ಮೆಟ್ರೊ: ಮೊಬೈಲ್‌ ವಾಲೆಟ್‌, ಯುಪಿಐ ಬಳಕೆಗೂ ಅವಕಾಶ

7
ನಗದುರಹಿತ ಸೇವೆ ಉತ್ತೇಜನಕ್ಕೆ ಬಿಎಂಆರ್‌ಸಿಎಲ್‌ ಸಿದ್ಧತೆ

ಮೆಟ್ರೊ: ಮೊಬೈಲ್‌ ವಾಲೆಟ್‌, ಯುಪಿಐ ಬಳಕೆಗೂ ಅವಕಾಶ

Published:
Updated:
ಮೆಟ್ರೊ: ಮೊಬೈಲ್‌ ವಾಲೆಟ್‌, ಯುಪಿಐ ಬಳಕೆಗೂ ಅವಕಾಶ

ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ನಗದುರಹಿತ ಪ್ರಯಾಣಕ್ಕೆ ಇನ್ನಷ್ಟು ಉತ್ತೇಜನ ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿದ್ಧತೆ ನಡೆಸಿದೆ. 

ಟಿಕೆಟ್‌ ಕೌಂಟರ್‌ಗಳಲ್ಲಿ ನಗದು ರಹಿತ ಪಾವತಿಗೆ ಅವಕಾಶ ಕಲ್ಪಿಸಲು ಪ್ರಿಪೇಯ್ಡ್‌ ಪಾವತಿ ಉಪಕರಣ (ಪಿಪಿಐ) ಒದಗಿಸುವ ಅರ್ಹ ಕಂಪನಿಗಳಿಂದ ಹಾಗೂ ಬ್ಯಾಂಕ್‌ಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಮಾನ್ಯತೆ ಪಡೆದ ಕಂಪನಿ ಅಥವಾ ಬ್ಯಾಂಕ್‌ಗಳು ಮಾತ್ರ ಪ್ರಸ್ತಾವನೆ ಸಲ್ಲಿಸಬಹುದು.

ಪ್ರಸ್ತಾವನೆ ಸಲ್ಲಿಸುವ ಸಂಸ್ಥೆಗಳು ನಿತ್ಯ ಮೊಬೈಲ್‌ ವಾಲೆಟ್‌ ಅಥವಾ ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಮೂಲಕ ಕನಿಷ್ಠ ಪಕ್ಷ 1,000 ವಹಿವಾಟುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ನಿಗಮವು ಪ್ರಸ್ತುತ ಪ್ರತಿ ನಿಲ್ದಾಣದಲ್ಲಿ ಕನಿಷ್ಠ ಎರಡು ಕಡೆ ಪ್ರಯಾಣಿಕರಿಗೆ ಟೋಕನ್‌ ವಿತರಣಾ ಕೇಂದ್ರಗಳನ್ನು ಹೊಂದಿದೆ. ಏಕ ಪ್ರಯಾಣದ ಟೋಕನ್‌ ವಿತರಣೆಗೆ ಸದ್ಯಕ್ಕೆ ನಗದು ಮಾತ್ರ ಸ್ವೀಕರಿಸಲಾಗುತ್ತಿದೆ. 

ನಗದು ರಹಿತ ಪ್ರಯಾಣವನ್ನು ಉತ್ತೇಜಿಸಲು ನಿಗಮವು ಈ ಹಿಂದೆಯೇ ಸ್ಮಾರ್ಟ್‌ಕಾರ್ಡ್‌ ಬಳಕೆಯನ್ನು ಜಾರಿಗೆ ತಂದಿತ್ತು. ಬಹು ಪ್ರಯಾಣದ ಸ್ಮಾರ್ಟ್‌ಕಾರ್ಡ್‌ಗಳ ಮಾರಾಟಕ್ಕೆ ಹಾಗೂ ರೀಚಾರ್ಜ್‌ ಮಾಡಲು ನಗದು, ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಬಹುದಾಗಿದೆ. ಆದರೆ, ಮೊಬೈಲ್‌ ವಾಲೆಟ್‌ ಅಥವಾ ಯುಪಿಐ ಬಳಸಿ ಪಾವತಿ ಮಾಡುವುದಕ್ಕೆ ಅವಕಾಶ ಇರಲಿಲ್ಲ.

ಸ್ಮಾರ್ಟ್‌ಕಾರ್ಡ್‌ ಆನ್‌ಲೈನ್‌ ರಿಚಾರ್ಜ್‌ಗಾಗಿ ನಿಗಮವು ವಿವಿಧ ಪಾವತಿ ಗೇಟ್‌ವೇಗಳ ನಡುವೆ ಸಮನ್ವಯ ಮೂಡಿಸಲು ಗೇಟ್‌ವೇ ಸರ್ವರ್‌ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ನಿಗಮದ ವೆಬ್‌ಸೈಟ್‌ (kannada.bmrc.co.in), ಕರ್ನಾಟಕ ಒನ್‌ ಪೋರ್ಟಲ್‌ ಅಥವಾ ಮೊಬೈಲ್‌ ಒನ್‌ ಆ್ಯಪ್‌ ಮೂಲಕವೂ ರಿಚಾರ್ಜ್‌ ಮಾಡಿಕೊಳ್ಳಬಹುದು. ಐಸಿಐಸಿಐ ಹಾಗೂ ಫೆಡರಲ್‌ ಬ್ಯಾಂಕ್‌ ಗ್ರಾಹಕರು ಸ್ವಯಂಚಾಲಿತವಾಗಿ ಸ್ಮಾರ್ಟ್‌ಕಾರ್ಡ್‌ಗೆ ಮೊತ್ತ ಜಮೆ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಪ್ರತಿ ನಿಲ್ದಾಣದಲ್ಲಿ ಕನಿಷ್ಠ ಪಕ್ಷ ಒಂದು ಟಿಕೆಟ್‌ ವಿತರಣಾ ಕೇಂದ್ರದಲ್ಲಾದರೂ ಮೊಬೈಲ್‌ ವಾಲೆಟ್‌ ಅಥವಾ ಯುಪಿಐ ಮೂಲಕ ಪಾವತಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ನಿಗಮವು ಹೊಂದಿದೆ. 

ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ:

ಪಾವತಿ ಸಲುವಾಗಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು. ಒಂದು ಟಿಕೆಟ್‌ ಖರೀದಿಗೆ ಪ್ರಯಾಣಿಕರ ಖಾತೆಯಿಂದ ಒಂದಕ್ಕಿಂತ ಹೆಚ್ಚು ಬಾರಿ ಹಣ ಕಡಿತವಾದರೆ ಮೂರು ದಿನಗಳ ಒಳಗೆ ಅದನ್ನು ಮರುಪಾವತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಸಹಾಯಕೇಂದ್ರ ಸ್ಥಾಪಿಸಬೇಕು

ಪಿಪಿಐ ಒದಗಿಸುವ ಕಂಪನಿ ಅಥವಾ ಬ್ಯಾಂಕ್‌ ಪಾವತಿಗೆ ಸಂಬಂಧಿಸಿದ ತಕರಾರುಗಳಿಗೆ ‍ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯಕೇಂದ್ರವನ್ನು ಆರಂಭಿಸಬೇಕು. ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರನ್ನು ನೇಮಿಸಬೇಕು ಎಂದೂ ಸೂಚಿಸಲಾಗಿದೆ.

ಪಾವತಿ ಕುರಿತು ದೂರು ನೀಡಲು ಸಂಪರ್ಕ ಕೇಂದ್ರಗಳನ್ನು ಹೊಂದಿರಬೇಕು. ಇಂತಹ ವ್ಯಾಜ್ಯ ಇತ್ಯರ್ಥಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ದೂರುಗಳ ಇತ್ಯರ್ಥದ ಬಗ್ಗೆ ಪ್ರಯಾಣಿಕರು ಆನ್‌ಲೈನ್‌ ಅಥವಾ ಎಸ್‌ಎಂಎಸ್‌ ಮೂಲಕ ಮಾಹಿತಿ ಪಡೆಯಲು ಅವಕಾಶವಿರಬೇಕು. ಮಾಹಿತಿ ಸೋರಿಕೆ ಆಗದಂತೆ ಎಚ್ಚರ ವಹಿಸಬೇಕು. ಹಣಕಾಸಿನ ಅವ್ಯವಹಾರ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಪಾವತಿ ವಿಳಂಬ ತಡೆಯಲು ಷರತ್ತುಗಳು

ಮೊಬೈಲ್‌ ವಾಲೆಟ್‌ ಅಥವಾ ಯುಪಿಐ ಮೂಲಕ ಪಾವತಿ ಮಾಡುವಾಗ ಹಣ ವರ್ಗಾವಣೆ ವಿಳಂಬವಾಗುವುದನ್ನು ತಡೆಯುವ ಸಲುವಾಗಿ ನಿಗಮವು ಈ ಸೇವೆ ಒದಗಿಸುವ ಕಂಪನಿಗೆ/ ಬ್ಯಾಂಕ್‌ಗೆ ಕೆಲವು ಷರತ್ತುಗಳನ್ನೂ ವಿಧಿಸಿದೆ.

* ಪಾವತಿ ಪ್ರಕ್ರಿಯೆ ಸುಲಲಿತವಾಗಿರಬೇಕು. ಹಣ ಪಾವತಿಸುವಾಗ ನಗದು ಪಾವತಿಗೆ ತಗಲುವುದಕ್ಕಿಂತ ಹೆಚ್ಚು ಸಮಯ ತಗಲಬಾರದು

* ಪ್ರಯಾಣಿಕರು ಟಿಕೆಟ್‌ ವಿತರಣಾ ಕೇಂದ್ರವನ್ನು ತಲುಪುವ ಮುನ್ನವೇ ಹಣ ಪಾವತಿಸಲು ಸಾಧ್ಯವಾಗುವ ವ್ಯವಸ್ಥೆ ಇರಬೇಕು

* ಹಣ ಪಾವತಿಸಿದ ಬಳಿಕ ಅದನ್ನು ಖಾತರಿ ಪಡಿಸಲು ಗ್ರಾಹಕರಿಗೆ ವಿಶಿಷ್ಟ ಸಂಖ್ಯೆ (ಆರು ಅಂಕಿಗಳಿಗಿಂತ ಹೆಚ್ಚಿರಬಾರದು) ಒದಗಿಸಬೇಕು. ಈ ಕೋಡ್‌ನ ಆಧಾರದಲ್ಲಿ ಕೇಂದ್ರದ ಸಿಬ್ಬಂದಿ ಟೋಕನ್‌ ವಿತರಿಸುವುದಕ್ಕೆ ಸಾಧ್ಯವಾಗಬೇಕು. ಇದಕ್ಕಾಗಿ ಪ್ರತ್ಯೇಕ ತಂತ್ರಾಂಶವನ್ನು ಒದಗಿಸಬೇಕು. ಇಂಟರ್ನೆಟ್‌ ಸಂಪರ್ಕ ಅಥವಾ ಮೊಬೈಲ್‌ ಸಿಗ್ನಲ್‌ ಇಲ್ಲದಿದ್ದಾಗಲೂ ಇದು ಕಾರ್ಯನಿರ್ವಹಿಸಲು ಶಕ್ತವಾಗಿರಬೇಕು.

* ಒಂದು ಕೋಡ್‌ಗೆ ಒಂದು ಬಾರಿ ಮಾತ್ರ ಟಿಕೆಟ್‌ ನೀಡಲು ಸಾಧ್ಯವಾಗಬೇಕು. ಒಂದೇ ಕೋಡ್‌ ಅನ್ನು ಮತ್ತೆ ಬಳಸಲು ಸಾಧ್ಯವಾಗದಂತೆ ತಡೆಯುವ ವ್ಯವಸ್ಥೆ ಇರಬೇಕು.

* ಪ್ರತಿ ಟಿಕೆಟ್‌ ವಿತರಣಾ ಕೇಂದ್ರಕ್ಕೆ ವಿಶಿಷ್ಟ ಸಂಕೇತ, ಸಂಖ್ಯೆ, ಅಥವಾ ಕ್ಯುಆರ್‌ ಕೋಡ್‌ ನೀಡಬೇಕು. ಪ್ರತಿ ಟಿಕೆಟ್‌ ಕೌಂಟರ್‌ಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬೇಕು.

* ನಿರ್ದಿಷ್ಟ ಟಿಕೆಟ್‌ ವಿತರಣಾ ಕೇಂದ್ರದಲ್ಲಿ ಪ್ರಯಾಣಿಕರು ನಮೂದಿಸಿದಷ್ಟು ಮೊತ್ತ ಪಾವತಿಸುವುದಕ್ಕೆ ಅವಕಾಶವಿರಬೇಕು.

* ತಕರಾರುಗಳನ್ನು ಇತ್ಯರ್ಥಪಡಿಸಲು ಕಂಪನಿಯು ಪ್ರತಿ ಕೌಂಟರ್‌ನಲ್ಲಿ ಯಾವಾಗ ಎಷ್ಟು ಪಾವತಿ ನಡೆದಿದೆ ಎಂಬ ವಿವರವನ್ನು ಒದಗಿಸಲು ಬದ್ಧವಾಗಿರಬೇಕು

* ಪ್ರತಿ ಪಾಳಿ ಮುಗಿದ ತಕ್ಷಣ ನಿಲ್ದಾಣದ ನಿಯಂತ್ರಣಾಧಿಕಾರಿ ಪ್ರತಿ ಕೌಂಟರ್‌ನಲ್ಲಿ ನಡೆದ ವಹಿವಾಟಿನ ವಿವರ ಪಡೆಯುವುದಕ್ಕೆ ಸಾಧ್ಯವಾಗಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry