ಬಳ್ಳಾರಿ ಪಾಲಿಕೆ ಸದಸ್ಯನ ಹತ್ಯೆಗೆ ಯತ್ನ

7

ಬಳ್ಳಾರಿ ಪಾಲಿಕೆ ಸದಸ್ಯನ ಹತ್ಯೆಗೆ ಯತ್ನ

Published:
Updated:

ಬಳ್ಳಾರಿ: ಇಲ್ಲಿನ 8ನೇ ವಾರ್ಡಿನ ಪಾಲಿಕೆ ಸದಸ್ಯ ವೈ.ಬಿ.ಸೀತಾರಾಂ ಅವರ ಮೇಲೆ ಆಂಧ್ರದ ಗುಂಪೊಂದು ಸಿನಿಮೀಯವಾಗಿ ಕಾರದಪುಡಿ ಎರಚಿ ಹತ್ಯೆಗೆ ಯತ್ನಿಸಿದ ಘಟನೆ ನಗರ ಹೊರವಲಯದ ಅಂದ್ರಾಳುವಿನಲ್ಲಿರುವ ಅವರ ಮನೆ ಸಮೀಪ ಗುರುವಾರ ಸಂಜೆ ನಡೆದಿದೆ. ಸದಸ್ಯ ಪಾರಾಗಿದ್ದು, ಘಟನೆ ಸಂಬಂಧ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಸಂಜೆ 6.55ರ ವೇಳೆ ಆರೇಳು ಸಂಬಂಧಿಕರು ಹಾಗೂ ಬೆಂಬಲಿಗರೊಂದಿಗೆ ಮನೆ ಸಮೀಪದ ಸರ್ಕಾರಿ ಶಾಲೆಯ ಮುಂದೆ ಕುಳಿತಿದ್ದಾಗ ಎರಡು ಆಟೋರಿಕ್ಷಾಗಳಲ್ಲಿ ಬಂದಿಳಿದವರು ನನ್ನ ಹತ್ಯೆಗೆ ಯತ್ನಿಸಿದರು’ ಎಂದು ಸೀತಾರಾಂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸಾದ ಎಂದಕೊಂಡಿದ್ದೆ...: ‘ಆಟೊ ರಿಕ್ಷಾದಿಂದ ಇಳಿದ ಒಬ್ಬ ಸುಮಾರು ಎರಡು ಕೆ.ಜಿ.ತೂಕದ ಪೊಟ್ಟಣ ಹಿಡಿದು ನನ್ನ ಬಳಿಗೆ ಬಂದ. ಪ್ರಸಾದ ಕೊಡಲು ಬರತ್ತಿರಬಹುದು ಎಂದು ನಾವು ಭಾವಿಸಿದ್ದೆ. ಆದರೆ ಆತ ಏಕಾಏಕಿ ನನ್ನ ಮೇಲೆ ಕಾರದಪುಡಿ ಎರಚಿದ’ ಎಂದು ಸೀತಾರಂ ‘ಪ್ರಜಾವಾಣಿ’ಗೆ ಘಟನೆಯನ್ನು ವಿವರಿಸಿದರು.

‘ಇನ್ನೊಬ್ಬ ಮಚ್ಚು ತೆಗೆದು ನನ್ನ ಬಳಿಗೆ ಬರುತ್ತಿದ್ದಂತೆಯೇ ನನ್ನ ತಮ್ಮನ ಮಗ ಗೋವಿಂದ ಆತನಿಂದ ಕಸಿದುಕೊಂಡು ಬೆನ್ನಿಗೆ ಗುದ್ದಿದ. ಆತ ಕೆಳಕ್ಕೆ ಬಿದ್ದ. ಕಬ್ಬಿಣದ ರಾಡ್‌ ಹಿಡಿದು ಬಂದ ಇನ್ನೊಬ್ಬನನ್ನು ನನ್ನ ಬೆಂಬಲಿಗ ಆಂಜಿನಿ ತಡೆದು ಕಸಿದಿಕೊಂಡ’ ಎಂದು ಹೇಳಿದರು.

‘ಇಷ್ಟೆಲ್ಲವೂ ಕೇವಲ 6–8 ನಿಮಿಷದಲ್ಲಿ ನಡೆಯಿತು. ನಮ್ಮ ಪ್ರತಿರೋಧಕ್ಕೆ ಬೆದರಿದ ದುಷ್ಕರ್ಮಿಗಳೆಲ್ಲರೂ ಆಟೊರಿಕ್ಷಾ ಹತ್ತಿ ಪರಾರಿಯಾದರು. ಆದರೂ ಅವರನ್ನು ಹಿಡಿಯುವ ಯತ್ನದಲ್ಲಿ ಒಬ್ಬ ನಮ್ಮ ಕೈಗೆ ಸಿಕ್ಕಿಹಾಕಿಕೊಂಡ’ ಎಂದರು.

‘ಆಗ ನನ್ನೊಂದಿಗೆ ಇದ್ದ ಸಂಬಂಧಿಕರು ಮತ್ತು ಬೆಂಬಲಿಗ ಯುವಕರ ಸಮಯಪ್ರಜ್ಞೆ ಮತ್ತು ಪ್ರತಿದಾಳಿಯಿಂದಾಗಿ ನನ್ನ ಜೀವ ಉಳಿಯಿತು. ರಾತ್ರಿ 11.30ರ ವೇಳೆಗೆ ದೂರು ದಾಖಲೆ ಪ್ರಕ್ರಿಯೆ ಮುಗಿಯಿತು. ವಿಮ್ಸ್‌ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವ ಹೊತ್ತಿಗೆ ಶುಕ್ರವಾರ ಬೆಳಗಿನ ಜಾವ 2.30 ಆಗಿತ್ತು ’ ಎಂದರು.

ಎಂಟು ಗಂಟೆಯ ವೇಳೆಗೆ ಸ್ಥಳಕ್ಕೆ ಬಂದ ಎಪಿಎಂಸಿ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ನಂತರ ಠಾಣೆಗೆ ತೆರಳಿ ಸೀತಾರಾಂ ದೂರು ನೀಡಿದರು. ಅಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಸೀತಾರಾಂ ಅವರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರಕರಣದ ತನಿಖೆಗೆ ನಗರ ಡಿವೈಎಸ್ಪಿ ಉಮೇಶ್‌ನಾಯಕ್‌ ಹಾಗೂ ಬ್ರೂಸ್‌ಪೇಟೆ ಸಿಪಿಐ ನೇತೃತ್ವದಲ್ಲಿ ಎರಡು ತಂಡವನ್ನು ರಚಿಸಲಾಗಿದೆ.

ಬಂದಿದ್ದವರು ಎಷ್ಟು ಮಂದಿ?: ಹತ್ಯೆಗೆ ಯತ್ನಿಸಲು ಎಷ್ಟು ಬಂದಿ ಬಂದಿದ್ದರು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ‘ಸುಮಾರು ಇಪ್ಪತ್ತು ಮಂದಿ ಬಂದಿದ್ದರು’ ಎಂಬುದು ಸೀತಾರಾಂ ಅವರ ನುಡಿ.

ಆದರೆ ಕತ್ತಲಿನಲ್ಲಿ ನಡೆದ ಘಟನೆಯಲ್ಲಿ ದುಷ್ಕರ್ಮಿಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಆದರೆ ವಶದಲ್ಲಿರುವ ಆರೋಪಿ ಸುಮಾರು ಇಪ್ಪತ್ತು ಮಂದಿ ಬಂದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ರಾಜಕೀಯ ವೈರತ್ವ ಕಾರಣ?

‘ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮಗೆ ಟಿಕೆಟ್‌ ಕೊಡಿಸುವುದಾಗಿ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಭರವಸೆ ನೀಡಿದ್ದಾರೆ. ಅದನ್ನು ಸಹಿಸಲಾಗದವರು ನನ್ನ ಹತ್ಯೆಗೆ ಯತ್ನಿಸಿರಬಹುದು’ ಎಂದೂ ಸೀತಾರಾಂ ಆರೋಪಿಸಿದ್ದಾರೆ.

‘ಅವರು ಮಾಜಿ ರೌಡಿಶೀಟರ್‌ ಆಗಿರುವುದರಿಂದ ಹಳೇ ದ್ವೇಷದ ಕಾರಣಕ್ಕೂ ಘಟನೆ ನಡೆದಿರಬಹುದು’ ಎಂದು ಶಂಕಿಸಿರುವ ಪೊಲೀಸರು,  ‘ದುಷ್ಕರ್ಮಿಗಳು ಆಂಧ್ರದ ತಾಡಪತ್ರಿಯಿಂದ ಬಂದಿದ್ದರು’ ಎಂದು ತಿಳಿಸಿದ್ದಾರೆ.

* * 

ಹತ್ಯೆ ಯತ್ನ ನನ್ನನ್ನು ದಿಗ್ಭ್ರಮೆಗೆ ತಳ್ಳಿದೆ. ಆರೋಪಿಗಳನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು

ವೈ.ಬಿ.ಸೀತಾರಾಂ,

ಪಾಲಿಕೆ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry