ಸೋಮವಾರ, ಜೂಲೈ 6, 2020
21 °C

ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ಬಂಧನ

ಮೂಡಿಗೆರೆ: ಪಟ್ಟಣದ ಛತ್ರ ಮೈದಾನದಲ್ಲಿ ಶನಿವಾರ ನಡೆದ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸರು, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಎಂ.ವಿ. ಅನಿಲ್‌ ಎಂಬಾತನನ್ನು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.

ಆತ್ಮಹತ್ಯೆಯ ದಿವಸ ಐವರು ಆರೋಪಿಗಳು ಧನ್ಯಶ್ರೀಯ ಮನೆಗೆ ತೆರಳಿ, ಧನ್ಯಶ್ರೀ ಅನ್ಯಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದು, ಲವ್‌ಜಿಹಾದ್‌ಗೆ ನೀವು ಅವಕಾಶ ಮಾಡಿಕೊಡುತ್ತಿದ್ದೀರಿ ಎಂದು ಆಕೆಯ ತಾಯಿಯ ಎದುರು ಆಕೆಗೆ ಕಿರುಕುಳ ನೀಡಿ ಬಂದಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಸಂದೇಶ ಧನ್ಯಶ್ರೀಗೂ ಬಂದಿದ್ದು, ಇದರಿಂದ ಮನನೊಂದ ಆಕೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಕರಣದ ತಿರುಳು.

22ರವರೆಗೆ ನ್ಯಾಯಾಂಗ ಬಂಧನ: ಪ್ರಕರಣದ 2ನೇ ಆರೋಪಿಯಾಗಿ ಬಂಧಿತನಾಗಿರುವ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಎಂ.ವಿ.ಅನಿಲ್‌ಗೆ ಮೂಡಿಗೆರೆಯ ಹಿರಿಯ ಶ್ರೇಣಿ ಪ್ರಧಾನ ಸಿವಿಲ್‌ ಹಾಗೂ ಜೆಎಂಎಫ್‌ ನ್ಯಾಯಾಲಯ ಇದೇ 22 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

2ನೇ ಪ್ರಕರಣ ದಾಖಲು: ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆಯ ತಂದೆ ಯಾದವ ಸುವರ್ಣ ‘ಇದೇ 8 ರಂದು ಪದವಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಓದದೇ ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ’ ಎಂದು ಬೈದು ಮೊಬೈಲ್‌ ಕಿತ್ತುಕೊಂಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ದಾಖಲಿಸಿದ್ದರು. ಆದರೆ ಸ್ಥಳದಲ್ಲಿ ಸಿಕ್ಕ ಡೆತ್‌ ನೋಟ್‌ನಲ್ಲಿದ್ದ ಮಾಹಿತಿ ಅನ್ವಯ ಐವರು ಆರೋಪಿಗಳ ವಿರುದ್ಧ ‘ಆತ್ಮಹತ್ಯೆಗೆ ಪ್ರಚೋದನೆ’ ಅಡಿ 2ನೇ ಪ್ರಕರಣ ದಾಖಲಾಗಿದೆ.

ಮಂಗಳೂರಿಗೂ ನಂಟು: ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿಗೂ ನಂಟಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಕರಾವಳಿ ಭಾಗದ ಸಂಘಟನೆಯೊಂದರ ವ್ಯಕ್ತಿಯೊಬ್ಬ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಕೇಳಿ ಬರುತ್ತಿದೆ.

ತುಳು ಭಾಷೆಯಲ್ಲಿ ಸಂದೇಶ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಳ್ಳುತ್ತಿದ್ದಂತೆ ಧನ್ಯಶ್ರೀಯೊಂದಿಗೆ ನಡೆಸಿರುವ ಸಂದೇಶದ ಪರದೆಯ ಛಾಯಾಚಿತ್ರಗಳು ವೈರಲ್‌ ಆಗಿದ್ದು, ಛಾಯಾಚಿತ್ರದಲ್ಲಿರುವ ಸಂದೇಶವು ತುಳು ಭಾಷೆಯಲ್ಲಿದ್ದು ಧನ್ಯ ಎಂದು ನಮೂದಾಗಿರುವ ಹೆಸರಿನಿಂದ ಸಂದೇಶದ ಸಂಭಾಷಣೆ ನಡೆದಿದೆ.

‘ಬೆದರಿಕೆ ಅಂಶ ಪತ್ರದಲ್ಲಿದೆ’

ಚಿಕ್ಕಮಗಳೂರು: ‘ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಮರಣಪತ್ರ ಸಿಕ್ಕಿದೆ. ಧನ್ಯಶ್ರೀ ಮತ್ತು ಅವರ ತಾಯಿಗೆ ಕೆಲ ಸಂಘಟನೆಗಳ ಹುಡುಗರು ಬೈಯ್ದು, ಬೆದರಿಕೆ ಹಾಕಿದ್ದರು ಎಂಬ ಅಂಶ ಪತ್ರದಲ್ಲಿ ಇದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

‘ಮುಸ್ಲಿಂ ಹುಡುಗನ ಜೊತೆ ಧನ್ಯಶ್ರೀ ಓಡಾಡುತ್ತಿದ್ದಾರೆ, ಲವ್‌ ಜಿಹಾದ್‌ಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆಕೆಯ ಮನೆಗೆ ಹೋಗಿ ಐವರು ಹುಡುಗರು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರ ತಾಯಿಗೂ ಬೈಯ್ದಿದ್ದಾರೆ. ಹೀಗೆಲ್ಲ, ಆದ ಮೇಲೆ ಸಮಾಜದಲ್ಲಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಧನ್ಯಶ್ರೀ ಮತ್ತು ಮುಸ್ಲಿಂ ಹುಡುಗ ಇರುವ ಫೋಟೊವನ್ನು ಕೆಲವರು ವಾಟ್ಸಪ್‌, ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಆ ಫೋಟೊವನ್ನು ಆಕೆಗೂ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊವನ್ನು ಹಾಕಿದ್ದವರನ್ನು ಪಟ್ಟಿ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆಕೆಯ ಮನೆಗೆ ಹೋಗಿ ಬೆದರಿಕೆ ಹಾಕಿದವರು, ಕಾಲೇಜಿನಲ್ಲಿ ಬೆದರಿಕೆ ಹಾಕಿದವರು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿದವರು ಎಲ್ಲರನ್ನೂ ಬಂಧಿಸುತ್ತೇವೆ. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ಎಂ.ವಿ.ಅನಿಲ್‌ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ’ ಎಂದು ತಿಳಿಸಿದ್ದಾರೆ.

ಇಬ್ಬರ ನಡುವಿನ ಸಂಭಾಷಣೆ

ಧನ್ಯಶ್ರೀ: ‘ದಾಯೆ ಕ್ಯಾಸ್ಟ್‌ ಪಂಡು ಸೈಪರಿಯೇ ವಿ ಆರ್‌ ಇಂಡಿಯನ್ಸ್‌ ಓ ಕೆ (ಏನು ಜಾತಿ ಅಂತ ಸಾಯುತ್ತೀರಿ ನಾವೆಲ್ಲಾ ಭಾರತೀಯರು ಆಯ್ತಾ)

ವ್ಯಕ್ತಿ: ಯಾನ್‌ ದಾಲಾ ಕ್ಯಾಸ್ಟ್‌ಡು ಸೈತಿಜಿ ಆವಾ (ನಾನು ಜಾತಿಗಾಗಿ ಸಾಯ್ತಿಲ್ಲ ಆಯ್ತಾ)

ಧನ್ಯಶ್ರೀ: ಮುಸ್ಲಿಮ್ಸ್‌ನಕ್ಲು ಪಾಪಾ ಆವಾ (ಮುಸ್ಲಿಂನವರು ಪಾಪಾ ಆಯ್ತಾ)

ವ್ಯಕ್ತಿ: ಹೀ ಅಕ್ಲೆಗೆ ಪುಟ್ಟುದುನ (ನೀನು ಅವರಿಗೆ ಹುಟ್ಟಿರೋದು)

ಧನ್ಯಶ್ರೀ: ಆಂ ಬಟ್‌ ಯಂಕ್‌ ಮುಸ್ಲಿಮ್ಸ್‌ ಪಂಡ ಮಸ್ತ್‌ ಇಷ್ಟ (ಹಾಂ, ಆದರೆ ನಂಗೆ ಮುಸ್ಲಿಂ ಎಂದರೆ ತುಂಬಾ ಇಷ್ಟ)

ವ್ಯಕ್ತಿ: ಐಕೆ ಕೆನ್ನಾ ನಿನ್ನಾ ಪೊಪ್ಪ ಮುಸ್ಲಿಂಆಆಆ (ಅದುಕ್ಕೆ ನಿನ್ನಪ್ಪ ಮುಸ್ಲಿಂ ಆಆಆ)

ಧನ್ಯಶ್ರೀ: ಈರ್ನ ಪೊಪ್ಪ ಮುಸ್ಲಿಂ ಆದಿಪ್ಪು ಎಂಕು ಪನೊರ್ಚಿ ಓಕೆ (ನಿಮ್ಮ ಅಪ್ಪ ಮುಸ್ಲಿಂ ಆಗಿರಬಹುದು ನಂಗೆ ಹೇಳ್ಬೇಡಿ ಆಯ್ತಾ)

ವ್ಯಕ್ತಿ: ಅಪಾಂಡ ಪಾತೆರ್ನಾಯನೆ ಪಾತೆರ್ಲಾ ಓಕೆ (ಹಾಗಾದ್ರೆ ಮಾತಾಡುವವರ ಕೈಲೆ ಮಾತಾಡು)

ಧನ್ಯಶ್ರೀ: ಕಾಲ್‌ ಪೋಪುಜ್ಜಿ ಈರೆಗು (ಕಾಲ್‌ ಹೋಗ್ತಿಲ್ಲ ನಿಮಗೆ)

ಧನ್ಯಶ್ರೀ: ಆಂ ಐಲವ್‌ ಮುಸ್ಲಿಂ ಓಕೆ

ವ್ಯಕ್ತಿ: ಅಕ್ಲೆನೆ ಪತೊಂದು ಬಲಿಪುಲಾ (ಅವರನ್ನೇ ಕಟ್ಟಿಕೊಂಡು ಓಡಿಹೋಗು)

ಧನ್ಯಶ್ರೀ: ಆಂ ಓಕೆ (ಆಂ ಆಯ್ತು)

ವ್ಯಕ್ತಿ: ಡನ್‌ ಆಲ್‌ರೆಡಿ ನಿಕ್ಲೆನ ಮೂಡಿಗೆರೆ ಭಜರಂಗ ದಳೊಗು ಕಡಪುಡ್‌ದಾಂಡು (ಈಗಾಗಲೇ ಮೂಡಿಗೆರೆ ಭಜರಂಗದಳಕ್ಕೆ ಕಳುಹಿಸಲಾಯ್ತು)

ಧನ್ಯಶ್ರೀ: ಐ ಡೋಂಟ್‌ ನೋ (ನಂಗೆ ಗೊತ್ತಿಲ್ಲ)

ವ್ಯಕ್ತಿ: ಈ ಡೋಂಟ್‌ ನೋ ಪಂಡ ಯಂಕ್ಲೆಗು ಗೊತ್ತು. ಓಕೆ ಆರೆಗೆ ಯೆಲ್ಲೆ ಕಾಲ್‌ ಮಲ್ಪ (ನೀನು ಗೊತ್ತಿಲ್ಲ ಎಂದರೆ ನಮಗೆ ಗೊತ್ತು. ಓಕೆ ಅವ್ರಿಗೆ ನಾಳೆ ಕಾಲ್‌ ಮಾಡ್ತಿವಿ)

ಧನ್ಯಶ್ರೀ: ಓ ದಾದ ಮಲ್ಪೊಡು ಪಂಡುದು ಯಂಕ್‌ ಗೊತ್ತು (ಓ ಏನು ಮಾಡಬೇಕು ಎಂದು ನಂಗೆ ಗೊತ್ತು)

ವ್ಯಕ್ತಿ: ಓಕೆ ದಾದಾ ಮಲ್ಪಂದು ತೂವನುವಾ ಯಂಕ್ಲೆಗ್‌ ದಾದಾ ಮಲ್ಪೊಡು ಲಾ ಗೊತ್ತುಂಡು (ಓಕೆ ಏನ್‌ ಮಾಡ್ತೀಯಾ ನೋಡ್ಕೊಳ್ತೇವೆ ನಮ್‌ಗೆ ಏನ್‌ ಮಾಡ್ಬೇಕು ಅಂತಲೂ ಗೊತ್ತು)

ಧನ್ಯಶ್ರೀ: ಏನಾ ಪನ್ಪರಾ ಏನ್‌ ಪನ್ಯ ವಿಷ್ಯ ಈ ಡೋಂಟ್‌ ಕೇರ್‌. ಎನ್ನ ಪೊಪ್ಪ, ಅಮ್ಮ ಏಪಲಾ ಯಂಕೇ ಸಪೋರ್ಟ್‌ ಮಲ್ಪುನ

(ಏನ್‌ ಹೇಳ್ತಿರಾ ಏನ್‌ ಹೇಳಿದ್ರು ಡೋಂಟ್‌ಕೇರ್‌. ನನ್ನ ಪಪ್ಪ ಮತ್ತು ಅಮ್ಮ ಯಾವಾಗಲೂ ನಂಗೇ ಸಪೋರ್ಟ್...)

ಹೀಗೆ ನಡೆದಿರುವ ಸಂಭಾಷಣೆ ಸೋಮವಾರ ಕೂಡ ವೈರಲ್‌ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.