ಪ್ರಶ್ನೆಗಳ ಸುರಿಮಳೆಗೆ ಚುರುಕು ಉತ್ತರ

7

ಪ್ರಶ್ನೆಗಳ ಸುರಿಮಳೆಗೆ ಚುರುಕು ಉತ್ತರ

Published:
Updated:
ಪ್ರಶ್ನೆಗಳ ಸುರಿಮಳೆಗೆ ಚುರುಕು ಉತ್ತರ

ಹಾಸನ: ಕ್ವಿಜ್‌ ಮಾಸ್ಟರ್‌ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದರೆ, ವಿದ್ಯಾರ್ಥಿಗಳು ಅಷ್ಟೆ ವೇಗವಾಗಿ ಉತ್ತರ ನೀಡುವ ಮೂಲಕ ಶಹಬ್ಬಾಸ್ ಗಿರಿ ಗಿಟ್ಟಿಸಿದರು. ಪರದೆ ಮೇಲೆ ಪ್ರಶ್ನೆ ಮೂಡುತ್ತಿದ್ದಂತೆ ಉತ್ತರ ನೀಡಲು ಹಾತೊರೆಯುತ್ತಿದ್ದ ವಿದ್ಯಾರ್ಥಿಗಳು ಬಜರ್‌ಗೆ ವಿರಾಮ ನೀಡದೆ ಜಾಣ್ಮೆ ಮೆರೆದರು.

ಇಂಥ ದೃಶ್ಯಗಳಿಗೆ ವೇದಿಕೆಯಾಗಿದ್ದು ‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಶಿಪ್‌ನ ನಾಲ್ಕನೇ ಆವೃತ್ತಿ. ‘ದೀಕ್ಷಾ’ ನೆಟ್‌ವರ್ಕ್‌, ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌, ಸನ್‌ಪ್ಯೂರ್‌, ಸಿಂಡಿಕೇಟ್‌ ಬ್ಯಾಂಕ್‌, ಗ್ಲೂಕೋವಿಟ ಬೋಲ್ಟ್ಸ್‌ ಪ್ರಾಯೋಜಕತ್ವದಲ್ಲಿ ನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಹಾಸನದ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ತಂಡೋತಂಡವಾಗಿ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಜಾಣ್ಮೆ ಪ್ರದರ್ಶಿಸಿದರು.

83 ಶಾಲೆಯ ಒಟ್ಟು 500 ಕ್ಕೂ ಹೆಚ್ಚು (ಒಂದು ತಂಡದಲ್ಲಿ ತಲಾ ಇಬ್ಬರು) ವಿದ್ಯಾರ್ಥಿಗಳ ನಡುವಿನ ಪೈಪೋಟಿಯಲ್ಲಿ ಅಂತಿಮವಾಗಿ ಚಿಕ್ಕಮಗಳೂರಿನ ಅ್ಯಂಬರ್‌ ವ್ಯಾಲಿ ವಸತಿ ಶಾಲೆಯ ಬಿ.ಟಿ.ತನುಶ್‌ ಹಾಗೂ ಆರ್‌.ಆಕಾಶ್‌ ವಿಜಯಮಾಲೆ ಧರಿಸುವ ಮೂಲಕ ಜ. 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗ್ರ್ಯಾಂಡ್‌ ಫೈನಲ್‌ಗೆ ಆಯ್ಕೆಯಾದರು.

ಆರಂಭದಲ್ಲಿ ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಅವರು ವಿದ್ಯಾರ್ಥಿಗಳ ಸಮೂಹಕ್ಕೆ ಎಸೆದ ಪ್ರಶ್ನೆಗಳಿಗೆ ಥಟ್‌ ಎಂದು ಉತ್ತರ ನೀಡಿದ ವಿದ್ಯಾರ್ಥಿಗಳು ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಪಡೆದರು. ಪ್ರಾಥಮಿಕ ಸುತ್ತಿನಲ್ಲಿ ಒಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ರಚಿಸಿ, ಪ್ರತ್ಯೇಕವಾಗಿ ಕೂರಿಸಲಾಯಿತು. 20 ಲಿಖಿತ ಪ್ರಶ್ನೆಗಳನ್ನು ಕೇಳಲಾಯಿತು. ಮೊದಲ ಆರು ಸ್ಥಾನ ಗಳಿಸಿದ ಮೇಲ್ಕಂಡ ತಂಡಗಳು ವೇದಿಕೆಯಲ್ಲಿ ಅಂತಿಮ ಸುತ್ತಿನ ಹಣಾಹಣಿ ನಡೆಸಿದವು.

ಫೈನಲ್‌ಗೆ ಆಯ್ಕೆಯಾಗಿದ್ದ ಸ್ಪರ್ಧಿಗಳಷ್ಟೇ ಸಭಾಂಗಣದಲ್ಲಿ ತುಂಬಿದ್ದ ನೂರಾರು ವಿದ್ಯಾರ್ಥಿಗಳಲ್ಲೂ ಪ್ರತಿ ಪ್ರಶ್ನೆಗೆ ಉತ್ತರ ಹೇಳುವ ಉತ್ಸವ ಪುಟಿದೇಳುತ್ತಿತ್ತು. ಸ್ಪರ್ಧಿಗಳು ‘ಪಾಸ್‌’ ಎಂದಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉತ್ತರ ಹೇಳಿ ಬಹುಮಾನ ಪಡೆದು ಸಂಭ್ರಮಿಸಿದರು.

ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರತಿ ಪ್ರಶ್ನೆಗೂ ಉತ್ತರಿಸುವ ತವಕವನ್ನು ವಿದ್ಯಾರ್ಥಿಗಳು ತೋರಿದರು. ಸರಿ ಉತ್ತರ ನೀಡುತ್ತಿದ್ದಂತೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಸ್ಥಳೀಯ ಪ್ರಶ್ನೆಗಳಿಂದ ಹಿಡಿದು ಜಾಗತಿಕ ಮಟ್ಟದವರೆಗಿನ ಪ್ರಶ್ನೆಗಳನ್ನು ಕೇಳಿದರು. ಪ್ರೇಕ್ಷಕರ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸಲು ಪೈಪೋಟಿ ಕಂಡು ಬಂತು. ಒಮ್ಮೊಮ್ಮೆ ಸರಳ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಎಡವುತ್ತಿದ್ದರು. ಸರಿ ಉತ್ತರ ನೀಡಿದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಮೊದಲ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಳು ಆಸಕ್ತಿ ಕೆರಳಿಸಿದವು.

ಹ್ಯಾಕರ್‌ ವೇ ಕ್ಯಾಲಿಫೋರ್ನಿಯಾ ದಲ್ಲಿ ಯಾವ ಅಂತರ್ಜಾಲ ಸಂಸ್ಥೆಯ ಮುಖ್ಯ ಕಚೇರಿ ಇದೆ ಎಂಬ ಪ್ರಶ್ನೆಗೆ ಗೂಗಲ್‌ ಎಂದು ನಮೂದಿಸಿದ್ದರು. ಭಾರತದಲ್ಲಿ 1940ರ ದಶಕದಲ್ಲಿ ಕುತ್ತಿಗೆ ಮುಚ್ಚುವ ಕೋಟ್‌ ಹೆಸರುವಾಸಿಯಾಗಿತ್ತು. ಇದನ್ನು ಬಹಳ ಕಾಲ ಧರಿಸುತ್ತಿದ್ದ ರಾಜಕಾರಣಿಯ ಹೆಸರೇನು ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ರಾಮನಾಥ ಕೋವಿಂದ್‌, ನರೇಂದ್ರ ಮೋದಿ ಎಂಬೆಲ್ಲಾ ಉತ್ತರ ಬರೆದಿದ್ದರು.

ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಚಿತ್ರೀಕರಿಸಿದ ಚಿತ್ರ ಯಾವುದು ಹಾಗೂ ಮಹಾ ಮಸ್ತಕಾಭಿಷೇಕ ಮುಂದಿನ ಬಾರಿ ಯಾವಾಗ ಜರುಗಲಿದೆ ಎಂಬ ಪ್ರಶ್ನೆಗೆ ಬಹುತೇಕ ವಿದ್ಯಾರ್ಥಿಗಳು ಕಿರಿಕ್‌ ಪಾರ್ಟಿ ಮತ್ತು 2018 ಎಂದು ಸರಿಯಾಗಿ ಉತ್ತರಿಸಿದ್ದರು. ವಿಭಾಗದ ಮಟ್ಟದ ಸ್ಪರ್ಧೆಯಲ್ಲಿ ಅಂತಿಮವಾಗಿ 65 ಅಂಕ ಪಡೆದ ಚಿಕ್ಕಮಗಳೂರು ಜಿಲ್ಲೆಯ ಅ್ಯಂಬರ್‌ ವ್ಯಾಲಿ ವಸತಿ ಶಾಲೆ ಪ್ರಥಮ ಬಹುಮಾನ ಗೆದ್ದುಕೊಂಡಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹಾಲಾನಾಯಕ್‌, ದೀಕ್ಷಾ ಸಂಸ್ಥೆಯ ಡೀನ್‌ ಕಾರ್ತಿಕ್‌ ಕೋಟೆ ಅತಿಥಿಗಳಾಗಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಮೊದಲ ಬಹುಮಾನವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ₹ 6 ಸಾವಿರ, 2ನೇ ಬಹುಮಾನ ₹ 4 ಸಾವಿರ, 3ನೇ ಬಹುಮಾನ ₹ 2 ಸಾವಿರ ನೀಡಲಾಯಿತು.  ಇತರ ಮೂರು ತಂಡಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ರಸಪ್ರಶ್ನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ (ಟಿಪಿಎಂಎಲ್) ಪ್ರಸರಣ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಲಕ್ಷ್ಮೀಕಾಂತ್‌, ಬ್ರ್ಯಾಂಡ್ ಸ್ಟ್ರಾಟಜಿ ಡೆವಲಪ್‌ಮೆಂಟ್ ಮ್ಯಾನೇಜರ್‌ ಹರ್ಷವರ್ಧನ್‌, ಹಾಸನ ಪ್ರಸರಣ ಪ್ರತಿನಿಧಿ ಯತೀಶ್‌ ಇದ್ದರು. ಕಾರ್ಯಕ್ರಮ ಆರಂಭದಿಂದ ಮುಗಿಯವವರೆಗೂ ಸಭಾಂಗಣದಲ್ಲಿ ಉತ್ಸಾಹ, ಉಲ್ಲಾಸ ಮೇಳೈಸಿತ್ತು. ಹಂತದಿಂದ ಹಂತಕ್ಕೆ ಕುತೂಹಲ, ಕಾತರ ಇಮ್ಮಡಿಯಾಯಿತು.

‘ಸ್ಪರ್ಧಿಗಳು ಪ್ರಥಮ ಸುತ್ತಿನಿಂದಲೂ ಸರಿಯಾದ ಉತ್ತರ ನೀಡುತ್ತಿದ್ದರು. ಕೆಲವೊಮ್ಮೆ ಅವಸರದಲ್ಲಿ ತಪ್ಪು ಉತ್ತರ ನೀಡಿದರು. ಕೆಲವರು ಪ್ರಶ್ನೆ ಪರದೆ ಮೇಲೆ ಮೂಡುತ್ತಿದ್ದಂತೆ ಬಜರ್‌ ಒತ್ತಿ ಸರಿಯಾದ ಉತ್ತರ ಹೇಳುತ್ತಿದ್ದರು. ಸಭಾಂಗಣ ಕಿಕ್ಕಿರಿದ್ದು ತುಂಬಿದ್ದು ಮತ್ತಷ್ಟು ಉತ್ತೇಜನ ನೀಡಿತು’ ಎಂದು ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಹೇಳಿದರು.

ಆರಂಭದಿಂದಲೇ ಮುನ್ನಡೆ

ಪ್ರಾಥಮಿಕ ಸುತ್ತಿನ ಲಿಖಿತ ಹಂತದಲ್ಲಿ ಹೆಚ್ಚು ಅಂಕ ಪಡೆದ ಆರು ಶಾಲೆಗಳ ತಲಾ ಇಬ್ಬರು ವಿದ್ಯಾರ್ಥಿಗಳು ಪ್ರಧಾನ ಹಂತಕ್ಕೆ ಆಯ್ಕೆಯಾದರು. ಇದರಲ್ಲಿ ಐದು ಸುತ್ತಿನ ಪ್ರಶ್ನೆಗಳನ್ನು ಕೇಳಲಾಯಿತು. ಅ್ಯಂಬರ್‌ ವ್ಯಾಲಿ ವಸತಿ ಶಾಲೆ ವಿದ್ಯಾರ್ಥಿಗಳು ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು. ಎಲ್ಲ ಸುತ್ತಿನಲ್ಲೂ ಥಟ್‌ ಅಂಥ ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಅ್ಯಂಬರ್‌ ವ್ಯಾಲಿ ವಸತಿ ಶಾಲೆ ಪ್ರಥಮ

ವಿಭಾಗ ಮಟ್ಟದ ಈ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಅ್ಯಂಬರ್‌ ವ್ಯಾಲಿ ವಸತಿ ಶಾಲೆಯ ಬಿ.ಟಿ.ತನುಶ್‌, ಆರ್‌.ಆಕಾಶ್‌ ಅವರು 65 ಅಂಕ ಪಡೆದು ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನ ಹಾಸನದ ಪೊದಾರ್‌ ಇಂಟರ್‌ನ್ಯಾಷನಲ್‌ ಶಾಲೆಯ ಅನೀಶ್‌ ಕಿರಣ್‌ ಮತ್ತು ಪ್ರಮೋದ್‌ ಗೌಡ (45) ಪಾಲಾಯಿತು. ಹಾಸನದ ಕೇಂದ್ರೀಯ ವಿದ್ಯಾಲಯದ ಕೆ.ಪಿ.ಹೇಮರಾಜ್‌, ಜಿ.ಪಿ.ಹೃಷಿಕೇಶ್‌ (40) ಮೂರನೇ ಸ್ಥಾನ ಪಡೆದರು.

ಅಚ್ಚುಕಟ್ಟಾದ ವ್ಯವಸ್ಥೆ

‘ಕ್ವಿಜ್‌ ಕಾರ್ಯಕ್ರಮ ಪಾರದರ್ಶಕವಾಗಿ ನಡೆಯಿತು. ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಶ್ನೆಗಳು ಕಷ್ಟವೂ ಇರಲಿಲ್ಲ, ಸುಲಭವೂ ಇರಲಿಲ್ಲ. ರಾಜ್ಯ ಮಟ್ಟದಲ್ಲಿ ಹಾಸನ ವಿಭಾಗವನ್ನು ಪ್ರತಿನಿಧಿಸುತ್ತಿರುವುದು ಖುಷಿ ಎನಿಸುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೆಮ್ಮೆ ಎನಿಸುತ್ತದೆ. ಇದು ಮುಂದಿನ ಕಲಿಕೆಗೆ ಅನುಕೂಲವಾಗಲಿದೆ. ಬಿ.ಟಿ.ತನುಶ್‌, ಆರ್‌.ಆಕಾಶ್‌, ಅ್ಯಂಬರ್‌ ವ್ಯಾಲಿ ವಸತಿ ಶಾಲೆ, (ವಿಜೇತರು)

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅನುಕೂಲ

‘ಕ್ಷಿಜ್‌’ ನಲ್ಲಿ ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಮಾಡಿಕೊಂಡು ಪ್ರಶ್ನೆ ಕೇಳಲಾಗಿತ್ತು. ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶ್ನೆಗಳು ಇದ್ದವು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಇವು ಅನುಕೂಲವಾಗಲಿದೆ. ಎಲ್ಲಾ ಸುತ್ತುಗಳಲ್ಲೂ ಕುತೂಹಲ ಮೂಡಿಸಿತು. ನಿಯಮ ಮತ್ತು ನಿರೂಪಣೆ ಶೈಲಿ ಇಷ್ಟವಾಯಿತು.

ಅನಿಷ್‌ ಮತ್ತು ಪ್ರಮೋದ್‌, ಪೊದರ್‌ ಇಂಟರ್‌ ನ್ಯಾಷನಲ್‌ ಶಾಲೆ, (ರನ್ನರ್‌ ಅಪ್‌)

ಭಾಗವಹಿಸಿದ್ದು ಖುಷಿ ನೀಡಿದೆ

ಇನ್ನು ಸ್ವಲ್ಪ ಪ್ರಯತ್ನ ಪಡಬೇಕಿತ್ತು, ಮೊದಲ ಸುತ್ತಿನಿಂದಲೂ ಉತ್ತಮ ಅಂಕ ಪಡೆದಕೊಂಡಿದ್ದವು. ಕೊನೆಯಲ್ಲಿ ಅವಸರ ಮಾಡಿ ತಪ್ಪು ಉತ್ತರ ಹೇಳಿದ್ದರಿಂದ ಅಂಕಗಳು ಕಡಿಮೆ ಆಯಿತು. ಕ್ವಿಜ್‌ನಲ್ಲಿ ಭಾಗವಹಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಸಾಮಾನ್ಯ ಜ್ಞಾನ ವೃದ್ಧಿಗೆ ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ.

ಕೆ.ಪಿ. ಹೇಮರಾಜ್‌ ಮತ್ತು ರಿಷಿಕೇಶ್‌, ಕೇಂದ್ರೀಯ ವಿದ್ಯಾಲಯ, (3ನೇ ಸ್ಥಾನ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry