ಗುರುವಾರ , ಜೂಲೈ 9, 2020
27 °C
ಮಿಂಚಿನ ಆಟವಾಡಿದ ಸಾಯ್‌ ಪ್ರಣೀತ್‌; ಕಿದಂಬಿ ಶ್ರೀಕಾಂತ್‌ಗೆ ನಿರಾಸೆ

ಹಂಟರ್ಸ್‌ಗೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಟರ್ಸ್‌ಗೆ ಭರ್ಜರಿ ಗೆಲುವು

ಚೆನ್ನೈ : ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್ ಒಳಗೊಂಡಂತೆ ಪ್ರಮುಖ ಆಟಗಾರರ ವಿರುದ್ಧ ಆಧಿಪತ್ಯ ಸ್ಥಾಪಿಸಿದ ಹೈದರಾಬಾದ್ ಹಂಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ಭಾನುವಾರದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡವನ್ನು ಹಂಟರ್ಸ್‌ 6–(–1) ಯಿಂದ ಸೋಲಿಸಿತು.

ಮೊದಲ ಎರಡು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದ ಅವಧ್ ವಾರಿಯರ್ಸ್ ಪರ ಮೂರನೇ ಪಂದ್ಯದಲ್ಲಿ ಶ್ರೀಕಾಂತ್ ಕಣಕ್ಕೆ ಇಳಿದಿದ್ದರು. ಇದು ಈ ತಂಡದ ಟ್ರಂಪ್‌ ಪಂದ್ಯ ಆಗಿತ್ತು. ಸಾಯ್ ಪ್ರಣೀತ್‌ ವಿರುದ್ಧ 10–15, 10–15ರಿಂದ ಸೋತ ಶ್ರೀಕಾಂತ್‌ ತಂಡಕ್ಕೆ ನಿರಾಸೆ ಉಂಟು ಮಾಡಿದರು. ಮುಂದಿನ ಪಂದ್ಯದಲ್ಲಿ ಸೈನಾ ನೆಹ್ವಾಲ್‌ಗೆ ಕರೊಲಿನಾ ಮರಿನ್ ಎದುರಾಳಿಯಾಗಿದ್ದರು. ಇದು ಹಂಟರ್ಸ್‌ನ ಟ್ರಂಪ್ ಪಂದ್ಯ ಆಗಿತ್ತು. 15–5, 15–7ರಿಂದ ಗೆದ್ದ ಮರಿನ್‌ ಹಂಟರ್ಸ್‌ಗೆ ಭಾರಿ ಮುನ್ನಡೆ ಗಳಿಸಿಕೊಟ್ಟರು.

ಶ್ರೀಕಾಂತ್ ವಿರುದ್ಧದ ಪಂದ್ಯದ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಅನುಭಿವಿಸಿದರೂ ನಂತರ ಪ್ರಣೀತ್ ಆಧಿಪತ್ಯ ಸ್ಥಾಪಿಸಿದರು. ಮೊದಲ ಗೇಮ್‌ನಲ್ಲಿ 7–8ರ ಹಿನ್ನಡೆಯಿಂದ ಚೇತರಿಸಿಕೊಂಡು ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಇನ್ನಷ್ಟು ಪ್ರಬಲ ಆಟವಾಡಿದ ಅವರು 8–0 ಮುನ್ನಡೆ ಗಳಿಸಿದರು. ನಂತರ ಶ್ರೀಕಾಂತ್ ಪ್ರತಿರೋಧ ಒಡ್ಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಆರಂಭದಲ್ಲಿ ಪುರುಷರ ಡಬಲ್ಸ್‌ನಲ್ಲಿ ಗೆದ್ದ ಹೈದರಾಬಾದ್‌ ತಂಡ ಮೊದಲ ಪಾಯಿಂಟ್ ಗಳಿಸಿತ್ತು. ಮಾರ್ಕಿಸ್‌ ಕಿಡೊ ಮತ್ತು ಯೂ ಯಾನ್ ಸ್ಯಾಂಗ್ ಜೋಡಿ ಓರ್‌ ಚಿಂಗ್ ಚಂಗ್ ಮತ್ತು ಟಾಂಗ್‌ ಚುನ್‌ ಮಾನ್‌ ವಿರುದ್ಧ 14–15, 15–6, 15–11ರಿಂದ ಗೆದ್ದರು.

ನಂತರ ಪರುಪಳ್ಳಿ ಕಶ್ಯಪ್ ಅವರನ್ನು 13–15, 15–9, 15–14ರಿಂದ ಸೋಲಿಸಿದ ಲೀ ಹ್ಯೂನ್‌ ಹಂಟರ್ಸ್‌ ತಂಡದ ಮುನ್ನಡೆ ಹೆಚ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.