ಎಂ.ಕೋಡಿಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ

7

ಎಂ.ಕೋಡಿಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ

Published:
Updated:
ಎಂ.ಕೋಡಿಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ

‌ಬಾಲು ಮಚ್ಚೇರಿ

ಕಡೂರು: ಬೇಸಿಗೆ ಆರಂಭವಾಗಲು ಒಂದೆರಡು ತಿಂಗಳು ಇರುವಾಗಲೇ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಾಲ್ಲೂಕಿನ ಎಂ.ಕೋಡಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದ್ದು. ಜನರು ಪರಿತಪಿಸುವಂತಾಗಿದೆ.

ಕಡೂರಿನಿಂದ 4 ಕಿ.ಮೀ.ದೂರದಲ್ಲಿರುವ ಎಂ.ಕೋಡಿಹಳ್ಳಿ ಗ್ರಾಮ ಸುಮಾರು 300 ಮನೆಗಳಿರುವ ಗ್ರಾಮ. ಇಲ್ಲಿ ಲಂಬಾಣಿ ಜನಾಂಗದವರು ಹೆಚ್ಚಿದ್ದು. ಈ ಹಿಂದೆ ಕೋಡಿಹಳ್ಳಿ ಎಂಬ ಹೆಸರನ್ನು ಬದಲಾಯಿಸಿ ಗಂಗಾನಗರ ಎಂದು ಹೆಸರಿಡಲಾಗಿದೆ. ಈ ಗ್ರಾಮದಲ್ಲಿ ಅಂಗನವಾಡಿ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಒಂದು ವರ್ಷದಿಂದ ಕುಡಿಯುವ ನೀರಿನ ತೀವ್ರ ಅಭಾವದಿಂದಾಗಿ ಜನರು ಕಂಗೆಟ್ಟಿದ್ದಾರೆ.

ಮಲ್ಲೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 2 ತಿಂಗಳ ಹಿಂದಿನ ತನಕ ಪ್ರತಿದಿನ ಟ್ಯಾಂಕರ್‍ನಲ್ಲಿ ನೀರು ನೀಡಲಾಗುತ್ತಿತ್ತು. ಈ ಊರಿಗೆ ಇರುವ ಕಿರು ನೀರು ಸರಬರಾಜು ಯೋಜನೆಯ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ನಿಂತು ಹೋಗುವ ಪರಿಸ್ಥಿತಿ ಬಂದಾಗ ಟ್ಯಾಂಕರ್ ಮೂಲಕ ನೀಡುತ್ತಿದ್ದ ನೀರೇ ಇಲ್ಲಿಯ ಜನಗಳಿಗೆ ಆಧಾರವಾಗಿತ್ತು.

ಈಗ ಟ್ಯಾಂಕರ್ ಮೂಲಕ ನೀರು ಕೊಡುವುದನ್ನು ಗ್ರಾಮ ಪಂಚಾಯಿತಿ ಸ್ಥಗಿತಗೊಳಿಸಿದ್ದು,  ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದವರಿಗೆ ನಿಗದಿಯಾದ ಹಣವನ್ನು ಪಾವತಿಸಿಲ್ಲ ಎಂಬುದು ಇದಕ್ಕೆ ಕಾರಣ. ಕೇವಲ ಕೋಡಿಹಳ್ಳಿಯಲ್ಲಿ ನೀರು ಸರಬರಾಜು ಮಾಡಿದವರಿಗೆ ₹2 ಲಕ್ಷಕ್ಕೂ ಹೆಚ್ಚು ಬಾಕಿ ಇದೆ. ಹಣ ಪಾವತಿಯಾಗಿಲ್ಲ ಎಂದು ನೀರು ಕೊಡುತ್ತಿದ್ದುದನ್ನು ಟ್ಯಾಂಕರ್ ಮಾಲೀಕರು ಸ್ಥಗಿತಗೊಳಿಸಿದ್ದಾರೆ.

ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾದ ಗ್ರಾಮ ಪಂಚಾಯಿತಿ ಕೋಡಿಹಳ್ಳಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಎಂಬ ವಿಚಾರವನ್ನು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಮುಖೇನ ತಿಳಿಸಿ ಸುಮ್ಮನಾಗಿದ್ದಾರೆ. ಇತ್ತ ಎಂ.ಕೋಡಿಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ತ್ರೀಫೇಸ್ ವಿದ್ಯುತ್ ಬಂದಾಗ ಕಿರು ನೀರು ಸರಬರಾಜು ಮಾಡುವ ಕೊಳವೆ ಬಾವಿ ಚಾಲು ಆಗಿ ಕೇವಲ ಅರ್ಧಗಂಟೆ ಮಾತ್ರ ನೀರು ಬರುತ್ತದೆ. ಇದಕ್ಕಾಗಿ ನಲ್ಲಿಗಳ ಮುಂದೆ ಬೆಳಿಗ್ಗೆಯೇ ಕೊಡಗಳ ಸಾಲು ಇರುತ್ತದೆ.

ನೀರು ಬರುವ ಸಮಯದಲ್ಲಿ ಜಗಳವಾಗುವುದು ಸಾಮಾನ್ಯ. ಜಾನುವಾರುಗಳ ಸ್ಥಿತಿಯಂತೂ ಚಿಂತಾಜನಕ. ಸುಗ್ಗಿ ಕಾಲವಾದ್ದರಿಂದ ಖಣ ಬಳಿಯಲು ಸಹ ನೀರಿಲ್ಲದೇ ರೈತರು ಕಂಗೆಟ್ಟಿದ್ದಾರೆ.

‘ಬೆಳಿಗ್ಗೆ ಕೂಲಿಗೆ ಹೋದರೆ ಸಂಜೆ ಬರುತ್ತೇವೆ, ಆಗ ನಮಗೆ ನೀರು ಸಿಗುವುದಿಲ್ಲ. ಟ್ಯಾಂಕರ್ ನೀರು ಬರುತ್ತಿಲ್ಲ. ಅನಿವಾರ್ಯವಾಗಿ ಒಂದು ಕೊಡ ಕುಡಿಯುವ ನೀರಿಗೆ ₹10 ನೀಡಿ ಪಡೆಯುತ್ತಿದ್ದೇವೆ’ ಎಂದು ಎಂ. ಕೋಡಿಹಳ್ಳಿ ಗ್ರಾಮದ ಸೀತಾಬಾಯಿ ಹೇಳುತ್ತಾರೆ.

ಕಡೂರಿನಲ್ಲಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕವೊಂದು ಈ ಗ್ರಾಮಕ್ಕೆ ಎರಡು ದಿನಕ್ಕೊಮ್ಮೆ ಚಿಕ್ಕ ಸ್ಟೀಲ್ ಟ್ಯಾಂಕರ್‍ನಲ್ಲಿ ಕುಡಿಯುವ ನೀರನ್ನು ಮಾರಾಟ ಮಾಡುತ್ತಿದೆ. ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುಂದಾಗಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಮುಖ್ಯವಾಗಿ ಹೆಂಗಸರ ಒತ್ತಾಯವಾಗಿದೆ.

* * 

ಟ್ಯಾಂಕರ್ ನೀರು ಕೊಡಲು ಯಾರಿಗೂ ಅನುಮತಿ ನೀಡಿಲ್ಲ. ಹಣದ ಕೊರತೆ ಇದೆ ಆದರೆ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗೆ 10 ದಿನಕ್ಕೊಮ್ಮೆ ಒಂದು ಟ್ಯಾಂಕರ್ ನೀರು ಕೊಡಲು ಹೇಳಿದ್ದೇವೆ.

ಯಮುನಾ

ಪಿಡಿಓ, ಮಲ್ಲೇಶ್ವರ ಗ್ರಾಮ ಪಂಚಾಯಿತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry