ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

7

ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

Published:
Updated:
ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

ಜಗತ್ತಿನ ವಿವಿಧ ದೇಶಗಳ ರಾಜಕಾರಣದಲ್ಲಿ ಭಾರತ ಮೂಲದ ಜನರು ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. 2015ರಲ್ಲಿ ಅಧಿಕಾರಕ್ಕೆ ಬಂದ ಕೆನಡಾದ ಸಂಪುಟದಲ್ಲಿ ಭಾರತ ಮೂಲದ ನಾಲ್ವರು ಸಚಿವರಿದ್ದಾರೆ. ಅಮೆರಿಕದ ಸಂಸತ್ತಿನಲ್ಲಿ ಭಾರತ ಸಂಜಾತ ಐವರು ಸಂಸದರಿದ್ದಾರೆ. ಬ್ರಿಟನ್‌ನ ತೆರೆಸಾ ಮೇ ನೇತೃತ್ವದ ಸರ್ಕಾರದಲ್ಲಿ ಭಾರತ ಮೂಲದ ನಾಲ್ವರು ಸಚಿವರಾಗಿದ್ದಾರೆ. ಇದು ಈವರೆಗಿನ ದಾಖಲೆ. ಈ ನಾಲ್ವರಲ್ಲಿ ಒಬ್ಬರು ರಿಷಿ ಸುನಕ್‌. ಇವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಇನ್ಫೊಸಿಸ್‌ನ ಸ್ಥಾಪಕ ನಾರಾಯಣಮೂರ್ತಿ ಅವರ ಮಗಳ ಗಂಡ.

ಸಂಕೋಚ ಸ್ವಭಾವದ, ಪ್ರಚಾರಪ್ರಿಯನಲ್ಲದ ರಿಷಿ, ರಿಚ್‌ಮಂಡ್‌ ಯಾರ್ಕ್‌ಶೈರ್‌ ಕ್ಷೇತ್ರದಿಂದ ಮೊದಲ ಬಾರಿ 2015ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಕನ್ಸರ್ವೇಟಿವ್‌ ಪಕ್ಷದ ನಾಯಕ ಡೇವಿಡ್‌ ಕೆಮರೂನ್‌ ಅವರು ರಿಷಿಯನ್ನು ಒತ್ತಾಯದಿಂದ ರಾಜಕೀಯಕ್ಕೆ ಎಳೆದು ತಂದಿದ್ದರು. ಗ್ರಾಮೀಣ ಪ್ರದೇಶಗಳಿಂದ ಕೂಡಿದ, ಕೃಷಿ ಪ್ರಧಾನವಾದ ಈ ಕ್ಷೇತ್ರದಿಂದ 2017ರಲ್ಲಿ ಅವರು ಪುನರಾಯ್ಕೆಯಾದಾಗ ಗೆಲುವಿನ ಅಂತರ 10 ಸಾವಿರದಷ್ಟು ಹೆಚ್ಚಾಗಿತ್ತು. ರಿಷಿ ಅವರ ಕನ್ಸರ್ವೇಟಿವ್‌ ಪಕ್ಷಕ್ಕೆ ಬ್ರಿಟನ್‌ನಲ್ಲಿಯೇ ಅತ್ಯಂತ ಸುರಕ್ಷಿತವಾದ ಕ್ಷೇತ್ರ ಇದು. 2015ರಲ್ಲಿ ರಿಷಿ ಅವರನ್ನು ಕಣಕ್ಕಿಳಿಸಿದಾಗ ಕನ್ಸರ್ವೇಟಿವ್‌ ಪಕ್ಷದಿಂದ ಈ ಕ್ಷೇತ್ರ ಕೈಬಿಟ್ಟು ಹೋಗಬಹುದೇ ಎಂಬ ಚರ್ಚೆ ನಡೆದಿತ್ತು. ಯಾಕೆಂದರೆ ಈ ಕ್ಷೇತ್ರದಲ್ಲಿ ಇರುವ ಶೇ 95ರಷ್ಟು ಮತದಾರರು ಸಂಪ್ರದಾಯಸ್ಥ ಬಿಳಿಯರು. ದಕ್ಷಿಣ ಏಷ್ಯಾದಿಂದ ಬಂದು ಇಲ್ಲಿ ನೆಲೆಸಿದವರು 122 ಮಂದಿ ಮಾತ್ರ.

ರಿಷಿ ಅವರ ಅಜ್ಜ ಬ್ರಿಟನ್‌ಗೆ ಹೋಗಿ ನೆಲೆಯಾದವರು. ಹಾಗಾಗಿ ರಿಷಿ ಅವರ ತಂದೆ–ತಾಯಿ ಅಲ್ಲಿಯೇ ಹುಟ್ಟಿದವರು. ತಂದೆ ವೈದ್ಯರಾಗಿದ್ದರೆ, ತಾಯಿ ಸಣ್ಣದೊಂದು ಔಷಧ ಅಂಗಡಿ ನಡೆಸುತ್ತಿದ್ದರು. ‘ಊರಿನ ಜನರಿಗೆ ಅಪ್ಪ–ಅಮ್ಮ ಬದ್ಧತೆಯಿಂದ ಸೇವೆ ಸಲ್ಲಿಸುವುದನ್ನು ನೋಡುತ್ತಾ ನಾನು ಬೆಳೆದೆ. ಹಾಗಾಗಿ, ಸಂಸದನಾಗಿ ಅದೇ ರೀತಿ ಕೆಲಸ ಮಾಡಬೇಕು ಎಂಬುದು ನನ್ನ ಬಯಕೆ’ ಎಂದು ರಿಷಿ ಹೇಳಿಕೊಂಡಿದ್ದಾರೆ.

ಫುಲ್‌ಬ್ರೈಟ್‌ ಫೆಲೊ ಆಗಿದ್ದ ರಿಷಿ, ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಇಲ್ಲಿ ರಿಷಿ ಅವರ ಸಹಪಾಠಿಯಾಗಿದ್ದರು. 2009ರಲ್ಲಿ ಅಕ್ಷತಾ–ರಿಷಿ ಬೆಂಗಳೂರಿನಲ್ಲಿ ಮದುವೆಯಾದರು. ಅವರಿಗೆ ಕೃಷ್ಣಾ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ರಾಜಕಾರಣಕ್ಕೆ ಬರುವ ಮೊದಲು ರಿಷಿ ಉದ್ಯಮಿಯಾಗಿದ್ದರು. ‘ಉದ್ಯಮದಲ್ಲಿ ನನಗೆ ಒಳ್ಳೆಯ ಯಶಸ್ಸು ದೊರೆತಿತ್ತು’ ಎಂದು ಅವರೇ ಹೇಳಿಕೊಂಡಿದ್ದಾರೆ. ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಈ ಉದ್ಯಮ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಬ್ರಿಟನ್‌ ಸಂಸತ್ತಿನಲ್ಲಿ ಹಲವು ವಿಚಾರಗಳ ಬಗ್ಗೆ ರಿಷಿ ಪ್ರೌಢವಾಗಿ ಮಾತನಾಡಿದ್ದಾರೆ. ಡಿಜಿಟಲ್ ಅರ್ಥ ವ್ಯವಸ್ಥೆ, ವನ್ಯಮೃಗಗಳ ಕಾನೂನುಬಾಹಿರ ಮಾರಾಟ, ವಿದೇಶಿ ನೇರ ಹೂಡಿಕೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಪಲ್ಲಟಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

ಕನ್ಸರ್ವೇಟಿವ್‌ ಪಕ್ಷದ ವೆಬ್‌ಸೈಟ್‌ನಲ್ಲಿಯೂ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ. ಐರೋಪ‍್ಯ ಒಕ್ಕೂಟದಿಂದ ಬ್ರಿಟನ್‌ ಹೊರಗೆ ಬರಬೇಕು (ಬ್ರೆಕ್ಸಿಟ್‌) ಎಂಬುದನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ರಿಷಿ ಪ್ರಮುಖರು. ಬ್ರಿಟನ್‌ನ ಪ್ರಧಾನಿ ತೆರೆಸಾ ಕೂಡ ಬ್ರೆಕ್ಸಿಟ್‌ನ ಬೆಂಬಲಿಗರಾಗಿದ್ದಾರೆ.

ಐರೋಪ್ಯ ಒಕ್ಕೂಟದ ಭಾಗವಾಗಿ ಇರುವುದರಿಂದ ಬ್ರಿಟನ್‌ಗೆ ಭಾರಿ ನಷ್ಟವೇ ಆಗುತ್ತಿದೆ ಎಂಬುದು ರಿಷಿ ಅವರ ದೃಢ ವಾದ. ‘ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್‌ ಇದ್ದರೆ ಯುರೋಪ್‌ನ ದೇಶಗಳಿಂದ ಜನರು ಬ್ರಿಟನ್‌ಗೆ ವಲಸೆ ಬರುವುದಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ. ಇದರಿಂದಾಗಿ ಭಾರತದಂತಹ ದೇಶಗಳ ಜನರು ಬ್ರಿಟನ್‌ಗೆ ಬರುವುದಕ್ಕೆ ಅವಕಾಶ ಕಡಿಮೆಯಾಗುತ್ತದೆ. ಯುರೋಪ್‌ನ ದೇಶಗಳಿಂದ ಬರುವವರನ್ನು ತಡೆಯಲು ಅವಕಾಶ ಇಲ್ಲದ ಬ್ರಿಟನ್‌, ಬೇರೆ ದೇಶಗಳ ಜನರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕಾಗುತ್ತದೆ. ಇದು ಅತಾರ್ಕಿಕ ಮತ್ತು ತಾರತಮ್ಯದಿಂದ ಕೂಡಿದ್ದು’ ಎಂದು ರಿಷಿ ಪ್ರತಿಪಾದಿಸಿದ್ದರು. ಯುರೋಪ್‌ನಿಂದ ಮಾತ್ರವಲ್ಲ, ಜಗತ್ತಿನ ಎಲ್ಲ ದೇಶಗಳ ಅತ್ಯುತ್ತಮ ಜನರು ಬ್ರಿಟನ್‌ಗೆ ಬರಬೇಕು ಎಂದು ಹೇಳಿದ್ದರು.

ಸಣ್ಣ ವ್ಯಾಪಾರ ಮತ್ತು ಉದ್ಯಮದ ಬಗ್ಗೆ ರಿಷಿ ಉತ್ತಮ ಒಳನೋಟಗಳನ್ನು ಹೊಂದಿದ್ದಾರೆ. ‘ಐರೋಪ್ಯ ಒಕ್ಕೂಟದಿಂದಾಗಿ ಬ್ರಿಟನ್‌ನ ಸಣ್ಣ ವ್ಯಾಪಾರಕ್ಕೆ ಭಾರಿ ತೊಂದರೆಯಾಗಿದೆ. ಸಣ್ಣ ಉದ್ಯಮಕ್ಕೆ ಬ್ರಿಟನ್‌ ಸರ್ಕಾರ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಿಸಿದೆ. ಆದರೆ ಐರೋಪ್ಯ ಒಕ್ಕೂಟದ ಕಾನೂನು ಮತ್ತು ನಿಯಮಗಳ ಸಿಕ್ಕುಗಳಿಂದ ಈ ಉದ್ಯಮಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಬ್ರಿಟನ್‌ನ ಶೇ 94ರಷ್ಟು ಉದ್ಯಮಗಳಿಗೆ ಐರೋಪ್ಯ ಒಕ್ಕೂಟದ ಜತೆ ಯಾವ ಸಂಬಂಧವೂ ಇಲ್ಲ. ಹಾಗಿದ್ದರೂ ಈ ಉದ್ಯಮಗಳು ಒಕ್ಕೂಟದ ನಿಯಮಗಳನ್ನು ಪಾಲಿಸಬೇಕಾಗುತ್ತದೆ’ ಎಂಬುದು ಅವರ ಪ್ರತಿಪಾದನೆ.

ಸಣ್ಣ ಉದ್ಯಮಗಳೇ ಬ್ರಿಟನ್‌ನ ಜೀವಾಳ ಎಂಬುದು ಅವರ ಚಿಂತನೆ. ದೊಡ್ಡ ಉದ್ಯಮಗಳಿಗಿಂತ ಸಣ್ಣ ಉದ್ಯಮಗಳೇ ಹೆಚ್ಚು ಉದ್ಯೋಗ ಸೃಷ್ಟಿಸುತ್ತವೆ. ಶೇ 85ರಷ್ಟು ಉದ್ಯೋಗ ಸೃಷ್ಟಿ ಸಣ್ಣ ಉದ್ಯಮಗಳಿಂದಲೇ ಆಗುತ್ತಿವೆ ಎಂದು ಅವರು ಹೇಳುತ್ತಾರೆ.

ಡಾರ್ಲಿಂಗ್ಟನ್‌ ಎಂಡ್‌ ಸ್ಟಾಕ್‌ಟನ್‌ ಟೈಮ್ಸ್‌ ಪತ್ರಿಕೆಯಲ್ಲಿ ರಿಷಿ ವಾರಕ್ಕೊಂದು ಅಂಕಣ ಬರೆಯುತ್ತಾರೆ. ಕಳೆದ ಕ್ರಿಸ್‌ಮಸ್‌ ಸಂದರ್ಭದಲ್ಲಿ ಬರೆದ ಅಂಕಣದಲ್ಲಿಯೂ ಸಣ್ಣ ವ್ಯಾಪಾರದ ಬಗ್ಗೆ ತಮಗೆ ಇರುವ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ. ಕ್ರಿಸ್‌ಮಸ್‌ ಸಂದರ್ಭದಲ್ಲಿ ‘ಮನೆಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಬೇಕಾದ ವಸ್ತುಗಳನ್ನು ಅಂತರ್ಜಾಲ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳುವ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅಂತರ್ಜಾಲ ಮೂಲಕ ಖರೀದಿಸುವ ಭರಾಟೆಯಲ್ಲಿ ನಮ್ಮ ಪಟ್ಟಣದ ಅಂಗಡಿಗಳನ್ನು ಮರೆಯಬಾರದು. ಮರೆತರೆ, ನಮಗೆ ಆಪ್ತವಾದ, ನಾವು ಪ್ರೀತಿಸುವ ಈ ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ಇದೇ ರೂಪದಲ್ಲಿ ನಾವು ನೋಡುವುದಕ್ಕೆ ಸಾಧ್ಯವಿಲ್ಲ’ ಎಂದು ಅವರು ಬರೆದಿದ್ದರು.

ಎಲ್ಲರಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ಅವರ ಇನ್ನೊಂದು ಕಳಕಳಿ. ತಮಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕಾಗಿ ಹೆತ್ತವರು ಅಪಾರ ತ್ಯಾಗ ಮಾಡಿದ್ದಾರೆ ಎಂಬುದು ಸದಾ ಅವರ ಮನಸಿನಲ್ಲಿದೆ. ಅವರ ವ್ಯಕ್ತಿ ಪರಿಚಯದಲ್ಲಿಯೂ ಅವರು ಇದನ್ನು ಹೇಳಿಕೊಂಡಿದ್ದಾರೆ. ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜ್‌, ಆಕ್ಸ್‌ಫರ್ಡ್‌ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಕಲಿಯುವ ಭಾಗ್ಯ ತಮಗೆ ದೊರೆಯಿತು. ಇದು ಅತ್ಯುತ್ತಮ ಅನುಭವವನ್ನು ಕಟ್ಟಿಕೊಟ್ಟಿತು. ಇದರ ಫಲವಾಗಿಯೇ ಎಲ್ಲರಿಗೂ ಅತ್ಯುತ್ತಮ ಶಿಕ್ಷಣ ದೊರೆಯಬೇಕು ಎಂಬ ತುಡಿತ ತಮ್ಮಲ್ಲಿ ಮೂಡಿದೆ ಎಂದು ಹೇಳಿದ್ದಾರೆ.

ಎಲ್ಲದರ ಬಗ್ಗೆಯೂ ಉದಾರವಾಗಿ ಯೋಚಿಸುವ ರಿಷಿ ಶಾಲಾ ಹಂತದಿಂದಲೇ ನಾಯಕನಾಗಿ ರೂಪುಗೊಳ್ಳುತ್ತಾ ಬಂದವರು. ಶಾಲೆಯಲ್ಲಿ ಅವರು ಗವರ್ನರ್‌ ಆಗಿದ್ದರು, ಬಳಿಕ ದೊಡ್ಡ ಯುವ ಸಂಘಟನೆಯ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಶಿಕ್ಷಣದ ಬಗೆಗಿನ ಜಾಗೃತಿ ಕಾರ್ಯಕ್ರಮಗಳಲ್ಲಿ ಸದಾ ಭಾಗವಹಿಸುತ್ತಿದ್ದರು. ಕನ್ಸರ್ವೇಟಿವ್‌ ಪಕ್ಷದಲ್ಲಿ ಅವರನ್ನು ‘ಉದಯಿಸುತ್ತಿರುವ ತಾರೆ’ ಎಂದು ಕರೆಯಲಾಗುತ್ತಿದೆ. 37ರ ಚಿಕ್ಕ ವಯಸ್ಸಿನಲ್ಲಿಯೇ ವಸತಿ, ಸಮುದಾಯ ಮತ್ತು ಸ್ಥಳೀಯಾಡಳಿತ ಇಲಾಖೆಯ ಕಿರಿಯ ಸಚಿವನಾಗಿದ್ದಾರೆ. ಚಿಂತನೆಗಳಲ್ಲಿ ಗೊಂದಲಗಳಿಲ್ಲದ ರಿಷಿಗೆ ದೊಡ್ಡ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳುವುದು ಕಷ್ಟವಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry