ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಟ್ಟದಲ್ಲಿ ಸಮ್ಮೇಳನಗಳಿಂದ ಕನ್ನಡ ಕಂಪು

Last Updated 13 ಜನವರಿ 2018, 8:58 IST
ಅಕ್ಷರ ಗಾತ್ರ

ಕುಂದಗೋಳ: ‘ಕನ್ನಡ ಭಾಷೆ ಉಳಿಯಬೇಕು. ಬೆಳೆಯಬೇಕು. ಕರ್ನಾಟಕದ ಸಂಸ್ಕೃತಿ ರಕ್ತಗತವಾಗಬೇಕು. ಪರಭಾಷೆಯ ವ್ಯಾಮೋಹ ಮಾತೃ ಭಾಷೆಯನ್ನು ಮರೆಯುವಂತೆ ಮಾಡಬಾರದು’ ಎಂದು ಕುಂದಗೋಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜನಪದ, ಅಧ್ಯಾತ್ಮ ಹಾಗೂ ಸಾಹಿತ್ಯದ ತವರೂರಾದ ಪಶುಪತಿಹಾಳದ ಬಾಲಲೀಲ ಮಹಾಂತ ಸ್ವಾಮಿಗಳ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 6ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವಾ, ಸತ್ತಂತಿ ಹರನು ಬಡಿದೆಚ್ಚರಿಸು ಕಚ್ಚಾಡುವವರನು ಕೂಡಿಸು ಒಲಿಸು, ಹೊಟ್ಟೆಕಿಚ್ಚಿಗೆ ಕಣ್ಣೀರ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು ’ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸುವ ಕಾವ್ಯದ ಹಾಗೆ ಕವಿ ಜಿ.ಪಿ ರಾಜರತ್ನಂ ಅವರಿಗೆ ಕನ್ನಡ ಪದಗಳೆಂದರೆ ಪ್ರಾಣ. ಹೆಂಡ, ಹೆಂಡತಿಯನ್ನು ಬಿಡಲು ಸಿದ್ಧವಿರುವ ಕವಿ ಕನ್ನಡ ಪದಗಳನ್ನು ಬಿಡಲು ಸಿದ್ಧವಿಲ್ಲ ಎಂದು ಹೇಳಿದರು.

‘ಒಂದು ಭಾಗದ ಕನ್ನಡಿಗರು ಇನ್ನೊಂದು ಭಾಗದ ಕನ್ನಡಿಗರನ್ನು ಅಣಕಿಸುವ ಮನೋಭಾವ ದೂರವಾಗಬೇಕು. ಬೆಳಗಾವಿ ಕನ್ನಡಿಗರು ಮರಾಠಿಯಲ್ಲಿ, ಹೈದರಾಬಾದ್‌ ಕನ್ನಡಿಗರು ಉರ್ದುವಿನಲ್ಲಿ, ಮದ್ರಾಸ ಕನ್ನಡಿಗರು ತಮಿಳಿನಲ್ಲಿ, ಬಳ್ಳಾರಿ ಕನ್ನಡಿಗರು ತೆಲುಗಿನಲ್ಲಿ, ಕೊಡಗಿನವರು ಕೊಡವದಲ್ಲಿ, ದಕ್ಷಿಣ ಕನ್ನಡದವರು ತುಳುವಿನಲ್ಲಿ ಮಾತನಾಡಿದರೆ ಕನ್ನಡದಲ್ಲಿ ಮಾತನಾಡುವವರು ಯಾರು’ ಎಂದು ಪ್ರಶ್ನಿಸಿದರು.

ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷ ಶಂಕರಗೌಡ ಸಾತ್ಮಾರ ಮಾತನಾಡಿ, ‘ಇಂದಿನ ಯುವಕರು ಸಿನಿಮಾ ಟಿ.ವಿ. ಧಾರಾವಾಹಿ, ಫೇಸ್ ಬುಕ್, ವ್ಯಾಟ್ಸ್‌ ಆ್ಯಪ್‌ಗಳಲ್ಲಿ ತಲ್ಲೀನರಾಗುವುದನ್ನು ಬಿಟ್ಟು ಕನ್ನಡ ಭಾಷೆ , ನೆಲ, ಜಲ, ಸಂಸ್ಕೃತಿ ಉಳುವಿಗಾಗಿ ಪ್ರಯತ್ನಿಸಬೇಕು. ಗ್ರಾಮೀಣ ಮಟ್ಟದಲ್ಲಿ ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದರಿಂದ ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯ’ ಎಂದರು.

ಪತ್ರಕರ್ತ ವೀರೇಶ ಪ್ರಳಯಕಲ್ಮಠ ರಚಿಸಿದ ’ಹೆಂಗ್ ಮರಿಯಲಿ ಹಳ್ಳಿಯ ನೆನೆಪು’ ಹಾಗೂ ಪಶುಪತಿಹಾಳದ ಈಶ್ವರಪ್ಪ ಜಾವೂರ ರಚಿಸಿದ ‘ನಾಲತವಾಡದ ವೀರೇಶ್ವರ ಶರಣರು’ ಎಂಬ ಪುಸ್ತಕಗಳನ್ನು ಇಂಚಗೇರಿ ಸಂಸ್ಥಾನಮಠದ ಡಾ.ಎ.ಸಿ.ವಾಲಿ ಅವರು ಬಿಡುಗಡೆಗೊಳಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೃತ್ಯುಂಜಯ ಜಾವೂರ ರಾಷ್ಟ್ರ ಧ್ವಜಾರೋಹಣ ಮಾಡಿದರು. ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಅರಳಿಕಟ್ಟಿ ನೆರವೇರಿಸಿದರು. ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಅಂತರರಾಷ್ಟ್ರೀಯ ಕ್ರೀಡಾಪಟು ಶೋಭಾ ಜಾವೂರ ಚಾಲನೆ ನೀಡಿದರು. ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜೆಡಿಎಸ್‌ ಮುಖಂಡ ಮಲ್ಲಿಕಾರ್ಜುನ ಅಕ್ಕಿ, ಶಿಕ್ಷಣಾಧಿಕಾರಿ ಜಿ.ಎನ್.ಮಠಪತಿ, ಕೆ.ಎಸ್‌. ಕೌಜಲಗಿ, ಎ.ಬಿ. ಉಪ್ಪಿನ, ಭರಮಣ್ಣ ಮುಗಳಿ, ಶಸಾಪ ಅಧ್ಯಕ್ಷ ಜಿ.ಡಿ. ಘೋರ್ಪಡೆ, ಬಿ.ಎಲ್. ಪಾಟೀಲ, ಎಸ್.ಕೆ. ಗದಗಿನಮಠ, ಸಿ.ಬಿ. ಪಾಟೀಲ, ಎಸ್.ಜಿ. ಬಿಸಿರೊಟ್ಟಿ, ರಮೇಶ ಅತ್ತಿಗೇರಿ, ಎಂ.ಟಿ. ಅಕ್ಕಿ, ಪಿ. ಕಮಲಾಕ್ಷಿ, ಎಂ.ಆರ್. ಯಲ್ಲರಡ್ಡಿ ಇದ್ದರು. ಶಾಸಕ ಸಿ.ಎಸ್.ಶಿವಳ್ಳಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT