ತೊಗರಿಗೂ ಸಿಗಲಿದೆ ‘ಭೌಗೋಳಿಕ ಸೂಚಿ’

7
‘ಜಿಐ’ ನೋಂದಣಿಗೆ ಅರ್ಜಿ, ದಾಖಲೆ ಸಲ್ಲಿಕೆ

ತೊಗರಿಗೂ ಸಿಗಲಿದೆ ‘ಭೌಗೋಳಿಕ ಸೂಚಿ’

Published:
Updated:
ತೊಗರಿಗೂ ಸಿಗಲಿದೆ ‘ಭೌಗೋಳಿಕ ಸೂಚಿ’

ಕಲಬುರ್ಗಿ: ಜಿಲ್ಲೆಯು ‘ತೊಗರಿ ಬಟ್ಟಲು’ ಎಂದೇ ಪ್ರಸಿದ್ಧಿಯಾಗಿದ್ದು, ಇಲ್ಲಿ ಬೆಳೆಯುವ ತೊಗರಿಗೆ ಭೌಗೋಳಿಕೆ ಸೂಚಿಕೆ (Geographical Indication-ಜಿಐ) ಪಡೆಯಲು ಅರ್ಜಿ ಸಲ್ಲಿಸಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಇಲ್ಲಿಯ ಕೃಷಿ ಕಾಲೇಜಿನ ಡೀನ್ ಡಾ. ಜೆ.ಆರ್.ಪಾಟೀಲ, ‘ವಿಶಿಷ್ಟವಾದ ಮಣ್ಣು ಮತ್ತು ಹವಾಮಾನದಿಂದ ಇಲ್ಲಿ ಬೆಳೆಯುವ ತೊಗರಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಈ ಜಿಲ್ಲೆಯ ರೈತರು, ಬೇಳೆ ಕಾಳು ಕಾರ್ಖಾನೆಗಳು ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಭೌಗೋಳಿಕ ಸೂಚಿಕೆ (ಜಿಐ) ಪಡೆಯಲು ಚೆನ್ನೈನ ಜಿ.ಐ ನೋಂದಣಿ ಕಚೇರಿಗೆ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದೆ’ ಎಂದರು.

‘ಕಲಬುರ್ಗಿ ತಾಲ್ಲೂಕು ಕಮಲಾಪುರದ ಕೆಂಪು ಬಾಳೆಗೆ ಈಗಾಗಲೇ ಭೌಗೋಳಿಕ ಸೂಚಿಕೆ ದೊರಕಿದೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ 2017ರ ಸೆಪ್ಟೆಂಬರ್ 26ರಂದು ಭೌಗೋಳಿಕ ಸೂಚಿಕೆ ಪಡೆಯಲು ಅರ್ಜಿ ಸಲ್ಲಿಸಿದೆ. ಇದರಿಂದ ಈ ಭಾಗದ ತೊಗರಿಗೆ ಹೆಚ್ಚಿನ ಬೇಡಿಕೆ ಉಂಟಾಗಲಿದ್ದು, ಆರ್ಥಿಕವಾಗಿ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ತೊಗರಿಯನ್ನು ಗುರುತಿಸಲಾಗುತ್ತದೆ’ ಎಂದು ಹೇಳಿದರು.

‘ಕಲಬುರ್ಗಿ ಜಿಲ್ಲೆಯಲ್ಲಿ 9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ತೊಗರಿಯು ಬೇಗ ಕುದಿಯುತ್ತದೆ ಮತ್ತು ಬೇಗ ಹಳಸುವುದಿಲ್ಲ. ಸುವಾಸನೆ ಮತ್ತು ರುಚಿಯಿಂದ ಕೂಡಿದೆ. ಇದಕ್ಕೆ ಇಲ್ಲಿನ ಮಣ್ಣಿನಲ್ಲಿ ಸುಣ್ಣದ ಕಲ್ಲು (ಲೈಂ ಸ್ಟೋನ್), ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಅಂಶ ಹೆಚ್ಚಾಗಿರುವುದೇ ಕಾರಣವಾಗಿದೆ’ ಎಂದು ತಿಳಿಸಿದರು.

‘2004ರಿಂದ 2015ರ ವರೆಗೆ ರಾಜ್ಯದ 33 ಉತ್ಪನ್ನಗಳು ನೋಂದಣಿ ಆಗಿವೆ. ಮುಂದಿನ ಕೆಲವೇ ತಿಂಗಳಲ್ಲಿ ಕಲಬುರ್ಗಿಯ ತೊಗರಿಯೂ ನೋಂದಣಿಯಾಗಲಿದೆ. ಇದಕ್ಕಾಗಿ ‘ಉತ್ತಮ ಗುಣಮಟ್ಟದ ಕಲಬುರಗಿ ತೊಗರಿ’ ಎಂಬ ಲಾಂಛನ ಕೂಡ

ಸಿದ್ಧಪಡಿಸಲಾಗಿದೆ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ ಡಾ. ಮುನಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry