ಸತ್ಯ ಹೇಳಿದರೆ ಯಾಕಪ್ಪ ಕೋಪ?

7

ಸತ್ಯ ಹೇಳಿದರೆ ಯಾಕಪ್ಪ ಕೋಪ?

Published:
Updated:
ಸತ್ಯ ಹೇಳಿದರೆ ಯಾಕಪ್ಪ ಕೋಪ?

ಚಾಮರಾಜನಗರ: ಭಾಷಣದ ಆರಂಭದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ವಾಗ್ದಾಳಿ ಆರಂಭಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ, ಯಡಿಯೂರಪ್ಪ ಹೇಳುತ್ತಾರೆ. ಅಧಿಕಾರದಲ್ಲಿ ಇದ್ದಾಗ ಮಾಡದವರು ಈಗ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ನೀರಾವರಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ₹55,000 ಕೋಟಿ ವೆಚ್ಚ ಮಾಡಿದೆ. ಹಿಂದಿನ ಸರ್ಕಾರ ಮಾಡಿರುವುದು ಕೇವಲ ₹18,000 ಕೋಟಿ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.

ಆಗ ವೇದಿಕೆಯಲ್ಲಿದ್ದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿಜೆಪಿಯ ಪಿ.ಎನ್. ದಯಾನಿಧಿ, ‘ಇದು ಸರ್ಕಾರಿ ಕಾರ್ಯಕ್ರಮ. ರಾಜಕೀಯ ಸಮಾವೇಶವಲ್ಲ. ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳಿ’ ಎಂದು ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು. ಅವರು ಮುಖ್ಯಮಂತ್ರಿ ಕಡೆಗೆ ಹೋಗುವುದನ್ನು ತಡೆದ ಪೊಲೀಸರು ತಡೆದರು.

‘ಬಿಡ್ರೀ, ಏನೂ ಮಾಡಬೇಡಿ. ಎಳೆದಾಡಬೇಡಿ’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೂ ಪೊಲೀಸರು ದಯಾನಿಧಿ ಅವರನ್ನು ವೇದಿಕೆಯಿಂದ ಬಲವಂತವಾಗಿ ಎಳೆದೊಯ್ದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘ಸತ್ಯ ಹೇಳಿದರೆ ಯಾಕಪ್ಪ ಕೋಪ ನಿನಗೆ? ಇದ್ದದ್ದು ಇದ್ದಂಗೆ ಹೇಳಿದರೆ... ಏಕೆ ಸತ್ಯ ಹೇಳಬಾರದಾ?’ ಎಂದು ಬಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪೊಲೀಸರ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಾಮರಾಜನಗರ:
ಮುಖ್ಯಮಂತ್ರಿ ಕಾರ್ಯಕ್ರಮದ ವೇಳೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪಿ.ಎನ್. ದಯಾನಿಧಿ ಅವರನ್ನು ಬಂಧಿಸಿದ್ದನ್ನು ಖಂಡಿಸಿ ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ಸಂತೇಮರಹಳ್ಳಿ ವೃತ್ತದ ಬಳಿ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಟೈರ್‌ಗೆ ಬೆಂಕಿ ಹಚ್ಚಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ ಡಿವೈಎಸ್‌ಪಿ ಜಯಕುಮಾರ್‌, ದಯಾನಿಧಿ ಅವರನ್ನು ಬಂಧನ ಮಾಡಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣಕ್ಕೆ ಅವರನ್ನು ಗುಂಡ್ಲುಪೇಟೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಬಳಿಕ, ದಯಾನಿಧಿ ದೂರವಾಣಿ ಕರೆ ಮಾಡಿ, ತಾವು ಗುಂಡ್ಲುಪೇಟೆಯ ಪಕ್ಷದ ಕಚೇರಿಯಲ್ಲಿರುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಎಂ. ಗಾಡ್ಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಲಗಾಣ ಶಾಂತಮೂರ್ತಿ, ಜಿಲ್ಲಾ ವಕ್ತಾರ ಜಿ. ನಿಜಗುಣರಾಜು, ಗ್ರಾಮಾಂತರ ಮಂಡಲ ಅಧ್ಯಕ್ಷ ಸುಂದರಪ್ಪ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್‌, ನಗರಸಭೆ ಸದಸ್ಯ ರಾಜಶೇಖರ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರವೀಶ್‌, ನಾಗಸುಂದರಮ್ಮ, ಮುಖಂಡರಾದ ಮಹದೇವನಾಯಕ, ಮಹೇಶ್‌, ರಾಘವೇಂದ್ರ, ಚಂದ್ರಶೇಖರ್‌, ನಾಗೇಂದ್ರಬಾಬು, ಪರಶಿವಮೂರ್ತಿ, ಮಲ್ಲೇಶ್‌, ಪೃಥ್ವಿರಾಜ್‌, ಎನ್. ಮಂಜುನಾಥ್‌, ನಾಗಶ್ರೀ ಪಾಲ್ಗೊಂಡಿದ್ದರು.

‘ಮೂತ್ರ ವಿಸರ್ಜನೆಗೂ ಅವಕಾಶ ನೀಡಲಿಲ್ಲ’

ಗುಂಡ್ಲುಪೇಟೆ: ದಯಾನಿಧಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧವಾರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ತಾ.ಪಂ. ಉಪಾಧ್ಯಕ್ಷ ದಯಾನಿಧಿ ಮಾತನಾಡಿ, ‘ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಸರ್ಕಾರದ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ವಿರುದ್ಧ ಮಾತನಾಡಿದರು. ಅವರ ಹೇಳಿಕೆಯನ್ನು ನಾನು ಖಂಡಿಸಿದೆ. ಇದಕ್ಕಾಗಿ ಪೊಲೀಸರು ನನ್ನನ್ನು ಜೀಪ್‌ನಲ್ಲಿ ಕೊರಿಸಿ ಮೊಬೈಲ್ ಕಸಿದುಕೊಂಡು ಸುತ್ತಾಡಿಸಿದರು. ಮೂತ್ರ ವಿಸರ್ಜನೆಗೂ ಅವಕಾಶ ನೀಡದೇ ಅಮಾನವೀಯವಾಗಿ ನಡೆದುಕೊಂಡರು’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಸ್. ನಿರಂಜನ್‌ಕುಮಾರ್, ಮಂಡಲ ಅಧ್ಯಕ್ಷ ಎಲ್. ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಪ್ರಭಾಕರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಂ. ಪ್ರಣಯ್, ಮುಖಂಡರಾದ ಬಾಲಸುಬ್ರಮಣ್ಯಂ, ಆಲತ್ತೂರು ಪ್ರವೀಣ್, ಶಶಿಧರ್, ಸದಾನಂದ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry