ಶನಿವಾರ, ಜೂಲೈ 4, 2020
21 °C

ಹಾಸ್ಯನಟ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಹಾಸ್ಯ ನಟ ವಿಶ್ವನಾಥ್ (ತರಂಗ ವಿಶ್ವ) ಸೇರಿದಂತೆ ನಾಲ್ವರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯು 2017ರ ಡಿ.20ರಂದು ಕಮಿಷನರ್ ಕಚೇರಿಗೆ ದೂರು ಕೊಟ್ಟಿದ್ದರು. ಅದು ಜ.3ರಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ವರ್ಗವಾಗಿದ್ದು, ಪೊಲೀಸರು ಉತ್ತರಹಳ್ಳಿಯ ವಿಶ್ವನಾಥ್, ಪಾಪಣ್ಣ, ಕನಕನಗರದ ಪುಟ್ಟಸ್ವಾಮಿ ಹಾಗೂ ಅವರ ಅಳಿಯ ನಾಗೇಶ್ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ 354) ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತೆಯ ಆರೋಪ: ‘2013–14ರಲ್ಲಿ ನಾನು ಉತ್ತರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದೆ. ಆಗ ವಿಶ್ವನಾಥ್ ಹಾಗೂ ಪಾಪಣ್ಣ ಎಂಬುವವರು ಪಕ್ಕದ ಫ್ಲ್ಯಾಟ್‌ಗೆ ಬಾಡಿಗೆಗೆ ಬಂದರು. ನಾನು ಒಬ್ಬಳೇ ವಾಸವಾಗಿರುವುದನ್ನು ತಿಳಿದ ಅವರು, ಅಶ್ಲೀಲವಾಗಿ ವರ್ತಿಸಲು ಶುರು ಮಾಡಿದರು. ನನ್ನನ್ನು ಹಿಂಬಾಲಿಸಿ ಬರುವುದು ಹಾಗೂ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದು ಸೇರಿದಂತೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು’ ಎಂದು 40 ವರ್ಷದ ಆ ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘ಈ ಸಂಬಂಧ ಸ್ಥಳೀಯ ಠಾಣೆಗೆ ದೂರು ಕೊಟ್ಟರೂ, ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ. ದೌರ್ಜನ್ಯ ಸಹಿಸಲಾರದೆ, 2015ರಲ್ಲಿ ವಾಸ್ತವ್ಯವನ್ನು ಕನಕ ಲೇಔಟ್‌ಗೆ ಬದಲಾಯಿಸಿದೆ. ಅಲ್ಲಿ ಮನೆ ಮಾಲೀಕ ಪುಟ್ಟಸ್ವಾಮಿ ಹಾಗೂ ಅವರ ಅಳಿಯ ನಾಗೇಶ್ ಅವರಿಂದ ಕಿರುಕುಳ ಪ್ರಾರಂಭವಾಯಿತು.’

‘ತಾನು ರಾಜಕೀಯ ಮುಖಂಡರೊಬ್ಬರ ಆಪ್ತ ಎಂದು ಹೇಳಿಕೊಳ್ಳುತ್ತಿದ್ದ ಪುಟ್ಟಸ್ವಾಮಿ, ಯಾವಾಗೆಂದರೆ ಆವಾಗ ಮನೆಗೆ ಬಂದು ದುರ್ವರ್ತನೆ ತೋರುತ್ತಿದ್ದರು. ನಾಗೇಶ್ ಸಹ ನನಗೆ ತಿಳಿಯದಂತೆ ಮೊಬೈಲ್‌ನಲ್ಲಿ ಫೋಟೊಗಳನ್ನು ತೆಗೆಯುತ್ತಿದ್ದರು. ಎರಡೇ ತಿಂಗಳಲ್ಲಿ ಅಲ್ಲಿಂದಲೂ ಮನೆ ಖಾಲಿ ಮಾಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಬಂದೆ. ಈಗಲೂ ಈ ನಾಲ್ಕು ಮಂದಿ ನನಗೆ ಕಿರುಕುಳ ನೀಡುತ್ತಲೇ ಇದ್ದಾರೆ.’

‘ನಾನು ಕೆಲಸ ಮಾಡುವ ಸ್ಥಳಕ್ಕೆ ಬಂದು ಅನುಚಿತವಾಗಿ ವರ್ತಿಸುತ್ತಿದ್ದಾರೆ. ‘ಬೆಂಗಳೂರಿನಲ್ಲಿ ನೀನು ಹೇಗೆ ಬದುಕುತ್ತೀಯೋ ನಾವೂ ನೋಡುತ್ತೇವೆ. ನಿನಗೆ ಎಲ್ಲೂ ಕೆಲಸ ಸಿಗದಂತೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದಾಗಲೆಲ್ಲ, ಪುಟ್ಟಸ್ವಾಮಿ ಬೇರೆ ಯಾರನ್ನೋ ತನ್ನ ಅಳಿಯ ಎಂದು ಠಾಣೆಗೆ ಕರೆದುಕೊಂಡು ಬಂದು ಪೊಲೀಸರನ್ನೂ ಯಾಮಾರಿಸುತ್ತಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಚಿತ್ರೀಕರಣದಲ್ಲಿ ವಿಶ್ವನಾಥ್

‘ವಿಶ್ವನಾಥ್ ಚಿತ್ರೀಕರಣದಲ್ಲಿ ನಿರತರಾಗಿರುವ ಕಾರಣ ಅವರ ಪತ್ನಿ ಹೇಳಿಕೆ ಕೊಟ್ಟಿದ್ದಾರೆ. ‘ನಾಲ್ಕು ವರ್ಷಗಳ ಹಿಂದೆ ನಮ್ಮ ಪಕ್ಕದ ಫ್ಲ್ಯಾಟ್‌ನಲ್ಲಿದ್ದ ಆ ಮಹಿಳೆ, ಸಣ್ಣಪುಟ್ಟ ವಿಚಾರಕ್ಕೂ ಸ್ಥಳೀಯರ ಜತೆ ಗಲಾಟೆ ಮಾಡುತ್ತಿದ್ದರು. ಪತಿ ಅವರ ಜತೆ ದುರ್ವರ್ತನೆ ತೋರಿಲ್ಲ’ ಎಂದಿದ್ದಾರೆ. ಉಳಿದ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಶೋಧ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.