ಗ್ರಾಮೀಣ ಅಂಗಡಿ ಎಂಬ ದೇಸಿ ಮಾರುಕಟ್ಟೆ

7

ಗ್ರಾಮೀಣ ಅಂಗಡಿ ಎಂಬ ದೇಸಿ ಮಾರುಕಟ್ಟೆ

Published:
Updated:
ಗ್ರಾಮೀಣ ಅಂಗಡಿ ಎಂಬ ದೇಸಿ ಮಾರುಕಟ್ಟೆ

ಅಲ್ಲೊಂದು ಅಂಗಡಿಯಿದೆ. ಒಳನಡೆಯುತ್ತಿದ್ದಂತೆ ಲಾವಂಚದ ಘಮ, ಸಾಂಬ್ರಾಣಿ ಪರಿಮಳ ಮೂಗಿಗೆ ಬಡಿಯುತ್ತವೆ. ಸುವಾಸನೆ ಹೀರಿ ಮೈಮರೆತವರ ಕಣ್ಣಿಗೆ ಸಾಲುಸಾಲು ಕರಕುಶಲ ವಸ್ತುಗಳ ರಾಶಿ ಕಾಣಿಸುತ್ತದೆ. ಈ ವಿಶಿಷ್ಟ ಅಂಗಡಿಯ ಹೆಸರು ‘ಗ್ರಾಮೀಣ ಅಂಗಡಿ’.

ಹೆಸರಿನಲ್ಲಿ ಹಳ್ಳಿಯಿದೆಯಾದರೂ ಇದರ ಉಪಯೋಗ ಮಾತ್ರ ನಗರವಾಸಿಗಳಿಗೆ. ಆಧುನಿಕ ಜೀವನಶೈಲಿಯ ವೇಗದಲ್ಲಿ ಆರೋಗ್ಯದ ಕಾಳಜಿ ಮರೆತವರಿಗೆ ಸಿರಿಧಾನ್ಯ ಮತ್ತು ದೇಸಿ ಜೀವನ ಪದ್ಧತಿಯ ಜಾಗೃತಿ ಮೂಡಿಸಲು ಯತ್ನಿಸುತ್ತಿರುವ ಮಳಿಗೆಯಿದು. ಇಲ್ಲಿ ಸಿರಿಧಾನ್ಯಗಳು ಮಾತ್ರವಲ್ಲದೆ, ಎಲ್ಲ ಬಗೆಯ ದೇಸಿ ಉತ್ಪನ್ನಗಳೂ ಲಭ್ಯ.

ಎಲ್ಲ ಸರಕುಗಳು ಉತ್ಪಾದಕರಿಂದ ನೇರವಾಗಿ ಅಂಗಡಿಗೆ ಬರುತ್ತವೆ. ಮಧ್ಯವರ್ತಿಗಳ ಹಾವಳಿಯಿಲ್ಲದ ಕಾರಣ ಧಾರಣೆಯೂ ತಕ್ಕಮಟ್ಟಿಗೆ ಕಡಿಮೆ ಇದೆ. ದೇಸಿ ವಸ್ತುಗಳ ಬಗ್ಗೆ ಜನರಲ್ಲಿ ನಿಧಾನವಾಗಿಯಾದರೂ ಜಾಗೃತಿ ಮೂಡುತ್ತಿದೆ. ಹೀಗಾಗಿ ವ್ಯಾಪಾರವೂ ಉತ್ತಮಗೊಳ್ಳುತ್ತಿದೆ.

‘ತುಮಕೂರಿನಿಂದ ಸಿರಿಧಾನ್ಯಗಳು, ಶಿವಮೊಗ್ಗದಿಂದ ಬಿದಿರಿನ ವಸ್ತುಗಳು, ಬಿಜಾಪುರದಿಂದ ಬುಡಕಟ್ಟು ವಿನ್ಯಾಸದ ಆಭರಣಗಳು, ಚನ್ನಪಟ್ಟಣದಿಂದ ಗೊಂಬೆಗಳು, ದೊಡ್ಡಬಳ್ಳಾಪುರದಿಂದ ಮಣ್ಣಿನ ಕಲಾಕೃತಿಗಳು, ಭಟ್ಕಳ ಮತ್ತು ಇತರ ಪ್ರದೇಶಗಳಿಂದ ಶುದ್ಧ ಜೇನು ಇಲ್ಲಿಗೆ ಬರುತ್ತದೆ’ ಎನ್ನುತ್ತಾರೆ ಅಂಗಡಿಯ ವ್ಯವಸ್ಥಾಪಕ ಬಿ. ಗಂಗಾಧರಮೂರ್ತಿ.

‘ಕುಶಲಕರ್ಮಿಗಳು ಜೀವನೋಪಾಯಕ್ಕಾಗಿ ಕಸುಬು ಬದಲಿಸುವ ಪರಿಸ್ಥಿತಿ ಎದುರಾಗಿದೆ. ಹಲವರು ಬದುಕಿಗಾಗಿ ಇತರ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಹಾಗೂ ಕಲಿತ ಕಲೆಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಮನುಸ್ಸು ಮಾಡಿದ ಸುಮಾರು 250ಕ್ಕೂ ಹೆಚ್ಚು ಕರಕುಶಲಿಗಳು ಸಂಘಟಿತರಾದರು. ಈ ಸಂಘಟನೆಯ ಫಲವಾಗಿ ಗ್ರಾಮೀಣ ಕರಕುಶಲ ಉದ್ಯಮ ಒಕ್ಕೂಟ ಅಸ್ತಿತ್ವಕ್ಕೆ ಬಂತು’ ಎನ್ನುವುದು ಅಂಗಡಿಯ ಸಂಸ್ಥಾಪಕ ಸದಸ್ಯ ಬಿ.ರಾಜಶೇಖರಮೂರ್ತಿ ಅವರ ಮಾತು.

ಈ ಒಕ್ಕೂಟದ ಪ್ರಯತ್ನವೇ ಗ್ರಾಮೀಣ ಅಂಗಡಿ. ಸದ್ಯ ಜಯನಗರ ಹಾಗೂ ರಾಜಾಜಿನಗರದಲ್ಲಿ ಅಂಗಡಿಗಳಿವೆ. ಶೀಘ್ರ ಬನಶಂಕರಿಯಲ್ಲಿಯೂ ತೆರೆಯುವ ಉದ್ದೇಶವಿದೆ. ಕುಶಲಕರ್ಮಿಗಳೇ ಅಂಗಡಿಯನ್ನು ನಿರ್ವಹಿಸುವ ಕಾರಣ ಕೆಲಸಗಾರರು, ಮಾಲೀಕರೆಂಬ ಭೇದವಿಲ್ಲ. ಬಂದ ಆದಾಯಕ್ಕೆ ಎಲ್ಲರೂ ಸಮಾನ ಪಾಲುದಾರರು. ಸಂಕ್ರಾಂತಿ ಹಿನ್ನೆಲೆಯಲ್ಲಿ ‘ಗ್ರಾಮೀಣ ಅಂಗಡಿ’ಯ ಎರಡೂ ಮಳಿಗೆಗಳಲ್ಲಿ ಉತ್ಪನ್ನಗಳಿಗೆ ರಿಯಾಯಿತಿ ಸೌಲಭ್ಯ ಇದೆ.

ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಳಿಗೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ಪಾಂಡಿಚೇರಿ, ಪಶ್ಚಿಮ ಬಂಗಾಳ, ಬಿಹಾರ ಮತ್ತಿತರ ರಾಜ್ಯಗಳ ಗುಣಮಟ್ಟದ ಸೀರೆಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಹತ್ತಿ, ರೇಷ್ಮೆ, ಇಳಕಲ್, ಗದ್ದಾರ್, ಕಸೂತಿ ಕಲೆಯಿರುವ ಕರ್ನಾಟಕದ ಸೀರೆಗಳೂ ಲಭ್ಯ.

*

ಪುಸ್ತಕ ಬಿಡುಗಡೆ, ದೇಸಿ ಆಹಾರದ ಕುರಿತು ಉಪನ್ಯಾಸ

‘ದೇಸಿ ಆಹಾರ: ಆಧುನಿಕ ರೋಗಗಳ ನಿವಾರಣೆ‍’ ಕುರಿತು ಉಪನ್ಯಾಸ– ಆಹಾರ ತಜ್ಞ ಡಾ. ಖಾದರ್‌. ‘ತಿಳಿದು ತಿನ್ನೋಣ ಬನ್ನಿ’ ಕೃತಿಯ ನಾಲ್ಕನೇ ಮುದ್ರಣ ಬಿಡುಗಡೆ– ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್. ಉಪಸ್ಥಿತಿ: ಬಿ.ರಾಜಶೇಖರ ಮೂರ್ತಿ, ಬಿ.ಗಂಗಾಧರ ಮೂರ್ತಿ. ಆಯೋಜನೆ– ಗ್ರಾಮೀಣ ಅಂಗಡಿ. ಸ್ಥಳ– ಪ್ರೊ.ಬಿ.ವಿ. ನಾರಾಯಣ ರಾವ್ ಸಭಾಂಗಣ, ಬಿ.ಎಚ್. ಎಸ್. ಉನ್ನತ ಶಿಕ್ಷಣ ಸಂಸ್ಥೆ, ವಿಜಯ ಕಾಲೇಜು ಆವರಣ, ಕೂಲ್‌ ಜಾಯಿಂಟ್‌ ಎದುರು, ಜಯನಗರ 4ನೇ ಬ್ಲಾಕ್‌. ಬೆಳಿಗ್ಗೆ 10.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry