ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ಬಂದ್‌ ಸಂಪೂರ್ಣ ಯಶಸ್ವಿ

Last Updated 9 ಜನವರಿ 2018, 6:48 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರದ ಭೀಮಾ–ಕೋರೆಗಾಂವ್‌ನಲ್ಲಿ ವಿಜಯೋತ್ಸವ ವೇಳೆಯಲ್ಲಿ ನಡೆದ ಹಿಂಸಾಚಾರ, ವಿಜಯಪುರದಲ್ಲಿನ ದಲಿತ ಬಾಲಕಿ ಅತ್ಯಾಚಾರ ಘಟನೆ ಸೇರಿದಂತೆ ವಿವಿಧ ಘಟನೆಗಳನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ‘ಚಿಕ್ಕೋಡಿ ಬಂದ್‌’ ಸಂಪೂರ್ಣ ಯಶಸ್ವಿಯಾಯಿತು.

ಸೋಮವಾರ ಬೆಳಿಗ್ಗೆಯಿಂದಲೇ ಪಟ್ಟಣ ವ್ಯಾಪ್ತಿಯಲ್ಲಿ ಭಾರಿ ವಾಹನ, ಸಾರಿಗೆ ಸಂಚಾರ ವಾಹನ ಸ್ಥಗಿತಗೊಳಿಸಲಾಗಿತ್ತು. ಬೆಳಿಗ್ಗೆ 10ರ ಹೊತ್ತಿಗೆ ಭೀಮನಗರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನಾ ಮರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಪ್ರಕಾಶ ಅಂಬೇಡ್ಕರ್ ಬ್ರಿಗೇಡಿಯರ್ ತಾಲ್ಲೂಕು ಸಂಘಟನೆ, ದಲಿತ ಪ್ರಜಾ ವೇದಿಕೆ ತಾಲ್ಲೂಕು ಘಟಕ, ಅಖಿಲ ಭಾರತೀಯ ಬಂಜಾರ್‌ ಸಮಾಜ (ಲಮಾಣಿ0 ಸಂಘಟನೆ, ಅಂಜುಮನ್‌ ಇಸ್ಲಾಂ ಕಮಿಟಿ ಹಾಗೂ ಮರಾಠ ಸಮುದಾಯಗಳ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ಭೀಮನಗರದಿಂದ ಹೊರಟ ಪ್ರತಿಭಟನಾ ಮರವಣಿಗೆಯು ಅಂಕಲಿಖೂಟ್‌, ಸೋಮವಾರ ಪೇಠ ಮೂಲಕ ಹಾಯ್ದು ಬಸವ ಸರ್ಕಲ್‌ ತಲುಪಿತು. ಮುಖಂಡರಾದ ಬಿ.ಆರ್.ಸಂಗಪ್ಪಗೋಳ, ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಉಪಾಧ್ಯಕ್ಷ ಮಹಾವೀರ ಮೋಹಿತೆ, ಪಠಾಣ, ಶೇಖರ್ ಪ್ರಭಾತ್, ಬಸವರಾಜ ಢಾಕೆ, ಚಂದ್ರಕಾಂತ ಹುಕ್ಕೇರಿ ಮೊದಲಾದವರು ಮಾತನಾಡಿದರು.

ಕೋರೆಗಾಂವ್‌ ವಿಜಯೋತ್ಸವದಲ್ಲಿ ಮನುವಾದಿಗಳು ಪುಂಡಾಟಿಕೆ ನಡೆಸಿದ್ದಾರೆ. ವಿಚಾರವಾದಿ ಡಾ.ಎಂ. ಎಂ. ಕಲಬುರ್ಗಿ ಹತ್ಯೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ, ವಿಜಯಪುರದ ದಲಿತ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಘಟನೆ ಸೇರಿದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸಾರಿಗೆ, ಸಂಚಾರ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳಿಗೆ ಅಘೋಷಿತ ರಜೆ ನೀಡಲಾಗಿತ್ತು. ಸಾರ್ವಜನಿಕರು ಬಾರದೇ ಸರ್ಕಾರಿ ಕಚೇರಿಗಳು ಭಣಗುಡುತ್ತಿದ್ದವು. ಸದಾ ಜನರಿಂದ ಗಿಜಿಗುಡುತ್ತಿದ್ದ ಪಟ್ಟಣದ ಗಣಪತಿ ಪೇಠ, ಬಸ್‌ ನಿಲ್ದಾಣ ಮೊದಲಾದ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.

ಪುರಸಭೆ ಉಪಾಧ್ಯಕ್ಷ ಸಂದೀಪ ಶೇರಖಾನೆ, ಸದಸ್ಯ ಶಾಮ ರೇವಡೆ, ವಿನೋದ ಮಾಳಗೆ, ಮುಖಂಡರಾದ ರಾಮಾ ಮಾನೆ, ವಿಕ್ರಾಂತ ಮಾನೆ, ಅರವಿಂದ ಘಟ್ಟಿ, ಸುದರ್ಶನ ತಮ್ಮಣ್ಣವರ, ರಾವಸಾಹೇಬ್ ಫಕೀರೆ, ಮಚ್ಚೀದ್ ಬೇಪಾರಿ, ಇಸಾ ನಾಯಿಕವಾಡಿ, ಶ್ರೀನಾಥ ಘಟ್ಟಿ, ಎಂ.ಆರ್.ಮುನ್ನೋಳಿಕರ, ಮತೀನ್ ಮುಜಾವರ, ಸಂಪತ್ ಘಸ್ತೆ, ಅರ್ಜುನ ಮಾನೆ, ಅಶೋಕ ಭಂಡಾರಕರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT