ಶನಿವಾರ, ಜೂಲೈ 4, 2020
21 °C
ಬೈಂದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

ನಮ್ಮದು ಮನುಷ್ಯತ್ವದ ಹಿಂದುತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮದು ಮನುಷ್ಯತ್ವದ ಹಿಂದುತ್ವ

ಉಡುಪಿ: ‘ಮನುಷ್ಯರೇ ಅಲ್ಲದ ಬಿಜೆಪಿ ಮುಖಂಡರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಯ ಬೈಂದೂರಿಗೆ ಸೋಮವಾರ ಬಂದಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ‘ನಾವು ಹಿಂದೂಗಳೇ, ಅದರಲ್ಲೂ ಮನುಷ್ಯತ್ವ ಇರುವ ಹಿಂದೂಗಳು. ಗೋಡ್ಸೆ ಆರಾಧಕರು ನಮಗೆ ಹಿಂದುತ್ವದ ಪಾಠ ಮಾಡುವುದು ಬೇಡ’ ಎಂದು ವಾಗ್ದಾಳಿ ನಡೆಸಿದರು.

ಕೋಮು ಗಲಭೆಗಳಿಗೆ ಸಂಘ ಪರಿವಾರದ ಸಂಘಟನೆಗಳೇ ಕಾರಣ ಎಂದು ಆರೋಪಿಸಿದ ಅವರು, ‘ಪಿಎಫ್‌ಐ , ಬಜರಂಗದಳ ಸಂಘಟನೆ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ. ನಿಷೇಧ ಮಾಡುವ ಬಗ್ಗೆ ಯೋಚಿಸಿಲ್ಲ’ ಎಂದರು.

ಜಂಗಲ್ ರಾಜ್ಯದ ಯೋಗಿ ಆದಿತ್ಯನಾಥ್: ಕಾನೂನು ಸುವ್ಯವಸ್ಥೆಯೇ ಇಲ್ಲದ ಜಂಗಲ್‌ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾನ್ ಕೋಮುವಾದಿ. ಎರಡು ಬಾರಿ ರಾಜ್ಯಕ್ಕೆ ಬಂದಿದ್ದ ಅವರು ಕೋಮುವಾದಿ ಭಾಷಣ ಮಾಡಿದ್ದಾರೆ. ‘ಸಿದ್ದರಾಮಯ್ಯ ಈಗ ಹಿಂದು ಎಂದು ಹೇಳುತ್ತಿದ್ದಾರೆ. ಅವರು ಗೋ ಹತ್ಯೆ ನಿಷೇಧ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.

‘ಹೌದು ನಾನು ಸಹ ಹಿಂದೂ, ಹಿಂದುತ್ವವನ್ನು ಬಿಜೆಪಿಗೆ ಯಾರೂ ಗುತ್ತಿಗೆ ಕೊಟ್ಟಿಲ್ಲ. ಆದರೆ, ನಮ್ಮದು ಮನುಷ್ಯತ್ವದ ಹಿಂದುತ್ವ. ರಾಕ್ಷಸಿ ಪ್ರವೃತ್ತಿಯ ಹಿಂದುತ್ವ ಅಲ್ಲ. ಯಾವ ಆಹಾರ ಸೇವನೆ ಮಾಡುತ್ತಾರೆ ಎಂಬುದರಿಂದ ಹಿಂದುತ್ವ ನಿರ್ಧರಿಸಲು ಸಾಧ್ಯ ಇಲ್ಲ. ನಮ್ಮ ಮನಸ್ಸು ಮತ್ತು ವ್ಯವಹಾರದಲ್ಲಿ ಹಿಂದುತ್ವ ಇರಬೇಕು ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಈ ವಿಷಯ ಗೊತ್ತಿಲ್ಲದಿದ್ದರೆ ಓದಿಕೊಳ್ಳಲಿ’ ಎಂದು ಚುಚ್ಚಿದರು.

‘ನಾನು ಈ ರಾಜ್ಯದ ಮಣ್ಣಿನ ಮಗ. ಇಲ್ಲಿನ ಇತಿಹಾಸ, ಸಂಸ್ಕೃತಿಯ ತಿಳಿವಳಿಕೆ ಇದೆ. ಯಾರ ಜಯಂತಿ ಮಾಡಬೇಕು ಎಂಬುದು ನನಗೆ ಗೊತ್ತಿದೆ. ಕೇವಲ ಟಿಪ್ಪು ಜಯಂತಿ ಮಾತ್ರವಲ್ಲ, 26 ಮಂದಿ ಮಹಾನ್ ಸಾಧಕರ ಜಯಂತಿಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದರು.

‘ಯೋಗಿ ಆದಿತ್ಯನಾಥ್ ಅವರು ರಾಜ್ಯದ ಬಗ್ಗೆ ಮಾತನಾಡುವ ಮುನ್ನ ನಮ್ಮ ಸರ್ಕಾರ ಅನುಷ್ಠಾನ ಮಾಡಿರುವ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ಬಿಸಿಯೂಟ ಕಾರ್ಯಕ್ರಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲಿ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪರೋಕ್ಷ ತೆರಿಗೆ ಸಂಗ್ರಹದಲ್ಲಿಯೂ 3ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಮಕ್ಕಳು ಅಪೌಷ್ಟಿಕತೆ, ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ’ ಎಂದು ಮೂದಲಿಸಿದರು.

ಬೈಂದೂರಿನ ಕಾರ್ಯಕ್ರಮಕ್ಕೆ ಕೊಲ್ಲೂರು ದೇವಸ್ಥಾನದಿಂದ ಊಟ ಸರಬರಾಜು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಊಟ ಎಲ್ಲಿಂದ ಬಂದರೂ ಅದು ಊಟವೇ’ ಎಂದು ಹೇಳಿದರು. ‘ರಾಜ್ಯದಲ್ಲಿ ಸಾವಿರಾರು ಖಾಸಗಿ ಶಾಲೆಗಳಿವೆ. ಕಲ್ಲಡ್ಕ ಶಾಲೆಗೇ ಏಕೆ ಕೊಲ್ಲೂರು ದೇವಸ್ಥಾನದಿಂದ ಊಟ ನೀಡಬೇಕು’ ಎಂದು ಪ್ರಶ್ನಿಸಿದರು.

ಖಾಸಗಿ ಕಾರ್ಯಕ್ರಮಕ್ಕೆ ದೇವಸ್ಥಾನದಿಂದ ಊಟ ನೀಡಲಾಗಿದೆ. ಕಲ್ಲಡ್ಕದ ಶಾಲೆಗೆ ಊಟ ನಿಲ್ಲಿಸಿದ ಸರ್ಕಾರ ತನ್ನ ಕಾರ್ಯಕ್ರಮಕ್ಕೆ ದೇವಸ್ಥಾನದ ಊಟ ಪಡೆದಿದೆ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

‘ಪ. ಜಾತಿಗೆ ಮೀನುಗಾರ ಸಮುದಾಯ ಸೇರ್ಪಡೆ’

ಬೆಸ್ತ, ಮೊಗವೀರ, ಗಂಗಾಮತಸ್ಥ ಸೇರಿದಂತೆ ಎಲ್ಲ ಮೀನುಗಾರ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಇನ್ನೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೈಂದೂರಿನಲ್ಲಿ ನಡೆದ ಸಾಧನ– ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈಗಾಗಲೇ ಎರಡು ಬಾರಿ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈಗ ಮತ್ತೊಮ್ಮೆ ಕಳುಹಿಸಲಾಗುವುದು. ಸಂಸದ ಯಡಿಯೂರಪ್ಪ ಅವರು ಈ ಬಾರಿ ಕೇಂದ್ರದ ಮೇಲೆ ಒತ್ತಡ ಹೇರಿ ಮೀನುಗಾರರ ಬೇಡಿಕೆ ಈಡೇರಿಸಲು ಪ್ರಯತ್ನಿಸಲಿ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.