರಿ ಯಾಗಿದೆ’ ಎಂದು ರಾಜಕೀಯ ಸಾಮಾಜಿಕ ಜಾಲತಾಣ ಮುನ್ನಡೆಸುತ್ತಿರುವ ಗುಂಪಿನ ಮುಖ್ಯಸ್ಥರೊಬ್ಬರು ತಿಳಿಸಿದರು.

‘ಸೈಬರ್‌ ಅಲರ್ಟ್‌’ ತಂಡ

ರಾಜ್ಯದಲ್ಲಿ ಮೂರೂ ರಾಜಕೀಯ ಪಕ್ಷಗಳು ‘ಸೈಬರ್‌ ಅಲರ್ಟ್‌ ತಂಡ’ಗಳನ್ನು ಸಕ್ರಿಯಗೊಳಿಸಿವೆ. ಪಕ್ಷದ ನಾಯಕರ ವಿರುದ್ಧ ಅವಮಾನಕರ ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್‌ ಮಾಡಿದ ತಕ್ಷಣವೆ ಅದರ ಮಾಹಿತಿಯನ್ನು ಪಕ್ಷಕ್ಕೆ ತಿಳಿಸುತ್ತವೆ. ಪಕ್ಷದ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ ತಕ್ಷಣ ಆಕ್ಷೇಪಾರ್ಹ ವಿಷಯ ಹಾಕಿದ ಗುಂಪು ತಕ್ಷಣವೇ ತಟಸ್ಥಗೊಳ್ಳುತ್ತದೆ.

ಎಲ್ಲ ಮತಗಟ್ಟೆಗಳಲ್ಲಿ ವಾಟ್ಸ್ ಆ್ಯಪ್‌ ಗುಂಪು

ಬಿಜೆಪಿ ಬಹುತೇಕ ಎಲ್ಲ ಮತಗಟ್ಟೆಯಲ್ಲೂ ವಾಟ್ಸ್‌ಆ್ಯಪ್‌ ಗುಂಪನ್ನು ಹೊಂದಿದೆ. ಎರಡನೇ ಸ್ಥಾನ ಕಾಂಗ್ರೆಸ್‌ಗಿದೆ. ಜೆಡಿಎಸ್‌ ಇವೆರಡಕ್ಕೂ ಪೈಪೋಟಿ ನೀಡುತ್ತಿದೆ. ‘ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಬಳಸುವ 1 ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಿವೆ. ಪ್ರತಿ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿಯನ್ನು ಪ್ರಭಾವಗೊಳಿಸುವ ಉದ್ದೇಶ ಮೂರು ರಾಜಕೀಯ ಪಕ್ಷಗಳ ಗುರಿಯಾಗಿದೆ’ ಎಂದು ರಾಜಕೀಯ ಸಾಮಾಜಿಕ ಜಾಲತಾಣ ಮುನ್ನಡೆಸುತ್ತಿರುವ ಗುಂಪಿನ ಮುಖ್ಯಸ್ಥರೊಬ್ಬರು ತಿಳಿಸಿದರು.

10 ವರ್ಷಗಳ ಅನುಭವ

‘ನಮಗೆ ಹತ್ತು ವರ್ಷಗಳ ಅನುಭವವಿದೆ. ಈ ಚುನಾವಣೆಗೆ ಬಹಳ ಹಿಂದೆಯೇ ತಯಾರಿ ನಡೆಸಿದ್ದೇವೆ. 150 ವಿಧಾನಸಭಾ ಕ್ಷೇತ್ರಗಳ ಸಾಮಾಜಿಕ ಜಾಲತಾಣ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಉಳಿದ ಕ್ಷೇತ್ರಗಳ ತಂಡಗಳಿಗೆ ತರಬೇತಿ ಅತಿಬೇಗನೇ ಪೂರ್ಣಗೊಳಿಸುತ್ತೇವೆ. ನಮಗೆ 3.50 ಲಕ್ಷ ಫೇಸ್‌ಬುಕ್‌ ಅನುಯಾಯಿಗಳಿದ್ದಾರೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬಾಲಾಜಿ ಶ್ರೀನಿವಾಸ್‌ ತಿಳಿಸಿದರು.

52 ಸಾವಿರ ಜನ ನೋಂದಣಿ

ಸಾಮಾಜಿಕ ಜಾಲತಾಣದ ಸ್ವಯಂಸೇವಕರಾಗಲು ಕರೆ ನೀಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  52,000 ಜನ ಹೆಸರು ನೋಂದಾಯಿಸಿದ್ದರು. ಈ ಕಾರ್ಯಕ್ಕೆ ಸಾಕಷ್ಟು ಯುವಕರು, ಐಟಿ ಕ್ಷೇತ್ರದ ವೃತ್ತಿಪರರು ಮತ್ತು ಗೃಹಿಣಿಯರೂ ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯ ನಟರಾಜ್ ಗೌಡ ತಿಳಿಸಿದರು.

ಜೆಡಿಎಸ್‌ ವಾರ್‌ ರೂಮ್‌

ಚುನಾವಣೆಗಾಗಿ ಜೆಡಿಎಸ್‌ ವಾರ್‌ ರೂಮ್‌ ಆರಂಭಿಸಿದೆ. 2800 ವಾಟ್ಸ್‌ಆ್ಯಪ್‌ ಗುಂಪುಗಳನ್ನು ತೆರೆಯುವ ಗುರಿ ಹಾಕಿಕೊಂಡಿದೆ. ನಮ್ಮ ಎಚ್‌ಡಿಕೆ, ಕುಮಾರ ಸ್ವಾಮಿ ಫ್ಯಾನ್ಸ್‌ ಕ್ಲಬ್‌, ಸತ್ಯದ ಕಣಜ ಹೆಸರಿನಲ್ಲಿ ಫೇಸ್‌ಬುಕ್‌ ಅಕೌಂಟ್‌ಗಳಿವೆ ಎಂದು ಜೆಡಿಎಸ್‌ ಐಟಿ ವಿಭಾಗದ ಪ್ರಕಾಶ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.