ಗುರುವಾರ , ಆಗಸ್ಟ್ 13, 2020
27 °C

ಸಚಿನ್‌ ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಚಿನ್‌ ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬಂಧನ

ನವದೆಹಲಿ: ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮಗಳು ಸಾರಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ದೇಬ್‌ಕುಮಾರ್‌ ಮೈಥಿ ಎಂದು ಗುರುತಿಸಲಾಗಿದೆ. ಈತ ಸಚಿನ್‌ ಮನೆಗೆ ಸುಮಾರು 20 ಬಾರಿ ಕರೆಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಸಾರಾಳನ್ನು ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.

‘ಟಿ.ವಿ.ಯಲ್ಲಿ ಪಂದ್ಯವೊಂದನ್ನು ವೀಕ್ಷಿಸುವಾಗ ಪೆವಿಲಿಯನ್‌ನಲ್ಲಿದ್ದ ಸಾರಾಳನ್ನು ನೋಡಿ, ಪ್ರೀತಿ ಮಾಡಲು ಆರಂಭಿಸಿದೆ. ಅವಳನ್ನು ಮದುವೆಯಾಗಲು ಬಯಸಿದೆ. ಅವಳನ್ನು ಒಮ್ಮೆಯೂ ಪ್ರತ್ಯಕ್ಷವಾಗಿ ನೋಡಿಲ್ಲ. ತೆಂಡೂಲ್ಕರ್‌ ಮನೆಗೆ ಸುಮಾರು 20 ಬಾರಿ ಕರೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ವಿಚಾರಣೆಗಾಗಿ ಆರೋಪಿಯನ್ನು ಹಾಲ್ದಿಯಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಮುಂಬೈಗೂ ಕರೆದೊಯ್ಯಲಾಗುತ್ತಿದೆ.

ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಕಾಲೇಜಿನ ಓದನ್ನು ಅರ್ಧಕ್ಕೆ ಬಿಟ್ಟಿರುವ ಆತ ನಿರುದ್ಯೋಗಿಯಾಗಿದ್ದ ಎಂದು ದೇಬ್‌ಕುಮಾರ್‌ನ ಕುಟುಂಬ ಸದಸ್ಯರು ತಿಳಿಸಿದ್ದಾರೆ.

‘ಮನೆಯಲ್ಲಿಯೂ ಆತ ಪೋಷಕರನ್ನು ಪೀಡಿಸುತ್ತಿದ್ದ. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರುವ ಆರೋಪಿ, ಕಳೆದ ಎಂಟು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.

ಆರೋಪಿಯ ಮನೆಯಲ್ಲಿ ಪೊಲೀಸರು ಡೈರಿಯೊಂದನ್ನು ಪರಿಶೀಲಿಸಿದಾಗ, ಅದರಲ್ಲಿ ‘ಸಚಿನ್‌ ಮಗಳು ತನ್ನ ಹೆಂಡತಿ’ ಎಂಬ ಬರಹ ಕಂಡಿದೆ. ಸಚಿನ್‌ ಮನೆಯ ಟೆಲಿಪೋನ್‌ ನಂಬರ್‌ ಆರೋಪಿಗೆ ಹೇಗೆ ಸಿಕ್ಕಿತು ಎಂದು ತಿಳಿಯಲು ವಿಚಾರಣೆ ನಡೆಯುತ್ತಿದೆ.

ಆರೋಪಿ ನಿಜವಾಗಿಯೂ ಮಾನಸಿಕ ಅಸ್ವಸ್ಥನೇ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಅನುಚಿತ ಕರೆಗಳು ಬಂದಾಗ ಸಾರಾ ತೆಂಡೂಲ್ಕರ್‌ ಬಾಂದ್ರಾ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಕಾರ್ಯಪ್ರವೃತ್ತರಾಗಿ ಕರೆಗಳು ಬಂದ ಪ್ರದೇಶವನ್ನು ಗುರುತಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ತನ್ನನ್ನು ಮದುವೆಯಾಗಲು ಆರೋಪಿ ಫೋನ್‌ನಲ್ಲಿಯೇ ಸಾರಾಳನ್ನು ಕೇಳಿಕೊಂಡಿದ್ದನಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.