ಪೋಷಕಾಂಶ ತಜ್ಞೆಯ ಗೆಲುವಿನ ಹೆಜ್ಜೆಗಳು

7

ಪೋಷಕಾಂಶ ತಜ್ಞೆಯ ಗೆಲುವಿನ ಹೆಜ್ಜೆಗಳು

Published:
Updated:
ಪೋಷಕಾಂಶ ತಜ್ಞೆಯ ಗೆಲುವಿನ ಹೆಜ್ಜೆಗಳು

‘ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೇಯ್ಟ್’ ಎಂಬ ಜನಪ್ರಿಯ ಕೃತಿಯ ಮೂಲಕ ಗುರುತಾದವರು ರುಜುತಾ ದಿವೇಕರ್. ಅವರು ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಅರ್ಥಾತ್ ಪೋಷಕಾಂಶ ತಜ್ಞೆ. ಬಾಲಿವುಡ್ ನಟಿ ಕರೀನಾ ಕಪೂರ್ ‘ಝೀರೊ ಫಿಗರ್’ ರೂಪಿಸಿಕೊಳ್ಳಲು ನೆರವಾದವರು ಅವರೇ.

2009ರಲ್ಲಿ ಅವರು ಪ್ರಕಟಿಸಿದ ಪುಸ್ತಕ ಅತಿ ಹೆಚ್ಚು ಮಾರಾಟವಾದ ಕೃತಿಗಳ ಪಟ್ಟಿಯಲ್ಲಿ ಐದು ವರ್ಷಗಳ ಕಾಲ ಮೊದಲ ಸ್ಥಾನದಲ್ಲಿತ್ತು. ಈ ಪುಸ್ತಕ ಹಾಗೂ ಅವರದ್ದೇ ಎರಡನೇ ಕೃತಿ ‘ವಿಮೆನ್ ಅಂಡ್‌ ದಿ ವೇಟ್‌ ಲಾಸ್ ತಮಾಷಾ’ ಎರಡರ 40 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ. 2014ರಲ್ಲಿ ಅವರು ‘ಡೋಂಟ್ ಲೂಸ್ ಔಟ್, ವರ್ಕ್ ಔಟ್’ ಎಂಬ ಶೀರ್ಷಿಕೆಯ ಮೂರನೇ ಪುಸ್ತಕ ಬರೆದರು.

ಏಷ್ಯನ್ ಇನ್‌ಸ್ಟಿಟ್ಯೂಟ್‌ ಆಫ್ ಗ್ಯಾಸ್ಟ್ರೊಎಂಟರಾಲಜಿಯಿಂದ ಪೋಷಕಾಂಶ ಪ್ರಶಸ್ತಿಗೆ ಭಾಜನರಾಗಿರುವ ರುಜುತಾ, ‘ಪೀಪಲ್ ಮ್ಯಾಗಜೀನ್’ ನಿಯತಕಾಲಿಕ 2012ರಲ್ಲಿ ಪಟ್ಟಿ ಮಾಡಿದ ಭಾರತದ 50 ಪ್ರಭಾವಿಗಳಲ್ಲಿ ಒಬ್ಬರಾಗಿದ್ದರು. ಉದ್ಯಮಿ ಅನಿಲ್ ಅಂಬಾನಿ, ನಟ–ನಟಿಯರಾದ ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ಶಾಹಿದ್ ಕಪೂರ್, ಅನುಪಮ್ ಖೇರ್ ಹಾಗೂ ರಿಚಾ ಚೆಡ್ಡಾ ಅವರ ಗ್ರಾಹಕರಲ್ಲಿ ಮುಖ್ಯರಾದವರು.

ಯಾವ ವ್ಯಾಯಾಮ ಮಾಡಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಆಹಾರ ತಿನ್ನಬೇಕು ಎನ್ನುವುದನ್ನು ಅವರು ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ಸೂಚಿಸುತ್ತಾರೆ. ಅದಕ್ಕೆ ತಕ್ಕಂತೆ ತೂಕ ಇಳಿಸಿಕೊಳ್ಳಲು ಅಥವಾ ಏರಿಸಿಕೊಳ್ಳಲು ಸಾಧ್ಯವಿದೆ. ಸ್ಥಳೀಯ ಹಾಗೂ ಆಯಾ ಋತುಮಾನದಲ್ಲಿ ಬೆಳೆಯುವ ಹಣ್ಣು–ತರಕಾರಿಗಳನ್ನು ತಿನ್ನುವಂತೆ ಅವರು ಸೂಚಿಸುತ್ತಾರೆ. ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಅಡುಗೆ ಮಾಡುವುದೇ ಸೂಕ್ತ ಎನ್ನುವುದು ಅವರ ಕಿವಿಮಾತು.

ರುಜುತಾ ಅವರಿಗೆ ಚಾರಣದ ಹವ್ಯಾಸವೂ ಇದ್ದು, ತಮ್ಮದೇ ಮ್ಯಾರಥಾನ್ ತರಬೇತಿ ಕೇಂದ್ರವನ್ನು ನಡೆಸುತ್ತಾರೆ. ವಿವಿಧೆಡೆ ಅದರ ಕಾರ್ಯಾಗಾರಗಳನ್ನೂ ಆಯೋಜಿಸುತ್ತಾರೆ.

ಕ್ರೀಡಾ ವಿಜ್ಞಾನ ಹಾಗೂ ಪೋಷಕಾಂಶ ವಿಷಯದಲ್ಲಿ ಮುಂಬೈನ ಎಸ್‌ಎನ್‌ಡಿಟಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರುಜುತಾ, ಆಸ್ಟ್ರೇಲಿಯಾದಲ್ಲಿಯೂ ಕ್ರೀಡಾ ಪೋಷಕಾಂಶ ಕುರಿತ ಒಂದು ಕೋರ್ಸ್ ಮಾಡಿದ್ದಾರೆ. ಅಯ್ಯಂಗಾರ್ ಯೋಗ, ವೇದಾಂತ ಹಾಗೂ ಆಯುರ್ವೇದದ ಬಗೆಗೂ ಅಧ್ಯಯನ ಮಾಡಿದ್ದಾರೆ.

ಮಹಾರಾಷ್ಟ್ರದ ಕುಟುಂಬಕ್ಕೆ ಸೇರಿದ ರುಜುತಾ ಅವರ ತಾಯಿ ರಸಾಯನ ವಿಜ್ಞಾನದ ಪ್ರೊಫೆಸರ್ ಆಗಿದ್ದವರು. ತಂದೆ ಎಂಜಿನಿಯರ್.

‘ಕನೆಕ್ಟ್ ವಿತ್ ಹಿಮಾಲಯ’ ಖ್ಯಾತಿಯ ಗೌರವ್ ಪುಂಜ್ ಅವರನ್ನು ಪರ್ವತಾರೋಹಣದ ವೇಳೆಯೇ ಅವರು ಮದುವೆಯಾದದ್ದು ಇನ್ನೊಂದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry