ಭೈರಪ್ಪ ಅವರ ಪ್ರಿಯವಾದ ‘ಐಟಂ’

7

ಭೈರಪ್ಪ ಅವರ ಪ್ರಿಯವಾದ ‘ಐಟಂ’

Published:
Updated:

ಬೆಂಗಳೂರು: ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡುವಾಗ, ಲೇಖಕ ಎಸ್‌.ಎಲ್‌. ಭೈರಪ್ಪ ಅವರು ‘ಐಟಂ’ ಪದ ಬಳಸಿದ್ದು ಸಭಿಕರಲ್ಲಿ ಮಿಶ್ರ ಭಾವನೆಗಳನ್ನು ಮೂಡಿಸಿತು.

ಕಾರ್ಯಕ್ರಮದ ಆಯೋಜನೆ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ  ಮೆಚ್ಚುಗೆ ವ್ಯಕ್ತಪಡಿಸಿದ ಭೈರಪ್ಪ, ‘ನನಗೆ ಬಹಳ ಒಳ್ಳೆಯ ಮತ್ತು ಅತ್ಯಂತ ಪ್ರಿಯವಾದ ‘ಐಟಂ’ವೊಂದನ್ನು ಇಟ್ಟಿದ್ದೀರಿ’ ಎಂದರು.

ಆರಂಭದಿಂದಲೇ ಸಭಾಂಗಣದಲ್ಲಿದ್ದ ಸಭಿಕರಿಗೆ ‘ಇದ್ಯಾವ ಐಟಂ, ನಮಗ್ಯಾರಿಗೂ ಕಾಣಿಸಲೇ ಇಲ್ಲವಲ್ಲ’ ಎನ್ನುವ ಕುತೂಹಲ ಆಗ ಆರಂಭವಾಯಿತು. ಸ್ವಲ್ಪ ತಡವಾಗಿ ಬಂದವರಿಗೆ, ‘ಅಯ್ಯೋ ಐಟಂ ಮಿಸ್‌ ಮಾಡಿಕೊಂಡೆವಲ್ಲಾ’ ಎಂಬ ನಿರಾಸೆ. ಅಷ್ಟರಲ್ಲಿ ಭೈರಪ್ಪ ಅವರೇ, ‘ಆ ಐಟಂ ಗಣಪತಿ ಭಟ್ಟರ ಹಿಂದೂಸ್ತಾನಿ ಗಾಯನ’ ಎಂದು ಗೊಂದಲ ನಿವಾರಿಸಿದರು.

‘ಶಾಸ್ತ್ರೀಯ ಸಂಗೀತ ನನಗೆ ಬಹಳ ಪ್ರಿಯ. ನನಗೆ ಇಷ್ಟವೆಂದೋ ಅಥವಾ ಸಮಾರಂಭಕ್ಕೆ ಮೆರುಗು ನೀಡಲೆಂದೋ ಇದನ್ನು ಇಟ್ಟಿದ್ದಾರೆ. ಒಟ್ಟಿನಲ್ಲಿ ಶಾಸ್ತ್ರೀಯ ಸಂಗೀತ ಕೇಳುವ ಅವಕಾಶವಂತೂ ಸಿಕ್ಕಿತು. ಹಿಂದೆಲ್ಲ ಯಾವುದೇ ಕಾರ್ಯಕ್ರಮ ನಡೆಸುವ, ನಾಟಕ ಆಡಿಸುವ ಮುನ್ನ ಇಂತಹ ಶುದ್ಧ ಸಂಗೀತ ಕಾರ್ಯಕ್ರಮವೂ ನಡೆಯುತ್ತಿತ್ತು. ಈಗೆಲ್ಲ ಇದು ಕಾಣೆಯಾಗಿದೆ’ ಎನ್ನುವ ಬೇಸರ ಅವರದು.

ಸಂಗೀತ, ನಾಟಕ, ಸಿನಿಮಾ, ಸಾಮಾಜಿಕ ಬದುಕಿನಲ್ಲಿ ‘ಐಟಂ’ ಎಂಬ ಪದ ಹೇಗೆಲ್ಲಾ ಬಳಕೆಯಾಗುತ್ತಿದೆ ಎನ್ನುವುದು ಬಹುತೇಕರಿಗೆ ಗೊತ್ತೇ ಇದೆ.

‘ಮಂದ್ರ ಕಾದಂಬರಿ ಓದಿ ಕೆಲವು ಸಂಗೀತ ಶಿಕ್ಷಕರು ಮುನಿಸಿಕೊಂಡು ನನ್ನ ಜೊತೆ ಮಾತು ಬಿಟ್ಟಿದ್ದಾರೆ’ ಎಂದು ಭೈರಪ್ಪ ನೆನಪಿಸಿಕೊಂಡರು. ಈಗ ಅವರ ಬಾಯಲ್ಲಿ ಶಾಸ್ತ್ರೀಯ ಸಂಗೀತ ‘ಐಟಂ’ ಆಗಿ ಪ್ರಯೋಗವಾಗಿದ್ದಕ್ಕೆ ಸಂಗೀತ ಶಿಕ್ಷಕರು ಮತ್ತೆ ಮುನಿಸಿಕೊಳ್ಳದಿದ್ದರೆ ಸಾಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry