ಮಂಗಳವಾರ, ಜುಲೈ 14, 2020
27 °C

ಅವಳಿ ನಗರ ಬಂದ್‌: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಳಿ ನಗರ ಬಂದ್‌: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ

‌ಹುಬ್ಬಳ್ಳಿ/ಧಾರವಾಡ: ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಸಂವಿಧಾನ ಕುರಿತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಹಾಗೂ ಕೋರೆಗಾಂವ್‌ನಲ್ಲಿ ವಿಜಯೋತ್ಸವ ವೇಳೆ ನಡೆದ ಹಿಂಸಾಚಾರ ಖಂಡಿಸಿ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳವು ಸೋಮವಾರ ಕರೆ ನೀಡಿದ್ದ ಹುಬ್ಬಳ್ಳಿ–ಧಾರವಾಡ ಬಂದ್‌ ಯಶಸ್ವಿಯಾಗಿದ್ದು, ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆದಿದೆ.

ಈ ವೇಳೆ ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ನಿಯಂತ್ರಣಾ ಕೊಠಡಿ, ಹೋಟೆಲ್‌, ಅಂಗಡಿಗಳ ಮೇಲೆ ಹಾಗೂ ತರಕಾರಿ ಮಾರಲೆಂದು ಬಂದವರ ಮೇಲೂ ಕಲ್ಲು ತೂರಿದ ಪ್ರತಿಭಟನಾಕಾರರು, ಅವರು ತಂದಿದ್ದ ತರಕಾರಿಯನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕಾರವಾರ ರಸ್ತೆಯಲ್ಲಿನ ಬೀದಿದೀಪಗಳನ್ನು ಒಡೆದು ಹಾಕಿದರು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿದರು. ಚನ್ನಮ್ಮ ವೃತ್ತ, ಗೋಕುಲ ರಸ್ತೆಯಲ್ಲಿ ಓಡಾಡುತ್ತಿದ್ದ 50ಕ್ಕೂ ಹೆಚ್ಚು ವಾಹನಗಳನ್ನು ತಡೆದು ಚಕ್ರದ ಗಾಳಿಯನ್ನು ತೆಗೆದರು. ಕೆಲ ವಾಹನ ಸವಾರರು ಇದನ್ನು ಪ್ರಶ್ನಿಸಲಾಗಿ, ಮಾತಿನ ಚಕಮಕಿಯೂ ನಡೆಯಿತು.

ಅವಳಿ ನಗರದಲ್ಲಿ ಬಸ್‌ ಮತ್ತು ಆಟೊಗಳ ಸಂಚಾರ ಸ್ಥಗಿತಗೊಂಡಿತ್ತು. ಪೆಟ್ರೋಲ್‌ ಬಂಕ್‌, ಬ್ಯಾಂಕ್‌ ಹಾಗೂ ಚಿತ್ರಮಂದಿರಗಳು ಮುಚ್ಚಿದ್ದವು. ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಧಾರವಾಡದಲ್ಲಿ ಬಂದ್ ಶಾಂತಿಯುತವಾಗಿತ್ತು.

ಆರ್‌ಎಸ್‌ಎಸ್‌ ಕಚೇರಿಗೆ ಮುತ್ತಿಗೆ ಯತ್ನ:

ಹುಬ್ಬಳ್ಳಿಯಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ’ಕೇಶವ ಕುಂಜ’ಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಬಳಿಕ ಕಚೇರಿ ಎದುರು ಒಂದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.