ಅಮಿತ್ ಷಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಿಸುವ ಗುರಿ

7

ಅಮಿತ್ ಷಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಿಸುವ ಗುರಿ

Published:
Updated:
ಅಮಿತ್ ಷಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಿಸುವ ಗುರಿ

ಹೊಳಲ್ಕೆರೆ: ಪಟ್ಟಣದಲ್ಲಿ ಜ.10ರಂದು ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾಲ್ಗೊಳ್ಳುತ್ತಿದ್ದು, ಕನಿಷ್ಠ 1ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಶಾಸಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಆವರಣದಲ್ಲಿ ಪರಿವರ್ತನಾ ಯಾತ್ರಗೆ ಸಿದ್ಧಗೊಳಿಸುತ್ತಿರುವ ವೇದಿಕೆಯ ಹತ್ತಿರ ಭಾನುವಾರ ನಡೆದ ಹೊಳಲ್ಕೆರೆ, ಭರಮಸಾಗರ, ಹೊಸದುರ್ಗ, ಚನ್ನಗಿರಿ, ಮಾಯಕೊಂಡ ಮಂಡಲ ಅಧ್ಯಕ್ಷರು, ಉಸ್ತುವಾರಿ ಸಮಿತಿಯ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಬಿಜೆಪಿ ಪರಿವರ್ತನಾ ಯಾತ್ರೆ 180 ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸಂಚರಿಸಲಿದೆ. ಹುಬ್ಬಳ್ಳಿ, ಬೆಂಗಳೂರು ಸಮಾವೇಶಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ವಿವಿಧ ಕಡೆ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದಾರೆ. ಆದರೆ ಹೊಳಲ್ಕೆರೆಯಲ್ಲಿ ನಡೆಯುವ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸುತ್ತಿದ್ದು, ಇಲ್ಲಿಂದಲೇ ಬಿಜೆಪಿಯ ವಿಜಯ ಯಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.

ಅಮಿತ್ ಷಾ ಕಾರ್ಯಕ್ರಮಕ್ಕೆ ತಾಲ್ಲೂಕು ಸೇರಿದಂತೆ ಪಕ್ಕದ ಹೊಸದುರ್ಗ, ಚಿತ್ರದುರ್ಗ, ಮಾಯಕೊಂಡ, ದಾವಣಗೆರೆ, ಚನ್ನಗಿರಿ, ತರಿಕೆರೆ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಬರುತ್ತಾರೆ ಎಂದರು.

ಮಧ್ಯಾಹ್ನ 12ಕ್ಕೆ   ಷಾ ಹೆಲಿಕಾಪ್ಟರ್ ಮೂಲಕ ಬರಲಿದ್ದಾರೆ. ಬೆಳಿಗ್ಗೆ 11ಕ್ಕೆ ಪರಿವರ್ತನಾ ಯಾತ್ರೆಯ ಮೆರವಣಿಗೆ ಆರಂಭವಾಗಿ 12ರ ಒಳಗೆ ವೇದಿಕೆ ತಲುಪಬೇಕು. ಸಮಾರಂಭಕ್ಕೆ ಬರುವ ಜನರಿಗೆ ಕುಡಿಯುವ ನೀರು, ಊಟ, ಆರೋಗ್ಯದ ವ್ಯವಸ್ಥೆ ಮಾಡಬೇಕು. ಉಸ್ತವಾರಿ ಸಮಿತಿಗಳ ಮುಖ್ಯಸ್ಥರು ಜವಾಬ್ದಾರಿ ನಿರ್ವಹಿಸಬೇಕು. ಇಡೀ ಪಟ್ಟಣದ ತುಂಬ ಬಿಜೆಪಿಯ ಧ್ವಜಗಳು, ಬಂಟಿಂಗ್ಸ್, ಬ್ಯಾನರ್, ಫ್ಲೆಕ್ಸ್‌ಗಳ ರಾರಾಜಿಸಬೇಕು. ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ತುಂಬ ಹಬ್ಬದ ವಾತಾವರಣ ನಿರ್ಮಾಣವಾಗಬೇಕು ಎಂದು ಲಿಂಬಾವಳಿ ಹೇಳಿದರು.

ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ ಕುಮಾರ್, ಪ್ರಕಾಶ್ ಜಾವಡೇಕರ್, ಪೀಯುಷ್ ಘೋಯಲ್, ಮುರುಳೀಧರ ರಾವ್, ರಾಜ್ಯ ನಾಯಕರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಹಾಗೂ ಪಕ್ಷದ ಮುಖಂಡರು ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದಿಂದ ಜನರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಿದ್ದು, ಪ್ರತಿ ಮಂಡಲದಿಂದ ಸುಮಾರು 10 ಸಾವಿರ ಜನರನ್ನು ಸೇರಿಸಲಾಗುವುದು. ಪ್ರತಿ ಗ್ರಾಮದಿಂದ ಕನಿಷ್ಠ 50 ಬೈಕ್‌ಗಳು ಸಮಾವೇಶಕ್ಕೆ ಬರಲಿವೆ ಎಂದು ಮಂಡಲ ಅಧ್ಯಕ್ಷರು ಮಾಹಿತಿ ನೀಡಿದರು.

ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮಾಜಿ ಶಾಸಕ ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಲಿಂಗಮೂರ್ತಿ, ನರೇಂದ್ರ ನಾಥ್, ಮಲ್ಲಿಕಾರ್ಜುನ್, ಡಾ.ಮುರುಳಿ, ಸುರೇಶ್, ಪಿ.ರಮೇಶ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಶಶಿಶೇಖರ ನಾಯ್ಕ್, ಹನುಮಕ್ಕ ಇದ್ದರು.

ಎರಡು ಬಣಗಳ ನಡುವೆ ಕಿತ್ತಾಟ!

ಕ್ಷೇತ್ರದ ಬಿಜೆಪಿಯಲ್ಲಿ ಎರಡು ಬಣಗಳಾಗಿದ್ದು, ಸಮಾವೇಶಕ್ಕೆ ಆಗಮಿಸುವ ನಾಯಕರಿಗೆ ಸ್ವಾಗತ ಕೋಟುವ ಫ್ಲೆಕ್ಸ್ ಕಟ್ಟುವ ವಿಷಯದಲ್ಲಿ ಗೊಂದಲ ಸೃಷ್ಠಿಯಾಗಿದೆ. ಮಾಜಿ ಶಾಸಕ ಎಂ.ಚಂದ್ರಪ್ಪ ಅವರ ಕಡೆಯವರು ನಮಗೆ ಫ್ಲೆಕ್ಸ್ ಕಟ್ಟಲು ಬಿಡುತ್ತಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ಕಚೇರಿ ಮುಂದೆಯೇ ಅವರ ಫ್ಲೆಕ್ಸ್ ಅಳವಡಿಸಿದ್ದಾರೆ. ನಾವೂ ಪಕ್ಷದ ಕಾರ್ಯಕರ್ತರೇ ಎಂದು ಮತ್ತೊಂದು ಬಣದ ಹನುಮಕ್ಕ ದೂರಿದರು.

ಸಮಾರಂಭದ ಖರ್ಚಿಗಾಗಿ ಜಿಲ್ಲಾ ಸಮಿತಿಗೆ ₹ 15ಲಕ್ಷ ಕೊಟ್ಟಿರುವುದಾಗಿ ಹನುಮಕ್ಕ ಹೇಳಿಕೊಂಡಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ವರಪ್ಪ ಆರೋಪಿಸಿದರು.

ಆಂಜನೇಯ ಅವರಿಗೆ ನಡುಕ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೊಳಲ್ಕೆರೆಯ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಇಲ್ಲಿನ ಸಚಿವ ಎಚ್.ಆಂಜನೇಯ ಅವರಲ್ಲಿ ನಡುಕ ಹುಟ್ಟಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಕುಟುಕಿದರು.

ಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಸಮೀಪ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ಆಂಜನೇಯ ಇಲ್ಲಿ ಗೆಲ್ಲುವುದು ಕಷ್ಟ ಎಂದು ಕ್ಷೇತ್ರ ಬದಲಾವಣೆಯ ಚಿಂತನೆ ನಡೆಸಿದ್ದಾರೆ. ನೆಲಮಂಗಲ, ಮಹದೇವಪುರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸುದ್ದಿ ಬಂದಿತ್ತು.

ಆದರೆ ಈ ಬಾರಿ ಅವರು ಎಲ್ಲಿ ನಿಂತರೂ ಗೆಲ್ಲಲಾಗುವುದಿಲ್ಲ. ಬಿಜೆಪಿ ಪರಿವರ್ತನಾ ಯಾತ್ರೆಯ ಯಶಸ್ಸು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆ ಪಕ್ಷದ ಸಚಿವರು ಬಿಜೆಪಿಯ ಬಗ್ಗೆ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರು ಏನೇ ಮಾತನಾಡಿದರೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ವೀರಶೈವ ಮತ್ತು ಲಿಂಗಾಯಿತ ಧರ್ಮಗಳು ಗಂಡ-ಹೆಂಡತಿ ಇದ್ದಂತೆ. ಕಾಂಗ್ರೆಸ್‌ನವರು ಗಂಡ-ಹೆಂಡತಿಯನ್ನು ಬೇರೆ ಮಾಡಲು ಹೊರಟಿದ್ದಾರೆ. ಇದು ಅವರಿಗೇ ತಿರುಗುಬಾಣ ಆಗಲಿದೆ ಎಂದು ಬಿಜೆಪಿ ಮುಖಂಡ ಎಂ.ಚಂದ್ರಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry