ಗುರುವಾರ , ಜೂನ್ 24, 2021
27 °C
ಟ್ಯಾಕ್ಸಿ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವ ಸರ್ಕಾರದ ನಿರ್ಧಾರದ ಸಾಧಕ–ಬಾಧಕ

ಮೂರು ಪಟ್ಟು ದುಬಾರಿಯಾಗಲಿದೆ ಟ್ಯಾಕ್ಸಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ಪಟ್ಟು ದುಬಾರಿಯಾಗಲಿದೆ ಟ್ಯಾಕ್ಸಿ ಸೇವೆ

ಒಂದು ಕಾಲ ಇತ್ತು. ಟ್ಯಾಕ್ಸಿಗಳಲ್ಲಿ ಹತ್ತುವವರು ಎಂದರೆ ಅವರು ಭಾರೀ ಶ್ರೀಮಂತರೇ ಆಗಿರಬೇಕು ಎಂದು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಪೂರ್ಣ ಉಲ್ಪಾಪಲ್ಟಾ ಆಗಿದೆ. ಅತ್ಯಂತ ಜನಪ್ರಿಯ ಸಮೂಹ ಸಾರಿಗೆಗಳಲ್ಲಿ ಟ್ಯಾಕ್ಸಿಗಳೂ ಸೇರಿಕೊಂಡಿವೆ. ಅದರಲ್ಲೂ ಬಸ್‌ ಪ್ರಯಾಣ ದರ ದುಬಾರಿ ಆಗುತ್ತಿದ್ದಂತೆ ಜನ ಟ್ಯಾಕ್ಸಿಗಳಿಗೆ ಮಾರು ಹೋಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕಳೆದ ಅಕ್ಟೋಬರ್‌ ಅಂತ್ಯದವರೆಗೆ ನೋಂದಣಿಯಾಗಿದ್ದ ವಿವಿಧ ಬಗೆಯ ಸಾರಿಗೆ ವಾಹನಗಳು 17.52 ಲಕ್ಷ. ಈ ಪೈಕಿ ಟ್ಯಾಕ್ಸಿಗಳ ಸಂಖ್ಯೆಯೇ ಸುಮಾರು 2.5 ಲಕ್ಷ ಎನ್ನುವುದೇ ಇದಕ್ಕೆ ಸಾಕ್ಷಿ.

ಪ್ರಯಾಣಿಸುವವರಿಗೆ ತುಂಬ ಅನುಕೂಲ ಮಾಡಿಕೊಟ್ಟಿದ್ದ, ತುಂಬ ಜನಪ್ರಿಯವೂ ಆಗಿದ್ದ ಟ್ಯಾಕ್ಸಿ ಸೇವೆಗಳ ಮೇಲೆ ಈಗ ನಮ್ಮ ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ. ಟ್ಯಾಕ್ಸಿ ಪ್ರಯಾಣದ ದರವನ್ನು ಈಗಿರುವುದಕ್ಕಿಂತ ಮೂರು ಪಟ್ಟು ಹೆಚ್ಚಿಸಲು ಮುಂದಾಗಿದೆ.

ಟ್ಯಾಕ್ಸಿ ಸೇವೆ ಜನಪ್ರಿಯತೆಗೆ ಕಾರಣವೇನು?

4–5 ಜನ ಇದ್ದರಂತೂ ಬಸ್‌ನಲ್ಲಿ ಹೋಗುವುದಕ್ಕಿಂತಲೂ ಟ್ಯಾಕ್ಸಿಯಲ್ಲಿ ಹೋಗುವುದೇ ಅಗ್ಗ. ಅನುಕೂಲ ಕೂಡ. ಮೊಬೈಲ್ ಆ್ಯಪ್ ಮೂಲಕ ಬುಕ್‌ ಮಾಡಬಹುದಾದ ಟ್ಯಾಕ್ಸಿ ಸೇವೆಗಳು (ಓಲಾ, ಉಬರ್‌ ಮುಂತಾದವು) ಶುರುವಾದ ನಂತರ ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದರ ಪರಿಕಲ್ಪನೆಯೇ ಬದಲಾಗಿದೆ. ಬೆಂಗಳೂರಿನಲ್ಲಂತೂ ಸ್ವಂತ ಕಾರು ಇದ್ದವರು ಕೂಡ ಟ್ಯಾಕ್ಸಿಯಲ್ಲಿಯೇ ಪ್ರಯಾಣಿಸಲು ಹೆಚ್ಚು ಇಷ್ಟಪಡುತ್ತಾರೆ. ಈಗ ಈ ಪ್ರವೃತ್ತಿ ಇನ್ನಿತರ ನಗರಗಳಿಗೂ ಹರಡಿದೆ. ಸುರಕ್ಷತೆ, ಸ್ಪರ್ಧಾತ್ಮಕ ದರ, ಮನೆ ಬಾಗಿಲಲ್ಲೇ ಸೇವೆ, ನಗದು ಮಾತ್ರವಲ್ಲದೆ ಡಿಜಿಟಲ್‌ ವಿಧಾನದ ಮೂಲಕವೂ ಹಣ ಪಾವತಿಸಲು ಸುಲಭ ವ್ಯವಸ್ಥೆ ಮುಂತಾದ ಅಂಶಗಳು ಇದಕ್ಕೆ ಕಾರಣ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ ಚಾಲಕ ಮತ್ತು ಗ್ರಾಹಕ ಇಬ್ಬರ ಮಾಹಿತಿಗಳೂ ಪರಸ್ಪರರಿಗೆ ಲಭ್ಯ. ಜಿಪಿಎಸ್‌ ಇರುವುದರಿಂದ ಅದು ಎಲ್ಲಿ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬುದರ ಮೇಲೆ ನಿಗಾ ಇಡಬಹುದು. ಹೀಗಾಗಿ ಒಂಟಿ ಮಹಿಳಾ ಪ್ರಯಾಣಿಕರಲ್ಲೂ ಇಂತಹ ಟ್ಯಾಕ್ಸಿಗಳು ಜನಪ್ರಿಯವಾಗಿವೆ.

ಸರ್ಕಾರ ದರ ನಿಗದಿ ಮಾಡಿದರೆ ತಪ್ಪೇನು?

ತಪ್ಪೇನೂ ಇಲ್ಲ. ಹ್ಯಾಚ್‌ಬ್ಯಾಕ್‌ ಕಾರುಗಳು, ಸಣ್ಣ ಕಾರುಗಳು, ಐಷಾರಾಮಿ ಕಾರುಗಳು... ಎ.ಸಿ (ಹವಾನಿಯಂತ್ರಿತ), ನಾನ್‌ ಎ.ಸಿ (ಹವಾನಿಯಂತ್ರಣ ಇಲ್ಲದ)... ಹೀಗೆ ಅವುಗಳ ಸೌಕರ್ಯ ಆಧರಿಸಿ ದರ ನಿಗದಿಗೆ ಯಾರ ತಕರಾರೂ ಇಲ್ಲ. ಆದರೆ ಈ ಸಲ ಅದು ಮಾನದಂಡವನ್ನು ಬದಲಿಸಿದೆ. ಎ.ಸಿ– ನಾನ್‌ ಎ.ಸಿ ಯಾವುದೇ ಇದ್ದರೂ ಕಾರಿನ ಬೆಲೆ ಮೇಲೆ ಬಾಡಿಗೆ ದರ ನಿರ್ಧಾರವಾಗುತ್ತದೆ. ಅದಕ್ಕಾಗಿ ಟ್ಯಾಕ್ಸಿಗಳನ್ನು ₹ 4 ಲಕ್ಷ, ₹ 6 ಲಕ್ಷ, ₹ 8 ಲಕ್ಷ ಮತ್ತು ₹ 12 ಲಕ್ಷದ ಬೆಲೆಯ ಕಾರುಗಳು ಎಂದು ವರ್ಗೀಕರಿಸಿದೆ. ಅದು ವಿವಾದದ ವಿಷಯವಾಗಿದೆ. ಎ.ಸಿ ಬಳಸಿದರೂ ಅದೇ ದರ, ಬಳಸದೇ ಇದ್ದರೂ ಅದೇ ದರ. ಈ ರೀತಿಯ ದರ ನಿಗದಿ ಅವೈಜ್ಞಾನಿಕ ಎಂಬುದು ಟ್ಯಾಕ್ಸಿ ಮಾಲೀಕರ ಆಕ್ಷೇಪ.

ದರ ನಿಗದಿ ವಿಷಯದಲ್ಲಿ ಸರ್ಕಾರ ಎಡವಿದೆಯೇ?

ಹೌದು. ಏಕೆಂದರೆ ಗರಿಷ್ಠ ದರ ಎಷ್ಟಿರಬೇಕು ಎಂದು ನಿಗದಿ ಮಾಡುವುದು ನ್ಯಾಯ, ಅಪೇಕ್ಷಣೀಯ. ಪೀಕ್‌ ಅವರ್‌, ಬೇಡಿಕೆ ಹೆಚ್ಚಿದೆ ಎಂಬ ನೆಪದಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಅನೇಕ ಸಲ ದರವನ್ನು ಸಿಕ್ಕಾಪಟ್ಟೆ ಹೆಚ್ಚಿಸುತ್ತವೆ. ಅವಕ್ಕೆ ಕಡಿವಾಣ ಹಾಕಲು ಗರಿಷ್ಠ ದರ ನಿಗದಿ ಬೇಕು. ಆದರೆ ಸರ್ಕಾರ ಈ ಸಲ ಕನಿಷ್ಠ ದರವನ್ನೂ ನಿಗದಿ ಮಾಡಲು ಹೊರಟಿದೆ. ಅಂದರೆ ಕಿಲೊಮೀಟರ್‌ಗೆ ಕನಿಷ್ಠ ಎಷ್ಟಿರಬೇಕು ಎಂದು. ಅದು ಅಸಂಬದ್ಧ.

ಕನಿಷ್ಠ ದರ ನಿಗದಿಯಿಂದ ಏನಾಗುತ್ತದೆ?

ಈಗ ಟ್ಯಾಕ್ಸಿ ದರಗಳು ಪ್ರಯಾಣಿಕರ ಕೈಗೆಟಕುವಂತಿವೆ. ದರ ವಿಪರೀತ ಹೆಚ್ಚಿದರೆ ಜನ ತಾವೇತಾವಾಗಿ ಟ್ಯಾಕ್ಸಿಗಳಿಂದ ದೂರ ಸರಿಯುತ್ತಾರೆ. ಅದು ಟ್ಯಾಕ್ಸಿ ಮಾಲೀಕರಿಗೂ ಗೊತ್ತು. ಅವರು ನಷ್ಟ ಮಾಡಿಕೊಂಡು ಟ್ಯಾಕ್ಸಿ ಓಡಿಸಬೇಕು ಎಂದು ಯಾರೂ ಬಯಸುವುದಿಲ್ಲ. ಆದರೆ ಕನಿಷ್ಠ ದರವನ್ನು ಸರ್ಕಾರ ವಿಪರೀತ ಹೆಚ್ಚಿಸಿದರೆ ಟ್ಯಾಕ್ಸಿಗಳಿಗೆ ಬೇಡಿಕೆ ಏಕಾಏಕಿ ಕುಸಿಯುತ್ತದೆ. ಅದು ಸರಣಿ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಅಷ್ಟಕ್ಕೂ ಒಂದು ಪ್ರಶ್ನೆ. ಕಿಲೊಮೀಟರ್‌ಗೆ ಎಷ್ಟು ದರ ಬಂದರೆ ಖರ್ಚು ಗಿಟ್ಟುತ್ತದೆ ಎಂಬುದು ಸರ್ಕಾರಕ್ಕಿಂತಲೂ ಟ್ಯಾಕ್ಸಿ ಓಡಿಸುವವರಿಗೆ ಚೆನ್ನಾಗಿ ಗೊತ್ತು. ಅವನ್ನೆಲ್ಲ ಲೆಕ್ಕ ಹಾಕಿಯೇ ಅವರು ದರ ನಿಗದಿಪಡಿಸುತ್ತಾರೆ. ಇಂಧನ ದರಕ್ಕೆ ಅನುಗುಣವಾಗಿ ಅವರೂ ಆಗಾಗ ದರ ಹೆಚ್ಚೂ–ಕಡಿಮೆ ಮಾಡುತ್ತಾರೆ. ಹೀಗಿರುವಾಗ ‘ನೀವು ಕಾರು ಹತ್ತಿದರೆ ಕಿಲೊಮೀಟರ್‌ಗೆ ಕನಿಷ್ಠ ಇಂತಿಷ್ಟು ಬಾಡಿಗೆ ಕೊಡಲೇಬೇಕು’ ಎಂದು ಸರ್ಕಾರವೇ ಏಕಪಕ್ಷೀಯವಾಗಿ ನಿರ್ಧರಿಸಿ ಪ್ರಯಾಣಿಕರಿಗೆ ಕಡ್ಡಾಯ ಮಾಡುವುದು ಜನವಿರೋಧಿ. ಅದು ಸರ್ಕಾರದ ಕೆಲಸವೂ ಅಲ್ಲ. ಗರಿಷ್ಠ ದರ ಮಿತಿಗಷ್ಟೇ ಅದು ಸೀಮಿತವಾಗಿರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.