ಶನಿವಾರ, ಜೂಲೈ 4, 2020
21 °C

ಮೌನದೊಳಗಿನ ಮುನಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌನದೊಳಗಿನ ಮುನಿಸು

ಕಾರಣ ದೊಡ್ಡದೇ ಆಗಿರಬೇಕೆಂದಿಲ್ಲ. ಚಿಕ್ಕಪುಟ್ಟ ವೈಮನಸ್ಸು ಕೂಡ ದ್ವೇಷ ಮೂಡುವಂತೆ ಮಾಡುತ್ತವೆ. ಅದು ತಾರಕಕ್ಕೇರಿ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗುವುದೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪುತ್ತದೆ. ಇನ್ನು ಮಾತು ಬಿಡುವ ಖಯಾಲಿಯಂತೂ ಶಾಲೆಯ ಮೆಟ್ಟಿಲೇರಿದಾಗಿನಿಂದಲೇ ಶುರುವಾಗುತ್ತದೆ. ಇದೇ ಚಾಳಿ ವೃತ್ತಿಕ್ಷೇತ್ರದಲ್ಲಿಯೂ ಮುಂದುವರೆಯುವುದು ಮಾಮೂಲಿ. ಧಾರಾವಾಹಿ, ಸಿನಿ ಲೋಕದಲ್ಲಿ ಮಾತುಬಿಟ್ಟ ತಾರಾಜೋಡಿಗಳ ಪಟ್ಟಿಯೇ ಇದೆ. ಆ ಮಾಹಿತಿ ಇಲ್ಲಿದೆ.

* ಸಲ್ಮಾನ್‌ ಖಾನ್‌, ಐಶ್ವರ್ಯಾ ರೈ

ಸಲ್ಮಾನ್‌ ಹಾಗೂ ಐಶ್ವರ್ಯಾ ಜಗಳ ಹಳೆಯ ವಿಷಯವೇ. ತೆರೆಯ ಮೇಲೆ ಇವರಿಬ್ಬರ ಪ್ರೇಮ ಪಾತ್ರಗಳನ್ನು ವೀಕ್ಷಿಸಿದ ಸಿನಿ ಲೋಕ ನಿಜವಾದ ಪ್ರೇಮಿಗಳೇ ಎಂದು ಭಾವಿಸಿತ್ತು. ಹಮ್‌ ದಿಲ್‌ ದೇ ಚುಕೆ ಸನಮ್‌ ಚಿತ್ರವಂತೂ ಜನಪ್ರಿಯತೆಯ ಶಿಖರವೇರಿತ್ತು. ಗಾಢ ಪ್ರೇಮಕ್ಕೇ ಹೆಸರುವಾಸಿಯಾಗಿದ್ದ ಈ ಜೋಡಿ ಈಗ ಒಬ್ಬರನ್ನೊಬ್ಬರು ನೋಡಿಕೊಳ್ಳದಷ್ಟು ದ್ವೇಷಿಗಳಾಗಿದ್ದಾರೆ. ಸಲ್ಮಾನ್‌ ಖಾನ್‌ ಅವರ ವಿಚಿತ್ರ ನಡೆ, ಕೆಲಸದ ನಡುವೆಯ ಕಿರಿಕಿರಿಗಳಿಂದ ಬೇಸತ್ತು ಐಶ್ವರ್ಯಾ ಸ್ನೇಹ ಕಡಿದುಕೊಳ್ಳುವ ನಿರ್ಧಾರ ಮಾಡಿದರು.

* ಜಾನ್‌ ಅಬ್ರಹಾಂ, ಬಿಪಾಶಾ ಬಸು

ತಮ್ಮ ಗ್ಲಾಮರಸ್‌ ಲುಕ್‌ನಿಂದ ಸಿನಿ ಲೋಕಕ್ಕೆ ಕಿಚ್ಚು ಹಚ್ಚಿದ ಜೋಡಿ ಇದು. ಸುಮಾರು ಒಂಬತ್ತು ವರ್ಷಗಳ ಕಾಲ ಒಟ್ಟಿಗಿದ್ದು, ಪ್ರೀತಿ ಪ್ರೇಮ ಪ್ರಣಯದ ಹಾದಿ ತುಳಿದಿದ್ದ ಇಬ್ಬರ ಪ್ರೀತಿ ಮುರಿದು ಬಿದ್ದ ವಿಷಯ ಕೇಳಿ ಬಾಲಿವುಡ್‌ ಲೋಕವೇ ಬೆರಗಾಗಿತ್ತು. ಬಾಲಿವುಡ್‌ ಗಲ್ಲಿಯ ‘ಪ್ರಣಯ ಹಕ್ಕಿಗಳು’ ಎಂದು ಕರೆಸಿಕೊಳ್ಳುತ್ತಿದ್ದ ಈ ಜೋಡಿ ಪ್ರೀತಿ ಮರೆತು ಬೇರೆಯವರೊಂದಿಗೆ ಮದುವೆಯಾಗಿದ್ದು ಇತಿಹಾಸ.

* ಹರ್ಮನ್‌ ಬವೇಜಾ , ಬಿಪಾಶಾ ಬಸು

ಹರ್ಮನ್‌ ಬವೇಜಾ ಜೊತೆಗಿನ ಬಿಪಾಶಾ ಬಸು ಸಂಬಂಧ ಭಾರಿ ಸುದ್ದಿ ಮಾಡಿತ್ತು. ಅವರಿಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಸಿನಿಲೋಕ ಮಾತನಾಡಿಕೊಳ್ಳುವ ಹೊತ್ತಿಗೆ ತಮ್ಮಿಬ್ಬರ ಸಂಬಂಧ ಮುರಿದು ಬೀಳುವ ಸೂಚನೆಯನ್ನು ಇಬ್ಬರೂ ಕೊಟ್ಟರು. ಕೊನೆಗೂ ತನ್ನ ಬಹುಕಾಲದ ಗೆಳೆಯ ಕರನ್‌ ಸಿಂಗ್‌ ಗ್ರೋವರ್‌ ಜೊತೆ ಬಿಪಾಶಾ ಸಪ್ತಪದಿ ತುಳಿದರು.

* ಅಭಿಷೇಕ್‌ ಬಚ್ಚನ್‌, ಕರಿಷ್ಮಾ ಕಪೂರ್‌

ಅಭಿಷೇಕ್‌ ಹಾಗೂ ಕರಿಷ್ಮಾ ಒಲವು ಮದುವೆಯ ಮಾತುಕತೆಯವರೆಗೂ ಮುಂದುವರೆದಿತ್ತು. ನಿಶ್ಚಿತಾರ್ಥವೂ ನಿರ್ಧಾರವಾಗಿತ್ತು. ಆದರೆ ಅದೇನಾಯ್ತೋ, ಇದ್ದಕ್ಕಿದ್ದಂತೆ ಇಬ್ಬರೂ ತಮ್ಮ ಸಂಬಂಧವನ್ನು ಮುರಿದುಕೊಂಡು ಮಾತು ಬಿಟ್ಟೇಬಿಟ್ಟರು. ಅಲ್ಲಿಂದ ಪಕ್ಕಾ ದುಷ್ಮನ್‌ಗಳಂತಾದ ಇಬ್ಬರೂ ಬೇರೆ ಮದುವೆಯಾದರು. ಅಭಿಷೇಕ್‌, ಐಶ್ವರ್ಯಾ ಜೊತೆ ಮದುವೆಯಾಗಿ ಮುದ್ದಾದ ಮಗುವಿನ ತಂದೆಯಾಗಿದ್ದಾರೆ. ಕರಿಷ್ಮಾ, ಸಂಜಯ್‌ ಕಪೂರ್‌ ಜೊತೆ ಮದುವೆಯಾಗಿದ್ದರು. ಆದರೆ ಬಹುಬೇಗನೆ ವಿಚ್ಛೇದನವನ್ನೂ ಪಡೆದರು.

* ಪ್ರೀತಿ ಜಿಂಟಾ, ನೆಸ್‌ ವಾಡಿಯಾ

ಅತ್ಯುತ್ತಮ ಸಿನಿಮಾಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಪ್ರೀತಿ ಜಿಂಟಾಗೆ 2005ರಲ್ಲಿ ಹೆಸರುವಾಸಿ ಉದ್ಯಮಿ ನೆಸ್‌ ವಾಡಿಯಾ ಜೊತೆ ಪ್ರೇಮಾಂಕುರವಾಯಿತು. ಕಿಂಗ್ಸ್‌ X1 ಪಂಜಾಬ್‌ ಐಪಿಎಲ್‌ ತಂಡವನ್ನೂ ಒಟ್ಟಾಗಿ ಖರೀದಿಸಿದ್ದರು. ಹೀಗೆ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದ ಈ ಜೋಡಿ 2014ರ ಹೊತ್ತಿಗೆ ಕಿತ್ತಾಡಲು ಪ್ರಾರಂಭಿಸಿದರು. ವಾಡಿಯಾ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾನೆ ಎಂದು ಪ್ರೀತಿ ದೂರನ್ನೂ ನೀಡಿಬಿಟ್ಟರು.

* ಅಕ್ಷಯ್‌ಕುಮಾರ್‌, ಶಿಲ್ಪಾ ಶೆಟ್ಟಿ

ತೆರೆಯ ಮೇಲೆ ಇವರಿಬ್ಬರ ಜೋಡಿ ಕಂಡು ಆನಂದ ಪಟ್ಟವರೇ ಎಲ್ಲಾ. ತೆರೆಯ ಮೇಲಿನ ಪ್ರೇಮ ನಿಜ ಬದುಕಿನಲ್ಲಿಯೂ ಮುಂದುವರೆದಿತ್ತು. ಮದುವೆಯಾಗುವ ಹಂತಕ್ಕೂ ತಲುಪಿತ್ತು. ಆದರೆ ಅಕ್ಷಯ್‌, ಟ್ವಿಂಕಲ್‌ ಖನ್ನಾಳನ್ನು ಮದುವೆಯಾಗುವುದಾಗಿ ನಿರ್ಧರಿಸಿದರು. ‘ಬೇಕಾದಾಗಲೆಲ್ಲಾ ನನ್ನನ್ನು ಬಳಸಿಕೊಂಡು ಈಗ ಇನ್ಯಾರಿಗಾಗಿಯೋ ನನ್ನನ್ನು ಬಿಡುತ್ತಿದ್ದಾನೆ’ ಎಂದು ಶಿಲ್ಪಾ ಹರಿಹಾಯ್ದರು. ಕೊನೆಗೂ ಅಕ್ಷಯ್‌, ಟ್ವಿಂಕಲ್‌ ಖನ್ನಾ ಸಂಗಾತಿಗಳಾದರೆ ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರಾ ಜೊತೆ ದಾಂಪತ್ಯ ಶುರು ಮಾಡಿದರು. ಅಂದಹಾಗೆ ಪ್ರಿಯಾಂಕಾ ಚೋಪ್ರಾ ಹಾಗೂ ಅಕ್ಷಯ್‌ಕುಮಾರ್‌ ನಡುವೆಯೂ ಕುಚುಕುಚು ಶುರುವಾಗಿತ್ತು. ಆದರೆ ಟ್ವಿಂಕಲ್‌ ಖನ್ನಾ ಬಹುಬೇಗನೆ ಈ ಪ್ರೀತಿಗೆ ತೆರೆ ಹಾಕಿಸಿದರು.

* ಕರೀನಾ ಕಪೂರ್‌, ಶಾಹಿದ್‌ ಕಪೂರ್‌

ಜಬ್‌ ವಿ ಮೆಟ್‌ ಸಿನಿಮಾ ಮೋಡಿಯ ಈ ಜೋಡಿಯನ್ನು ಮರೆಯಲು ಸಾಧ್ಯವೆ. ಒಂದೆಡೆ ಸುಂದರಾಂಗ ಶಾಹಿದ್‌, ಇನ್ನೊಂದೆಡೆ ಬಬ್ಲಿ ಕರೀನಾ. ಇವರಿಬ್ಬರ ಜೋಡಿ ಸಿನಿಮಾದಲ್ಲಷ್ಟೇ ಅಲ್ಲ ನಿಜ ಬದುಕಿನಲ್ಲಿಯೂ ಸಾಕಷ್ಟು ಮೋಡಿ ಮಾಡಿತು. ಮೂರು ವರ್ಷಗಳ ಪ್ರೀತಿ ಮುರಿದು ಬೀಳುವ ಹೊತ್ತಿಗೆ ಕರೀನಾ ಬದುಕಿನಲ್ಲಿ ಸೈಫ್‌ ಅಲಿ ಖಾನ್‌ ಪ್ರವೇಶಿಸಿಯಾಗಿತ್ತು. ಪ್ರೀತಿ ದಕ್ಕದ ಬೇಸರದಲ್ಲಿ ಶಾಹಿದ್‌ ಕೂಡ ಸಾಕಷ್ಟು ನೊಂದುಕೊಂಡರು. ಈಗ ಇಬ್ಬರೂ ತಮ್ಮದೇ ಆದ ಸ್ವಂತ ಕುಟುಂಬವನ್ನು ಕಟ್ಟಿಕೊಂಡಿದ್ದರೂ ಒಬ್ಬರನ್ನು ಕಂಡರೆ ಒಬ್ಬರಿಗಾಗದು.

* ವಿವೇಕ್‌ ಒಬೆರಾಯ್‌, ಐಶ್ವರ್ಯಾ 

ಐಶ್ವರ್ಯಾ ರೈ ಅವರ ಮೂವತ್ತನೇ ಹುಟ್ಟುಹಬ್ಬಕ್ಕೆ ವಿವೇಕ್‌ 30 ಉಡುಗೊರೆಗಳನ್ನು ತಂದುಕೊಟ್ಟಾಗ ಬಾಯ್‌ಫ್ರೆಂಡ್‌ ಅಂದರೆ ಹೀಗಿರಬೇಕು ಎಂದು ಅನೇಕ ಮಂದಿ ಆಶಿಸಿದರು. ಉಡುಗೊರೆಯನ್ನು ಖುಷಿಯಿಂದಲೇ ಐಶ್ವರ್ಯಾ ಸ್ವೀಕರಿಸಿದ್ದನ್ನು ಕಂಡು ಸಂತೋಷಗೊಂಡ ವಿವೇಕ್‌, ಸುದ್ದಿಗೋಷ್ಠಿಯಲ್ಲಿ ಸಲ್ಮಾನ್‌ ತಮಗಿಬ್ಬರಿಗೆ ಬೆದರಿಕೆ ಒಡ್ಡುತ್ತಿದ್ದಾನೆ ಎಂದೆಲ್ಲಾ ಹೇಳಿದರು. ಇದರಿಂದ ಬೇಸರಗೊಂಡ ಐಶ್ವರ್ಯಾ, ‘ಇದೆಲ್ಲಾ ಬಾಲಿಶ ನಡೆ. ಈತನಿಗಿನ್ನೂ ಪ್ರೌಢಿಮೆ ಬಂದೇ ಇಲ್ಲ’ ಎಂದು ವಿವೇಕ್‌ ಜೊತೆಗಿನ ಸಂಬಂಧವನ್ನು ಮುರಿದುಕೊಂಡರು.

ಇದು ಪ್ರೀತಿಯ ವಿಷಯದಲ್ಲಿ ಹುಟ್ಟಿಕೊಂಡ ದ್ವೇಷ. ಆದರೆ ಇನ್ನು ಕೆಲವು ತಾರೆಗಳು ನಾನಾ ಕಾರಣಗಳಿಂದ ಮಾತು ಬಿಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದ ಕತ್ರಿನಾ ಕೈಫ್‌ ಹಾಗೂ ದೀಪಿಕಾ ಪಡುಕೋಣೆ ಬದ್ಧ ವೈರಿಗಳಾದರು. ರಣಬೀರ್‌ ಕಪೂರ್‌ಗಾಗಿ ಇವರಿಬ್ಬರ ನಡುವೆ ಜಗಳ ಹುಟ್ಟಿಕೊಂಡಿದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ.

ಇನ್ನು ಸಲ್ಮಾನ್‌ ಖಾನ್‌ ಹಾಗೂ ಶಾರುಖ್‌ ಖಾನ್‌ ನಡುವಿನ ಜಗಳವೂ ಪ್ರಖ್ಯಾತಿ. ಆರು ವರ್ಷಗಳ ನಂತರ ಮೌನ ಮುರಿದು ಮಾತಾಡಿದ್ದೂ ದೊಡ್ಡ ಸುದ್ದಿಯಾಯಿತು. ಇನ್ನು ಶಾರುಖ್‌ ಹಾಗೂ ಅಮೀರ್‌ ಖಾನ್‌ ಜಗಳವನ್ನು ಕೇಳದವರಿಲ್ಲ. ಅವರಿಬ್ಬರ ದ್ವೇಷ ಯಾವ ಮಟ್ಟಕ್ಕಿತ್ತು ಎಂದರೆ ಅಮೀರ್‌ ಖಾನ್‌ ತನ್ನ ನಾಯಿಗೆ ಶಾರುಖ್‌ ಎಂದೇ ಹೆಸರಿಟ್ಟಿದ್ದರು. ಫ್ಯಾಷನ್‌ ಐಕಾನ್‌ ಆಗಿ ಸೋನಂ ಕಪೂರ್‌ ಹೆಸರು ಮಾಡುತ್ತಿದ್ದಂತೆ ಪ್ರಸಿದ್ಧ ಬ್ರಾಂಡ್‌ ಐಶ್ವರ್ಯಾ ರೈ ಬದಲು ಸೋನಂ ಕಪೂರ್‌ ಅವರನ್ನು ರಾಯಭಾರಿಯನ್ನಾಗಿಸಿತು. ಅಂದಿನಿಂದ ಐಶ್ವರ್ಯಾ ಹಾಗೂ ಸೋನಂ ವೈರಿಗಳಾದರು. ಸೊನಾಕ್ಷಿ ಸಿನ್ಹಾ ಆಂಟಿಯಂತೆ ಕಾಣುತ್ತಾರೆ. ಅವರೊಂದಿಗೆ ನಾನು ನಟಿಸಲಾರೆ ಎಂದು ರಣಬೀರ್‌ ಕಪೂರ್‌ ಹೇಳಿದ್ದರಿಂದ ಇವರಿಬ್ಬರ ನಡುವೆಯೂ ಮಾತುಕತೆ ಅಷ್ಟಕ್ಕಷ್ಟೆ. ಸೊನಾಕ್ಷಿಗೆ ಫ್ಯಾಷನ್‌ ಸೆನ್ಸೇ ಇಲ್ಲ ಎಂದು ಹೇಳುವ ಮೂಲಕ ಸೋನಂ ಕಪೂರ್‌ ಸೋನಾಕ್ಷಿ ಕೆಂಗಣ್ಣಿಗೆ ಗುರಿಯಾಗಿದ್ದೂ ಹಳೆಯ ವಿಷಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.