ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಸಂಶೋಧನಾ ತಂಡದಿಂದ ಅಧ್ಯಯನ

ಚುನಾವಣೆಗೆ ಸಜ್ಜು: ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳಿಗೆ ತಳಮಟ್ಟದಿಂದಲೇ ಎಐಸಿಸಿ ಪ್ರತಿತಂತ್ರ
Last Updated 8 ಫೆಬ್ರುವರಿ 2018, 8:58 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ತಂತ್ರಗಳಿಗೆ ತಳಮಟ್ಟದಿಂದಲೇ ಪ್ರತಿತಂತ್ರ ರೂಪಿಸಿ, ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯದ ಪ್ರತಿ ಕ್ಷೇತ್ರಗಳ ವಸ್ತುಸ್ಥಿತಿ ಅರಿಯಲು ಸಂಶೋಧನಾ ತಂಡ ಬಳಸಿಕೊಳ್ಳಲು ಮುಂದಾಗಿದೆ.

ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ (ರಾಜ್ಯಸಭೆ ಸದಸ್ಯ) ಪ್ರೊ. ರಾಜೀವ್‌ ಗೌಡ ನೇತೃತ್ವದ ತಂಡ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯದಕ್ಷತೆ, ಮತದಾರರ ಒಲವು ಯಾವ ಕಡೆ ಇದೆ ಎಂದು ತಿಳಿದುಕೊಂಡು ಅದಕ್ಕೆ ಪೂರಕವಾಗಿ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಲು ಈ ತಂಡ ಪಕ್ಷಕ್ಕೆ ನೆರವು ನೀಡಲಿದೆ. ಆಯ್ದ ಕ್ಷೇತ್ರಗಳ ಜನ ಮತ್ತು ರ‍್ಯಾಂಡಮ್‌ ಆಗಿ ಮತದಾರರಿಗೆ ಕರೆ ಮಾಡಿ ಅಭಿಪ್ರಾಯ ಸಂಗ್ರಹಿಸಲು ಮತ್ತು ಅದಕ್ಕೆ ಪೂರಕವಾಗಿ ಚುನಾವಣಾ ಪ್ರಚಾರ ಅಭಿಯಾನ ತೀವ್ರಗೊಳಿಸಲು ತಂಡ ಸಲಹೆ ನೀಡಲಿದೆ.

ತಂಡದ ಕಾರ್ಯವೈಖರಿಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಜೀವ್‌ ಗೌಡ, ‘ಗುಜರಾತ್‌ ಚುನಾವಣೆಯಲ್ಲಿ ನಾವು ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದೇವೆ. ಅಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೆವು. ಆದರೆ, ಇಲ್ಲಿ (ಕರ್ನಾಟಕ) ನಮ್ಮದೇ ಸರ್ಕಾರ ಇದೆ. ಹೀಗಾಗಿ ಅಲ್ಲಿಗಿಂತ ಭಿನ್ನವಾದ ಕಾರ್ಯತಂತ್ರ ರೂಪಿಸಿಕೊಳ್ಳಬೇಕಿದೆ’ ಎಂದರು.

ಗುಜರಾತಿನಲ್ಲಿ ವಿವಿಧ ವಲಯಗಳ ಆಯ್ದ ಜನರಿಗೆ ಮತ್ತು ವಿವಿಧ ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಕರೆ ಮಾಡಿ ಅವರ ಸಮಸ್ಯೆಗಳೇನು, ನಿರೀಕ್ಷೆ
ಗಳೇನು ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನಮ್ಮ ಚುನಾವಣಾ ಕಾರ್ಯತಂತ್ರ ರೂಪಿಸಿಕೊಂಡಿದ್ದೆವು. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

‘ಸ್ವತಃ ರಾಹುಲ್‌ ಗಾಂಧಿ ತಂಡದ ಮೇಲೆ ನಿಗಾ ವಹಿಸಲಿದ್ದಾರೆ. ಪ್ರತಿ ಮತ ಕ್ಷೇತ್ರದಲ್ಲಿ ಮತದಾರರ ಮೇಲೆ ಪರಿಣಾಮ ಬೀರಿದ ಮತ್ತು ಪರಿಣಾಮ ಬೀರಬಹುದಾದ ಅಂಶಗಳು, ಅವುಗಳ ಆಧಾರದಲ್ಲಿ ಮತಗಳಾಗಿ ಪರಿವರ್ತಿಸಲು ಹಮ್ಮಿಕೊಳ್ಳಬೇಕಾದ ರಣತಂತ್ರ, ವಿರೋಧ ಪಕ್ಷಗಳ ಪ್ರಭಾವ, ಅದನ್ನು ಎದುರಿಸಲು ಏನು ಮಾಡಬೇಕು ಮತ್ತಿತರ ವಿಷಯಗಳನ್ನು ಅಂಕಿಅಂಶಗಳ ಸಮೇತ ನಿಖರ  ಅಧ್ಯಯನ ನಡೆಯಲಿದೆ’ ಎಂದರು.

‘ರಾಜ್ಯ ಸರ್ಕಾರವು ಹಲವು ‘ಭಾಗ್ಯ’ಗಳ ಜೊತೆಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿವೆ. ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಉಂಟು ಮಾಡಿರುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಎಲ್ಲ ಅಂಶಗಳ ಮೇಲೂ ನಾವು ಕೆಲಸ ಮಾಡುತ್ತೇವೆ’ ಎಂದರು.
*
ವಿಶ್ಲೇಷಣಾ ತಂಡ ಸದ್ಯದಲ್ಲೇ ರಾಜ್ಯಕ್ಕೆ?
ಸಂಶೋಧನಾ ತಂಡದ ಕಾರ್ಯಚಟುವಟಿಕೆಗೆ ಪೂರಕವಾಗಿ ಅಂಕಿ ಅಂಶಗಳನ್ನು ತುಲನೆ ಮಾಡಿ ವಾಸ್ತವಿಕ ಸ್ಥಿತಿಯನ್ನು ನಿಖರವಾಗಿ ಅಂದಾಜಿಸಲು ಸದ್ಯದಲ್ಲೇ ವಿಶ್ಲೇಷಣಾ ತಂಡವೂ ರಾಜ್ಯಕ್ಕೆ ಬರಲಿದೆ.

ಗೋವಾದಲ್ಲಿ ಗೆಲ್ಲಬಹುದೆಂದು ಈ ತಂಡ ಅಂದಾಜು ಮಾಡಿದಷ್ಟೇ ಸ್ಥಾನಗಳನ್ನು ಪಕ್ಷ ಗೆದ್ದಿದೆ ಗುಜರಾತ್‌ ನಲ್ಲಿ ಅಂದಾಜು ಮಾಡಿದ್ದ ಸ್ಥಾನಗಳಿಗಿಂತ ಕೆಲವು ಸ್ಥಾನ ಕಡಿಮೆ ಬಂದಿದ್ದರೂ ಅದಕ್ಕೆ ಸ್ಪಷ್ಟ ವಿವರಣೆ ನೀಡಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷ 500ಕ್ಕೂ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದೆ. ಇದಕ್ಕೆ ನೋಟಾ ಮತಗಳ ಚಲಾವಣೆ ಕೂಡಾ ಕಾರಣ ಎಂದು ತಂಡ ವರದಿ ನೀಡಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ತಿಂಗಳ ಅಂತ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ. ಅದಕ್ಕೂ ಮೊದಲೇ ವಿಶ್ಲೇಷಣಾ ತಂಡ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಕೆಲಸ ಆರಂಭಿಸಲಿದೆ. ಚುನಾವಣೆಗೆ ಒಂದು ವಾರ ಇರು ವವರೆಗೂ ಕೆಲಸ ಮಾಡಲಿರುವ ತಂಡ, ಹೈಕಮಾಂಡ್‌ಗೆ ಸಮಗ್ರ ವರದಿ ನೀಡಲಿದೆ. ಗೋವಾದಲ್ಲಿ ಕೆಲಸ ಮಾಡಿದ ವಿಶ್ಲೇಷಣಾ ತಂಡದ ಬಹುತೇಕ ಸದಸ್ಯರು ಗುಜರಾತ್‌ ತಂಡದಲ್ಲೂ ಇದ್ದರು. ಅದೇ ತಂಡದ ಸದಸ್ಯರು ಕರ್ನಾಟಕಕ್ಕೂ ಬರಲಿದ್ದಾರೆ. ಚುನಾವಣೆಗೆ ನಾಲ್ಕು ತಿಂಗಳ ಮೊದಲೇ ರಾಜ್ಯದ ವಿವಿಧ ಭಾಗಗಳನ್ನು ಹಂಚಿಕೊಂಡು ಕಾರ್ಯಾಚರಣೆ ಆರಂಭಿಸಲಿದ್ದಾರೆ. ಸ್ಥಳೀಯವಾಗಿ ಪಕ್ಷದ ನಾಯಕರು ಅಥವಾ ಪದಾಧಿಕಾರಿಗಳ ಸಂಪರ್ಕ ಇಲ್ಲದೆ ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ಯುದ್ಧಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯಂತೆ, ರಾಜಕೀಯ ಹೋರಾಟದ ಮೇಲೆ ಕಣ್ಣಿಟ್ಟು ನಮ್ಮ ತಂಡ ಕೆಲಸ ಮಾಡಲಿದೆ
- ಪ್ರೊ. ರಾಜೀವ್‌ ಗೌಡ
ಅಧ್ಯಕ್ಷ,
ಎಐಸಿಸಿ ಸಂಶೋಧನಾ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT