ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ಮಾತು ಸೋಲಿಸಿದ ಹತ್ಯೆ

ಕೊಲೆಯಾದ ದೀಪಕ್‌ ರಾವ್‌ ಕುಟುಂಬವನ್ನು ಆವರಿಸಿರುವ ಮೌನ
Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಜನವರಿ 3ರಂದು ಕೊಲೆಯಾದ ಕಾಟಿಪಳ್ಳದ ದೀಪಕ್‌ ರಾವ್‌ ಮನೆಯನ್ನು ಈಗ ಸಂಪೂರ್ಣವಾಗಿ ಮೌನ ಆವರಿಸಿದೆ. ಅವರ ತಮ್ಮ ಮೊದಲೇ ಮಾತನಾಡುತ್ತಿರಲಿಲ್ಲ. ತಾಯಿಯೂ ಈಗ ಮೂಕವೇದನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಇಡೀ ಕುಟುಂಬದ ಮಾತು ಸೋತಂತಾಗಿದೆ.

ದೀಪಕ್‌ ಕೊಲೆಯಾಗಿ ಐದು ದಿನಗಳು ಕಳೆದಿವೆ. ಅವರ ಮನೆಯಲ್ಲೀಗ ಸರಿಯಾಗಿ ಮಾತನಾಡುವವರೇ ಇಲ್ಲ. ದಿನವಿಡೀ ಮನೆಯ ಮುಂದಿನ ಕಟ್ಟೆಯ ಮೇಲೆ ಮೌನವಾಗಿ ಕುಳಿತುಕೊಳ್ಳುವ ತಾಯಿ ಪ್ರೇಮಲತಾ, ದೀಪಕ್‌ ಬರುತ್ತಿದ್ದ ದಾರಿಯನ್ನೇ ದಿಟ್ಟಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಶ್ರವಣ ಮತ್ತು ವಾಕ್‌ ದೋಷದದಿಂದ ಬಳಲುತ್ತಿರುವ ತಮ್ಮ ಸತೀಶ್‌ ರಾವ್‌, ಯಾರಾದರೂ ಎದುರಾದರೆ ಕಣ್ಣ ನೀರು ಚೆಲ್ಲುತ್ತಲೇ ನೋವು ಹೊರಹಾಕುತ್ತಾರೆ.

ಸೋಮವಾರ ‘ಪ್ರಜಾವಾಣಿ’ ಪ್ರತಿನಿಧಿ ದೀಪಕ್‌ ಮನೆಗೆ ಭೇಟಿ ನೀಡಿದಾಗ, ಮನೆಯ ಅನತಿ ದೂರದಲ್ಲಿರುವ ಮೈದಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಇರುಮುಡಿ ಕಟ್ಟುವ ಪೂಜೆ ನಡೆಯುತ್ತಿತ್ತು. ಅದೇ ಮೈದಾನ ಗುರುವಾರ ದೀಪಕ್‌ ರಾವ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾಕ್ಷಿಯಾಗಿತ್ತು. ಪ್ರತಿವರ್ಷವೂ ಇರುಮುಡಿ ಕಟ್ಟುವ ಪೂಜೆಯಲ್ಲಿ ಸಂಭ್ರಮದಿಂದ ಭಾಗಿಯಾಗುತ್ತಿದ್ದ ದೀಪಕ್‌ ನೆನಪು ಅಲ್ಲಿದ್ದ ಎಲ್ಲರನ್ನೂ ಕಾಡುತ್ತಿತ್ತು. ಧ್ವನಿವರ್ಧಕದಿಂದ ಜೋರಾಗಿ ಶಬ್ದ ಹೊರಹೊಮ್ಮಿದಾಗಲೆಲ್ಲ ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದ ಪ್ರೇಮಲತಾ ಅವರ ದುಃಖವೂ ಇಮ್ಮಡಿಯಾಗುತ್ತಿತ್ತು.

ನೆರೆಹೊರೆಯವರು ಈಗ ದೀಪಕ್‌ ಕುಟುಂಬದ ನೆರವಿಗೆ ಬಂದಿದ್ದಾರೆ. ಹಲವು ಮಹಿಳೆಯರು ನಿತ್ಯವೂ ಬಂದು ತಾಯಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರಲ್ಲಿ ಕೆಲ ವರು ದೀಪಕ್‌ ಮನೆಯಲ್ಲೇ ಉಳಿದುಕೊಂಡು, ನಿತ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ.

ಹೆಚ್ಚೇನೂ ಗೊತ್ತಿಲ್ಲ: ಮಗ ಯಾವ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ ಎಂಬ ವಿಚಾರದ ಕುರಿತು ತಾಯಿಗೆ ಹೆಚ್ಚೇನೂ ಗೊತ್ತಿಲ್ಲ. ಸ್ನೇಹಿತರೊಂದಿಗೆ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದುದು, ಸಮೀಪದ ಕೋರ್ದಬ್ಬು ದೈವಸ್ಥಾನದ ಭಜನಾ ಮಂಡಳಿಯಲ್ಲಿ ಹೆಚ್ಚು ಸಕ್ರಿಯನಾಗಿ ಕೆಲಸ ಮಾಡುತ್ತಿದ್ದುದು ಮಾತ್ರ ಅವರಿಗೆ ಗೊತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ನನಗೇನೂ ಗೊತ್ತಿಲ್ಲ. ಅವನು ದುಡಿಯುವುದಕ್ಕೇ ಹೆಚ್ಚು ಸಮಯ ಬಳಸುತ್ತಿದ್ದ’ ಎಂದರು.

ಬಂಟಿಂಗ್ಸ್‌ ಕಟ್ಟುವ ವಿಚಾರದಲ್ಲಿ ನವೆಂಬರ್‌ 28ರಂದು ಕಾಟಿಪಳ್ಳದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣ ನಡೆದಿತ್ತು. ಆ ಸಂದರ್ಭದಲ್ಲಿ ಹಿಂದೂ ಯುವಕರ ಗುಂಪಿನ ಜೊತೆಗಿದ್ದ ದೀಪಕ್‌ಗೆ ನಂತರದ ದಿನಗಳಲ್ಲಿ ಬೆದರಿಕೆ ಒಡ್ಡಲಾಗಿತ್ತು ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಅಂತಹ ಯಾವ ವಿಚಾರವನ್ನೂ ಮಗ ತಮ್ಮೊಂದಿಗೆ ಹಂಚಿಕೊಂಡಿರಲಿಲ್ಲ ಎಂದು ಪ್ರೇಮಲತಾ ಹೇಳಿದರು.

ಎರಡೇ ಪ್ರಶ್ನೆಗಳಿಗೆ ಉತ್ತರ ನೀಡಿ ಮೌನಕ್ಕೆ ಶರಣಾದ ಅವರು, ಮತ್ತೆ ಮಾತನಾಡಲು ನಿರಾಕರಿಸಿದರು. ಮಗನ ಕುರಿತು ಪ್ರಶ್ನಿಸುತ್ತಿದ್ದಂತೆಯೇ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಅಳುತ್ತಲೇ ಒಳಗೆ ಹೋದರು.

ನೋವಿನಲ್ಲಿ ಮುಳುಗಿದ ಗೆಳೆಯರು:ದೀಪಕ್‌ ಗೆಳೆಯರ ಗುಂಪು ದೊಡ್ಡದಿತ್ತು. ಯಾವಾಗಲೂ ಅವರೊಂದಿಗೆ ಒಡನಾಡುತ್ತಿದ್ದ ಗೆಳೆಯರ ಗುಂಪು ಈಗ ದೀಪಕ್‌ ನೆನಪನ್ನು ಮರೆಯಲಾಗದೇ ನೋವಿನಲ್ಲಿ ಮುಳುಗಿದೆ. ಹತ್ತಾರು ಯುವಕರು ಎಂದಿನಂತೆ ಆಗಾಗ ದೀಪಕ್‌ ಮನೆಯ ಬಳಿ ಬಂದು ಹೋಗುತ್ತಿದ್ದಾರೆ.

‘ದೀಪಕ್‌ ನಮ್ಮೊಡನೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಬಡತನ, ಸಾಲದ ಸಮಸ್ಯೆಯ ನಡುವೆಯೂ ಆತ ಯಾವಾಗಲೂ ಖುಷಿಯಿಂದಲೇ ಇರುತ್ತಿದ್ದ. ಹರಟೆಗೆ ಕುಳಿತಾಗಲೆಲ್ಲ ತಾನೂ ನಕ್ಕು, ನಮ್ಮನ್ನೂ ನಗಿಸುತ್ತಿದ್ದ. ಆತ ಹೀಗೆ ನಮ್ಮಿಂದ ದೂರವಾಗುತ್ತಾನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ’ ಎಂದು ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ಕಾಟಿಪಳ್ಳದ ತಿಲಕ್‌ ರಾಜ್‌ ಹೇಳಿದರು.

ಬಲವಂತದ ಪತ್ರಿಕಾಗೋಷ್ಠಿ

ದೀಪಕ್‌ ಕೊಲೆಯಲ್ಲಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ತಿಲಕ್‌ ರಾಜ್‌ ಕೈವಾಡವಿರುವ ಮಾಹಿತಿ ಇದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ ಸುದ್ದಿ ಮಂಗಳೂರಿನಲ್ಲಿ ಸಂಚಲನ ಸೃಷ್ಟಿಸಿತು.

ದೀಪಕ್‌ ತಾಯಿ ಮಧ್ಯಾಹ್ನ 3.30ಕ್ಕೆ ಮಾಧ್ಯಮದವರೊಂದಿಗೆ ಮಾತನಾಡುತ್ತಾರೆ ಎಂಬ ಆಹ್ವಾನ ಕೆಲವರಿಂದ ಬಂತು. ಮನೆ ಬಳಿ ಬಂದ ಮಾಧ್ಯಮದವರಿಗೆ ಕೈಮುಗಿದ ಪ್ರೇಮಲತಾ, ತಾವು ಕರೆದೇ ಇಲ್ಲ ಎಂದರು. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು, ‘ತಿಲಕ್‌ ರಾಜ್‌ ಬಗ್ಗೆ ನಮಗೆ ಅನುಮಾನವಿಲ್ಲ’ ಎಂಬ ಹೇಳಿಕೆಯನ್ನು ಕೊಡಿಸಿದರು.

ಸಾವಿಗೆ ಮಿಡಿಯುತ್ತಿರುವ ಮನಗಳು

ಮಂಗಳೂರು: ನಗರದ ಆಕಾಶಭವನ ಪ್ರದೇಶದಲ್ಲಿ ಸೋಮವಾರ ಜನಜೀವನ ಎಂದಿನಂತೆಯೇ ಸಹಜವಾಗಿದ್ದರೂ, ಏನೋ ಕಳೆದುಕೊಂಡಂತಹ ಭಾವನೆ. ಯಾವುದೇ ಸದ್ದು, ಸಮಾರಂಭಗಳೂ ಇಲ್ಲ. ಎಲ್ಲೆಡೆಯೂ ಅಬ್ದುಲ್‌ ಬಶೀರ್‌ ಅವರ ಅಗಲಿಕೆಯ ಮಾತುಗಳೇ ಕೇಳಿ ಬಂದವು.

ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಭಾನುವಾರ ಬೆಳಿಗ್ಗೆ ಮೃತರಾದ ಬಶೀರ್‌ ಅವರ ಮನೆಯ ಬಳಿ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳಿವು.

ಯಾರನ್ನು ಕೇಳಿದರೂ, ಬಶೀರ್ ಅವರ ಮನೆಯ ವಿಳಾಸ ಸುಲಭವಾಗಿ ಸಿಗುತ್ತದೆ. ಆ ಪ್ರದೇಶದಲ್ಲಿ ಬಶೀರ್‌ ಅಷ್ಟೊಂದು ಚಿರಪರಿಚಿತರು. ಧರ್ಮದ ಎಲ್ಲೆಯನ್ನೂ ಮೀರಿ ಪರಸ್ಪರ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದ ಬಶೀರ್‌ ಅವರ ಅಗಲಿಕೆಗೆ ಹಲವಾರು ಮನಸ್ಸುಗಳು ಮಿಡಿಯುತ್ತಿವೆ.

ಬಶೀರ್‌ ಅವರ ಮನೆಯ ಬಳಿ ಪೊಲೀಸ್‌ ವ್ಯಾನ್‌ ನಿಂತಿದ್ದು, ಭದ್ರತೆ ಕಲ್ಪಿಸಲಾಗಿದೆ. ಆದರೆ, ಅದರ ಅಗತ್ಯವಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಜನಜೀವನ ಸಹಜವಾಗಿತ್ತು. ಎಲ್ಲ ಅಂಗಡಿಗಳು ಎಂದಿನಂತೆಯೇ ವಹಿವಾಟು ನಡೆಸುತ್ತಿದ್ದವು. ಜನರೂ ನಿರಾಳರಾಗಿ ಬಸ್‌ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾಯುತ್ತಿದ್ದರು.

25 ವರ್ಷ ಸೌದಿಯಲ್ಲಿದ್ದ ಬಶೀರ್‌: ಬಶೀರ್ ಅವರು 25 ವರ್ಷ ಸೌದಿ ಅರೆಬಿಯಾದಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಒಂದೂವರೆ ವರ್ಷದ ಹಿಂದಷ್ಟೇ ಮಂಗಳೂರಿಗೆ ಮರಳಿದ್ದು, ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್‌ಫುಡ್‌ ಮಳಿಗೆಯನ್ನು ನಡೆಸುತ್ತಿದ್ದರು.

ಬುಧವಾರ (ಜ.3) ರಾತ್ರಿ 9ಕ್ಕೆ ಅಂಗಡಿ ಬಾಗಿಲು ಹಾಕಿ, ಬೈಕ್‌ನಲ್ಲಿ ಮನೆಯತ್ತ ತೆರಳಲು ಸಿದ್ಧರಾಗಿದ್ದರು. ಇನ್ನೇನು ಗೇಟ್‌ ಹಾಕುವಷ್ಟರಲ್ಲಿ, ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಆಂಬುಲೆನ್ಸ್‌ ಚಾಲಕರಾದ ಶೇಖರ್ ಮತ್ತು ರೋಹಿತ್‌ ಮಾನವೀಯತೆ ಮೆರೆದಿದ್ದರು.

‘ನಮ್ಮ ತಂದೆ 25 ವರ್ಷದಿಂದ ಸೌದಿಯಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಇಲ್ಲಿಗೆ ಬಂದು ಕುಟುಂಬದೊಂದಿಗೆ ನೆಲೆಸುವಂತೆ ನಾವೇ ಒತ್ತಾಯ ಮಾಡಿದ್ದೆವು. ಅದರಂತೆ ಒಂದೂವರೆ ವರ್ಷದ ಹಿಂದೆ ಅವರು ನಗರಕ್ಕೆ ಮರಳಿದ್ದರು’ ಎಂದು ಬಶೀರ್‌ ಅವರ ಪುತ್ರ ಇಮ್ರಾನ್‌, ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಶೀರ್ ಒಳ್ಳೆಯ ಸ್ನೇಹಿತ. ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ. ಯಾರನ್ನೂ ನೋಯಿಸಿದ ಉದಾಹರಣೆಯೇ ಇಲ್ಲ. ಎಲ್ಲರನ್ನೂ ಪ್ರೀತಿಸುತ್ತಿದ್ದ ವ್ಯಕ್ತಿ. ಅಂಥವನಿಗೆ ಈ ಸ್ಥಿತಿ ಏಕೆ’ ಎನ್ನುವ ಪ್ರಶ್ನೆ ಬಶೀರ್ ಅವರೊಂದಿಗೆ 15 ವರ್ಷ ಸೌದಿಯಲ್ಲಿದ್ದ ಪ್ರಭಾಕರ್‌ ಅವರದ್ದು.

‘ಎರಡು ದಿನಗಳ ಹಿಂದಷ್ಟೇ ಅವರ ಆರೋಗ್ಯ ವಿಚಾರಿಸಿದ್ದೆ. ಬಶೀರ್‌ ಅವರು ಬದುಕಿದ್ದರೆ, ಏನೋ ಒಂದು ಧನ್ಯತೆಯ ಭಾವ ಬರುತ್ತಿತ್ತು. ಈಗ ಅವರನ್ನು ಕಳೆದುಕೊಂಡಿದ್ದೇವೆ. ಅಮಾಯಕರೊಬ್ಬರು ಬಲಿಯಾಗಿದ್ದು ಅತೀವ ದುಃಖವನ್ನು ಉಂಟು ಮಾಡಿದೆ’ ಎಂದುಬಶೀರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಆಂಬುಲೆನ್ಸ್‌ ಚಾಲಕ ಶೇಖರ್‌ ತಮ್ಮ ನೋವನ್ನು ತೋಡಿಕೊಂಡರು.

ಅನುಕರಣೀಯ ಹೆಜ್ಜೆ: ಬಶೀರ್ ಅವರ ನಿಧನದ ಸುದ್ದಿ ಕೇಳಿದ ಕ್ಷಣದಿಂದ, ಬಶೀರ್‌ ಅವರ ಅಂತ್ಯಕ್ರಿಯೆ ಆಗುವವರೆಗೆ ಅವರ ಕುಟುಂಬದವರು ನಡೆದುಕೊಂಡ ರೀತಿ ಅನುಕರಣೀಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆಸ್ಪತ್ರೆಯ ಎದುರಿನಲ್ಲಿಯೇ ಬಶೀರ್‌ ಅವರ ಸಹೋದರ (ಚಿಕ್ಕಪ್ಪನ ಮಗ) ಹಕೀಂ ಅವರ ಮಾತುಗಳು ಸೌಹಾರ್ದ ಬಯಸುವವರ ಮನಕಲುಕುವಂತಿತ್ತು. ‘ನನ್ನ ಅಣ್ಣನಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ನಮ್ಮಿಂದ ಯಾರಿಗೂ ಅನ್ಯಾಯ ಆಗಬಾರದು. ಎಲ್ಲ ಧರ್ಮದವರೂ ಪರಸ್ಪರ ಶಾಂತಿ, ಸೌಹಾರ್ದ, ಸಹಬಾಳ್ವೆಯಿಂದ ಬದುಕಬೇಕು. ಕೂಳೂರು ಜುಮ್ಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೆ ಹಾಗೂ ನಂತರವೂ ಯಾರೂ ಶಾಂತಿಗೆ ಧಕ್ಕೆ ಉಂಟು ಮಾಡಬಾರದು’ ಎನ್ನುವ ಮೂಲಕ ದುಃಖದ ಕ್ಷಣದಲ್ಲಿಯೂ ಸೌಹಾರ್ದದ ಸಂದೇಶದ ನೀಡಿದರು.

ಸ್ನೇಹಿತನಿಗಾಗಿ ಸವಾಲ್‌

ಬಶೀರ್‌ ಅವರು ವಿದೇಶಿ ನೆಲದಲ್ಲಿಯೇ ಸ್ನೇಹಿತನಿಗಾಗಿ ಸವಾಲು ಹಾಕಿದ್ದ ಘಟನೆಯನ್ನು ರಶೀದ್‌ ವಿಟ್ಲ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

1993 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿತ್ತು. ಸೌದಿ ಅರೇಬಿಯಾಕ್ಕೂ ಇದರ ಬಿಸಿ ತಾಗಿತ್ತು. ಕೆಲ ಮುಸ್ಲಿಮರು, ಆ ಸಮಯದಲ್ಲಿ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರಿನ ಪ್ರಭಾಕರ್ ಅವರ ಮೇಲೆ ದಾಳಿಗೆ ಮುಂದಾದರು. ಆಗ ಪ್ರಭಾಕರ್‌ ಅವರಿಗೆ ರಕ್ಷಣೆ ನೀಡಿ ‘ಪ್ರಭಾಕರ್ ನಮ್ಮವನು. ಅವನ ಮೈ ಮುಟ್ಟಿದರೆ ಜಾಗ್ರತೆ...’ ಎಂದು ಹೇಳಿ ರಕ್ಷಿಸಿದವರು ಮತ್ಯಾರೂ ಅಲ್ಲ, ಕೊಟ್ಟಾರ ಚೌಕಿಯಲ್ಲಿ ಧರ್ಮಾಂಧರ ಮಚ್ಚಿನೇಟಿಗೆ ಸಿಲುಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಇದೇ ಬಶೀರ್.

ಸೌದಿಯಲ್ಲಿದ್ದಾಗ ಪ್ರಭಾಕರ್ ಮತ್ತು ಬಶೀರ್ ಒಂದೇ ತಟ್ಟೆಯಲ್ಲಿ ಉಂಡವರು. ಪ್ರಭಾಕರ್ ಕುಟುಂಬ ಊರಲ್ಲಿ ಸಂಕಷ್ಟದಲ್ಲಿದ್ದಾಗ ಅವರ ತಾಯಿ ಚಿಕಿತ್ಸೆಗೆ ಬಶೀರ್ ಎಷ್ಟೋ ಬಾರಿ ಆರ್ಥಿಕ ಸಹಾಯ ಮಾಡಿದ್ದಾರೆ. ಧರ್ಮ, ಜಾತಿ ನೋಡದೆ ಯಾರೇ ಸಹಾಯ ಯಾಚಿಸಿದರೂ ಬಶೀರ್ ಇಲ್ಲ ಎಂದವರಲ್ಲ. ಧರ್ಮ ಮೀರಿ ನಿಂತ ಈ ಹಸನ್ಮುಖಿ ಬಶೀರ್‌ಗೆ ಎಂಥಾ ಶಿಕ್ಷೆ?’ ಎಂದು ಅವರ ಹೃದಯ ವೈಶಾಲ್ಯವನ್ನು ರಶೀದ್ ವಿಟ್ಲ ತೆರೆದಿಟ್ಟಿದ್ದಾರೆ.

ವಿದೇಶದಲ್ಲಿದ್ದರೆ...

ದೀಪಕ್‌ ರಾವ್‌ ಮತ್ತು ಅಬ್ದುಲ್‌ ಬಶೀರ್‌ ಅವರ ಪ್ರಕರಣದಲ್ಲಿ ವಿದೇಶದಲ್ಲಿದ್ದರೆ ಬದುಕುತ್ತಿದ್ದರು ಎನ್ನುವ ಮಾತುಗಳು ಎರಡೂ ಕುಟುಂಬಗಳಿಂದ ಕೇಳಿ ಬಂದವು.

‘ನನ್ನ ಮಗ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದ. ನಾನೇ ಬೇಡ ಎಂದು ಹೇಳಿದ್ದೆ. ಒಂದು ವೇಳೆ ವಿದೇಶಕ್ಕೆ ಹೋಗಿದ್ದರೆ, ಆತ ಬದುಕುತ್ತಿದ್ದ’ ಎನ್ನುವ ಮಾತು ದೀಪಕ್‌ ತಾಯಿ ಪ್ರೇಮಲತಾ ಅವರದ್ದು.

ಇತ್ತ ಬಶೀರ್ ಕುಟುಂಬವೂ ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ‘ನಮ್ಮ ತಂದೆ ವಿದೇಶದಲ್ಲಿಯೇ ಇದ್ದಿದ್ದರೆ, ಹೀಗೆ ಆಗುತ್ತಿರಲಿಲ್ಲವೇನೋ’ ಎಂದು ಅವರ ಪುತ್ರ ಇಮ್ರಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT