ಗುರುವಾರ, 18 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡ ಅಗೆದು ಕಾಲೇಜು ಕಟ್ಟಿದೆ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ನನ್ನ ಪೂರ್ತಿ ಹೆಸರು ಮೇಗರಮೆಟ್ಲ ರಾಮಾನಾಯ್ಡು ದೊರೆಸ್ವಾಮಿ. ಆಂಧ್ರಪ್ರದೇಶದ ಮೇಗರಮೆಟ್ಲ ಮನೆತನದಲ್ಲಿ ಹುಟ್ಟಿ ಬೆಳೆದವನು (ಜನನ: ನವೆಂಬರ್ 7, 1937). ನರ್ವಾ ಎಂಬ ಹಳ್ಳಿ ನಮ್ಮದು. ಚಿತ್ತೂರು ಪಟ್ಟಣದಲ್ಲಿದ್ದ ನಮ್ಮ ಶಾಲೆಗೆ ಹೋಗಬೇಕಾದರೆ ಎಂಟು ಕಿ.ಮೀ ನಡೆದುಕೊಂಡೇ ಹೋಗಬೇಕಿತ್ತು. ಐದನೇ ತರಗತಿವರೆಗೆ ಅಲ್ಲಿ ಓದಿದೆ. ಎಷ್ಟೇ ಕಷ್ಟವಾದರೂ ಓದಬೇಕು ಎಂದು ನನಗೆ ಆಸೆ. ಈ ಊರಲ್ಲಿದ್ರೆ ಓದು ಮುಂದುವರಿಸಲು ಸಾಧ್ಯವಿಲ್ಲ ಎಂದು, ನಮ್ಮ ಚಿಕ್ಕಪ್ಪ ಇಲ್ಲಿಗೆ, ಈ ಬೆಂಗಳೂರಿಗೆ ಕರೆದುಕೊಂಡು ಬಂದ್ರು. ಆಗ ಅವರು ಇದ್ದುದು ತ್ಯಾಗರಾಜನಗರದಲ್ಲಿ.

ನಾನು ಆರರಿಂದ 10ನೇ ತರಗತಿವರೆಗೂ ನ್ಯಾಷನಲ್ ಹೈಸ್ಕೂಲ್‌ನಲ್ಲೇ ಓದಿದೆ. ನಮ್ಮ ಯೂನಿಫಾರ್ಮ್‌ನಲ್ಲಿ ಗಾಂಧಿ ಟೋಪಿಯೂ ಸೇರಿತ್ತು. ಎಂಟನೇ ಕ್ಲಾಸ್‌ ಓದುತ್ತಿದ್ದಾಗ ಎನ್‌.ಆರ್‌. ಕಾಲೋನಿಯಲ್ಲಿ ನಡೆಯುತ್ತಿದ್ದ ಹನುಮಾನ್‌ ಶಾಖೆಯ ಮೂಲಕ ಆರ್.ಎಸ್.ಎಸ್. ಸಂಪರ್ಕ ಸಿಕ್ಕಿತು. ದಿನಾ ಹೋಗ್ತಿದ್ದೆ. ವಿದ್ಯಾಭ್ಯಾಸಕ್ಕೆ ಕೊಟ್ಟಷ್ಟೇ ಆದ್ಯತೆಯನ್ನು ಶಾಖೆಗೂ ಕೊಡ್ತಿದ್ದೆ. ಮುಂದೆ ಅಲ್ಲಿ ಕಾರ್ಯವಾಹನಾದೆ, ಚೆನ್ನೈನ ವಿವೇಕಾನಂದ ಸಂಸ್ಥೆಯಲ್ಲಿ ಮೂರು ವರ್ಷಗಳ ಒಟಿಸಿ ತರಬೇತಿಯೂ ಆಯಿತು.

ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ನಂಜುಂಡಯ್ಯ ಅಂತ ಪ್ರಿನ್ಸಿಪಾಲ್‌ ಇದ್ರು. ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ತಾತ. ಶಿಸ್ತಿಗೆ ಹೆಸರಾದ ಅಧ್ಯಾಪಕರು. ಭಗವದ್ಗೀತೆ ನಮಗೆ ಬೆಳಗ್ಗಿನ ಪ್ರಾರ್ಥನೆ. ಅಲ್ಲಿದ್ದ ಪ್ರತಿ ಅಧ್ಯಾ‍ಪಕರೂ ಪ್ರಾತಃಸ್ಮರಣೀಯರು. ಚೆಲುವಯ್ಯ ಎಂಬ ಡ್ರಿಲ್ಲಿಂಗ್‌ ಮಾಸ್ಟರ್‌ ಅಂತೂ ಬೆಳಿಗ್ಗೆ 6.30ಕ್ಕೆಲ್ಲಾ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಡ್ರಿಲ್ಲಿಂಗ್‌ ಮಾಡಿಸ್ತಿದ್ರು. ಕೊನೆಯ ಸಾಲಿನ ವಿದ್ಯಾರ್ಥಿಯೂ ಕಾಣಿಸಬೇಕೆಂಬ ಕಾರಣಕ್ಕೆ ಟೇಬಲ್‌ ಮೇಲೆ ನಿಂತು ಡ್ರಿಲ್ಲಿಂಗ್‌ ಮಾಡಿಸ್ತಿದ್ದುದು ಈಗಲೂ ನೆನಪಿದೆ. ಗಣಿತದಲ್ಲಿ ನಾನು ಮಹಾ ಜಾಣ. ಹಳ್ಳಿ ಹುಡುಗ ಅಲ್ವಾ? ಮೇಷ್ಟ್ರು ಕರಿಬೋರ್ಡ್‌ನಲ್ಲಿ ಬರೆಯೋದಕ್ಕೂ ಮೊದಲು ನಾನು ಪುಸ್ತಕದಲ್ಲಿ ಬರೆದು ಮುಗಿಸುತ್ತಿದ್ದೆ.

ಹತ್ತನೇ ತರಗತಿ ಆದ ಮೇಲೆ, ಸೆಂಟ್ರಲ್‌ ಕಾಲೇಜು ಮುಂಭಾಗದಲ್ಲಿದ್ದ ಗವರ್ನ್‌ಮೆಂಟ್‌ ಇಂಟರ್‌ಮೀಡಿಯೆಟ್‌ ಕಾಲೇಜಿಗೆ (ಗ್ಯಾಸ್‌ ಕಾಲೇಜು ಎಂದೇ ಪ್ರಸಿದ್ಧಿ) ಸೇರಿದೆ. ಅಲ್ಲಿದ್ದ ರೀಡಿಂಗ್‌ ರೂಮ್‌ನಲ್ಲಿ ನಾನು ಅನೇಕರ ಜೀವನ ಚರಿತ್ರೆಗಳನ್ನು ಓದಿದೆ. ಆ ಓದಿನ ಪ್ರೇರಣೆಯಿಂದಲೇ ನಾನೂ ಕಾನೂನು ಓದ್ಬೇಕು ಅನ್ನೋ ಆಸೆ ಬಲವಾಯಿತು. ಅಷ್ಟು ಹೊತ್ತಿಗೆ ಕಾಲೇಜು ಶುರುವಾಗಿ ಒಂದು ತಿಂಗಳು ಕಳೆದಿರಬಹುದಷ್ಟೇ. ನಾನು ಸೀದಾ ಪ್ರಾಚಾರ್ಯ ಸುಬ್ಬಾಭಟ್ಟರ ಚೇಂಬರ್‌ಗೆ ಹೋಗಿ, ‘ಮನೇಲಿ ಹೇಳಿದ್ದಾರೆ, ಆರ್ಟ್ಸ್‌ಗೆ ಸೇರಬೇಕಂತೆ’ ಎಂದು ಸುಳ್ಳು ಹೇಳಿ ಆರ್ಟ್ಸ್‌ಗೆ ಸೇರಿಕೊಂಡೆ. ಆಗ ಬಿ.ಎ. ಓದಬೇಕೆಂದರೆ ಬೆಂಗಳೂರಿನಲ್ಲಿದ್ದುದು ಸೇಂಟ್‌ ಜೋಸೆಫ್‌ ಕಾಲೇಜು ಒಂದೇ. ಅದು ಬಿಟ್ಟರೆ ಮೈಸೂರಿನ ಮಹಾರಾಜ ಕಾಲೇಜು. ನಾನು ಸೇಂಟ್‌ ಜೋಸೆಫ್‌ಗೆ ಸೇರಿದೆ. ಅಲ್ಲಿ ನಾನು ಮತ್ತು ಎಂ.ಪಿ. ಪ್ರಕಾಶ್‌ ಚರ್ಚಾಪಟುಗಳಾಗಿ ಹೆಸರು ಮಾಡಿದ್ದೆವು.

ಒಮ್ಮೆ ಇಲ್ಲೇ ಟೌನ್‌ಹಾಲ್‌ನಲ್ಲಿ ಮಾಡೆಲ್‌ ಅಸೆಂಬ್ಲಿ ಅಂತ ಮಾಡಿದ್ದರು. ಅದರಲ್ಲಿ ಮುನಿವೆಂಕಟಪ್ಪರೆಡ್ಡಿ (ನನ್ನೊಂದಿಗೆ ಎಂಎಲ್‌ಸಿ ಆಗಿದ್ದ) ಮುಖ್ಯಮಂತ್ರಿ, ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಅದನ್ನು ಉದ್ಘಾಟಿಸಿದ್ದು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಕುವೆಂಪು ಅವರು. ಸೇಂಟ್‌ ಜೋಸೆಫ್‌ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದಾಗ ಇದೇ ಮುನಿವೆಂಕಟಪ್ಪರೆಡ್ಡಿ ಅಧ್ಯಕ್ಷನಾಗಿದ್ದ. ಅದೇ ಸಮಯಕ್ಕೆ, ನಮ್ಮ ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರಪ್ರಸಾದ್‌ ಅವರು ಬೆಂಗಳೂರಿಗೆ ಬರುವವರಿದ್ದರು. ಅವರಿಗೆ ಪತ್ರ ಬರೆದು, ನಮ್ಮ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಬೇಕು ಎಂದು ಮನವಿ ಮಾಡಿಕೊಂಡೆವು. ಅವರು ಒಪ್ಕೊಂಡು ಬಂದೇಬಿಟ್ರು. ಇದೆಲ್ಲಾ ನನ್ನ ವಿದ್ಯಾರ್ಥಿ ಜೀವನದ ಮರೆಯಲಾಗದ ನೆನಪುಗಳು.

1959–60ರ ಕತೆಯಿದು. ನಾನು ದಿನಪತ್ರಿಕೆಗಳಲ್ಲಿ ‘ದಿನದ ಕಾರ್ಯಕ್ರಮ’ ಪಟ್ಟಿ ನೋಡಿ ಪ್ರಮುಖ ನಾಯಕರ ಭಾಷಣಗಳನ್ನು ಕೇಳಲು ಹೋಗುತ್ತಿದ್ದೆ. ವಿಶೇಷವಾಗಿ, ರಾಮಕೃಷ್ಣ ಆಶ್ರಮ, ಬಿ.ಪಿ.ವಾಡಿಯಾ ಸಭಾಂಗಣ ಮತ್ತು ಗೋಖಲೆ ಇನ್‌ಸ್ಟಿಟ್ಯೂಟ್‌ನ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸುತ್ತಿರಲಿಲ್ಲ. ವಾಡಿಯಾದಲ್ಲಿ, ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಎಂ.ವಿ. ಕೃಷ್ಣರಾವ್‌, ಗೋಖಲೆಯಲ್ಲಿ ‘ಸ್ಟಡಿ ಸರ್ಕಲ್‌’ ಕಾರ್ಯಕ್ರದ ಮೂಲಕ ಡಿ.ವಿ. ಗುಂಡಪ್ಪನವರ ನಿಕಟ ಸಂಪರ್ಕ ಸಿಕ್ಕಿತು. ಇಷ್ಟಲ್ಲದೆ, ಬೆಂಗಳೂರಿಗೆ ಯಾರೇ ರಾಷ್ಟ್ರೀಯ ನಾಯಕರು ಬಂದರೂ ಭಾಷಣ ಕೇಳಲು ಹೋಗುತ್ತಿದ್ದೆ. ಆಗ ಇದ್ದುದು ಕಾಂಗ್ರೆಸ್‌ ಒಂದೇ. ಹಾಗಾಗಿ ನೆಹರೂ ಆಗಾಗ್ಗೆ ಬರುತ್ತಿದ್ದರು. ಕೇಂದ್ರ ಗೃಹ ಸಚಿವ ವಲ್ಲಭ ಪಂತ್‌ ಕೂಡಾ ಬರುತ್ತಿದ್ದರು.

ತ್ಯಾಗರಾಜನಗರದ ‘ರೆವಿನ್ಯೂ ಎಕ್ಸ್‌ಟೆನ್ಷನ್‌’ನಲ್ಲಿ ಮೊದಲ ಮನೆಯೇ ನಮ್ಮದು. ಸ್ಥಳೀಯ ಸಮಸ್ಯೆಗಳಿಗೆ ಕಾರ್ಪೊರೇಟರ್‌ ಪಿ.ಆರ್‌. ಶ್ಯಾಮಣ್ಣ ಗಮನ ಕೊಡುತ್ತಿರಲಿಲ್ಲ. ಅದಕ್ಕೆ ನಮ್ಮ ಸ್ನೇಹಿತರನ್ನೆಲ್ಲಾ ಒಟ್ಟುಮಾಡಿ ‘ಫ್ರೆಂಡ್ಸ್‌ ಯೂನಿಯನ್‌’ ಸ್ಥಾಪಿಸಿ ಅನೇಕ ಸಾರ್ವಜನಿಕ ಕೆಲಸಗಳನ್ನು ಮಾಡಿದೆವು. ವಿಶೇಷವಾಗಿ ಉಚಿತ ಗ್ರಂಥಾಲಯ ಮತ್ತು ವಾಚನಾಲಯ. ಹೀಗೆ ಜನಪರ ಕೆಲಸ ಮಾಡುತ್ತಿದ್ದ ಕಾರಣ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವಂತೆ ಎಲ್ಲರೂ ಒತ್ತಾಯಿಸಿದರು. 1960ರಲ್ಲಿ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಆದರೆ ಸುಮಾರು 360 ಮತಗಳಿಂದ ಶ್ಯಾಮಣ್ಣ ಅವರ ವಿರುದ್ಧ ಸೋತೆ. ಆದರೆ ಮತ್ತೆ ಓದಿನತ್ತ ಗಮನ ಕೊಡಲು ತೀರ್ಮಾನಿಸಿದೆ. ಮುಂದೆ, ಇದೇ ಫ್ರೆಂಡ್ಸ್‌ ಯೂನಿಯನ್‌ನ್ನು ಸಮಾಜ ಸೇವಾ ಮಂಡಳಿ ಅಂತ ಹೆಸರು ಬದಲಾಯಿಸಿ ಅದರ ಮೂಲಕ ಒಂದು ಶಾಲೆಯನ್ನೂ ತೆರೆದೆ.

ಜೀವನೋಪಾಯಕ್ಕಾಗಿ ನಾನು ವಕೀಲನಾಗಲೇಬೇಕು ಎಂದು ಬಲವಾಗಿ ನಿರ್ಧರಿಸಿ 1962ರಲ್ಲಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಲಾ ಓದಲು ಹೋದೆ. ಆಗ ಶಿಕ್ಷಣ ಸಚಿವರಾಗಿದ್ದ ಎಸ್.ಆರ್. ಕಂಠಿ ಅವೈಜ್ಞಾನಿಕವಾಗಿ ಫೀಸು ಹೆಚ್ಚಿಸಿದ್ದಕ್ಕೆ ಎಲ್ಲಾ ಕಡೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಶುರು ಮಾಡಿದರು. ನಾನು, ಎಂ.ಸಿ.ನಾಣಯ್ಯ ಮತ್ತು ಒಬ್ಬರು ಕಮ್ಯೂನಿಸ್ಟ್‌ ಮುಖಂಡರ ನೇತೃತ್ವದಲ್ಲಿ ವಿಧಾನಸೌಧದ ಮುಂದೆ ಸತ್ಯಾಗ್ರಹ ನಡೆಸಿದೆವು. ಆಗ ತಾನೇ ಅಮೆರಿಕದಿಂದ ಬಂದು ಮದ್ದೂರು ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಎಸ್.ಎಂ. ಕೃಷ್ಣ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಿದರು. ಕಂಠಿಯವರೇ ನಮಗೆ ಲಿಂಬೆ ಶರಬತ್ತು ಕೊಟ್ಟು ಸತ್ಯಾಗ್ರಹ ನಿಲ್ಲಿಸಿದರು. 1962–63ರಲ್ಲಿ ಫಸ್ಟ್‌ ಲಾ ಮುಗಿಯಿತು. ಅದೇ ವರ್ಷ ಸೆಂಟ್ರಲ್‌ ಕಾಲೇಜಿನಲ್ಲಿ ಬೆಂಗಳೂರಿಗೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಶುರುವಾದಾಗ ನನಗೆ ಅರ್ಥಶಾಸ್ತ್ರ ಓದುವ ಆಸೆ ಮೂಡಿತು. ಬಿ.ಎಲ್‌. ಬದಲು ಎಕನಾಮಿಕ್ಸ್‌ ಎಂ.ಎ ಓದಿದೆ. ಅದಾದ ಬಳಿಕ, ಬಿ.ಎಂ.ಎಸ್. ಕಾನೂನು ಕಾಲೇಜಿನಲ್ಲಿ ಬಿ.ಎಲ್‌. ಮುಗಿಸಿದೆ. ಬಿ.ಎಲ್. ಮುಗಿಯುತ್ತಲೇ ಚಿಕ್ಕಪ್ಪನ ಆಸೆಯಂತೆ ವಕೀಲರಾಗಿ ನೋಂದಣಿ ಮಾಡಿಕೊಂಡು ಕನಕಸಭಾಪತಿ ಎಂಬ ಹೆಸರಾಂತ ವಕೀಲರ ಬಳಿ ಜೂನಿಯರ್‌ ಆಗಿ ಕೆಲಸಕ್ಕೆ ಸೇರಿದೆ.

ಒಂದು ವಾರ ಕಳೆದಿರಬಹುದು ಅಷ್ಟೇ. ಅಷ್ಟರಲ್ಲಿ ಒಂದು ಘಟನೆ ನಡೆಯಿತು. ನಿಜಲಿಂಗಪ್ಪ ಅವರ ಮಂತ್ರಿಮಂಡಲದಲ್ಲಿ ರೇಷ್ಮೆ ಸಚಿವರಾಗಿದ್ದ ದಯಾನಂದ ಸಾಗರ್‌ ನನ್ನನ್ನು ತಮ್ಮ ಮನೆಗೆ ಕರೆಸಿಕೊಂಡರು. ನಮ್ಮ ಫ್ರೆಂಡ್ಸ್‌ ಯೂನಿಯನ್‌ ಮೂಲಕ ಹಮ್ಮಿಕೊಂಡಿದ್ದ ಪೌರಸೌಲಭ್ಯಗಳ ಕುರಿತ ಉಪನ್ಯಾಸಗಳ ಮೂಲಕ ಪರಿಚಯವಾಗಿದ್ದರು. ನಾನು ಅವರ ಮನೆಗೆ ಹೋದಾಗ ದೊಡ್ಡ ಅಚ್ಚರಿ ಕಾದಿತ್ತು. ದಯಾನಂದ ಸಾಗರ್‌ ಕಾಲೇಜಿನ ಪ್ರಾಂಶುಪಾಲರಾಗಬೇಕು ಎಂಬುದು ಅವರ ಆಫರ್‌. ನಾನು ಒಪ್ಪಲಿಲ್ಲ. ಆದರೆ ಅವರು ಬಿಡಲಿಲ್ಲ. ಸಾಗರ್‌ ಮತ್ತೆ ನನ್ನನ್ನು ಕರೆಸಿಕೊಂಡು ಜರ್ನಲಿಸ್ಟ್‌ ಕಾಲೋನಿಯಲ್ಲಿದ್ದ ಅವರ ಕಟ್ಟಡವೊಂದಕ್ಕೆ ಕರೆದೊಯ್ದು ಅವರ ಚೇಂಬರ್‌ನಲ್ಲಿ ಅವರದೇ ಚೇರ್‌ನಲ್ಲಿ ನನ್ನನ್ನು ಕೂರಿಸಿ ಹೊರಟುಹೋದರು. ಅವರ ಪ್ರಕಾರ ಪ್ರಾಂಶುಪಾಲರ ಅಧಿಕಾರ ಸ್ವೀಕಾರ. ಹಾಗೆ ಅಲ್ಲಿ ಶುರುವಾದದ್ದು ಸಂಜೆ ಕಾಲೇಜು. 60 ವಿದ್ಯಾರ್ಥಿಗಳೊಂದಿಗೆ ಪಿಯುಸಿ ಶುರುವಾಯ್ತು. ನಾನು ಅ.ನ.ಕೃ., ಜಿ.ಪಿ.ರಾಜರತ್ನಂ ಅವರಂತಹ ಮೇಧಾವಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸುತ್ತಿದ್ದೆ. ಕಾಲೇಜಿಗೆ ಭಾರಿ ಪ್ರಸಿದ್ಧಿ ಬಂತು. ಬಿ.ಫಾರ್ಮ, ಪದವಿ ಕೂಡಾ ಶುರು ಮಾಡಿದೆವು. ಇದೆಲ್ಲಾ ನಡೆದದ್ದು 1966ರಲ್ಲಿ. ಏಳು ವರ್ಷ ಅಲ್ಲಿ ಕೆಲಸ ಮಾಡಿದೆ. ಕಾಲೇಜಿಗೆ ಬಹಳ ಒಳ್ಳೆಯ ಹೆಸರು ಬಂತು. ಈ ಮಧ್ಯೆ, ಅಂದರೆ 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಆರಂಭವಾಗಿತ್ತು. ವಿ.ವಿ. ಸೆನೆಟ್‌ಗೆ ಎಲ್ಲಾ ಪ್ರಾಂಶುಪಾಲರುಗಳನ್ನು ಸೇರಿಸಿಕೊಂಡರು. ಹಾಗಾಗಿ ದೊಡ್ಡ ಆಯಾಮದಲ್ಲಿ ಶಿಕ್ಷಣ ಕ್ಷೇತ್ರದ ಒಳಹೊರಗುಗಳ ಪರಿಚಯ ನನಗಾಯಿತು.

1972, ನನ್ನ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿದ ವರ್ಷ. ಎಲ್ಲರ ಒತ್ತಾಯಕ್ಕೆ ಮಣಿದು ನನ್ನದೇ ಸ್ವಂತ ಕಾಲೇಜು ಶುರು ಮಾಡುವ ನಿರ್ಧಾರಕ್ಕೆ ಬಂದು ಪೀಪಲ್ಸ್‌ ಎಜ್ಯುಕೇಶನ್‌ ಸೊಸೈಟಿ (ಪಿ.ಇ.ಎಸ್) ನೋಂದಣಿ ಮಾಡಿಸಿದೆ. ಕೆ.ಎಚ್‌. ರಂಗನಾಥ್‌ ಅವರನ್ನು ಸ್ಥಾಪಕಾಧ್ಯಕ್ಷರನ್ನಾಗಿಸಿ ನಾನು ಕಾರ್ಯದರ್ಶಿಯಾದೆ. ನೋಂದಣಿಯಾಗುತ್ತಲೇ ಪಿಯು ಮಂಡಳಿಗೆ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿಬಿಟ್ಟೆ. ನಿಜ ಹೇಳಬೇಕೆಂದರೆ ನನ್ನ ಉದ್ದೇಶ ಇದ್ದುದು ಕಂಟೋನ್ಮೆಂಟ್‌ ಪ್ರದೇಶದಲ್ಲಿ ಕಾಲೇಜು ಶುರು ಮಾಡಬೇಕು ಎಂದು. ಆದರೆ, ‘ನಿಮಗೆ ಸಂಪರ್ಕ, ಪರಿಚಯ ಇರೋದು ಬೆಂಗಳೂರು ದಕ್ಷಿಣದಲ್ಲಿ. ಹಾಗಾಗಿ ಇಲ್ಲೇ ಎಲ್ಲಾದರೂ ಕಾಲೇಜು ಮಾಡಿ’ ಎಂಬ ಸಲಹೆ ಹಿತೈಷಿಗಳಿಂದ ಬಂತು. ಹಾಗಾಗಿ ಹನುಮಂತನಗರದಲ್ಲಿ ಶುರು ಮಾಡಲು ನಿರ್ಧರಿಸಿದೆ. ಆದರೆ ಕಟ್ಟಡ? ಜಮೀನು ಖರೀದಿಸಿ ಸ್ವಂತ ಕಟ್ಟಡ ಮಾಡುವ ಶಕ್ತಿ ನನ್ನಲ್ಲಿರಲಿಲ್ಲ. ಹಾಗಾಗಿ ಬಾಡಿಗೆಗೆ ಕಟ್ಟಡ ಹುಡುಕುತ್ತಿದ್ದಾಗ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಸೇರಿದ ಕಟ್ಟಡವೊಂದು ಹನುಮಂತನಗರದಲ್ಲಿದ್ದುದು ಗಮನಕ್ಕೆ ಬಂತು.

ಅವರ ಒಪ್ಪಿಗೆ ಪಡೆದು ಇತರ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಅಷ್ಟರಲ್ಲಿ ಹೆಗ್ಗಡೆಯವರ ತಮ್ಮ ಫೋನ್‌ ಮಾಡಿ, ‘ಆ ಕಟ್ಟಡ ಮಾರಾಟವಾಯ್ತು’ ಎಂದು ಹೇಳಿಬಿಟ್ಟರು. ನನಗೆ ನಿಂತ ನೆಲ ಕುಸಿದಂತಾಯ್ತು. ಅದನ್ನು ಖರೀದಿಸಿದವರ ಬಳಿಯೂ ಮನವಿ ಮಾಡಿದೆ, ಪ್ರಯೋಜನವಾಗಲಿಲ್ಲ. ಸಮಿತಿಯವರು, ‘ಅಯ್ಯೋ ಮುಂದಿನ ವರ್ಷ ಶುರುಮಾಡಿದರಾಯಿತು ಬಿಡಿ’ ಎಂದು ಸಲೀಸಾಗಿ ಹೇಳಿಬಿಟ್ರು. ರಾತ್ರಿ ನಿದ್ದೆ ಬರದೆ ಒದ್ದಾಡಿದೆ. ಆದರೆ ಹಟಕ್ಕೆ ಬಿದ್ದು ಕಟ್ಟಡ ಹುಡುಕತೊಡಗಿದೆ.

ನಮಗೆ ಋಣ ಎಲ್ಲಿರುತ್ತೋ ಅಲ್ಲೇ ಸಿಗೋದು ಅಂತೀವಲ್ಲ ನನಗೂ ಹಾಗೇ ಆಯ್ತು. ಹನುಮಂತನಗರದಲ್ಲಿ ವ್ಯಾಯಾಮ ಶಾಲೆ ನಡೆಸುತ್ತಿದ್ದ ಕೆಂಪಣ್ಣ ಎಂಬುವವರನ್ನು ಒಪ್ಪಿಸಿ, 100 ರೂಪಾಯಿ ಅಡ್ವಾನ್ಸ್‌ ಕೂಡಾ ಕೊಟ್ಟೆ. ಅವರ ಮನೆಯಿಂದ ಬರುತ್ತಿದ್ದಾಗ ದಾರಿಯಲ್ಲಿ ಸಿಕ್ಕಿದ ಗಾರೆಯವರನ್ನು ಕರೆದೊಯ್ದು ವೈಟ್‌ವಾಶ್‌ ಕೂಡಾ ಮಾಡಿಸಿದೆ. ಸಂಜೆ ಹೊತ್ತಿಗೆ ‘ಪಿ.ಇ.ಎಸ್. ಕಾಲೇಜು’ ಅಂತ ಬೋರ್ಡ್‌ ಕೂಡಾ ಬರೆಸಿಬಿಟ್ಟೆ. ರಾತ್ರಿ ಬೆಳಗಾಗುವುದರೊಳಗೆ ನಮ್ಮ ಮನೆಯ ಕುರ್ಚಿ, ಮೇಜುಗಳನ್ನೆಲ್ಲಾ ಸಾಗಿಸಿ, ಸರಸ್ವತಿ ಪೂಜೆಯನ್ನೂ ಮಾಡಿ ನಾನೇ ಕುಳಿತುಕೊಂಡೆ. ವಿದ್ಯಾರ್ಥಿಗಳ ದಾಖಲಾತಿಯೂ ಶುರುವಾಯಿತು. ಹೀಗೆ 1973ರಲ್ಲಿ ಹನುಮಂತನಗರದಲ್ಲಿ ಪಿ.ಇ.ಎಸ್. ಕಾಲೇಜು ಶುರುವಾಯಿತು.

ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳೊಂದಿಗೆ ಪಿಯುಸಿ ಶುರು ಮಾಡಿದೆ. 40 ವಿದ್ಯಾರ್ಥಿಗಳಿದ್ದರು. ವಿಜ್ಞಾನಕ್ಕೆ ಮೂರು ಪ್ರಯೋಗಾಲಯ ಬೇಕಾಗುತ್ತದೆ ಎಂದು ಬೋರ್ಡ್‌ ತಗಾದೆ ತೆಗೆಯಿತು. ಮೂರೇ ತಿಂಗಳಲ್ಲಿ ಸುಸಜ್ಜಿತವಾಗಿ ಪ್ರಯೋಗಾಲಯವೂ ನಿರ್ಮಾಣವಾಯಿತು. ಮೊದಲ ವರ್ಷವೇ ಸರ್ಕಾರದ ಅನುದಾನವೂ ಸಿಕ್ಕಿತು. ಕಾಲೇಜಿನಲ್ಲಿ ಶಿಸ್ತು, ಮೂಲಸೌಕರ್ಯ ಮತ್ತು ಉತ್ತಮ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ತಾವಾಗಿ ಬರುತ್ತಾರೆ ಎಂಬುದು ದಯಾನಂದ ಸಾಗರ್‌ ಕಾಲೇಜಿನ ಮೂಲಕ ಸಾಬೀತಾಗಿತ್ತು. ಅದಕ್ಕಾಗಿ ಅತ್ಯುತ್ತಮ ಅಧ್ಯಾಪಕ ವರ್ಗವನ್ನು ಆಯ್ಕೆ ಮಾಡಿದೆ. ಪ್ರಾಂಶುಪಾಲನಾಗಿದ್ದ ನಾನೇ ಎಕನಾಮಿಕ್ಸ್‌ ಪಾಠ ಮಾಡುತ್ತಿದ್ದೆ.

1976ರಲ್ಲಿ ಹನುಮಂತನಗರದಲ್ಲಿ ಬಿಡಿಎನಿಂದ ಗುಡ್ಡ ಮಂಜೂರಾಯಿತು. ಗುಡ್ಡ ತಗೊಂಡು ಏನ್ಮಾಡ್ತೀರಿ ಎಂದು ಎಲ್ಲರೂ ನಕ್ಕರು. ನಾನು ನಮ್ಮ ಕಾಲೇಜಿನಲ್ಲಿದ್ದ ಹುಡುಗರನ್ನೆಲ್ಲ ಒಟ್ಟು ಮಾಡಿಕೊಂಡು ಪ್ರತಿ ಶನಿವಾರ ಶ್ರಮದಾನ ಮಾಡಿಸಿದೆ. ನಾನೂ ಕೆಲಸ ಮಾಡೋದು ನೋಡಿ ನಾಗರಿಕರೂ ಕೈಜೋಡಿಸಿದರು. ಕಟ್ಟಡಗಳನ್ನೂ ನಿರ್ಮಿಸಿದೆವು. ಮುಂದೆ, ಬಿ.ಕಾಂ, ಬಿ.ಫಾರ್ಮಾ, ಡಿ. ಫಾರ್ಮಾ, ಪಾಲಿಟೆಕ್ನಿಕ್‌ ಶುರು ಮಾಡಿದೆವು. ಪಾಲಿಟೆಕ್ನಿಕ್ ಕಾಲೇಜು ಯಶಸ್ವಿಯಾದ ಬಳಿಕ ಎಂಜಿನಿಯರಿಂಗ್ ಕಾಲೇಜು ಶುರು ಮಾಡಬೇಕು ಎಂದು ನಿರ್ಧರಿಸಿದಾಗ ಹೊಸಕೆರೆಹಳ್ಳಿಯ ಈ ಜಮೀನು ಖರೀದಿಸಿದೆ. 1985ರಲ್ಲಿ ಒಂದು ಎಕರೆಗೆ ₹1 ಲಕ್ಷದಂತೆ 7 ಎಕರೆ ಖರೀದಿಸಿದೆ. ಇದೊಂದು ದೊಡ್ಡ ಹಳ್ಳವಾಗಿತ್ತು. ಹಳ್ಳ ತುಂಬಿಸುವುದೇ ದೊಡ್ಡ ಸವಾಲಾಗಿತ್ತು ನಮಗೆ. ಈಗ ಇಷ್ಟೊಂದು ಬೆಳವಣಿಗೆಯಾಗಿ, ಪಿಇಎಸ್‌ ವಿಶ್ವವಿದ್ಯಾಲಯ ನಿರ್ಮಾಣವಾಗಿದೆ, ಈಗಲೂ ಇದು ಮುಖ್ಯರಸ್ತೆಯಿಂದ 20–30 ಅಡಿ ಕೆಳಕ್ಕಿದೆ.

ಒಂದು ವ್ಯಾಯಾಮ ಶಾಲೆಯಲ್ಲಿ ಶುರುವಾದ ಪಿಇಎಸ್‌, ಈಗ ಎಂಟು ಕ್ಯಾಂಪಸ್‌ಗಳನ್ನು ಹೊಂದಿದೆ. ಈ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಪಿಇಎಸ್‌ ಬ್ರ್ಯಾಂಡ್‌ ನಮಗೆ ಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಟ್ಟುಬಿದ್ದು ಕುಪ್ಪಂನಲ್ಲಿ ವೈದ್ಯಕೀಯ ಕಾಲೇಜು ಶುರು ಮಾಡಿಸಿದರು. ನನಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ಅವರ ಹಟವೇ ಗೆದ್ದಿತು. ಈಗ ಅದರ ಉಸ್ತುವಾರಿಯನ್ನು ನನ್ನ ಮಗಳು ಮತ್ತು ಅಳಿಯನಿಗೆ ವಹಿಸಿದ್ದೇನೆ.

ಬೆಂಗಳೂರಿಗೆ ಬಾರದೇ ಇದ್ದರೆ ಒಬ್ಬ ಸಾಮಾನ್ಯ ದೊರೆಸ್ವಾಮಿಯಾಗಿ ಇರುತ್ತಿದ್ದೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಹೆಸರು ದಾಖಲಾಗುತ್ತಿರಲಿಲ್ಲ. ಹೀಗಾಗಿ ಎಲ್ಲಕ್ಕಿಂತ ಮೊದಲ ಕೃತಜ್ಞತೆ ಈ ಬೆಂಗಳೂರಿಗೆ ಸಲ್ಲಬೇಕು. ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಸದುದ್ದೇಶದಿಂದ ಮಾಡುವ ಕೆಲಸಕ್ಕೆ ಹಣದ ಕೊರತೆಯಾಗುವುದಿಲ್ಲ ಎಂಬ, ಮಹಾತ್ಮ ಗಾಂಧೀಜಿಯವರ ಮಾತು ನನ್ನ ಬದುಕಿನಲ್ಲಿ ನಿಜವಾಗಿದೆ. ಇಲ್ಲದಿದ್ದರೆ, ಕೈಯಲ್ಲಿ ಏನೇನೂ ಹಣವಿಲ್ಲದೆ ಕಾಲೇಜು ಶುರು ಮಾಡಲು ಹೊರಟವನು ಇಷ್ಟೊಂದು ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ಇವೆಲ್ಲವೂ ನನ್ನ ಸುಯೋಗವೂ ಹೌದು.

(ಮಗ ಡಿ. ಜವಹರ್‌, ಸೊಸೆ ಸುಮನ್‌ ಜವಹರ್‌ ಮತ್ತು ಮೊಮ್ಮಕ್ಕಳಾದ ಚಿರಂತ್‌ ಹಾಗೂ ರಿತುಪರ್ಣ ಅವರೊಂದಿಗೆ ದೊರೆಸ್ವಾಮಿ ಹಾಗೂ ಪತ್ನಿ ರಾಧಾ ಮನೋಹರಿ)

ಹೆಂಡತಿಗೆ ದೊಡ್ಡ ಥ್ಯಾಂಕ್ಸ್‌!

1966ರಲ್ಲಿ ದಯಾನಂದ ಸಾಗರ್‌ ಕಾಲೇಜು ಪ್ರಾಂಶುಪಾಲನಾಗಿದ್ದಾಗಲೇ ನನಗೆ ಮದುವೆಯಾಯಿತು. ನನ್ನ ಹೆಂಡತಿ ರಾಧಾ ಮನೋಹರಿ ಮಲ್ಲೇಶ್ವರದವರು. ಸಮಾಜ ಸೇವಾ ಮಂಡಳಿ ಶಾಲೆಯ ಜವಾಬ್ದಾರಿಯನ್ನು ಆಕೆಗೇ ವಹಿಸಿದ್ದೇನೆ. ಮದುವೆಯಾದ ಶುರುವಿನಲ್ಲಿ ನಂದಿಬೆಟ್ಟಕ್ಕೆ ಹೋಗಿದ್ವಿ. ಅದೇ ನಮ್ಮ ಹನಿಮೂನ್‌. ಆಮೇಲೆ ಎಲ್ಲಾದರೂ ಪ್ರವಾಸ ಹೋಗೋಣ ಎಂದು ಎಷ್ಟೋ ಸಲ ಕೇಳಿದ್ದರು. ಇದುವರೆಗೂ ಎಲ್ಲೂ ಹೋಗಲು ಆಗಲೇ ಇಲ್ಲ. ‘ಇವನನ್ನು ಎಷ್ಟು ಕೇಳಿದ್ರೂ ಅಷ್ಟೇ’ ಅಂತ ಕೇಳೋದನ್ನೇ ನಿಲ್ಲಿಸಿದ್ದಾರೆ. ಅವರ ತ್ಯಾಗ ಮನೋಭಾವದಿಂದಲೇ ನಾನು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯ್ತು. ಅವರಿಗೆ ದೊಡ್ಡ ಥ್ಯಾಂಕ್ಸ್‌ ಹೇಳ್ಬೇಕು. ಮಗ ಜವಹರ್‌, ಈಗ ಪಿ.ಇ.ಎಸ್. ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್‌. ಮಗಳು ಮತ್ತು ಅಳಿಯ ಇಬ್ಬರೂ ವೈದ್ಯರು.

ಇಮೇಲ್: chancellor@pes.edu

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT