110ಕ್ಕೂ ಹೆಚ್ಚು ಬಾರ್‌ಗಳಿಗೆ ಇಲ್ಲ ಪರವಾನಗಿ

7
ಅಗ್ನಿ ದುರಂತದ ಬಳಿಕ ಪರಿಶೀಲನೆ ಚುರುಕುಗೊಳಿಸಿದ ಬಿಬಿಎಂಪಿ

110ಕ್ಕೂ ಹೆಚ್ಚು ಬಾರ್‌ಗಳಿಗೆ ಇಲ್ಲ ಪರವಾನಗಿ

Published:
Updated:

ಬೆಂಗಳೂರು: ನಗರದಲ್ಲಿ 110ಕ್ಕೂ ಹೆಚ್ಚು ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆಯದೆಯೇ ಕಾರ್ಯಾಚರಿಸುತ್ತಿವೆ. ಸ್ವತಃ ಪಾಲಿಕೆ ಅಧಿಕಾರಿಗಳೇ ಈ ವಿಚಾರವನ್ನು ತಿಳಿಸಿದ್ದಾರೆ.

ಪರವಾನಗಿ ಪಡೆಯದೆ ಕಾರ್ಯಾಚರಿಸುತ್ತಿರುವ ಬಾರ್‌ಗಳ ಸಂಖ್ಯೆ ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಇದೆ. ಇಲ್ಲಿ ಇಂತಹ 78 ಬಾರ್‌ಗಳಿವೆ. ರಾಜರಾಜೇಶ್ವರಿನಗರ ವಲಯದಲ್ಲಿ 20 ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಪರವಾನಗಿ ಹೊಂದಿಲ್ಲ.

ಮುಂಬೈನಲ್ಲಿ ಇತ್ತೀಚೆಗೆ ಸಂಭವಿಸಿದ ಕಮಲಾ ಮಿಲ್‌ ಅಗ್ನಿ ಅವಘಡದಲ್ಲಿ 14 ಮಂದಿ ಅಸುನೀಗಿದ ಬಳಿಕ ಪಾಲಿಕೆ ಅಧಿಕಾರಿಗಳು ಇಂತಹ ಬಾರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ನಗರದ ಕಲಾಸಿಪಾಳ್ಯದ ಕೈಲಾಶ್‌ ಬಾರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಮೃತಪಟ್ಟ ಬಳಿಕ ಪರವಾನಗಿ ಪರಿಶೀಲನೆ ಚುರುಕುಗೊಳಿಸಿದ್ದರು.

‘ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡದಲ್ಲಿ ಬಾರ್‌ ಮತ್ತು ರೆಸ್ಟೊರೆಂಟ್‌ ಆರಂಭಿಸಲು ಪರವಾನಗಿ ನೀಡಲು ಬರುವುದಿಲ್ಲ’ ಎನ್ನುತ್ತಾರೆ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಎಂ.ಎನ್‌.ಲೋಕೇಶ್‌.

‘ನಿಯಮಬಾಹಿರವಾಗಿ ನಡೆಯುತ್ತಿರುವ ಬಾರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವುಗಳನ್ನು ಮುಚ್ಚುವಂತೆ ನೋಟಿಸ್‌ ನೀಡುತ್ತೇವೆ’ ಎಂದು ತಿಳಿಸಿದರು. ರೂಫ್‌ಟಾಪ್‌ಗಳಲ್ಲಿರುವ 125 ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ಗಳನ್ನು ಮುಚ್ಚುವಂತೆ ಬಿಬಿಎಂಪಿ ಈಗಾಗಲೇ ನೋಟಿಸ್‌ ನೀಡಿದೆ. ಈ ಪೈಕಿ 65 ಈಗಾಗಲೇ ಮುಚ್ಚಿವೆ.

ಬೆಂಗಳೂರು ದಕ್ಷಿಣ ವಲಯದಲ್ಲಿ 53 ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಅನಧಿಕೃತವಾಗಿ ನಡೆಯುತ್ತಿದ್ದು, 7 ಮುಚ್ಚಿವೆ. ಬೆಂಗಳೂರು ಪೂರ್ವ ವಲಯದಲ್ಲಿ 49 ಅನಧಿಕೃತವಾಗಿ ನಡೆಯುತ್ತಿದ್ದವು.

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ರಾಜರಾಜೇಶ್ವರಿನಗರ, ಯಲಹಂಕ, ದಾಸರಹಳ್ಳಿ ವಲಯಗಳಲ್ಲಿ ಅನಧಿಕೃತ ರೂಫ್‌ಟಾಪ್‌ ಬಾರ್‌ ಮತ್ತು ರೆಸ್ಟೊರೆಂಟ್‌ಗಳೇ ಇಲ್ಲ.

‘ರೂಫ್‌ಟಾಪ್‌ಗಳಲ್ಲಿರುವ ಹಾಗೂ ಇತರ ಬಾರ್‌ ಮತ್ತು ರೆಸ್ಟೊರೆಂಟ್‌ಗಳ ಪರಿಶೀಲನೆಯನ್ನು ಮುಂದುವರಿಸುತ್ತೇವೆ. ನಗರದಲ್ಲಿ ಒಂದೂ ಅನಧಿಕೃತ ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಇರಬಾರದು. ಅಲ್ಲಿಯವರೆಗೆ ಕಾರ್ಯಾಚರಣೆ ನಿಲ್ಲುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ತಂಡವನ್ನು ರಚಿಸಿದ್ದೇವೆ. ವಾರದಲ್ಲಿ ಎರಡು ಬಾರಿ ಪರಿಶೀಲನೆ ನಡೆಸುತ್ತೇವೆ’ ಎಂದು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಜಾಹಿದ್‌ ಪಾಷಾ ತಿಳಿಸಿದರು.

ಬಿಬಿಎಂಪಿಯ ಆರೋಗ್ಯ ಸ್ಥಾಯಿಸಮಿತಿಯವರು ಹಾಗೂ ಆರೋಗ್ಯ ಅಧಿಕಾರಿಗಳು ರೂಫ್‌ಟಾಪ್‌ಗಳಲ್ಲಿರುವ ‘ಪಬ್‌ ಮತ್ತು ಬಾರ್‌’ಗಳ ಪರಿಶೀಲನೆಯನ್ನೂ ಆರಂಭಿಸಿದ್ದಾರೆ.

ರೂಫ್‌ ಟಾಪ್‌ ಬಾರ್ ಅಂಡ್‌ ರೆಸ್ಟೋರೆಂಟ್‌–ಎಚ್ಚರ ಅಗತ್ಯ

ಬೆಂಗಳೂರು: ‘ಇತ್ತೀಚೆಗೆ ಮುಂಬೈನ ರೂಫ್‌ ಟಾಪ್ ರೆಸ್ಟೋರೆಂಟ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 14 ಜನ ಸಾವನ್ನಪ್ಪಿದಂತಹ ದುರಂತ ಪ್ರಕರಣಗಳು ಬೆಂಗಳೂರಿನಲ್ಲೂ ಸಂಭವಿಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಚ್ಚರ ವಹಿಸಬೇಕಿದೆ’ ಎಂದು ಹೈಕೋರ್ಟ್ ಹೇಳಿದೆ.

‘ಅಗ್ನಿ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮ ಪಾಲನೆ ಮಾಡಿಲ್ಲ’ ಎಂಬ ಕಾರಣಕ್ಕೆ ಬಿಬಿಎಂಪಿ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿರುವ ನಗರದ ‘ದಿ ಓಪನ್ ಬಾಕ್ಸ್ ಆ್ಯಂಡ್ ರೆಸ್ಟೋರೆಂಟ್’ ಮಾಲೀಕ ಅಮಿತ್ ಅಹುಜಾ ಅವರ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ಅಗ್ನಿ ಅವಘಡ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಪಾಲಿಸದ ಪಬ್ ಹಾಗೂ ರೂಫ್‌ ಟಾಪ್ ರೆಸ್ಟೋರೆಂಟ್‌ಗಳ ವಿರುದ್ಧ ಬಿಬಿಎಂಪಿ ಸೂಕ್ತ ಕ್ರಮ ಜರುಗಿಸಬೇಕು. ಆದರೆ, ಕ್ರಮ ಜರುಗಿಸುವ ಮುನ್ನ ಅವುಗಳ ಮಾಲೀಕರಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು’ ಎಂದು ತಾಕೀತು ಮಾಡಿದರು.

‘ಅರ್ಜಿದಾರರು ಬಿಬಿಎಂಪಿ ನೋಟಿಸ್‌ಗೆ ಪ್ರತಿಯಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಈ ಸಂಬಂಧ ಬಿಬಿಎಂಪಿ ಇದೇ 16ರಂದು ಅರ್ಜಿದಾರರ ಅಹವಾಲು ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry