ಯುವಜನರಿಗೆ ಸಂವಿಧಾನವೇ ಪವಿತ್ರ ಗ್ರಂಥ

7

ಯುವಜನರಿಗೆ ಸಂವಿಧಾನವೇ ಪವಿತ್ರ ಗ್ರಂಥ

Published:
Updated:

ಹಾಸನ: ಎಲ್ಲಾ ಧರ್ಮಗಳ ಸಾರವೂ ಅಡಗಿರುವ ಭಾರತದ ಸಂವಿಧಾನವೇ ಯುವಜನರ ಪವಿತ್ರ ಗ್ರಂಥವಾಗಬೇಕು. ಸಂವಿಧಾನದ ಆಶಯ ಅರಿತು ಈ ನೆಲದ ಕಾನೂನುಗಳನ್ನು ಗೌರವಿಸಿದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೃಷ್ಣಮೂರ್ತಿ ಬಿ. ಸಂಗಣ್ಣನವರ್ ಆಶಯ ವ್ಯಕ್ತಪಡಿಸಿದರು.

ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವದಿನ, ಕಾನೂನು ಅರಿವು ಮತ್ತು ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ರಚನೆ ಮಾಡಿರುವ ದಾರ್ಶನಿಕರಲ್ಲಿ ಯಾವ ಪೂರ್ವಗ್ರಹಗಳೂ ಇರಲಿಲ್ಲ. ಎಲ್ಲಾ ಪ್ರಜೆಗಳಿಗೂ ಸಮಾನ ಅವಕಾಶ ಒದಗಿಸಿ, ಸಮೃದ್ಧ, ಸಶಕ್ತ ಭಾರತ ನಿರ್ಮಾಣ ಮಾಡಬೇಕೆಂಬ ಆಶಯ ಮಾತ್ರ ಅವರಲ್ಲಿದ್ದುದು. ಯುವಜನರು ಕಡ್ಡಾಯವಾಗಿ ಸಂವಿಧಾನ ಅಧ್ಯಯನ ನಡೆಸಬೇಕು. ಆಗ ದಾರಿತಪ್ಪದಂತೆ ಎಚ್ಚರವಹಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

‘ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸಿಲ್ಲ. ಟಿ.ವಿ ವಾಹಿನಿಗಳ ಸ್ಟುಡಿಯೊಗಳಲ್ಲಿ ನಡೆಯುವ ಚರ್ಚೆಗಳನ್ನು ನೋಡಿ ಯಾವುದೇ ನಿರ್ಧಾರಕ್ಕೆ ಬಾರದೆ ಸ್ವತಃ ಅಧ್ಯಯನಶೀಲರಾಗಿಬೇಕು. ಬುದ್ಧ, ವಿವೇಕಾನಂದ, ಬಸವಣ್ಣ, ಅಂಬೇಡ್ಕರ್, ಶಂಕರಾಚಾರ್ಯ, ನಾರಾಯಣಗುರು ಸೇರಿದಂತೆ ದಾರ್ಶನಿಕರ ಕುರಿತು ಓದಿ ತಿಳಿಯಿರಿ. ಆಗ ನಿಮ್ಮಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಣಯಿಸುವ ಅರಿವು ಮೂಡುತ್ತದೆ’ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ರೈ ಅವರು, ‘ನಮ್ಮ ಕರ್ತವ್ಯವನ್ನು ನಿರ್ವಹಿಸದೆ ಹಕ್ಕುಗಳನ್ನು ಕೇಳುವುದು ಅನೈತಿಕ. ಸಾಧನೆ ಮಾಡುವ ಇಚ್ಛಾಶಕ್ತಿ ಇದ್ದರೆ, ಬಡತನ ಸೇರಿದಂತೆ ಯಾವ ಅಡೆತಡೆಗಳೂ ನಿಲ್ಲುವುದಿಲ್ಲ’ ಎಂದು ತಾವು ಹೋಟೆಲ್ ನಲ್ಲಿ ಕೆಲಸ ಮಾಡಿ ನ್ಯಾಯಾಧೀಶರಾಗುವ ಹಂತಕ್ಕೆ ಬೆಳೆದ ಬಗೆಯನ್ನು ತಿಳಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಕಾಲೇಜು ಪ್ರಾಂಶುಪಾಲರಾದ ಎಚ್.ಎ. ರೇಖಾ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಳಲಿ ಹರೀಶ್‌ಕುಮಾರ್ ಇದ್ದರು. ಪ್ರಾಧ್ಯಾಪಕಿ ಸುಮಾ ವೀಣಾ ನಿರೂಪಿಸಿದರು, ಆನಂದಕುಮಾರ್ ಸ್ವಾಗತಿಸಿದರು, ಅಕ್ಷಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದರು. ಎಂ.ಆರ್. ರಾಮಚಂದ್ರ ವಂದಿಸಿದರು.

* * 

ಧರ್ಮವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.

ಕೃಷ್ಣಮೂರ್ತಿ ಬಿ. ಸಂಗಣ್ಣನವರ್ ಜಿಲ್ಲಾ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry