ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

7
ಪ್ರಶಸ್ತಿ ಮೊತ್ತ ತಲಾ ₹65 ಲಕ್ಷ l 22 ಕ್ಯಾರೆಟ್‌ ಚಿನ್ನದ ಪದಕ

ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

Published:
Updated:
ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

ಬೆಂಗಳೂರು: ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಮತ್ತು ನ್ಯಾಷನಲ್ ಸೆಂಟರ್ ಬಯಾಲಜಿಕಲ್ ಸೈನ್ಸಸ್‍ನ (ಎನ್‍ಸಿಬಿಎಸ್) ಪ್ರೊ.ಉಪೀಂದರ್ ಸಿಂಗ್ ಭಲ್ಲ ಸೇರಿ ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ-2017 ಪ್ರದಾನ ಮಾಡಲಾಯಿತು.

ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅಮೆರಿಕದ ಖಭೌತ ವಿಜ್ಞಾನಿ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪ್ರೊ.ಕಿಪ್‌ ಎಸ್‌.ಥ್ರಾನ್‌ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತರಿಗೆ ತಲಾ ₹65 ಲಕ್ಷ ನಗದು ಮತ್ತು 22 ಕ್ಯಾರೆಟ್‌ ಚಿನ್ನದ ಪದಕ ನೀಡಲಾಯಿತು.

ಮಿದುಳಿಗೆ ಸಂಬಂಧಿಸಿದಂತೆ ಹಲವು ಸಂಶೋಧನೆ ನಡೆಸಿರುವ ಉಪೀಂದರ್ ಸಿಂಗ್ ಭಲ್ಲ ಜೀವವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ಪಡೆದರು. ಕೋಲ್ಕತ್ತದ ಭಾರತೀಯ ಸಾಂಖ್ಯಿಕ ಸಂಸ್ಥೆಯ (ಐಎಸ್‍ಐ) ನಿರ್ದೇಶಕಿ ಸಂಘಮಿತ್ರ ಬಂದೋಪಾಧ್ಯಾಯ (ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್), ಲಂಡನ್‍ನ ಕಿಂಗ್ಸ್ ಕಾಲೇಜಿನ ಇಂಗ್ಲಿಷ್ ಸಾಹಿತ್ಯ ವಿಭಾಗದ ಪ್ರೊ.ಅನನ್ಯ ಜಹನಾರ ಕಬೀರ್ (ಮಾನವ ಜೀವನ-ಇತಿಹಾಸ ವಿಭಾಗ), ಟಾಟಾ ಇನ್‌ಸ್ಟಿಟ್ಯೂಟ್ಆಫ್‌ ಫಂಡಮೆಂಟಲ್ ರಿಸರ್ಚ್‍ನ ರೀತಬ್ರತ ಮುನ್ಶಿ (ಗಣಿತಶಾಸ್ತ್ರ), ಶಿಕಾಗೊ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಪ್ರೊ.ಯಮುನಾ ಕೃಷ್ಣನ್ (ಭೌತವಿಜ್ಞಾನ ವಿಭಾಗ), ದೆಹಲಿಯ ಅಂಬೇಡ್ಕರ್‌ ಯುನಿವರ್ಸಿಟಿ ಕಾನೂನು ಶಾಲೆಯ ಆಡಳಿತಾಧಿಕಾರಿ ಪ್ರೊ.ಲಾರೆನ್ಸ್‌ ಲಿಯಾಂಗ್ (ಸಮಾಜ ವಿಜ್ಞಾನ) ಪ್ರಶಸ್ತಿ ಸ್ವೀಕರಿಸಿದರು.

ಪ್ರೊ.ಕಿಪ್‌ ಎಸ್‌.ಥ್ರಾನ್‌ ಮಾತನಾಡಿ ‘ಪ್ರಶಸ್ತಿಗಳು ವಿಜ್ಞಾನಿಗಳ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ. ವಿಜ್ಞಾನವನ್ನು ನಂಬದ ಮತ್ತು ಮೌಢ್ಯಕ್ಕೆ ಅಂಟಿಕೊಳ್ಳುವವರ ಮನೋಭಾವವನ್ನು ವಿಜ್ಞಾನಿಗಳು ಬದಲಿಸಬೇಕು. ನಂಬದವರಿಗೂ ವಿಜ್ಞಾನದತ್ತ ಆಸಕ್ತಿ ಬೆಳೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ವೈಜ್ಞಾನಿಕವಾಗಿ ಕಂಡು ಹಿಡಿದಿದ್ದನ್ನು ಅತೀಶೀಘ್ರದಲ್ಲಿ ತಂತ್ರಜ್ಞಾನದ ಮೂಲಕ ಜನಬಳಕೆಗೆ ಬರುವಂತೆ ಮಾಡುವ ದೊಡ್ಡ ಸವಾಲು ನಮ್ಮ ಮುಂದಿದೆ. ಆದರೆ, ಇದು ಒಂದೆರಡು ವರ್ಷಗಳಲ್ಲಿ ಆಗುವಂತಹುದಲ್ಲ, ಹಲವು ದಶಕಗಳೇ ಬೇಕಾಗುತ್ತದೆ ಎಂದರು.

‘ಇಂದು ಜಗತ್ತು ಹಲವು ಸಮಸ್ಯೆಗಳ ನಡುವೆ ಸಿಲುಕಿದೆ. ಹವಾಮಾನ ಬದಲಾವಣೆಯ ಸಮಸ್ಯೆ ರಾಷ್ಟ್ರ ನಡೆಸುವ ನಾಯಕರುಗಳಿಗೆ ಮುಖ್ಯವಾಗುತ್ತಿಲ್ಲ. ಅಣ್ವಸ್ತ್ರಗಳ ಬಗ್ಗೆ

ಮಾತ್ರ ಯೋಚಿಸುತ್ತಿದ್ದಾರೆ. ವಿಜ್ಞಾನಿಗಳು ಇಂತಹ ನಾಯಕರುಗಳಿಗೂ ತಿಳಿವಳಿಕೆ ಮೂಡಿಸಬೇಕಿದೆ’ ಎಂದರು.

ಅಸಮಾಧಾನ

ಬೆಂಗಳೂರು: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಜ್ಞಾನಕ್ಕಿಂತ ರಾಜಕೀಯ ಸಿದ್ಧಾಂತಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ’ ಎಂದು ನೊಬೆಲ್‌ ಪುರಸ್ಕೃತ ಖಭೌತ ವಿಜ್ಞಾನಿ ಪ್ರೊ.ಕಿಪ್‌ ಎಸ್‌.ಥ್ರಾನ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ 9ನೇ ವರ್ಷದ ಇನ್ಪೊಸಿಸ್‌ ಪ್ರಶಸ್ತಿಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ 6 ಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದರು.

‘ವಿಜ್ಞಾನ ಗೊತ್ತಿಲ್ಲದ ಮತ್ತು ವೈಜ್ಞಾನಿಕ ಸತ್ಯ ಅಲ್ಲಗಳೆಯುವಂತಹ ನಾಯಕರನ್ನು ಜಗತ್ತು ಹೊಂದಿದೆ. ಅದರಲ್ಲೂ ಅಮೆರಿಕದಂತಹ ದೇಶಕ್ಕೆ ಇಂತಹ ನಾಯಕ ದುರದೃಷ್ಟವಶಾತ್‌ ದೊರೆತಿದ್ದಾರೆ. ಜಗತ್ತು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ವಿಜ್ಞಾನದಲ್ಲಿ ಪರಿಹಾರವಿದೆ ಎಂಬುದನ್ನು ನಾಯಕರಿಗೆ, ಜನರಿಗೆ ಮನವರಿಕೆ ಮಾಡಿ ಕೊಡಬೇಕಿದೆ’ ಎಂದರು.

***

ಯಾವ ವಿಜ್ಞಾನಿಗಳೂ ಪ್ರಶಸ್ತಿಗಾಗಿ ಸಂಶೋಧನೆ ನಡೆಸುವುದಿಲ್ಲ. ಮನುಕುಲಕ್ಕೆ ಒಳಿತಾಗುವಂತಹುದನ್ನು ಆವಿಷ್ಕರಿಸುವ ತುಡಿತದಿಂದ ನವೀನವಾದುದನ್ನು ಶೋಧಿಸುತ್ತಾರೆ – ಸಂಘಮಿತ್ರ ಬಂದೋಪಾಧ್ಯಾಯ

***

ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ವಿಜ್ಞಾನ ಕ್ಷೇತ್ರದಲ್ಲಿ ನಾವು ಸಾಧಿಸಿದ್ದನ್ನು ಇನ್ಫೊಸಿಸ್‌ ಗುರುತಿಸಿರುವುದು ಖುಷಿ ನೀಡಿದೆ – -- ಪ್ರೊ.ಉಪೀಂದರ್ ಸಿಂಗ್ ಭಲ್ಲ

***

ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕರೆ ಸಾಮಾನ್ಯರೂ ಅಸಾಮಾನ್ಯ ಸಾಧನೆ ಮಾಡಬಹುದು

– ಪ್ರೊ.ಯಮುನಾ ಕೃಷ್ಣನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry