‘ಜೀವಂತವಿದ್ದ ಮಗನನ್ನು ಶವಾಗಾರದಲ್ಲಿಟ್ಟಿದ್ದರು!’

7
ಯುವಕನ ತಂದೆ ಆರೋಪ: ಕಿಮ್ಸ್‌ ವೈದ್ಯರ ವಿರುದ್ಧ ಪ್ರತಿಭಟನೆ: ದೂರು ದಾಖಲು

‘ಜೀವಂತವಿದ್ದ ಮಗನನ್ನು ಶವಾಗಾರದಲ್ಲಿಟ್ಟಿದ್ದರು!’

Published:
Updated:
‘ಜೀವಂತವಿದ್ದ ಮಗನನ್ನು ಶವಾಗಾರದಲ್ಲಿಟ್ಟಿದ್ದರು!’

ಹುಬ್ಬಳ್ಳಿ: ‘ಅಪಘಾತದಲ್ಲಿ ತೀವ್ರ ಗಾಯಗೊಂಡು ಪ್ರಜ್ಞೆ ತಪ್ಪಿದ್ದ ಯುವಕನನ್ನು ಶವಾಗಾರದಲ್ಲಿಟ್ಟ ಕಿಮ್ಸ್‌ ಆಸ್ಪತ್ರೆ ವೈದ್ಯರು, ಆತನ ಸಾವಿಗೆ ಕಾರಣರಾಗಿದ್ದಾರೆ’ ಎಂದು ಆರೋಪಿಸಿ, ಯುವಕನ ಸಂಬಂಧಿಕರು ಹಾಗೂ ಬಿಜೆಪಿ ಮುಖಂಡರು ಇಲ್ಲಿನ ಕಿಮ್ಸ್‌ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕಿಮ್ಸ್‌ ನಿರ್ದೇಶಕರನ್ನು ಅಮಾನತುಗೊಳಿಸಬೇಕು, ಗಾಯಾಳುವಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಕಿಮ್ಸ್‌ ಆಸ್ಪತ್ರೆಯ ತುರ್ತು ವಿಭಾಗದ ವೈದ್ಯಾಧಿಕಾರಿಯನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರೇಣುಕಾ ಸುಕುಮಾರ್‌, ‘ವೈದ್ಯರ ನಿರ್ಲಕ್ಷ್ಯದಿಂದ ಗಾಯಾಳು ಮೃತಪಟ್ಟಿರುವ ಬಗ್ಗೆ ಸಂದೇಹವಿದ್ದಲ್ಲಿ ದೂರು ನೀಡಿ. ತನಿಖೆ ನಡೆಸಿ, ಕ್ರಮಕೈಗೊಳ್ಳಲಾಗುವುದು’ ಎಂದು ಡಿಸಿಪಿ ಭರವಸೆ ನೀಡಿದ್ದರಿಂದ ಸಮಾಧಾನಗೊಂಡ ಕುಟುಂಬದವರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟರು. ಕಿಮ್ಸ್‌ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಸೋಮವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ ಎಸ್‌.ಮೋಳೆ (23) ಮತ್ತು ಅನಿಲ ರೇಣುಕೆ (23) ಅವರನ್ನು ಆಂಬುಲೆನ್ಸ್‌ ಮೂಲಕ ಕಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರನ್ನು ಪರೀಕ್ಷಿಸಿದ್ದ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ ಬಳಿಕ, ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.‘ಆದರೆ, ಸೋಮವಾರ ಬೆಳಿಗ್ಗೆ 10ಕ್ಕೆ ಶವ ಪರೀಕ್ಷೆಗೆ ಮುಂದಾದಾಗ ಮಗನ ಹೃದಯ ಬಡಿಯುತ್ತಿತ್ತು. ಈ ವಿಷಯವನ್ನು ಗಮನಕ್ಕೆ ತಂದರೂ ಆಸ್ಪತ್ರೆ ವೈದ್ಯರು ಸ್ಪಂದಿಸಲಿಲ್ಲ. ತಕ್ಷಣವೇ ಮಗನನ್ನು ‘ಲೈಫ್‌ಲೈನ್‌’ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತ ಒಂದು ತಾಸಿನ ಹಿಂದೆಯಷ್ಟೇ ಮೃತಪಟ್ಟಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದರು’ ಎಂದು ಪ್ರವೀಣ್‌ ತಂದೆ ಸುಭಾಷ್‌ ಮೋಳೆ ದುಃಖಿಸಿದರು.

‘ತೀವ್ರವಾಗಿ ಗಾಯಗೊಂಡಿದ್ದ ನನ್ನ ಮಗನಿಗೆ ಪ್ರಜ್ಞೆ ತಪ್ಪಿತ್ತೇ ಹೊರತು ಆತ ಸತ್ತಿರಲಿಲ್ಲ. ಚಿಕಿತ್ಸೆ ಕೊಟ್ಟಿದ್ದರೆ ಆತ ಬದುಕುವ ಸಾಧ್ಯತೆ ಇತ್ತು. ಆದರೆ, ರಾತ್ರಿ ನಾವು ಆಸ್ಪತ್ರೆಗೆ ಬರುವ ಮುನ್ನವೇ ಆತ ಜೀವಂತವಾಗಿರುವಾಗಲೇ ಮೃತಪಟ್ಟಿದ್ದಾನೆ ಎಂದು ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗ ಮೃತಪಟ್ಟಿದ್ದಾನೆ’ ಎಂದು ಅವರು ಆರೋಪಿಸಿದರು.

*

‘ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಗಾಯಾಳು ಮೃತಪಟ್ಟಿದ್ದರಿಂದ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಮೃತವ್ಯಕ್ತಿಯ ದೇಹವನ್ನು ಶೈತ್ಯಾಗಾರದಿಂದ ಹೊರತೆಗೆದಾಗ ಹೃದಯ ಬಡಿಯುತ್ತಿತ್ತು ಎಂಬುದನ್ನು ನಂಬಲು ಸಾಧ್ಯವಿಲ್ಲ. ಆಸ್ಪತ್ರೆ ವೈದ್ಯರು ಯಾವ ಹಂತದಲ್ಲೂ ನಿರ್ಲಕ್ಷ್ಯ ಮಾಡಿಲ್ಲ’ ಎಂದು ಕಿಮ್ಸ್‌ ನಿರ್ದೇಶಕ ಡಾ. ದತ್ತಾತ್ರೇಯ ಬಂಟ್ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry