12ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ

7

12ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ

Published:
Updated:

ಶ್ರೀರಂಗಪಟ್ಟಣ: ಬೇಸಿಗೆ ಬೆಳೆಗೆ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಆರಂಭವಾದ ರೈತರ ಧರಣಿ ಮಂಗಳವಾರವೂ ಮುಂದುವರೆದಿದ್ದು, ಜ.12ರ ಒಳಗೆ ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ರೈತರು ತಿಳಿಸಿದರು. ಇಲ್ಲಿನ ಮಿನಿ ವಿಧಾನಸೌಧ ಎದುರು ಮಂಗಳವಾರ ಬೆಳಿಗ್ಗೆ 10.30ರಿಂದ ಸಂಜೆ 5 ರವರೆಗೆ ರೈತರು ಧರಣಿ ನಡೆಸಿದರು.

ಸರ್ಕಾರ, ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ‘ರೈತರು ಮೂರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ರೈತರ ಪರಿಸ್ಥಿತಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿದೆ. ಕೆಲವು ದಿನಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಬೇಸಿಗೆ ಬೆಳೆಗೆ ನೀರು ಕೊಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಈಗ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರು ಮಾತಿಗೆ ತಪ್ಪಬಾರದು’ ಎಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸ್ವಾಮಿಗೌಡ ಹೇಳಿದರು.

‘ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಿಹಾರ ನೀಡಲಾಗಿದೆ. ಆದರೆ ಮಂಡ್ಯ ಜಿಲ್ಲೆ ರೈತರ ಬಗ್ಗೆ ಸರ್ಕಾರ ಮಲತಾಯಿಧೋರಣೆ ಅನುಸರಿಸುತ್ತಿದೆ. ನೀರು ಹರಿಸುವ ಮತ್ತು ಬೆಳೆ ನಷ್ಟ ಪರಿಹಾರದ ವಿತರಿಸುವ ಬಗ್ಗೆ ಇನ್ನು ಎರಡು ದಿನಗಳ ಒಳಗೆ ಸ್ಪಷ್ಟಪಡಿಸಿಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ’ ಎಂದು ಸಂಘದ ಪ್ರಾಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಹೇಳಿದರು.

‘ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ನೀಡುತ್ತಿವೆ. ಆದರೆ ಮಂಡ್ಯ ಹಾಲು ಒಕ್ಕೂಟ ಪ್ರತಿ ಲೀಟರ್‌ ಹಾಲಿಗೆ ₹ 3.85 ಪೈಸೆ ದರ ಕಡಿತ ಮಾಡಿ ಅನ್ಯಾಯ ಮಾಡಿದೆ. ಈ ಲೋಪ ಸರಿಪಡಿಸಬೇಕು’ ಎಂದು ಕೂಡಲಕುಪ್ಪೆ ನಾಗೇಂದ್ರಸ್ವಾಮಿ ಒತ್ತಾಯಿಸಿದರು. ಬಿ.ಎಸ್‌. ರಮೇಶ್‌, ಪುರುಷೋತ್ತಮ, ಜಯರಾಮೇಗೌಡ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry