ದೀಪಕ್ ತಾಯಿ ಖಾತೆಗೆ ₹43 ಲಕ್ಷ ನೆರವು

7

ದೀಪಕ್ ತಾಯಿ ಖಾತೆಗೆ ₹43 ಲಕ್ಷ ನೆರವು

Published:
Updated:
ದೀಪಕ್ ತಾಯಿ ಖಾತೆಗೆ ₹43 ಲಕ್ಷ ನೆರವು

ಮಂಗಳೂರು: ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೆ ನೆರವು ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ನೆರವಿನ ಅಭಿಯಾನ ಆರಂಭಿಸಲಾಗಿದ್ದು, ಸೋಮವಾರದವರೆಗೆ ಒಟ್ಟು ₹43 ಲಕ್ಷ ಸಂಗ್ರಹವಾಗಿದೆ.

‘ಕಾಟಿಪಳ್ಳದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿರುವ ದೀಪಕ್‌ ರಾವ್‌ ಅವರ ತಾಯಿ ಪ್ರೇಮಲತಾ ಅವರ ಖಾತೆಗೆ ಈ ಹಣ ಜಮೆಯಾಗಿದ್ದು, ಈ ಖಾತೆಗೆ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆ ಮಾಡಬೇಕಾಗಿದೆ. ಇದೀಗ ಪ್ರೇಮಲತಾ ಅವರ ಹೆಸರಿನಲ್ಲಿ ಪ್ಯಾನ್‌ ಕಾರ್ಡ್‌ ಮಾಡಿಸಲಾಗುತ್ತಿದೆ’ ಎಂದು ಬಿಜೆಪಿ ನಗರ ಉತ್ತರ ಘಟಕದ ಅಧ್ಯಕ್ಷ ಡಾ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

ಬಜರಂಗದಳ, ಬಿಜೆಪಿ, ವಿಎಚ್‌ಪಿ ಕಾರ್ಯಕರ್ತರು, ಸಾಮಾಜಿಕ ಜಾಲತಾಣದ ಮೂಲಕ ದೀಪಕ್‌ ಅವರ ತಾಯಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಅವರ ಬ್ಯಾಂಕ್‌ ಖಾತೆಯ ವಿವರವನ್ನೂ ಹಾಕಿದ್ದರು. ಫೇಸ್‌ಬುಕ್‌ನಲ್ಲಿ ಈ ಪೋಸ್ಟ್‌ ಅನ್ನು ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್‌ ಸಹ ಹಂಚಿಕೊಂಡಿದ್ದರು. ಇದರಿಂದಾಗಿ ನೆರವು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿದೇಶದಲ್ಲಿ ನೆಲೆಸಿರುವವರೂ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುತ್ತಿದ್ದಾರೆ ಎಂದು ದೀಪಕ್‌ ಸ್ನೇಹಿತರು ಹೇಳಿದ್ದಾರೆ.

ಶನಿವಾರದವರೆಗೆ ಒಟ್ಟು ₹31.26 ಲಕ್ಷ ಜಮೆ ಆಗಿತ್ತು. ಸೋಮವಾರ ಸಂಜೆಯವರೆಗೆ ಈ ಮೊತ್ತ ₹43.18 ಲಕ್ಷಕ್ಕೆ ಏರಿದೆ.

‘ಈ ಕುರಿತು ಯಾವುದೇ ಸಭೆ ಮಾಡಿಲ್ಲ. ದೀಪಕ್ ರಾವ್ ಅಂತ್ಯಕ್ರಿಯೆ ಮುಗಿದ ನಂತರ ಸಾಮಾಜಿಕ ಜಾಲತಾಣದ ಮೂಲಕ ‘ಸಪೋರ್ಟ್‌ ದೀಪಕ್‌ ಫ್ಯಾಮಿಲಿ’ ಹ್ಯಾಶ್‌ಟ್ಯಾಗ್‌ನಿಂದ ಈ ಅಭಿಯಾನ ಆರಂಭಿಸಲಾಗಿದ್ದು, ಜನರಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ₹5 ಲಕ್ಷ ಪರಿಹಾರವನ್ನು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿತರಿಸಲಿದ್ದಾರೆ. ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್‌ ಕೂಡ ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ₹10 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಡಾ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈಗಲೂ ಈ ಪೋಸ್ಟ್‌ ಹರಿದಾಡುತ್ತಿದ್ದು, ನೆರವು ನೀಡಲು ಬ್ಯಾಂಕ್‌ ಖಾತೆಯ ವಿವರವನ್ನು ಹಾಕಲಾಗಿದೆ. ನೆರವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry