ಕೊಳಚೆ ನೀರು ಹರಿಸಲು ಬಿಡುವುದಿಲ್ಲ

7

ಕೊಳಚೆ ನೀರು ಹರಿಸಲು ಬಿಡುವುದಿಲ್ಲ

Published:
Updated:
ಕೊಳಚೆ ನೀರು ಹರಿಸಲು ಬಿಡುವುದಿಲ್ಲ

ಚಿಕ್ಕಬಳ್ಳಾಪುರ: ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕುಂಟುತ್ತಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರುವ ಜತೆಗೆ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಹರಿಸುವ ಯೋಜನೆಯನ್ನು ರದ್ದು ಮಾಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ ‘ಪರಿವರ್ತನಾ ಯಾತ್ರೆ’ ನಡೆಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಭಾಗದ ಜನರಿಗೆ ಕುಡಿಯುವ ನೀರಿನ ಹಾಹಾಕಾರವಿದೆ. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರು, ಕೆರೆ ತುಂಬಿಸಲು, ಅಂರ್ತಜಲ ವೃದ್ಧಿಗಾಗಿ 2012ರಲ್ಲಿ ₹ 12 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಗೆ ನಾನು ಆಡಳಿತಾತ್ಮಕ ಅನುಮೋದನೆ ಕೊಟ್ಟು, ಕೆಲಸ ಆರಂಭಿಸಲು ಟೆಂಡರ್‌ ಕರೆದಿದ್ದೆ. ಆದರೆ, ಏಳು ವರ್ಷಗಳು ಕಳೆದರೂ ಈವರೆಗೆ ಆ ಯೋಜನೆ ಅನುಷ್ಟಾನಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರು 2017ರ ಒಳಗೆ ಈ ಭಾಗಕ್ಕೆ ಎತ್ತಿನಹೊಳೆ ತರುತ್ತೇನೆ ಎಂದು ಹೇಳಿದ್ದರು. ಆದರೆ ಅದು ಇನ್ನೂ ಎಲ್ಲಿದೆ? ಆಮೆ ವೇಗದ ಕೆಲಸ ನಡೆದರೆ ಇನ್ನೂ15 ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಅವರಿಗೆ ಕಮಿಷನ್‌ ಬೇಕು. ಪೈಪ್‌ ತಂದು ಕಮಿಷನ್ ಪಡೆದರೆ ಸಾಕು, ನೀರು ತರಬೇಕೆಂದಿಲ್ಲ.

ಇದು ದೇಶ ಕಂಡ ಮೊದಲ ಭ್ರಷ್ಟ ಸರ್ಕಾರ. ಇದನ್ನು ಕಿತ್ತು ಒಗೆಯಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದರೆ, ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಈ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕಿತ್ತು. ಆದರೆ ಅವರು ನೀರಾವರಿ ಯೋಜನೆಗೆ ಆದ್ಯತೆ ಕೊಡಲಿಲ್ಲ. ಎತ್ತಿನಹೊಳೆ ಯೋಜನೆ ಆದಷ್ಟು ಬೇಗ ಅನುಷ್ಟಾನಕ್ಕೆ ಬಂದು, ಈ ಭಾಗದ ಎಲ್ಲ ಕೆರೆಗಳಿಗೆ ನೀರು ಬಂದು, ಶುದ್ಧ ಕುಡಿಯುವ ನೀರು ಸಿಗಬೇಕಿದೆ’ ಎಂದರು.

‘ಒಂದು ಲಕ್ಷ ಕೋಟಿ ಖರ್ಚು ಮಾಡಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇನೆ. ಅದಕ್ಕೆ ನಿಮ್ಮ ಆರ್ಶೀವಾದ ಬೇಕು. ನನ್ನ ಕಾಲದಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಗಾ ಡೇರಿಗೆ 15 ಎಕರೆ ಜಾಗ, ₹10 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿ, ₹ 5 ಕೋಟಿ ಬಿಡುಗಡೆ ಮಾಡಿ ಕೆಲಸ ಆರಂಭಿಸಿದ್ದೆ. 2006ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಸಚಿವನಾಗಿ ಚಿಕ್ಕಬಳ್ಳಾಪುರ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆ’ ಎಂದು ತಿಳಿಸಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆರ್‌ಟಿಒ ಕಚೇರಿ, ಮಿನಿ ವಿಧಾನಸೌಧ, ಆರು ಮೊರಾರ್ಜಿ ಶಾಲೆ, ಪ್ರಥಮದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣ, ನವೀಕರಣಕ್ಕೆ ₹ 10 ಕೋಟಿ ಮಂಜೂರು, ಅಂಬೇಡ್ಕರ್ ಭವನ, ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳ ನಿರ್ಮಾಣ.. ಹೀಗೆ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಈಗಿರುವ ಸರ್ಕಾರ ಈ ಜಿಲ್ಲೆಗೆ ಏನು ಮಾಡಿದ್ದೀರಿ ಪಟ್ಟಿ ಮಾಡಿ ಕೊಡಿ’ ಎಂದು ಕೇಳಿದರು.

‘ಕೇಂದ್ರ ರೈಲ್ವೆ ಬಜೆಟ್‌ನಲ್ಲಿ

₹ 120 ಕೋಟಿ ವೆಚ್ಚದ ಯಲಹಂಕ –ಪೇನುಗೊಂಡ ರೈಲು ಮಾರ್ಗ ಡಬ್ಲಿಂಗ್‌ ಕಾಮಗಾರಿ ಘೋಷಣೆಯಾಗಿದೆ. ಈ ಬಗ್ಗೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಹೇಳಿ ಮಾಡಿಸುತ್ತೇನೆ. ಈ ಭಾಗದಲ್ಲಿ ಹಣ್ಣು, ತರಕಾರಿ ಬೆಳೆಯುವವರಿಗೆ ಪ್ರೋತ್ಸಾಹ ನೀಡಿ ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ. ನೀರಾವರಿ ಬೇಡಿಕೆಗೆ ನ್ಯಾಯ ಒದಗಿಸಿ ಕೊಡುತ್ತೇನೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಮೋದಿ ಅವರನ್ನು ನೋಡಿ ಮತ ಹಾಕಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿಕೊಂಡರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್‌.ಅಶೋಕ್‌ ಮಾತನಾಡಿ, ‘ಯಡಿಯೂರಪ್ಪ ಅವರು ಎಂದಿಗೂ ಜಾತಿ ಒಡೆದಿಲ್ಲ. ಆದರೆ ಇವತ್ತು ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯಿತ ಎಂದು ಮಾಡಿ ಜಾತಿ ಒಡೆಯಲು ಹೊರಟಿದ್ದಾರೆ. ಇವರು ನಾಳೆ ಒಕ್ಕಲಿಗರು, ತಿಗಳರು, ಬಣಜಿಗರನ್ನು ಬಿಡದೆ ಒಡೆದು, ವಿಷಬೀಜ ಬಿತ್ತುತ್ತಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇಂತಹ ಕೆಲಸ ಮಾಡಬಾರದಾಗಿತ್ತು’ ಎಂದು ಹೇಳಿದರು.

‘ಇವತ್ತು ಕಾಂಗ್ರೆಸ್‌ನವರು ಮುಸ್ಲಿಮರು ಮತ್ತು ಹಿಂದೂಗಳ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ದೇಶದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಿ, ನಿರಂತರವಾಗಿ ನಡೆದಿರುವ ಹಿಂದೂಗಳ ಹತ್ಯೆ ನಿಲ್ಲಿಸಿ ಎಂದು ನಾವು ಹೇಳಿದರೆ, ಸಿದ್ದರಾಮಯ್ಯ ನಾವೇ ಅಪರಾಧಿಗಳು ಎನ್ನುವ ರೀತಿ ಮಾತನಾಡುತ್ತಾರೆ. ಇಂತಹ ದುರಹಂಕಾರಿ ಮುಖ್ಯಮಂತ್ರಿ, ಕೊಬ್ಬಿನಿಂದ ಮೆರೆಯುವ ಕಾಂಗ್ರೆಸ್ ಈ ರಾಜ್ಯಕ್ಕೆ ಬೇಕಾ? ಈ ಬಗ್ಗೆ ಜನ ಯೋಚನೆ ಮಾಡಬೇಕು’ ಎಂದು ತಿಳಿಸಿದರು.

ಸಂಸದ ಶ್ರೀರಾಮುಲು, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ, ಪುಟ್ಟಸ್ವಾಮಿ, ಮುಖಂಡರಾದ ರವಿ ಕುಮಾರ್, ಜಯದೇವ್, ಎನ್.ಎಂ. ರವಿ ನಾರಾಯಣರೆಡ್ಡಿ, ಎನ್. ಜ್ಯೋತಿರೆಡ್ಡಿ, ಪಿ.ಸಾಯಿಕುಮಾರ್, ಡಾ.ಜಿ.ವಿ.ಮಂಜುನಾಥ್, ಜಿ.ವಿ.ಕೃಷ್ಣಯ್ಯ, ಅರಿಕೆರೆ ಕೃಷ್ಣಾರೆಡ್ಡಿ, ರಾಮಲಿಂಗಪ್ಪ, ಬಿ.ಸಿ.ನಂದೀಶ್‌, ಮುಖಂಡರಾದ ಡಿ.ಆರ್‌.ಶಿವಕುಮಾರಗೌಡ ಸೇರಿದಂತೆ ಅನೇಕ ಮುಖಂಡರು ಯಡಿಯೂರಪ್ಪ ಅವರಿಗೆ ಸಾಥ್ ನೀಡಿದರು.

ಕಾಲು ಹಿಡಿದಾದರೂ ಹಣ ತರುವೆ

ಶಿಡ್ಲಘಟ್ಟ: ‘ಈಗಾಗಲೇ ಈ ಭಾಗದ ಜನರು ಫ್ಲೋರೈಡ್‌ ನೀರು ಕುಡಿದು ಖಾಯಿಲೆಗಳಿಂದ ನರಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೊಳಚೆ ನೀರು ಕೊಡಲು ಹೊರಟಿದ್ದಾರೆ. ಅದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜನರಿಗೆ ತೊಂದರೆ ಉಂಟು ಮಾಡಲು ಬಿಡುವುದಿಲ್ಲ. ಈ ಯೋಜನೆ ನಿಲ್ಲಿಸುತ್ತೇವೆ. ಪ್ರಧಾನಿ ಅವರ ಕಾಲನ್ನು ಹಿಡಿದಾದರೂ ಹಣ ಮಂಜೂರು ಮಾಡಿಸಿಕೊಂಡು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.

‘ರೇಷ್ಮೆಯನ್ನು ನಂಬಿರುವ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ’ ಎಂದು ಮನವಿ ಮಾಡಿದರು.

ನಾವು ಉಗ್ರರಾಗುವುದರಲ್ಲಿ ತಪ್ಪೇನಿದೆ?

ಗೌರಿಬಿದನೂರು: ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ‘ಸಿದ್ದರಾಮಯ್ಯ ಅವರಿಗೆ ಕಾಮಾಲೆ ರೋಗ ಬಂದಿದೆ. ಹೀಗಾಗಿ ಎಲ್ಲವೂ ಅವರಿಗೆ ಹಳದಿಯಾಗಿ ಕಾಣುತ್ತಿದೆ. ಅವರಿಗೆ ಮರ್ಯಾದೆ ಇಲ್ಲ. ಇದೀಗ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕೂಡ ಅವರು ಕಳೆಯುತ್ತಿದ್ದಾರೆ. ಅಧಿಕಾರದ ಅವಸಾನದ ಅಂಚಿನಲ್ಲಿರುವ ಸಿದ್ದರಾಮಯ್ಯ ಅವರು ಸಭ್ಯವಾಗಿ ವರ್ತಿಸದಿರುವುದು ರಾಜ್ಯದ ಜನತೆಗೆ ಮಾಡಿದ ಅವಮಾನ’ ಎಂದು ದೂರಿದರು.

‘ಕಾಂಗ್ರೆಸ್ ಸರಕಾರದ ಆಡಳಿತ ನೋಡಿದ ಜನರೇ ಉಗ್ರರಾಗುತ್ತಿರುವಾಗ, ನಾವು ಉಗ್ರರಾಗುವುದರಲ್ಲಿ ತಪ್ಪೇನಿದೆ? ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೂಡ ಉತ್ತರಪ್ರದೇಶ, ಗುಜರಾತ್‌ ಮಾದರಿಯಲ್ಲಿ ನಮಗೆ ಪೂರ್ಣ ಬಹುಮತ ದೊರೆಯುವ ವಿಶ್ವಾಸವಿದೆ’ ಎಂದರು.

‘ಕಾಂಗ್ರೆಸ್‌ ಗೊಬ್ಬರ ಹಾಕಿ ಬೆಳೆಸಿದ ಭಯೋತ್ಪಾದನೆ ದೇಶದಲ್ಲಿದೆ. ಕಾಂಗ್ರೆಸ್ ಪ್ರಚೋದಿತ ಭಯೋತ್ಪಾದನೆಯಿಂದಲೇ ಪ್ರಧಾನಿ ಇಂದಿರಾಗಾಂಧಿ ಅವರೇ ಬಲಿಯಾಗಬೇಕಾಯಿತು. ಎಲ್‌ಟಿಟಿಯನ್ನು ಪೋಷಿಸಿದ್ದು ಕೂಡ ಕಾಂಗ್ರೆಸ್ ಸರ್ಕಾರ. ದೇಶಕ್ಕಾಗಿ ಬಲಿದಾನ ಮಾಡಿದ ಪಕ್ಷ ನಮ್ಮದು ಎಂದು ಸ್ವಯಂ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್‌ನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಇಂದಿರಾಗಾಂಧಿ ಅವರುಗಳು ದೇಶಕ್ಕಾಗಿ ಬಲಿದಾನ ಮಾಡಿಲ್ಲ. ಇವತ್ತು ನಾವು ಕಾಂಗ್ರೆಸ್ ಬಲಿ ಹಾಕಬೇಕಿದೆ’ ಎಂದು ಹೇಳಿದರು.

ರಾಹುಲ್‌ ಕಾಲಿಟ್ಟ ಕಡೆ ಕಾಂಗ್ರೆಸ್ ಭಸ್ಮ

ಗೌರಿಬಿದನೂರು: ‘ರಾಹುಲ್ ಗಾಂಧಿ ಅವರದ್ದು ಐರನ್ ಲೆಗ್. ಅವರು ಕಾಲಿಟ್ಟ ಕಡೆ ಕಾಂಗ್ರೆಸ್ ಭಸ್ಮವಾಗಲಿದೆ. ಸಿದ್ದರಾಮಯ್ಯ ಅವರು ಕಮಿಷನ್ ಏಜೆಂಟ್‌ ಆಗಿ ಹೈಕಮಾಂಡ್ ಖಜಾನೆ ತುಂಬಿಸುತ್ತಿದ್ದಾರೆ. ಇಂತಹವರಿಂದ ಅಭಿವೃದ್ಧಿ ಎಲ್ಲಿ ಸಾಧ್ಯ? ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ₹3 ಲಕ್ಷ ಕೋಟಿ ಏನಾಯ್ತು ಎನ್ನುವ ಬಗ್ಗೆ ಸಿದ್ದರಾಮಯ್ಯ ಲೆಕ್ಕ ಕೊಡಲಿ. ಇವತ್ತು ಕರ್ನಾಟಕವನ್ನು ಸಿದ್ದರಾಮಯ್ಯ ಅವರ ಸರ್ಕಾರ ಭಯೋತ್ಪಾದನೆಯ ಕಾರ್ಖಾನೆಯನ್ನಾಗಿ ಮಾಡಿದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಆರೋಪಿಸಿದರು.

ಮೋದಿ ಅಕ್ಕಿಗೆ ಬಿಟ್ಟಿ ಪ್ರಚಾರ

ಗೌರಿಬಿದನೂರು: ‘ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕೇಂದ್ರ ಸರ್ಕಾರ ₹ 29 ನೀಡುತ್ತಿದೆ. ಆದರೆ ₹ 3 ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನವರು ಅನ್ನಭಾಗ್ಯ ಯೋಜನೆ ದುರುಪಯೋಗಪಡಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಪಡಿತರ ಅಂಗಡಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗಿವೆ. ಇದನ್ನು ಗಮನಿಸಿಯೇ ಇತ್ತೀಚೆಗೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇವತ್ತು ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಇತ್ತೀಚೆಗೆ ದಿನಕ್ಕೆ ₹200 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಬರೀ ನಾಟಕ. ಕೇಂದ್ರ ನೀಡಿದ ಅನುದಾನದ ಬಗ್ಗೆ ಅಮಿತ್ ಶಾ ಅವರು ಪ್ರಶ್ನಿಸುವುದರಲ್ಲಿ ತಪ್ಪೇನಿದೆ’ ಎಂದು ಕೇಳಿದರು.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಗೆ ಹಣ ಮತ್ತು ಸೀರೆ ಹಂಚಿ ಜನರನ್ನು ಸೆಳೆಯಲಾಗಿತ್ತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಂತಹ ದೃಶ್ಯವೊಂದರಲ್ಲಿ ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಪಕ್ಕದಲ್ಲೇ ಬಿಜೆಪಿ ಮುಖಂಡರು ಕಾರ್ಯಕ್ರಮಕ್ಕೆ ಬಂದವರಿಗೆ ಹಣ ಹಂಚುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪರಸ್ಥಳದಿಂದ ಬಂದಿದ್ದ ಮಹಿಳೆಯರು ಬಿಳಿ ಹಾಳೆಯ ಟೋಕನ್‌ಗಳು ಹಿಡಿದು ಬಿ.ಬಿ.ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರ ನ್ಯೂ ನ್ಯೂ ಹಾರಿಜನ್ ಶಾಲೆ ಬಳಿ ನೆರೆದಿದ್ದರು.

ಈ ಪೈಕಿ ಆವಲಗುರ್ಕಿಯಿಂದ ಬಂದಿದ್ದ ವನಜಾಕ್ಷಿ ಎಂಬುವರನ್ನು ವಿಚಾರಿಸಿದರೆ, ‘ಸೀರೆ, ಹಣ ನೀಡುವುದಾಗಿ ಹೇಳಿ ಟೋಕನ್‌ ಕೊಟ್ಟು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು. ಇದೀಗ ಅವುಗಳನ್ನು ಪಡೆದುಕೊಳ್ಳಲು ಬಂದಿದ್ದೇವೆ’ ಎಂದು ಹೇಳಿದರು.

ಕೈಕೊಟ್ಟ ಕರೆಂಟ್, ಡೈಲಾಗ್ ಹೊಡೆದ ಸಾಯಿಕುಮಾರ್

ಬಾಗೇಪಲ್ಲಿ: ಪರಿವರ್ತನಾ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡ ಅರಿಕೇರಿ ಸಿ.ಕೃಷ್ಣಾರೆಡ್ಡಿ ಅವರು ಮಾತನಾಡುವ ವೇಳೆ ವಿದ್ಯುತ್ ಕಡಿತಗೊಂಡಿತು. ಈ ವೇಳೆ ನೆರೆದಿದ್ದ ಜನರಲ್ಲಿ ಗುಸುಗುಸು ಕೇಳಿ ಬರಲು ಆರಂಭಿಸಿತು. ಇದೇ ವೇದಿಕೆಯಲ್ಲಿ ಮುಖಂಡ, ನಟ ಪಿ.ಸಾಯಿಕುಮಾರ್ ಅವರು ಕೆಲ ಡೈಲಾಗ್‌ಗಳನ್ನು ಹೇಳಿ ಜನರನ್ನು ರಂಜಿಸಿದರು.

ಗೆದ್ದು ಅಧಿಕಾರಕ್ಕೆ ಬರುವುದು ಸತ್ಯ

ಚಿಂತಾಮಣಿ: ‘ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಆಗ ನಾನು ಸ್ವಚ್ಛ, ದಕ್ಷ, ಪ್ರಾಮಾಣಿಕ ಆಡಳಿತ ನೀಡುತ್ತೇನೆ’ ಯಡಿಯೂರಪ್ಪ ತಿಳಿಸಿದರು.

‘ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮೀಯರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಆಶಯ. ಆದರೆ ಕಾಂಗ್ರೆಸ್‌ನವರು ಮುಸ್ಲಿಮರನ್ನು ಮತಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕ್ಕೆ ಬೆಣ್ಣೆ ಎನ್ನುವಂತಹ ಕೆಲಸ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ನೆಮ್ಮದಿಯಿಂದ ಬದುಕುವಂತೆ ಮಾಡುತ್ತೇವೆ’ ಎಂದು ಹೇಳಿದರು.

* * 

ಸಿದ್ದರಾಮಯ್ಯ ಈ ಭಾಗಕ್ಕೆ ಕೊಳಚೆ ನೀಡು ಕೊಡುವ ಮೂಲಕ ಮತ್ತಷ್ಟು ಕಾಯಿಲೆ ಅಂಟಿಸಲು ಹೊರಟಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ.

ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry