ಯೂಸುಫ್‌ ಪಠಾಣ್‌ ಅಮಾನತು

7
ಕೆಮ್ಮಿನ ಔಷಧಿಯಲ್ಲಿದ್ದ ನಿಷೇಧಿತ ಮದ್ದು

ಯೂಸುಫ್‌ ಪಠಾಣ್‌ ಅಮಾನತು

Published:
Updated:
ಯೂಸುಫ್‌ ಪಠಾಣ್‌ ಅಮಾನತು

ನವದೆಹಲಿ (ರಾಯಿಟರ್ಸ್‌/ಎಎಫ್‌ಪಿ/ಪಿಟಿಐ): ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಮೇಲೆ ಮಂಗಳವಾರ ಐದು ತಿಂಗಳ ಅಮಾನತು ಶಿಕ್ಷೆ ವಿಧಿಸಿದೆ. ಆದರೆ, ಅವರ ಶಿಕ್ಷೆಯ ಅವಧಿಯು ಇದೇ 14ರಂದು ಮಧ್ಯರಾತ್ರಿ ಕೊನೆಯಾಗಲಿದೆ!

2017ರ ಮಾರ್ಚ್‌ 16 ರಂದು ನಡೆದಿದ್ದ ಬರೋಡ ಮತ್ತು ತಮಿಳುನಾಡು ನಡುವಣ ದೇಶಿ ಟ್ವೆಂಟಿ–20 ಟೂರ್ನಿಯ ಪಂದ್ಯದ ವೇಳೆ ಯೂಸುಫ್‌ ಅವರಿಂದ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ಪಠಾಣ್‌ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿದ್ದ ಕಾರಣ ಅಕ್ಟೋಬರ್‌ 28ರಿಂದ ತಾತ್ಕಾಲಿಕವಾಗಿ ಅಮಾನತು ಹೇರಲಾಗಿತ್ತು. ಆದರೆ ಈಗ ಬಿಸಿಸಿಐ ಅಮಾನತು ಶಿಕ್ಷೆಯ ದಿನಾಂಕವನ್ನು ಹಿಂದೂಡಿದೆ. ಇದರ ಪ್ರಕಾರ 2017ರ ಆಗಸ್ಟ್‌ 15ರಿಂದ ಶಿಕ್ಷೆ ಜಾರಿಯಾಗಿ, 2018ರ ಜನವರಿ 14ರಂದು ಕೊನೆಯಾಗುವುದು.  ಜನವರಿ 15ರಿಂದ ಯೂಸುಫ್‌, ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಬಹುದು.

‘ಯೂಸುಫ್‌ ಅವರಿಂದ ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ  ‘ಟರ್ಬ್ಯುಟಾಲಿನ್‌’ ಮದ್ದಿನ ಅಂಶ ಪತ್ತೆಯಾಗಿದೆ. ವಾಡಾ ಇದನ್ನು ನಿಷೇಧಿತ ಉದ್ದೀಪನಾ ಮದ್ದುಗಳ ಪಟ್ಟಿಗೆ ಸೇರಿಸಿದೆ. ಕೆಮ್ಮಿನ ಶಮನಕ್ಕಾಗಿ ಸೇವಿಸುವ ಔಷಧಿಯಲ್ಲಿ ಸಾಮಾನ್ಯವಾಗಿ ‘ಟರ್ಬ್ಯುಟಾಲಿನ್‌’ ಮದ್ದಿನ ಅಂಶ ಇರುತ್ತದೆ. ಇದು ಯೂಸುಫ್‌ ಅವರ ದೇಹದಲ್ಲಿ ಪತ್ತೆಯಾಗಿದೆ. ಅವರು ಉದ್ದೀಪನಾ ಮದ್ದು ತಡೆ ಆಯೋಗದ (ಎಡಿಆರ್‌ವಿ) ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಐದು ತಿಂಗಳ ಅಮಾತನು ಶಿಕ್ಷೆ ವಿಧಿಸಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಉಸಿರಾಟದ ತೊಂದರೆ ಇದ್ದ ಕಾರಣ ವೈದ್ಯರ ಸಲಹೆ ಮೇರೆಗೆ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದರಲ್ಲಿ ‘ಟರ್ಬ್ಯುಟಾಲಿನ್‌’ ಅಂಶ ಇರುವುದು ತಮಗೆ ಗೊತ್ತಿರಲಿಲ್ಲ. ಸಾಮರ್ಥ್ಯ ವೃದ್ಧಿಯ ಉದ್ದೇಶದಿಂದ ತಾನು ಈ ಮದ್ದು ಸೇವಿಸಿಲ್ಲ ಎಂದು ವಿಚಾರಣೆ ವೇಳೆ ಯೂಸುಫ್‌ ಹೇಳಿದ್ದಾರೆ. ಜೊತೆಗೆ ತಮ್ಮಿಂದ ತಪ್ಪಾಗಿದ್ದರೆ ಶಿಕ್ಷೆ ಎದುರಿಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ.

‘ಅವರ ವಿವರಣೆ ನಮಗೆ ತೃಪ್ತಿ ನೀಡಿದೆ. ಈ ವಿಷಯದಲ್ಲಿ ತಜ್ಞರ ಸಲಹೆಯನ್ನು ಪಡೆದಿದ್ದೇವೆ. ಆರಿವಿದ್ದೋ ಇಲ್ಲದೇಯೋ ಅವರಿಂದ ತಪ್ಪಾಗಿದೆ. ಹೀಗಾಗಿ ಐದು ತಿಂಗಳ ಅಮಾನತು ಶಿಕ್ಷೆ  ಹಾಕಲಾಗಿದೆ. ಶಿಕ್ಷೆಯ ಅವಧಿಯು ಆಗಸ್ಟ್‌ 15ರಿಂದ ಆರಂಭವಾಗಿತ್ತು. ಇದೇ 14ಕ್ಕೆ ಮುಗಿಯಲಿದೆ’ ಎಂದು ಬಿಸಿಸಿಐ ತಿಳಿಸಿದೆ.

‘ಭಾರತ ಮತ್ತು ಬರೋಡ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಸಾಮರ್ಥ್ಯ ವೃದ್ಧಿಗಾಗಿ ನಾನು ಇದುವರೆಗೂ ಯಾವುದೇ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿಲ್ಲ. ಇನ್ನು ಮುಂದೆ ವೈದ್ಯರು ಬರೆದುಕೊಡುವ ಔಷಧಿ ಸೇವಿಸುವ ಮುನ್ನ ಅದರಲ್ಲಿ ಉದ್ದೀಪನ ಮದ್ದಿನ ಅಂಶ ಇದೆಯೊ ಇಲ್ಲವೊ ಎಬುದನ್ನು ಪರೀಕ್ಷಿಸಿ ತೆಗೆದುಕೊಳ್ಳುತ್ತೇನೆ’ ಎಂದು ಪಠಾಣ್‌ ಹೇಳಿದ್ದಾರೆ. ಆಲ್‌ರೌಂಡರ್‌ ಯೂಸುಫ್‌, 57 ಅಂತರರಾಷ್ಟ್ರೀಯ ಏಕದಿನ ಮತ್ತು 22 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. 2012ರ ನಂತರ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿಲ್ಲ. ದೇಶಿ ಟೂರ್ನಿಗಳಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುವ ಅವರು ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಡ್‌ ತಂಡದಲ್ಲಿ ಆಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry