ಗುರುವಾರ , ಜೂಲೈ 9, 2020
27 °C

ಅವರ ಬೆಡಗಿಗೆ ಇವರೇ ಮೆರುಗು

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಅವರ ಬೆಡಗಿಗೆ ಇವರೇ ಮೆರುಗು

ರೂಪದರ್ಶಿಯರ ಬೆಡಗು, ಬಿನ್ನಾಣದ ಜೊತೆಗೆ ಸಂಗೀತದ ಇಂಪು, ವೇದಿಕೆಯ ಬೆಳಕು ಎಲ್ಲವೂ ಹದವಾಗಿದ್ದರೇನೇ ಫ್ಯಾಷನ್‌ ಶೋ ಕಳೆ ಗಟ್ಟುವುದು. ಈ ಸುಂದರ ವೇದಿಕೆಯನ್ನು ರಸಮಯವಾಗಿಸುವುದು ಫ್ಯಾಷನ್‌ ಸಂಯೋಜಕರ ಕೈಚಳಕ. ಈ ಕ್ರಿಯಾಶೀಲ ಕೆಲಸಕ್ಕೆ ಮನಸೋತು ಅದರಲ್ಲಿ ತೊಡಗಿಸಿಕೊಂಡವರು ರಾಜೇಶ್‌ ಶೆಟ್ಟಿ. ಫ್ಯಾಷನ್‌ ಸಂಯೋಜನೆಯ ಜೊತೆಗೆ ಹಲವು ಸಿನಿಮಾ, ರಿಯಾಲಿಟಿ ಶೋಗಳಿಗೂ ವಸ್ತ್ರವಿನ್ಯಾಸ ಮಾಡಿದ್ದಾರೆ.

ರಾಜೇಶ್‌ ಮೈಸೂರಿನವರು. ಮೈಕ್ರೊಬಯಾಲಜಿ ವಿಷಯದಲ್ಲಿ ಬಿಎಸ್ಸಿ ಪದವಿ ಮುಗಿಸಿರುವ ಇವರು, ಫ್ಯಾಷನ್‌ ಕ್ಷೇತ್ರದಲ್ಲಿ ಮಿನುಗುವ ಹಂಬಲದಿಂದ ಬೆಂಗಳೂರಿಗೆ ಬಂದರು. ಜೆ.ಡಿ. ಇನ್‌ಸ್ಟಿಟ್ಯೂಷನ್‌ನಲ್ಲಿ ವಸ್ತ್ರವಿನ್ಯಾಸದಲ್ಲಿ ಡಿಪ್ಲೊಮ ಮುಗಿಸಿ, ಫ್ಯಾಷನ್‌ ಕ್ಷೇತ್ರದ ಹಲವು ಮಜಲುಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆಭರಣ ವಿನ್ಯಾಸ, ಕೇಶಾಲಂಕರ ವಸ್ತುಗಳ ತಯಾರಿಕೆಯಲ್ಲಿಯೂ ಇವರು ಪ್ರವೀಣರು. ಆದರೆ ಇವರು ಹೆಚ್ಚಾಗಿ ಗುರುತಿಸಿಕೊಂಡಿರುವುದು ಫ್ಯಾಷನ್‌ ಸಂಯೋಜನೆ ಮತ್ತು ವಸ್ತ್ರವಿನ್ಯಾಸದ ಮೂಲಕವೇ.

ಸ್ನೇಹಿತರೊಬ್ಬರ ಒತ್ತಾಯಕ್ಕೆ ಮಣಿದು ಫ್ಯಾಷನ್‌ ಸಂಯೋಜನೆ ಕ್ಷೇತ್ರಕ್ಕೆ ಅಡಿಯಿಟ್ಟವರು ಇವರು. ಮೊದಲ ಶೋದಲ್ಲಿಯೇ ಸಿಕ್ಕ ಜಯ ಇವರನ್ನು ಈ ಕ್ಷೇತ್ರದಲ್ಲಿಯೇ ಮುಂದುವರೆಯುವಂತೆ ಮಾಡಿತು. ನಟಿ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಅವರು ಮಾಡೆಲಿಂಗ್‌ ಮಾಡುತ್ತಿದ್ದಾಗ ಅವರ ಜೊತೆಗೂ ಇವರು ಕೆಲಸ ಮಾಡಿದ್ದಾರೆ. ತಾವು ಸಂಯೋಜನೆ ಮಾಡಿರುವ ರೂಪದರ್ಶಿಗಳು ಈ ಮಟ್ಟಕ್ಕೆ ಬೆಳೆದಿರುವ ಹೆಮ್ಮೆ ಇವರಿಗಿದೆ. ನಟಿ ಸೋನಂ ಕಪೂರ್‌, ನಟ ರಣವೀರ್‌ ಸಿಂಗ್‌ ಇವರ ಸ್ಟೈಲ್‌ ಐಕಾನ್‌ಗಳು.

‌ಡಾನ್ಸಿಂಗ್‌ ಸ್ಟಾರ್‌ ಸೀಸನ್‌ 3, ಸೈ ಸೇರಿದಂತೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿಯೂ ವಸ್ತ್ರವಿನ್ಯಾಸಕರಾಗಿ ಇವರು ಕೆಲಸ ಮಾಡಿದ್ದಾರೆ. ಉಪ್ಪಿ 2, ರಂಗಿತರಂಗ, ಜಾನ್‌ ಜಾನಿ ಜನಾರ್ಧನ,  ಕಾಲೇಜ್‌ ಕುಮಾರ್‌, ರಾಜೇಂದ್ರ ಪೊನ್ನಪ್ಪ ಹಾಗೂ ಇನ್ನೂ ಅನೇಕ ಸಿನಿಮಾಗಳಿಗೆ ವಸ್ತ್ರವಿನ್ಯಾಸವನ್ನೂ ಮಾಡಿದ್ದಾರೆ.

‘ಈ ವೃತ್ತಿ ಸೃಜನಶೀಲತೆಯನ್ನು ಬೇಡುತ್ತದೆ. ಪ್ರತಿಬಾರಿಯೂ ಹೊಸತನದ ಮೂಲಕ ನಮ್ಮ ಕೌಶಲವನ್ನು ಪ್ರಸ್ತುತಪಡಿಸಬೇಕು. ಬಣ್ಣ, ಚೆಲುವು, ಕ್ರಿಯಾಶೀಲತೆ, ವಿನ್ಯಾಸದ ಪರಿಕಲ್ಪನೆ, ರೂಪದರ್ಶಿಯರ ಉಡುಪು... ಹೀಗೆ ವೇದಿಕೆಯ ಪ್ರತಿ ಸೂಕ್ಷ್ಮತೆಯ ಬಗ್ಗೆ ಅರಿವು ಇರಬೇಕು. ಹೊಸತವನ್ನು ಮರುಸೃಷ್ಟಿಸುತ್ತಲೇ ಇರಬೇಕು’ ಎನ್ನುವುದು ಇವರ ಸಿದ್ಧಾಂತ.

ಫ್ಯಾಷನ್‌ ಕ್ಷೇತ್ರದಲ್ಲಿ ಹೊಸತನವಿದ್ದರೆ ಮಾತ್ರವೇ ಟ್ರೆಂಡ್‌ ಸೃಷ್ಟಿಸಲು ಸಾಧ್ಯ. ಈ ಕಾರಣಕ್ಕೆ ಇವರ ಫ್ಯಾಷನ್‌ ಶೋಗಳಲ್ಲಿ ನಾಟಕೀಯತೆಯ ಮೂಲಕ ವೈವಿಧ್ಯತೆ ಸಾಧಿಸಲು ಒತ್ತು ಕೊಡುತ್ತಾರೆ. ಪ್ರೇಕ್ಷಕರ ಸಾಲಿನಿಂದ ಮಾಡೆಲ್‌ ಬರುವುದು, ಬ್ರೈಡಲ್‌ ಶೋಗಳಾದರೆ ಹುಲಿಯನ್ನು ವಧು ತರುವುದು ಹೀಗೆ... ಶೋಗಳಲ್ಲಿ ಪ್ರಾಪರ್ಟಿಗಳನ್ನು ಹೆಚ್ಚು ಬಳಸುತ್ತಾರೆ. ಶೋ ಪರಿಕಲ್ಪನೆಗೆ ತಕ್ಕಂತೆ ವಿನ್ಯಾಸವನ್ನು ಪ್ರಸ್ತುತಪಡಿಸುತ್ತಾರೆ.ರಾಜೇಶ್‌ ಶೆಟ್ಟಿ

ಫ್ಯಾಷನ್‌ ಕ್ಷೇತ್ರ ಫೀನಿಕ್ಸ್‌ನಂತೆ ಮುನ್ನುಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಯೂ ಅಗತ್ಯ. ಇದಕ್ಕೆ ಇವರು ನೆಚ್ಚಿಕೊಂಡಿರುವ ಸಾಮಾಜಿಕ ಜಾಲತಾಣವನ್ನು. ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಮೂಲಕ ಫ್ಯಾಷನ್‌ನ ಹಲವು ಮಾಹಿತಿಗಳನ್ನು ಅರಿಯುತ್ತಾರೆ. ಇದರ ಜೊತೆಗೆ ಬಾಲಿವುಡ್‌ ನಟ, ನಟಿಯರು ಇವರಿಗೆ ಮಾರ್ಗದರ್ಶಿಗಳಾಗಿದ್ದಾರೆ. ಪ್ರತಿದಿನ ಫ್ಯಾಷನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇವರ ಬ್ಲಾಗ್‌ ಕೂಡ ಇದ್ದು, ಅದರಲ್ಲಿ ಫ್ಯಾಷನ್‌ ಬಗ್ಗೆ ತಮಗೆ ತಿಳಿದಿರುವ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

‘ಲಯನ್ಸ್‌ ಕ್ಲಬ್‌ ನಡೆಸಿದ ಫ್ಯಾಷನ್‌ ಶೋನಲ್ಲಿ ಸೀತಾ ಭತೇಜಾ ಎನ್ನುವ ವೈದ್ಯೆಯೊಬ್ಬರು ಪಾಲ್ಗೊಂಡಿದ್ದರು. ಅವರಿಗೆ ಆಗ 80 ವರ್ಷ. ದೇಣಿಗೆ ಸಂಗ್ರಹಿಸುವ ಉದ್ದೇಶಕ್ಕಾಗಿ ಆಯೋಜಿಸಿದ್ದ ಶೋ ಅದು. ಸೀತಾ ಅವರಿಗೆ ಆ ವಯಸ್ಸಿನಲ್ಲಿಯೂ ಇದ್ದ ಛಲ ಅದ್ಭುತ. ಮತ್ತೊಮ್ಮೆ ಅಂಧ ಮಕ್ಕಳನ್ನು ರ‍್ಯಾಂಪ್‌ ಮೇಲೆ ನಡೆಸುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ನೀಡಿತ್ತು’ ಎಂದು ವೃತ್ತಿ ಕೊಟ್ಟ ಖುಷಿ ನೆನೆಯುತ್ತಾರೆ. 

‘ನೃತ್ಯ ಸಂಯೋಜನೆಯಂತೆ ಫ್ಯಾಷನ್‌ ಸಂಯೋಜನೆಯೂ ಒಂದು ಕಲೆ. ಇಲ್ಲಿ ಪ್ರತಿ ಸೂಕ್ಷ್ಮಗಳು ಮುಖ್ಯವಾಗುತ್ತವೆ. ಈಗಂತೂ ಕಾಲೇಜು ಕಾರ್ಯಕ್ರಮ, ಕಾರ್ಪೊರೇಟ್‌ ಕಂಪೆನಿ...ಹೀಗೆ ಎಲ್ಲ ಕಡೆಯೂ ಫ್ಯಾಷನ್‌ ಶೋ ನಡೆಯುತ್ತದೆ. ಹಾಗಾಗಿ ಫ್ಯಾಷನ್‌ ಸಂಯೋಜಕರಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಅತ್ಯುತ್ತಮ ಎನ್ನುವಂತೆ ಪ್ರದರ್ಶನ ನೀಡಿದರೆ ಈ ವೃತ್ತಿಯಲ್ಲಿ ಅವಕಾಶ ಹೆಚ್ಚಿದೆ’ ಎನ್ನುತ್ತಾರೆ ಇವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.