ಶನಿವಾರ, ಜೂಲೈ 4, 2020
21 °C

ಕಲಾಧರ ಶ್ರೀಕಂಠ

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಕಲಾಧರ ಶ್ರೀಕಂಠ

ಎಳವೆಯಿಂದಲೇ ವಿಭಿನ್ನ ಹವ್ಯಾಸಗಳನ್ನು ರೂಢಿಸಿಕೊಂಡವರು ನಗರದ ಜಾಲಹಳ್ಳಿ ನಿವಾಸಿ ಕೆ.ಎಸ್‌.ಶ್ರೀಕಂಠ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರ ಹುಟ್ಟೂರು ಮೈಸೂರು. ಎಸ್ಸೆಸ್ಸೆಲ್ಸಿ ಓದಿರುವ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ ಅನ್ನೂ ಮಾಡಿದ್ದಾರೆ. ಐದು ವರ್ಷದ ಕ್ಲೇ ಮಾಡೆಲಿಂಗ್‌ ಮುಗಿಸಿದ್ದಾರೆ. ಮೂರ್ತಿ ನಿರ್ಮಾಣ, ಕ್ಲೇ ಮಾಡೆಲಿಂಗ್‌ ಮುಂತಾದ ಕಲೆಯಲ್ಲಿ ಪರಿಣಿತಿ ಗಳಿಸಿರುವ ಅವರು ಇವೆಲ್ಲವನ್ನೂ ಸ್ವಪ್ರಯತ್ನದಿಂದ ಕಲಿತಿದ್ದಾರೆ ಎನ್ನುವುದು ವಿಶೇಷ.

ಶ್ರೀಕಂಠ ಅವರ ಮೊದಲ ಆಸಕ್ತಿ ಹಾಗೂ ಕಸುಬು ಆಗಿದ್ದುದು ದೇವಸ್ಥಾನಗಳ ನವೀಕರಣ ಕೆಲಸ. ಕರ್ನಾಟಕದ ಸುತ್ತೆಲ್ಲಾ ಓಡಾಡಿ ವಿರೂಪಗೊಂಡ ದೇವಸ್ಥಾನಗಳಿಗೆ ಮರುಚೆಲುವು ನೀಡುತ್ತಿದ್ದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಮೇಲುಕೋಟೆ ಚೆಲುವರಾಯ ಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ದೇವಸ್ಥಾನ ಮುಂತಾದವು ಇವರ ಕಲಾನೈಪುಣ್ಯದಲ್ಲಿ ಮರು ರೂಪ ಪಡೆದಿವೆ. ಪ್ರಯತ್ನದ ಮೂಲಕವೇ ಶ್ರೀಕಂಠ, ಮೂರ್ತಿ ನಿರ್ಮಾಣ ಮಾಡುವುದನ್ನೂ ಕಲಿತಿಕೊಂಡರು. ಸಿಮೆಂಟ್‌, ಕಲ್ಲುಗಳಿಂದಲೂ ಅವರು ಮೂರ್ತಿ ನಿರ್ಮಿಸಬಲ್ಲರು. ಅಂದಹಾಗೆ ಶ್ರೀಕಂಠ ಮಣ್ಣಿನ ಗಣಪನನ್ನೂ ಮಾಡುವಲ್ಲಿ ಸಿದ್ಧಹಸ್ತರು. ಕೇಂದ್ರ ಸರ್ಕಾರದ ಆರ್ಕಿಯೊಲಾಜಿಕಲ್‌ ವಿಭಾಗದಲ್ಲಿಯೂ ಅವರು ಮೂರ್ನಾಲ್ಕು ವರ್ಷ ಕೆಲಸ ಮಾಡಿದ್ದಾರೆ.

ಸರಕಾರಿ ಕೆಲಸ ಬೇಸರ ಎನಿಸಿದಾಗ ಶ್ರೀಕಂಠ ಆ ಕೆಲಸ ಬಿಟ್ಟರು. ನಂತರ ಸ್ವಂತ ಅನುಭವದಿಂದಲೇ ವಿವಿಧ ಪ್ರದೇಶಗಳಲ್ಲಿ ದೇವಸ್ಥಾನದ ನವೀಕರಣ ಕೆಲಸವನ್ನು ಗಿಟ್ಟಿಸಿಕೊಂಡರು. ಇವುಗಳ ಜೊತೆಗೆ ಶ್ರೀಕಂಠ ಅವರಿಗೆ ಚಿಕ್ಕಂದಿನಿಂದಲೂ ಇದ್ದುದು ಹವ್ಯಾಸದ ಅಮಲು. ಕುಂತಲ್ಲಿ ನಿಂತಲ್ಲಿ ಹೊಸತೇನನ್ನಾದರೂ ಸೃಷ್ಟಿಸಬೇಕು ಎಂಬುದೇ ಅವರ ತವಕ. ವಸ್ತುವೊಂದು ಕಂಡರೆ ಸಾಕು, ಇದಕ್ಕೆ ತಾನು ಯಾವ ರೂಪು ನೀಡಬೇಕು ಎಂದೇ ಅವರು ಯೋಚಿಸುತ್ತಿದ್ದರು. ದಿನಕ್ಕೊಂದರಂತೆ ಬಗೆಬಗೆ ವಸ್ತುಗಳನ್ನು ತಯಾರಿಸಲಾರಂಭಿಸಿದರು. ಮನೆಯಲ್ಲಿ ಬಳಸಿ ಉಳಿದ ವಸ್ತುಗಳೆಲ್ಲವೂ ಶ್ರೀಕಂಠ ಅವರ ಕಣ್ಣಿಗೆ ಕಲಾರಪರಿಕರವಾಗಿ ಗೋಚರಿಸಿದವು. ಅಂದಹಾಗೆ ಶ್ರೀಕಂಠ ಅವರು ನಿರ್ಮಿಸುತ್ತಿದ್ದ ಬೊಕೆ (ಹೂಗುಚ್ಛ)ಗಳಿಗೆ ಬಹುಬೇಡಿಕೆ ಇದ್ದ ಕಾಲವೂ ಇತ್ತು. ತಮಗೆ ತಿಳಿದ ಕಲೆಯನ್ನು ಇತರರಿಗೆ ಹೇಳಿಕೊಡುತ್ತಿದ್ದರೂ ಕೂಡ.

ಪ್ಲಾಸ್ಟಿಕ್‌ ಬಾಟಲಿ, ತೆಂಗಿನ ಚಿಪ್ಪು, ಪೇಪರ್‌, ಹಾಳಾದ ವಾಷಿಂಗ್‌ ಮೆಷಿನ್‌ ಹಿಡಿದು ಕಲಾತಪಸ್ಸಿಗೆ ಕುಳಿತುಕೊಳ್ಳುವುದು ಅವರ ನಿತ್ಯದ ಪರಿಪಾಠ. ‘ಹಳೆಕಾಲದ ವಾಷಿಂಗ್‌ ಮೆಷಿನ್‌ ಒಂದಿತ್ತು. ಅದು ಹಾಳಾಯ್ತು. ಕಬ್ಬಿಣದ್ದದು. ಗುಜರಿಯವನಿಗೆ ಕೊಟ್ಟರೆ ₹100 ಸಿಗಬಹುದು. ಹೀಗಾಗಿ ನಾನೇ ತುಸು ಯೋಚನೆ ಮಾಡಿ ಅದನ್ನು ಮೌಲ್ಡ್‌ ಮಾಡಿ ಸ್ಟ್ಯಾಂಡ್‌ ಮಾಡಿಬಿಟ್ಟಿದ್ದೇನೆ. ಉಪಯೋಗಕ್ಕೂ ಬರುತ್ತದೆ’ ಎಂದು ಅವರು ವಿವರಿಸುತ್ತಾರೆ.

ಇತ್ತಿಚೆಗೆ ಅವರಿಗೆ ಹೆಚ್ಚು ಆಪ್ತವಾಗಿರುವುದು ಪ್ಲಾಸ್ಟಿಕ್‌ ವಸ್ತುಗಳಿಂದ ಕಲೆ ಅರಳಿಸುವುದು. ಬಳಸಿದ ವಾಟರ್‌ ಬಾಟಲ್‌ ಅಥವಾ ಇನ್ಯಾವುದೇ ಪ್ಲಾಸ್ಟಿಕ್‌ ವಸ್ತು ಕಂಡರೆ ಶ್ರೀಕಂಠ ಅವರಿಗೆ ಮೊಗದಲ್ಲಿ ನಗುವರಳುತ್ತದೆ. ಅವುಗಳಿಂದ ನೆಕ್ಲೆಸ್‌, ಕಿವಿಯೋಲೆ, ವಾಸ್‌, ಪೆನ್‌ಸ್ಟ್ಯಾಂಡ್‌ ಮುಂತಾದವನ್ನು ಮಾಡುತ್ತಾರೆ. ತೆಂಗಿನ ಕಾಯಿ ಚಿಪ್ಪಿಗೂ ಅವರು ಕಲಾರೂಪ ನೀಡಿದ್ದಾರೆ. ಕುಂಕುಮದ ಸ್ಟ್ಯಾಂಡ್‌, ಕಿವಿಯೋಲೆಗಳನ್ನೂ ರಚಿಸಿದ್ದಾರೆ.

ಯಾವ ವಸ್ತುವಿಗೆ ಯಾವುದು ಸೂಕ್ತ ಎನ್ನುವುದರ ಮೇಲೆ ಬಗೆಬಗೆಯ ಗಮ್‌ಗಳನ್ನು ಅವರು ಬಳಸಿಕೊಳ್ಳುತ್ತಾರೆ. ಕಟಿಂಗ್‌ ಮೆಷಿನ್‌ ಇರುವುದರಿಂದ ವಸ್ತು ಎಷ್ಟೇ ಗಟ್ಟಿಯದಾದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಮನಸ್ಸಿನೊಳಗೆ ಮೂಡಿದ ರೂಪವನ್ನು ಮೂರ್ತರೂಪಕ್ಕೆ ತಂದೇಬಿಡುತ್ತಾರೆ.

ಅಲಂಕಾರಿಕ ವಸ್ತುಗಳನ್ನು ಮಹಿಳೆಯರಷ್ಟೇ ಅಲ್ಲ, ಪುರುಷರೂ ಚಂದವಾಗಿ ರೂಪಿಸಬಲ್ಲರು ಎನ್ನುವುದಕ್ಕೆ ಶ್ರೀಕಂಠ ಅವರೇ ಸಾಕ್ಷಿ. ಅವೆನ್ಯು ರಸ್ತೆಯಲ್ಲಿ ಸಿಗುವ ಜರ್ಮನ್‌ ಪೇಪರ್‌ ಹಿಡಿದು ವಿವಿಧ ಬಗೆಯ ಹೂವು, ಗಿಡಗಳ ಪ್ರತಿರೂಪ ಮಾಡಲು ಅವರು ಪ್ರಾರಂಭಿಸಿದ್ದಾರೆ. ನೈಜ ಹೂವೂ ನಾಚಿಕೊಳ್ಳುವಷ್ಟು ಸ್ಫುಟವಾಗಿರುತ್ತವೆ ಅವರ ಕೈಯಲ್ಲರಳಿದ ಹೂವುಗಳು. ತಾನು ಮಾಡುವ ವಸ್ತುಗಳಿಗೆ ಕುಂದನ್‌ ಮಣಿಗಳನ್ನು ಬಳಸಿ ಶ್ರೀಮಂತ ನೋಟ ನೀಡುತ್ತಾರೆ.

(ಕೆ.ಎಸ್‌.ಶ್ರೀಕಂಠ)

‘ಹವ್ಯಾಸ ಎಂದುಕೊಳ್ಳುತ್ತಾ ದುಡ್ಡು ಹಾಳು ಮಾಡುವ ಮನುಷ್ಯ ನಾನಲ್ಲ. ನನಗೀಗ 77 ವರ್ಷ. ಹೆಂಡತಿ ಕಾಲೇಜು ಉಪನ್ಯಾಸಕಿಯಾಗಿದ್ದರಿಂದ ಪೆನ್ಶನ್‌ ಹಣ ಬರುತ್ತದೆ. ಜಾಲಹಳ್ಳಿಯಲ್ಲಿರುವ ಮಗನ ಮನೆಯಲ್ಲಿದ್ದೇನೆ. ನಮಗೇ ಒಂದು ಕೋಣೆ ಇದೆ. ಬೆಳಿಗ್ಗೆ ನಾಲ್ಕೈದು ಕಿ.ಮೀ. ವಾಕಿಂಗ್‌ ಮಾಡಿ ಬಂದು ಸ್ನಾನ ಮಾಡಿ ಕಲಾ ಕೈಂಕರ್ಯಕ್ಕೆ ಕೂರುತ್ತೇನೆ. ಹೆಚ್ಚಾಗಿ ಬಳಸಿದ ವಸ್ತುಗಳೇ ಕಲಾ ಪರಿಕರಗಳಾಗುವುದರಿಂದ ಖರ್ಚು ಜಾಸ್ತಿ ಆಗುವುದಿಲ್ಲ’ ಎನ್ನುವ ಶ್ರೀಕಂಠ ಅವರ ಪ್ರಕಾರ ‘ಖಾಲಿ ಕೂತರೇ ಕಾಯಿಲೆ ಜಾಸ್ತಿ. ಹೀಗಾಗಿ ನಿವೃತ್ತಿ ನಂತರವೂ ಎಷ್ಟು ಸಾಧ್ಯವೋ ಅಷ್ಟು ಬ್ಯುಸಿ ಆಗಿರಬೇಕು. ವಿಭಿನ್ನ ಹವ್ಯಾಸದಲ್ಲಿ ತೊಡಗಿಕೊಂಡು ಚಟುವಟಿಕೆಯಿಂದ ಇದ್ದರೆ ಸಂತೋಷದಾಯಕ ಬದುಕು ಸಾಗಿಸಬಹುದು’ ಎನ್ನುತ್ತಾರವರು.

ಶ್ರೀಕಂಠ ಅವರ ಸಂಪರ್ಕಕ್ಕೆ: 97314 00276

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.