ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂವೇ ಆದರೆ ಗೋಹತ್ಯೆ ನಿಷೇಧಿಸಿ: ಸಿದ್ದರಾಮಯ್ಯಗೆ ಯೋಗಿ ಆದಿತ್ಯನಾಥ ಸವಾಲು

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂವೇ ಆಗಿದ್ದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸವಾಲು ಹಾಕಿದರು.

ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಅಂಗವಾಗಿ ಇಲ್ಲಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಿಂದೂ ಎನ್ನುವುದು ಜಾತಿ, ಮತವಲ್ಲ. ವಿಶ್ವದಲ್ಲೇ ಅತ್ಯುತ್ಕೃಷ್ಟವಾದ ಜೀವನ ಪದ್ಧತಿ. ಯಾವುದೇ ಹಿಂದೂ ಗೋಮಾಂಸ ತಿನ್ನುವುದಿಲ್ಲ. ಗೋಹತ್ಯೆ ಸಮರ್ಥಿಸುವುದಿಲ್ಲ. ನಾನು ಹಿಂದೂ ಎಂದು ಪ್ರತಿ‍ಪಾದಿಸುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಮಸೂದೆ ವಾಪಸು ಪಡೆದಿದ್ದೇಕೆ’ ಎಂದು ಪ್ರಶ್ನಿಸಿದರು.

ಶ್ರೀರಾಮನ ಜನ್ಮಭೂಮಿ ಉತ್ತರ ಪ್ರದೇಶ. ಆಂಜನೇಯನ ಜನ್ಮಭೂಮಿ ಕರ್ನಾಟಕ. ಉತ್ತರ ಪ್ರದೇಶದ ಗೋರಖನಾಥನನ್ನು ಇಲ್ಲಿ ಮಂಜುನಾಥ ಎಂದು ಕರೆಯುತ್ತಾರೆ. ಗೋರಖನಾಥನಿಗೂ ಇಲ್ಲಿಯ ಆದಿಚುಂಚನಗಿರಿ, ಮಂಗಳೂರಿ(ಕದ್ರಿ)ಗೂ ನಿಕಟ ಸಂಬಂಧವಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಿಕಾಸಪರ್ವ ಆರಂಭವಾಗಿದೆ. ಕರ್ನಾಟಕದಲ್ಲಿ ವಿಕಾಸಯುಗ ಆರಂಭ ವಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮಾತನಾಡಿ, ಅತ್ಯಂತ ಸುರಕ್ಷಿತ ನಗರ, ಉದ್ಯಾನ ನಗರ, ಮಾಹಿತಿ ತಂತ್ರಜ್ಞಾನ ನಗರ ಎಂದು ಬೆಂಗಳೂರು ಹೆಸರು ಗಳಿಸಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭದ್ರತೆಯ ನಗರ, ಕಸದ ರಾಶಿ, ಗುಂಡಿಗಳು ತುಂಬಿದ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ಬೆಂಗಳೂರಿನ ವೈಭವ ಮರಳಿ ಬರ ಬೇಕಾದರೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.

ಸಿದ್ದರಾಮಯ್ಯ ರಿವರ್ಸ್‌ ಗೇರ್‌: ಪ್ರಧಾನಿ ನರೇಂದ್ರ ಮೋದಿ ಟಾಪ್ ಗೇರ್‌ನಲ್ಲಿದ್ದರೆ, ಮನಮೋಹನ ಸಿಂಗ್‌ ನ್ಯೂಟ್ರಲ್ ಗೇರ್‌ನಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಿವರ್ಸ್‌ ಗೇರ್‌ನಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ರಾಜ್ಯದ ಅಭಿವೃದ್ಧಿ ನಿಧಾನಗತಿಯಲ್ಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಅನಂತ್ ಕುಮಾರ  ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ನೀಡಿದ ಹಣವನ್ನು ಖರ್ಚು ಮಾಡಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಗೆ ಕೇಂದ್ರ ₹1,924 ಕೋಟಿ ನೀಡಿದ್ದರೆ, ಕೇವಲ ₹179 ಕೋಟಿ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ಎಂದರೆ ತ್ರಿಬಲ್‌ ಝೀರೋ(ಮೂರು ಸೊನ್ನೆ) ಇದ್ದಂತೆ ಎಂದೂ ಅವರು ಟೀಕಿಸಿದರು.

ಟೋಪಿ ಹಾಕುವುದಕ್ಕೆ ಬರುತ್ತಿದ್ದಾರೆ ರಾಹುಲ್‌: ಯಡಿಯೂರಪ್ಪ

ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದ ಸೋನಿಯಾಗಾಂಧಿ ಭರವಸೆಗಳ ಮಹಾಪೂರ ಹರಿಸಿದ್ದರು. ಆದರೆ ಆ ಜಿಲ್ಲೆ ಅಭಿವೃದ್ಧಿ ಕಾಣಲೇ ಇಲ್ಲ. ಈಗ ರಾಜ್ಯದ ಜನರಿಗೆ ಟೋಪಿ ಹಾಕಲು ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯಗೆ ಬಸವಣ್ಣನವರ ನೆನಪಾಗುತ್ತಿದೆ. ಒಂದೆಡೆ ಬಸವಣ್ಣನವರ ಹೆಸರು ಹೇಳುತ್ತಾ, ಮತ್ತೊಂದೆಡೆ ಜಾತಿ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬೆಂಗಳೂರಿನಲ್ಲಿ 2.5 ಲಕ್ಷ ಬಾಂಗ್ಲಾದ ಅಕ್ರಮ ವಲಸಿಗರಿದ್ದಾರೆ. ಅವರಿಗೆ ನಕಲಿ ಮತದಾರರ ಗುರುತಿನ ಚೀಟಿ ಕೊಡಿಸುವ ಜವಾಬ್ದಾರಿಯನ್ನು ಸಚಿವ ಜಾರ್ಜ್‌, ಶಾಸಕ ಬೈರತಿ ಬಸವರಾಜ್‌ಗೆ ಸಿದ್ದರಾಮಯ್ಯ ವಹಿಸಿದ್ದಾರೆ. ಹೀಗೆ ಮಾಡುವ ಮೂಲಕ ಚುನಾವಣಾ ಅಕ್ರಮ ನಡೆಸಲು ಮುಂದಾಗಿದ್ದಾರೆ ಎಂದೂ ಅವರು ಟೀಕಿಸಿದರು.

ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ

ನೆರೆದ ಜನಸ್ತೋಮ, ಸರ್ಕಾರದ ಟೀಕೆಗೆ ಸ್ಲೈಡ್‌ ಬಳಕೆ

ಬೆಂಗಳೂರಿನಲ್ಲಿ ಹಿಂದೆ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶಗಳಿಗೆ ಜನ ಸೇರದೆ, ಖಾಲಿ ಕುರ್ಚಿಗಳನ್ನು ಕಂಡಿದ್ದ ಬಿಜೆಪಿ ನಾಯಕರು ಕಂಗೆಟ್ಟಿದ್ದರು. ಆದರೆ, ಭಾನುವಾರ ನಡೆದ ಸಮಾವೇಶಕ್ಕೆ ಭರ್ಜರಿ ಸಂಖ್ಯೆಯಲ್ಲಿ ಜನ ಸೇರಿದ್ದರು. 20 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕ ವಿ. ಸೋಮಣ್ಣ ಹೇಳಿಕೊಂಡಿದ್ದು, ಕುರ್ಚಿಗಳು ಭರ್ತಿಯಾಗಿದ್ದವು. ಹೊರಗಡೆಯೂ ಸಾಕಷ್ಟು ಜನ ಇದ್ದರು. ವಿಜಯನಗರ, ಬಸವೇಶ್ವರ ನಗರ, ಮಾಗಡಿ ರಸ್ತೆಯಲ್ಲಿ ಬೆಳಿಗ್ಗೆ 10ರಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.

ಪ್ರಮುಖರು ಭಾಷಣ ಮಾಡುವಾಗ, ವೇದಿಕೆ ಹಿಂದೆ ಹಾಕಲಾಗಿದ್ದ ವಿಶಾಲ ಪರದೆಯ ಮೇಲೆ ರಾಜ್ಯ ಸರ್ಕಾರದ ವೈಫಲ್ಯ ತೋರಿಸುವ ಸ್ಲೈಡ್‌ ಪ್ರದರ್ಶನ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ ಎನ್ನುವಾಗ ಅವರು ನಿದ್ದೆ ಮಾಡುವ ಚಿತ್ರಗಳು, ಸಂಘಪರಿವಾರದ ಕಾರ್ಯಕರ್ತರ ಕಗ್ಗೊಲೆ ನಡೆಯತ್ತಿದೆ ಎನ್ನುವಾಗ ಕೊಲೆ ಗೀಡಾದವರ ಭಾವಚಿತ್ರಗಳನ್ನು ಪರದೆಯ ಮೇಲೆ ಪ್ರದರ್ಶಿಸುವ ಹೊಸ ತಂತ್ರವನ್ನು ಈ ಬಾರಿ ಬಳಸಲಾಗಿತ್ತು.

ಸಿಟ್ಟಾದ ರಾಮಚಂದ್ರಗೌಡ: 10.40ರ ಸುಮಾರಿಗೆ ವೇದಿಕೆಗೆ ಬಂದ ವಿಧಾನಪರಿಷತ್ತಿನ ಸದಸ್ಯ ರಾಮಚಂದ್ರಗೌಡ ತಮಗೆ ಮೀಸಲಾದ ಕುರ್ಚಿಗಾಗಿ ಹುಡುಕಿದರು. ಸಿಗದೇ ಇದ್ದಾಗ ಸಿಡಿಮಿಡಿಗೊಂಡು ವೇದಿಕೆಯಿಂದ ಇಳಿದು ಹೋದರು.

* ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲ ‘ಕಲ್ಲು’ ಹಾಕುತ್ತಿದ್ದಾರೆ. ಅಲ್ಲೆಲ್ಲ ಹುಲ್ಲು ಬೆಳೆಯುತ್ತದೆ ವಿನಾ ಕಾಮಗಾರಿ ನಡೆಯುವುದಿಲ್ಲ

ಡಿ.ವಿ. ಸದಾನಂದಗೌಡ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ

* ಸಿದ್ದರಾಮಯ್ಯಮತ್ತು ಗೋಸುಂಬೆ ಮಧ್ಯೆ ಸ್ಪರ್ಧೆ ನಡೆದರೆ ಗೋಸುಂಬೆ ಸೋಲು ತ್ತದೆ. ಬಣ್ಣ ಬದಲಾಯಿಸುವುದರಲ್ಲಿ ಮುಖ್ಯಮಂತ್ರಿ ನಿಸ್ಸೀಮರು

–ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ

* ನಾನೂ ಗೋಮಾಂಸ ತಿನ್ನುತ್ತೇನೆ, ಅದನ್ನು ಕೇಳುವವರು ಯಾರು ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ನಾನೂ ಹಿಂದೂ ಎಂದರೆ ನಂಬಲು ಸಾಧ್ಯವೇ

–ಕೆ.ಎಸ್. ಈಶ್ವರಪ್ಪ, ವಿರೋಧ ಪಕ್ಷದ ನಾಯಕ, ವಿಧಾನಪರಿಷತ್ತು

ಸಿದ್ದರಾಮಯ್ಯ– ಯೋಗಿ ಆದಿತ್ಯನಾಥ ಟ್ವೀಟ್ ಸಮರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟ್ವೀಟ್‌ ಸಮರ ನಡೆಸಿದ್ದಾರೆ.

ಭಾನುವಾರ ನಗರಕ್ಕೆ ಬಂದ ಯೋಗಿ ಆದಿತ್ಯನಾಥ್‌ಗೆ ಸ್ವಾಗತ ಕೋರಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಇಲ್ಲಿನ ಇಂದಿರಾ ಕ್ಯಾಂಟೀನ್ ಮತ್ತು ನ್ಯಾಯಬೆಲೆ ಅಂಗಡಿಯೊಂದಕ್ಕೆ ಭೇಟಿ ನೀಡಿ. ನಿಮ್ಮ ರಾಜ್ಯದಲ್ಲಿ ಬಡತನದಿಂದ  ಸಂಭವಿಸುತ್ತಿರುವ ಸಾವಿನ ಪ್ರಕರಣಗಳನ್ನು ತಡೆಯಲು ಸಹಾಯವಾಗ
ಬಲ್ಲದು’ ಎಂದು ಕೆಣಕಿದ್ದಾರೆ.

ಇದಕ್ಕೆ ಮರು ಟ್ವೀಟ್ ಮಾಡಿರುವ ಯೋಗಿ ಆದಿತ್ಯನಾಥ, ‘ಕರ್ನಾಟಕದಲ್ಲಿ ನಿಮ್ಮ ಆಡಳಿತಾವಧಿಯಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂಬುದನ್ನು ಕೇಳಿದ್ದೇನೆ. ಅಷ್ಟೇ ಅಲ್ಲದೇ, ಹಲವು ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿಮ್ಮ ಮೈತ್ರಿ ಪಕ್ಷಗಳು ಉತ್ತರ ಪ್ರದೇಶದಲ್ಲಿ ಹದಗೆಡಿಸಿದ್ದ ಕಾನೂನು ವ್ಯವಸ್ಥೆ ಮತ್ತು ಜನರಿಗೆ ನೀಡಿದ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭಾನುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ ಅವರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಮಠಕ್ಕೆ ಸಂಬಂಧಿಸಿದ ಪುಸ್ತಕ ತೋರಿಸಿದರು. ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT