ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶುರುವಾಯ್ತು ಕುಡಿಯುವ ನೀರಿನ ಸಮಸ್ಯೆ !

Last Updated 8 ಜನವರಿ 2018, 9:14 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವೇದಾವತಿ ನದಿಗೆ ಅಡ್ಡಲಾಗಿ ಕೆಲ್ಲೋಡು ಬಳಿ ನಿರ್ಮಿಸಿದ್ದ ಬ್ಯಾರೇಜ್‌ ಬರಿದಾಗಿದ್ದು, ಮಳೆಗಾಲ ಮುಗಿದ ಬೆನ್ನಲ್ಲೆ ಪಟ್ಟಣದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಪಟ್ಟಣದ 23 ವಾರ್ಡ್‌ಗಳ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸುಮಾರು 55 ಸಾವಿರ ಕೋಟಿ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯದ ದೊಡ್ಡ ಬ್ಯಾರೇಜ್‌ ನಿರ್ಮಿಸಲಾಗಿದೆ. ಮುಂಗಾರು ಹಂಗಾಮಿನ ಅಂತ್ಯದಲ್ಲಿ ಅಂದರೆ ಅಕ್ಟೋಬರ್‌ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಗೆ ಈ ಬ್ಯಾರೇಜ್‌ ಭರ್ತಿಯಾಗಿತ್ತು. ಇದರಿಂದ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಪಟ್ಟಣದ ಜನರಿಗೆ ಸಂತಸ ಉಂಟಾಯಿತು.

ಇನ್ನೂ ಮುಂದೆ ಸುಮಾರು 6 ತಿಂಗಳಾದರೂ ನೀರಿನ ಸಮಸ್ಯೆ ಬರುವುದಿಲ್ಲ ಎಂಬ ಆಶಾಭಾವನೆ ಇಟ್ಟುಕೊಂಡಿದ್ದರು. ಆದರೆ, ನೀರು ನಿರ್ವಹಣೆಯಲ್ಲಿ ಪುರಸಭೆ ಆಡಳಿತ ತೋರಿದ ಬೇಜಾವಾಬ್ದಾರಿ ತನದಿಂದ ಭರ್ತಿಯಾಗಿದ್ದ ಬ್ಯಾರೇಜ್‌ ಎರಡೇ ತಿಂಗಳಿಗೆ ಬರಿದಾಗಿರುವುದು ನಾಗರಿಕರಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. ಇದರಿಂದಾಗಿ ಕುಡಿಯುವ ನೀರಿಗೆ ಕೆಲ್ಲೋಡಿನ ವೇದಾವತಿ ನದಿ ಬ್ಯಾರೇಜ್‌ ನೀರನ್ನು ಆಶ್ರಯಿಸಿರುವ ಪಟ್ಟಣದ ಜನರಲ್ಲಿ ಆತಂಕ ಎದುರಾಗಿದೆ.

ಈಗಗಲೇ ಎನ್‌ಇಎಸ್‌ ಬಡಾವಣೆ ಸೇರಿದಂತೆ ಇನ್ನಿತರ ವಾರ್ಡ್‌ಗಳಿಗೆ 20 ದಿನ ಕಳೆದರೂ ಬೀದಿ ನಲ್ಲಿಯಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಸಮರ್ಪಕ ಕುಡಿಯುವ ನೀರು ಒದಗಿಸಬೇಕೆಂದು ಈಚೆಗೆ 8ನೇ ವಾರ್ಡ್‌ ನಿವಾಸಿಗಳು ಪ್ರತಿಭಟನೆ ನಡೆಸಿದ್ದರಿಂದ ಪುರಸಭೆಯವರು ಆಗೊಮ್ಮೆ, ಈಗೊಮ್ಮೆ ಟ್ಯಾಂಕರ್ ನೀರು ಕೊಡುತ್ತಿದ್ದಾರೆ. ಟ್ಯಾಂಕರ್‌ ನೀರಿಗೆ ಜನರು ಪರದಾಡುತ್ತಿದ್ದಾರೆ. ತಾ ಮುಂದು, ತಾ ಮುಂದು ಎಂದು ನೀರು ಹಿಡಿದುಕೊಳ್ಳಲು ಜಗಳವಾಡುತ್ತಿದ್ದಾರೆ. ಇನ್ನೂ ನೌಕರ ವರ್ಗದವರು ಕೆಲಸಕ್ಕೆ ಹೋದಾಗ ಟ್ಯಾಂಕರ್‌ ಬರುವುದರಿಂದ ಅವರು ನೀರು ಹಿಡಿದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಟ್ಯಾಂಕರ್‌ ಬದಲಿಗೆ ಬೀದಿ ನಲ್ಲಿಯಲ್ಲಿ ನೀರು ಪೂರೈಸಬೇಕು. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ ಎನ್ನುತ್ತಾರೆ ಗೃಹಿಣಿಯರಾದ ಶಾರದಮ್ಮ, ನಾಗರತ್ನಮ್ಮ.

ಕೆಲ್ಲೋಡು ಮೇಲ್ಭಾಗದಲ್ಲಿ ಸುಮಾರು 2 ಕಿ.ಮೀ ದೂರದ ಬಲ್ಲಾಳಸಮುದ್ರ ಬಳಿ ಕಳೆದ ವರ್ಷ ನಿರ್ಮಾಣ ಮಾಡಿದ್ದ ಬ್ರಿಡ್ಜ್‌ ಕಂ ಬ್ಯಾರೇಜ್‌ ಭರ್ತಿಯಾಗಿದ್ದು, ಅದರಲ್ಲಿ ಸಾಕಷ್ಟು ನೀರು ಇದೆ. ಆ ನೀರು ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಯಾವುದೇ ಕೆಲಸಕ್ಕೆ ಬಳಕೆ ಆಗುತ್ತಿಲ್ಲ. ಹಾಗಾಗಿ ಆ ನೀರನ್ನು ಕೆಲ್ಲೋಡಿನ ಬ್ಯಾರೇಜ್‌ಗೆ ಹರಿಸಿದಲ್ಲಿ ಇನ್ನೆರಡು ತಿಂಗಳು ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಈ ಬೇಡಿಕೆ ಈಡೇರಿಸುವಂತೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಪುರಸಭೆಯ ಮೇಲೆ ಒತ್ತಡ ಹೇರಬೇಕು ಎನ್ನುತ್ತಾರೆ ಕೆಲ್ಲೋಡಿನ ಮಂಜುನಾಥ್‌.

ಸಿದ್ದಪ್ಪನಹಟ್ಟಿ, ಜೋಗಮನಹಳ್ಳಿ, ಮುತ್ತಾಗೊಂದಿ, ಬಲ್ಲಾಳಸಮುದ್ರ, ಕೊರಟಿಕೆರೆ, ಕಡದಿನಕೆರೆ, ಮೆಣಸಿನೋಡು, ಕಾರೇಹಳ್ಳಿ, ಹಾಗಲಕೆರೆ, ಕೆಲ್ಲೋಡು, ಮೆಟ್ಟಿನಹೊಳೆ ಸೇರಿದಂತೆ ವೇದಾವತಿ ನದಿ ಪಾತ್ರದ ಇನ್ನಿತರ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿರುವುದರಿಂದ ವೇದಾವತಿ ಒಡಲಿನ ನೀರು ಬರಿದಾಗುತ್ತಿದೆ.

ಇದರಿಂದ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಅಕ್ರಮ ಮರುಳು ಮಾಫಿಯಾ ನಿಯಂತ್ರಿಸಬೇಕಾದ ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ಜಾಣ ಕುರುಡತನ ಪ್ರದರ್ಶಿಸುತ್ತಿವೆ ಎನ್ನುತ್ತಾರೆ ನಾಗರಿಕರಾದ ಮಂಜುನಾಥ್‌, ನಾಗರಾಜು. ಇನ್ನಾದರೂ ಜಿಲ್ಲಾಧಿಕಾರಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಿ, ವೇದಾವತಿ ನದಿ ಒಡಲನ್ನು ಸಂರಕ್ಷಿಸಬೇಕು ಎಂಬುದು ತಾಲ್ಲೂಕಿನ ನಾಗರಿಕರ ಮನವಿ.

* * 

ಸಾರ್ವಜನಿಕರ ಸಹಕಾರದ ಹೊರತಾಗಿ ಮರಳುದಂಧೆ ನಿಯಂತ್ರಿಸಲು ಸಾಧ್ಯವಿಲ್ಲ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸಹಕಾರ ನೀಡಬೇಕು ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮನವಿ ಮಾಡಲಾಗಿದೆ.
ಎಂ.ಪಿ.ಕವಿರಾಜು ತಹಶೀಲ್ದಾರ್‌

ಬಲ್ಲಾಳಸಮುದ್ರ ಬಳಿ ಇರುವ ಬ್ಯಾರೇಜ್‌ ನೀರನ್ನು ಕೆಲ್ಲೋಡಿನ ಬ್ಯಾರೇಜ್‌ಗೆ ಬಿಡಿಸಲು ಶಾಸಕ ಬಿ.ಜಿ.ಗೋವಿಂದಪ್ಪ ಅವರ ಹತ್ತಿರ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕೆ.ವಿ.ಸ್ವಾಮಿ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT