ಬುಧವಾರ, ಜೂಲೈ 8, 2020
29 °C

‘ನಗರ ಮಧ್ಯದಲ್ಲೊಂದು ನರಕ ದರ್ಶನ’

ಆರ್‌.ಎಲ್‌. ಚಿಕ್ಕಮಠ Updated:

ಅಕ್ಷರ ಗಾತ್ರ : | |

‘ನಗರ ಮಧ್ಯದಲ್ಲೊಂದು ನರಕ ದರ್ಶನ’

ಬೆಳಗಾವಿ: ನಗರ ಮಧ್ಯದ ಮಹಾನಗರ ಪಾಲಿಕೆಯ ಹಳೆ ಕಟ್ಟಡದ ಪಕ್ಕದ ಗಣಾಚಾರಿ ರಸ್ತೆ ಕಳೆದ ನಾಲ್ಕು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗಣಾಚಾರ ಗಲ್ಲಿ ಮೂಲಕ ಕಾಕತಿವೇಸ್ ಸೇರುವ ಸುಮಾರು ಇನ್ನೂರು ಮೀಟರ್‌ ಉದ್ದದ ರಸ್ತೆಯನ್ನು ಅನೇಕ ವರ್ಷಗಳಿಂದ ದುರಸ್ತಿಗೊಳಿಸಿಲ್ಲ.

ಈ ರಸ್ತೆಯ ಅಕ್ಕಪಕ್ಕದಲ್ಲಿ ವಿವೇಕಾನಂದ ಆಶ್ರಮ, ಬಕ್ರಿ ಮಂಡಿ (ಕುರಿ ಸಂತೆ ಜಾಗ), ಸರ್ಕಾರಿ ಮರಾಠಿ ಶಾಲೆ, ರಾತ್ರಿ ವಸತಿ ರಹಿತರ ಆಶ್ರಯ ಕಟ್ಟಡಗಳು ಇರುವುದರಿಂದ ನಿತ್ಯ ಜನದಟ್ಟಣೆಯ ಹೊಂದಿದೆ. ಈ ರಸ್ತೆ ರಿಸಲ್ದಾರ ಗಲ್ಲಿಯಿಂದ ಕಾಕತಿವೇಸ್‌ ರಸ್ತೆಯನ್ನು ಸುಲಭವಾಗಿ ಸೇರುವ ಒಳದಾರಿಯಾಗಿದೆ.

ಶನಿವಾರ ಕೂಟ ಮತ್ತು ಹೊಸ ತಹಶೀಲ್ದಾರ್‌ ಕಚೇರಿ ಗಲ್ಲಿಯಲ್ಲಿ ವಾಹನ ಸಂಚಾರ, ಜನದಟ್ಟಣೆ ಇದ್ದಾಗ ಬಹುತೇಕ ವಾಹನ ಸವಾರರು ದಾರಿಯನ್ನು ಅನುಸರಿಸುತ್ತಾರೆ. ಈ ರಸ್ತೆಯ ಬದಿಯಲ್ಲಿಯೇ ಖಾಲಿ ಜಾಗವೊಂದು ಕಸ ಬಿಸಾಕಲು ಅನುಕೂಲವಾಗಿದೆ.

ದಶಕದ ಹಿಂದೆ ಮಹಾನಗರ ಪಾಲಿಕೆಯ ಆಡಳಿತ ಕಚೇರಿ ಇದೇ ರಸ್ತೆಯ ಕಟ್ಟಡದಲ್ಲಿ ಇದ್ದಾಗ ಇದನ್ನು ಆಗಾಗ ದುರಸ್ತಿಗೊಳಿಸಲಾಗುತ್ತಿತ್ತು. ಈಗ ಇತ್ತ ಯಾರೂ ಕಣ್ತೆರೆದು ನೋಡಿಲ್ಲ.

ಉತ್ತರದ ಮೇಲ್ಭಾಗದಿಂದ ಬರುವ ಚರಂಡಿ ಹಾಗೂ ಗಟಾರ್‌ ನೀರು ಸಾಗಿಸಲು ಅನೇಕ ಸಲ ಇದನ್ನು ಅಗೆದು ಹಾಗೆಯೇ ಬಿಡಲಾಗಿದೆ. ಪರಿಣಾಮವಾಗಿ ರಸ್ತೆಯಲ್ಲಿ ಹಿಡಿ ಗಾತ್ರದ ಕಲ್ಲುಗಳು, ದೂಳೆಬ್ಬಿಸುವ ಕೆಂಪು ಮಣ್ಣು, ಜೊತೆಗೆ ತ್ಯಾಜ್ಯ ವಸ್ತುಗಳು ಸೇರಿ ಈ ಭಾಗದ ನಿವಾಸಿಗಳಿಗೆ ಕಿರಿಕಿರಿಯಾಗಿದೆ. ಅನೇಕ ಬಾರಿ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ದುರಸ್ತಿಗೊಳಿಸುವ ಆಸಕ್ತಿಯನ್ನು ಯಾರೂ ತೋರಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

‘ಹದಗೆಟ್ಟ ರಸ್ತೆಯನ್ನು ಈಗ ಮತ್ತೆ ಹೆಸ್ಕಾಂದವರು ಅಗೆದಿದ್ದಾರೆ. ನೆಲದೊಳಗೆ ಹೈಟೆನ್ಷನ್‌ ಕೇಬಲ್‌ ಹಾಕಲು ಅಗೆದು ಹಾಗೇ ಬಿಟ್ಟಿದ್ದಾರೆ. ಅದು ಸಂಚಾರಕ್ಕೆ ಇನ್ನಷ್ಟು ಅಡಚಣೆ ಉಂಟುಮಾಡಿದೆ. ಹಲವಾರು ಬಾರಿ ದುರಸ್ತಿಗೆ ಆಗ್ರಹಿಸಿದರೂ ಮಹಾನಗರ ಪಾಲಿಕೆಯವರು ಆಸಕ್ತಿ ತೋರಿಸಿಲ್ಲ ಎಂದು ಸ್ಥಳೀಯ ನಿವಾಸಿ ಬಾಲರಾಜ್‌ ವಡಗಾಂವಿ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.