ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಿಲ್ಲಿಸಿ

7

ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಿಲ್ಲಿಸಿ

Published:
Updated:

ಕಾರವಾರ: ‘ಬುಲ್ ಟ್ರಾಲ್ ಮತ್ತು ಲೈಟ್‌ ಫಿಶಿಂಗ್‌ನಿಂದಾಗಿ ಮೀನುಗಳ ಸಂತತಿ ನಾಶವಾಗುತ್ತಿದ್ದು, ಅದನ್ನು ಜಿಲ್ಲೆಯಲ್ಲಿ ಶಾಶ್ವತವಾಗಿ ನಿಷೇಧಿಸಬೇಕು’ ಎಂದು ಒತ್ತಾಯಿಸಿ, ಜಿಲ್ಲಾ ನಾಡ ದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಜಿಲ್ಲೆಯ ಕರಾವಳಿ ತಾಲ್ಲೂಕುಗಳ ಸುಮಾರು ಸಾವಿರಕ್ಕೂ ಅಧಿಕ ಮೀನುಗಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಅವೈಜ್ಞಾನಿಕ ಮೀನುಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮೀನುಗಾರರ ಮುಖಂಡರಾದ ಸದಾನಂದ ಹರಿಕಂತ್ರ, ‘ಕೇಂದ್ರ ಸರ್ಕಾರ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ ಜಿಲ್ಲೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಇದು ಮೀನುಗಳ ಸಂತತಿಗೆ ಮಾರಕವಾಗಿದ್ದು, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬದುಕು ಇದರಿಂದ ಬೀದಿಗೆ ಬರುವಂತಾಗಿದೆ’ ಎಂದು ಹೇಳಿದರು.

‘ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಕರಾವಳಿ ಜಿಲ್ಲೆ ಪ್ರಮುಖ ಪಾತ್ರ ವಹಿಸುತ್ತದೆ. ಲಕ್ಷಾಂತರ ಮೀನುಗಾರರು ಈ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ವೃತ್ತಿಗಳನ್ನು ತ್ಯಜಿಸುವ ಹಂತಕ್ಕೆ ಬಂದು ತಲುಪಿದ್ದಾರೆ’ ಎಂದು ಪರಿಸ್ಥಿತಿ ಬಿಚ್ಚಿಟ್ಟರು.

‘ಕರಾವಳಿ ತಾಲ್ಲೂಕಿನ ಲಕ್ಷಕ್ಕೂ ಅಧಿಕ ಮಂದಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಬಂಡವಾಳಶಾಹಿ ಮೀನುಗಾರರು ಲೈಟ್ ಫಿಶಿಂಗ್ ನಡೆಸುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿರುವವರಿಗೆ ಸಮಸ್ಯೆ ಉಂಟಾಗಿದೆ. ದೋಣಿಗಳಲ್ಲಿ ಹೆಚ್ಚಿನ ಅಶ್ವಶಕ್ತಿಯ ಎಂಜಿನ್ ಅಳವಡಿಕೆ, ಬುಲ್‌ಟ್ರಾಲ್‌ ಮೊದಲಾದ ಅತ್ಯಾಧುನಿಕ ಮೀನುಗಾರಿಕೆಯಿಂದ ಅದೆಷ್ಟೋ ಮೀನಿನ ಸಂತತಿ ನಾಶಗೊಂಡಿದೆ’ ಎಂದು ಅವರು ಹೇಳಿದರು.

ಮತ್ತೊಬ್ಬ ಮುಖಂಡ ಸುಧಾಕರ ತಾರಿ ಮಾತನಾಡಿ, ‘ಪಾಪ್ಲೆಟ್, ಇಸ್ವಾಣ, ಕುರಡಿ, ಗೋಲಿ, ಶಾಡೆ, ತೊರಕೆ, ಹೋಳಾ, ಬೆಳ್ಳಂಜೆ ಮುಂತಾದ ಜಾತಿಯ ಮೀನುಗಳ ಸಂಖ್ಯೆ ಇತ್ತೀಚಿಗೆ ವಿರಳವಾಗಿವೆ’ ಎಂದರು. ‘ಸಾಂಪ್ರದಾಯಿಕ ಮೀನುಗಾರಿಕೆಯಾದ ಏಂಡಿ ಬಲೆ, ರಂಪಣಿ, ಕಂಟ್ಲೆ, ಪಟ್ಟೆಬಲೆ, ಬೀಡುಬಲೆ ಪದ್ಧತಿಗಳು ಕಡಿಮೆಯಾಗಿ ಯಾಂತ್ರೀಕೃತ ಪದ್ಧತಿ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಹಾಗೂ ಜತೆಗೆ ಈ ಲೈಟ್ ಫಿಶಿಂಗ್‌ನಿಂದಾಗಿ ಸಾಂಪ್ರದಾಯಿಕ ಮೀನುಗಾರರಿಗೆ ಮತ್ತಷ್ಟು ಕಂಟಕ ಉಂಟಾಗಿದೆ’ ಎಂದು ಅವರು ದೂರಿದರು.

‘ಬಂಡವಾಳಶಾಹಿಗಳ ಹಪಾಹಪಿ ತನ, ಹಣ ಗಳಿಕೆಯ ಉದ್ಯಮಿಗಳಿಂದ ಮೀನುಗಾರಿಕೆ ಪತನ ಹೊಂದುತ್ತಿದೆ. ಮುಂದೊಂದು ದಿನ ಮೀನುಗಳು ಮಾಯವಾಗಿ, ಜಿಲ್ಲೆಯ ಮೀನುಗಾರಿಕೆ ಹೀಗಿತ್ತು ಎಂದು ಶಾಲೆಗಳಲ್ಲಿ ಪಾಠ ಹೇಳುವ ಪರಿಸ್ಥಿತಿ ಬರಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಸೋಮಯ್ಯ ಹರಿಕಂತ್ರ, ಕೃಷ್ಣ ಹರಿಕಕಂತ್ರ, ದೇವರಾಯ್ ಸೈಲ್ಹಾ ಗೂ ಮಂಕಾಳಿ ಅಂಬಿಗ ಹಾಜರಿದ್ದರು.

ಪರಿಶೀಲಿಸಿ ಕ್ರಮ: ಜಿಲ್ಲಾಧಿಕಾರಿ

ಮೀನುಗಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ನಕುಲ್, ‘ಕೇಂದ್ರ ಸರ್ಕಾರದ ಆದೇಶವನ್ನು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ. ಕಾನೂನು ವಿರುದ್ಧವಾಗಿ ಮೀನುಗಾರಿಕೆ ನಡೆಸುವ ಅನೇಕ ಬೋಟ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ಪಾವತಿಸಿಕೊಳ್ಳಲಾಗಿದೆ. ಆದೇಶ ಮೀರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

* * 

ಕದ್ದುಮುಚ್ಚಿ ಸಮುದ್ರದಲ್ಲಿ ಬುಲ್ ಟ್ರಾಲ್ ಹಾಗೂ ಲೈಟ್‌ ಫಿಶಿಂಗ್ ನಡೆಸುತ್ತಿರುವುದರಿಂದ ತೀರದ ಮೀನುಗಳು ಆಳ ಸಮುದ್ರಕ್ಕೆ ಸೇರಿಕೊಳ್ಳುತ್ತಿವೆ

ಸದಾನಂದ ಹರಿಕಂತ್ರ ಮೀನುಗಾರರ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry