ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ: ಸಾರ್ವಜನಿಕ ಸಾರಿಗೆಯೇ ಪರಿಹಾರ

ಸಂವಾದದಲ್ಲಿ ನಗರ ಯೋಜನಾ ತಜ್ಞ ವಿ.ರವಿಚಂದರ್‌
Last Updated 9 ಜನವರಿ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಬೃಹತ್‌ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ ಮಾಡುವುದೇ ಸೂಕ್ತ ಪರಿಹಾರ ಮಾರ್ಗ’ ಎಂದು ಫೀಡ್‌ಬ್ಯಾಕ್‌ ಕನ್ಸಲ್ಟಿಂಗ್‌ ಅಧ್ಯಕ್ಷ ವಿ.ರವಿಚಂದರ್‌ ಅಭಿಪ್ರಾಯಪಟ್ಟರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಮಹಿಳಾ ಘಟಕ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೆಂಗಳೂರಿನ ಸಮಸ್ಯೆಗಳು’ ಸಂವಾದದಲ್ಲಿ ಅವರು ಮಾತನಾಡಿದರು.

‘ಜನರು ಸ್ವಂತ ವಾಹನ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ನನ್ನೊಬ್ಬನ ನಿರ್ಧಾರದಿಂದ  ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುತ್ತದೆಯೇ ಎನ್ನುವ ನಕರಾತ್ಮಕ ಭಾವನೆ ಸಲ್ಲದು. ಸಣ್ಣ ಸುಧಾರಣೆಗಳೇ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತವೆ’ ಎಂದರು.

ಬೆಂಗಳೂರಿಗಿಂತ ಎರಡುಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವ ಮುಂಬೈ ಮಹಾನಗರದಲ್ಲಿ ಸುಮಾರು 40 ಲಕ್ಷ ವಾಹನಗಳಿವೆ. ಆದರೆ, ನಮ್ಮ ಬೆಂಗಳೂರಿನಲ್ಲಿ 72 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಎಲ್ಲ ರಸ್ತೆಗಳೂ ವಾಹನ ಸಂಚಾರ ದಟ್ಟಣೆಯಿಂದ ನಲುಗುತ್ತಿವೆ. ಇದು ಕಳವಳಪಡುವ ಸಂಗತಿ ಎಂದು ಸಿಟಜನ್‌ ಫಾರ್‌ ಬೆಂಗಳೂರು ಸಂಘಟನೆ ಸಹಸಂಸ್ಥಾಪಕಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಹೇಳಿದರು.

‘ನಗರವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೋರಾಟಗಳಿಗೆ ಸಾಮಾಜಿಕ ಜಾಲತಾಣಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಹೋರಾಟಗಳ ದಿಕ್ಕುತಪ್ಪಿಸಲು ಕೆಲವರು ತಂತ್ರ ಹೆಣೆಯುತ್ತಾರೆ. ಆದರೆ, ನಮ್ಮ ಉದ್ದೇಶಗಳು ಎಂದಿಗೂ ಪರಿಶುದ್ಧವಾಗಿರಬೇಕು.  ಹೋರಾಟದಲ್ಲಿ ಸ್ವಾರ್ಥವಿರಬಾರದು. ಸಣ್ಣ ಸಣ್ಣ ವಿಜಯಗಳನ್ನು ನಾವು ಸಂಭ್ರಮಿಸಬೇಕು. ಆಗ ಯಾವುದೇ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು ಮತ್ತು ಹೋರಾಟದಲ್ಲಿ ಗುರಿಸಾಧಿಸಬಹುದು’ ಎಂದರು.

ಸಾರ್ವಜನಿಕ ಹಿತಾಸಕ್ತಿ ಹೊಂದಿರದ ಉಕ್ಕಿನ ಸೇತುವೆ (ಬಸವೇಶ್ವರ ವೃತ್ತ–ಹೆಬ್ಬಾಳ ನಡುವೆ) ಯೋಜನೆ ವಿರುದ್ಧದ ಹೋರಾಟಕ್ಕೆ ಸುಮಾರು 20,000 ಜನರು ಕೈಜೋಡಿಸಿದ್ದರು. ನಾಗರಿಕರ ಹೋರಾಟದ ಫಲವಾಗಿ ಈ ಯೋಜನೆ ರದ್ದಾಯಿತು. ಇದರಿಂದ ನಗರದ ಹೃದಯ ಭಾಗದ ಹಸಿರು ವಲಯ ಮಾತ್ರವಷ್ಟೇ ಅಲ್ಲ, ಬೆಂಗಳೂರಿನ ಪಾರಂಪಾರಿಕ ಸ್ವರೂಪವೂ ಉಳಿಯಿತು. ಅಭಿವೃದ್ಧಿಯ ನೆಪದಲ್ಲಿ ನಗರದ ಪಾರಂಪಾರಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ರಾಜ್ಯಸಭೆ ಸದಸ್ಯ ಪ್ರೊ.ಎಂ.ವಿ.ರಾಜೀವ್‌ಗೌಡ, ‘ಸಬ್‌ ಅರ್ಬನ್‌ ರೈಲು ಸೌಲಭ್ಯವು ವೈಟ್‌ಫೀಲ್ಡ್‌– ಬೈಯಪ್ಪನಹಳ್ಳಿಯವರೆಗಿನ ಪ್ರಯಾಣ ಅವಧಿ ಕಡಿಮೆ ಮಾಡಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತಿದೆ. ಯಶವಂತಪುರದಿಂದ ವೈಟ್‌ಫೀಲ್ಡ್‌ಗೆ ಕೇವಲ 20 ನಿಮಿಷಗಳಲ್ಲಿ ರೈಲಿನಲ್ಲಿ ಸಂಚರಿಸಲು ಸಾಧ್ಯವಿದೆ. ಆದರೂ ರಸ್ತೆ ಮೂಲಕ ಸಂಚರಿಸಿ ಕನಿಷ್ಠ 2 ಗಂಟೆ ವ್ಯರ್ಥ ಮಾಡುವ ಪರಿಸ್ಥಿತಿ ಇರುವುದು ಬೇಸರದ ಸಂಗತಿ’ ಎಂದರು.

'ಇಂದು ಮೆಟ್ರೊದಿಂದ ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗಿದೆ. ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸುಲಭವಾಗಿ ತಲುಪಬಹುದು. ಆದರೆ, ಮೆಟ್ರೊ ನಿಲ್ದಾಣ ತಲುಪಲು ಪ್ರಯಾಸಪಡಬೇಕಿದೆ. ಅಷ್ಟು ಸಂಚಾರ ದಟ್ಟಣೆ ಇಲ್ಲಿದೆ’ ಎಂದರು.

***

ಎಷ್ಟೇ ಅಭಿವೃದ್ಧಿ ಕೆಲಸಗಳು ಆಗಿದ್ದರೂ ಬೆಂಗಳೂರು ಗತವೈಭವವನ್ನು ಅಷ್ಟಾಗಿ ಕಳೆದುಕೊಂಡಿಲ್ಲ
– ಪ್ರೊ.ಎಂ.ವಿ.ರಾಜೀವ್‌ಗೌಡ, ರಾಜ್ಯಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT