ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ಸಂತೆಯಲ್ಲಿ ವ್ಯಾಪಾರ ಲುಕ್ಸಾನು

Last Updated 8 ಜನವರಿ 2018, 8:59 IST
ಅಕ್ಷರ ಗಾತ್ರ

ಚಾಮರಾಜನಗರ: ಸದಾ ಜನರಿಂದ ಗಿಜಿಗುಡುತ್ತಿದ್ದ ಈ ಬೀದಿಯಲ್ಲಿ ಈಗ ಯಂತ್ರ, ಸುತ್ತಿಗೆಗಳ ಸದ್ದು. ನಡೆದಾಡಲೂ ಯೋಗ್ಯವಾಗಿಲ್ಲದಂತೆ ಕಲ್ಲುಮಣ್ಣುಗಳ ರಾಶಿಯ ರಸ್ತೆಯಲ್ಲಿ ಬೈಕ್‌ಗಳನ್ನೇರಿ ಬರುವ ಸವಾರರ ಹರಸಾಹಸ. ವ್ಯಾಪಾರಕ್ಕೆಂದು ಗುಂಪುಗೂಡಿ ಬರುತ್ತಿದ್ದ ಗ್ರಾಹಕರ ಸುಳಿವಿಲ್ಲ. ದಿನಕ್ಕೆ ಒಂದಿಬ್ಬರು ಬಂದರೂ ಸಾಕು, ವ್ಯಾಪಾರಸ್ಥರ ಮುಖವರಳುತ್ತದೆ.

ಇಲ್ಲಿನ ನಿವಾಸಿಗಳು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರ ಪಾಲಿಗೆ ಅಂಗಡಿಬೀದಿ ಪ್ರಮುಖ ವಾಣಿಜ್ಯ ಪ್ರದೇಶ. ಗೃಹಬಳಕೆಯ ಅತಿ ಅಗತ್ಯ ವಸ್ತುಗಳಿಂದ ಹಿಡಿದು ಐಷಾರಾಮಿ ಸಾಮಗ್ರಿಗಳವರೆಗೆ ಎಲ್ಲವೂ ಇಲ್ಲಿ ಲಭ್ಯ. ಹೀಗಾಗಿ, ಸ್ಥಳೀಯ ಗ್ರಾಹಕರಿಗೆ ಇದು ನೆಚ್ಚಿನ ಸ್ಥಳವೂ ಹೌದು.

ಹಲವು ದಶಕಗಳ ಇತಿಹಾಸವಿರುವ ಈ ವ್ಯಾಪಾರಿ ಕೇಂದ್ರ, ಕಾಂಕ್ರೀಟ್‌ ರಸ್ತೆ, ಚರಂಡಿಯಿಂದ ಹೊಸ ಮೆರುಗು ಪಡೆದುಕೊಳ್ಳಲು ಸಿದ್ಧವಾಗುತ್ತಿದೆ. ಸದಾ ದೂಳು, ವಾಹನದಟ್ಟಣೆಯಿಂದ ತುಂಬಿದ್ದ ರಸ್ತೆಗೆ ಒಂದು ಅಚ್ಚುಕಟ್ಟುತನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ವ್ಯಾಪಾರಿಗಳೂ ಇದ್ದಾರೆ. ಆದರೆ, ಅದಕ್ಕಾಗಿ ಎರಡು ತಿಂಗಳಿನಿಂದ ವ್ಯಾಪಾರ ನಷ್ಟಕ್ಕೆ ಒಳಗಾಗುವ ಸಂಕಟವನ್ನೂ ಅನುಭವಿಸುತ್ತಿದ್ದಾರೆ.

ಬಿಲ್ ಹರಿದೇ ಇಲ್ಲ: ಸಣ್ಣ ಮತ್ತು ದೊಡ್ಡ ಅಂಗಡಿಬೀದಿಗಳಲ್ಲಿ ಕಟ್ಟಡಗಳನ್ನು ತೆರವುಗೊಳಿಸಿ 40 ಅಡಿಗೆ ರಸ್ತೆ ವಿಸ್ತರಿ ಸುವುದು ಸಿದ್ಧ ಎಂದು ಜಿಲ್ಲಾಡಳಿತ ಪಟ್ಟುಹಿಡಿದಿದ್ದರಿಂದ, ನವೆಂಬರ್‌ನಲ್ಲಿ ವ್ಯಾಪಾರಿಗಳು ಮತ್ತು ಕಟ್ಟಡಗಳ ಮಾಲೀಕರು ಸ್ವತಃ ಕಟ್ಟಡವನ್ನು ಒಡೆಸಲು ಮುಂದಾದರು. ಸುಮಾರು 15–20 ದಿನದವರೆಗೂ ಈ ಪ್ರಕ್ರಿಯೆ ಮುಂದುವರಿಯಿತು. ಬಳಿಕ ಒಡೆದ ಕಟ್ಟಡಗಳನ್ನು ದುರಸ್ತಿ ಮಾಡಲು ಕೆಲವು ದಿನ ಹಿಡಿಯಿತು. ಅದರ ಬೆನ್ನಲ್ಲೇ ಚರಂಡಿ ಕೆಲಸವೂ ಆರಂಭವಾಯಿತು. ಹೀಗಾಗಿ, ಎರಡು ತಿಂಗಳಿನಿಂದ ಬಹುತೇಕ ಅಂಗಡಿಗಳು ಸಂಪೂರ್ಣ ಬಂದ್‌ ಆಗಿದ್ದವು. ಕೆಲವು ಅಂಗಡಿ ಮಾಲೀಕರು ಕೆಲವು ದಿನಗಳ ಹಿಂದೆ ಬಾಗಿಲು ತೆರೆದಿದ್ದಾರೆ. ಆದರೆ, ವ್ಯಾಪಾರ ಮಾತ್ರ ಸಾಗುತ್ತಿಲ್ಲ.

ಕಟ್ಟಡ ತೆರವು, ದುರಸ್ತಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದ್ದ ವರ್ತಕರು ತಿಂಗಳಿನಿಂದ ವಹಿವಾಟು ನಡೆಯದೆ ಕಂಗಾಲಾಗಿದ್ದಾರೆ. ಒಟ್ಟಾರೆ ಈ ಬೀದಿಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ನಷ್ಟವಾಗಿದೆ.

‘ಅಂಗಡಿಬೀದಿಗೆ ಬರುತ್ತಿದ್ದ ಗ್ರಾಹಕರು ಹೆಚ್ಚಿನವರು ಸುತ್ತಲಿನ ಹಳ್ಳಿಯವರು. ನಗರದ ಈಗಿನ ಪರಿಸ್ಥಿತಿಯಿಂದ ಅವರು ಇತ್ತ ಬರುತ್ತಲೇ ಇಲ್ಲ. ಹೀಗಾಗಿ ವ್ಯಾಪಾರವೇ ಸಾಗುತ್ತಿಲ್ಲ. ಶೇ 80ರಷ್ಟು ವ್ಯಾಪಾರ ಕುಸಿತವಾಗಿದೆ’ ಎಂದು ದರ್ಶನ್‌ ಕ್ಲಾತ್‌ ಎಂಪೋರಿಯಂ ಮಾಲೀಕ ಮನೋಜ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಸರಕುಸಾಗಣೆ ವಾಹನಗಳು ಇಲ್ಲಿಗೆ ಬರಲು ಅವಕಾಶವಿಲ್ಲ. ನಮ್ಮ ಮನೆಗಳಲ್ಲಿ ಸರಕುಗಳನ್ನು ಇಳಿಸಿಕೊಂಡು ಬಳಿಕ ಒಂದೊಂದಾಗಿ ಅಂಗಡಿಗೆ ಸಾಗಿಸಬೇಕಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೆಲವು ಅಂಗಡಿಗಳಿಗೆ ಎರಡು ತಿಂಗಳಿನಿಂದ ಗ್ರಾಹಕರೇ ಬಂದಿಲ್ಲ. ಒಂದೇ ಒಂದು ಬಿಲ್‌ ಸಹ ಹರಿಯದೆಯೇ ನಿತ್ಯ ಅಂಗಡಿ ಬಾಗಿಲು ತೆರೆದು ಕಾಯುತ್ತಿರುವುದಾಗಿ ಅಂಗಡಿ ಮಾಲೀಕರೊಬ್ಬರು ನೋವು ತೋಡಿಕೊಂಡರು.

ಚರಂಡಿಗಾಗಿ ಸುಮಾರು 5 ಅಡಿ ಅಗಲ ತೆರೆದಿರುವ ಕಂದಕಗಳ ಮೇಲೆ ಪ್ಲೈವುಡ್‌ ಹಲಗೆಗಳನ್ನು ಹಾಕಿ ಓಡಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರು ಅವುಗಳ ಮೇಲೆ ಎಚ್ಚರಿಕೆಯಿಂದ ನಡೆದು ಅಂಗಡಿ ಒಳಕ್ಕೆ ಹೋಗುವ ಸಾಹಸ ಮಾಡಬೇಕಾದ ಸ್ಥಿತಿ ಇದೆ. ಕಾಮಗಾರಿ ಮುಗಿದು ರಸ್ತೆ ಓಡಾಟಕ್ಕೆ ಮುಕ್ತವಾದರೂ, ವ್ಯಾಪಾರ ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳು ಬೇಕು ಎನ್ನುವುದು ವರ್ತಕರ ಅಭಿಪ್ರಾಯ.

ನಿಧಾನ ಕಾಮಗಾರಿ: ಎರಡು ತಿಂಗಳಲ್ಲಿ ಚರಂಡಿ ಮತ್ತು ರಸ್ತೆಯನ್ನು ಸಂಪೂರ್ಣವಾಗಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ, ಇನ್ನೂ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೆಡೆ ಇನ್ನೂ ಕಾಲುವೆ ತೆಗೆದಿಲ್ಲ. ನಿಧಾನಗತಿಯಲ್ಲಿ ಕಾಮಗಾರಿ ಸಾಗುತ್ತಿದೆ ಎನ್ನುವುದು ವ್ಯಾಪಾರಿಗಳ ಆರೋಪ.

ಅಲ್ಲೊಂದು ರಸ್ತೆ ಇತ್ತು ಎಂಬ ಕುರುಹು ಸಹ ಕಾಣಿಸದಂತೆ ಕಲ್ಲುಮಣ್ಣಿನ ಅವಶೇಷಗಳ ರಾಶಿ ತುಂಬಿಕೊಂಡಿದೆ. ಅದರ ಮೇಲೆಯೇ ಓಡಾಡುವುದು ಅನಿವಾರ್ಯ. ವಿಪರೀತವೆನಿಸುವ ದೂಳು ಅನೇಕರಲ್ಲಿ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿದೆ.

ನಗರೋತ್ಥಾನ ಯೋಜನೆಯ ಕೆಲಸದ ಜತೆಗೇ ಯುಜಿಡಿಗೆ ಸಂಪರ್ಕ ಕಲ್ಪಿಸುವ ಕೆಲಸವೂ ನಡೆ ಯಬೇಕು. ಅಲ್ಲದೆ, ಕುಡಿಯುವ ನೀರಿನ ಕೊಳವೆಗಳನ್ನು ಸಹ ಸರಿಪಡಿ ಸಬೇಕು. ಈ ಕೆಲಸಗಳೆಲ್ಲವೂ ಯಾವಾಗ ಪೂರ್ಣಗೊಳ್ಳುತ್ತವೆ ಎಂಬ ಗೊಂದಲ ದಲ್ಲಿಯೇ ದಿನ ದೂಡಬೇಕಾಗಿದೆ.

‘ವ್ಯಾಪಾರವಿಲ್ಲದ ಕಾರಣ ಅನೇಕ ಕಮಿಟ್‌ಮೆಂಟ್‌ಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ತಿಂಗಳ ಒಳಗೆ ಪೂರ್ಣಗೊಳಿಸಲು ಜಿಲ್ಲಾಡಳಿತ ಗಮನಹರಿಸಬೇಕು’ ಎಂದು ವರ್ತಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT