ಯುವಿ, ಹರಭಜನ್‌, ಗಂಭೀರ್‌ ಮೇಲೆ ಕಣ್ಣು

7
ಇಂಡಿಯನ್ ಪ್ರೀಮಿಯರ್ ಲೀಗ್‌ ಆಟಗಾರರ ಹರಾಜು; 1,122 ಮಂದಿ ಲಭ್ಯ

ಯುವಿ, ಹರಭಜನ್‌, ಗಂಭೀರ್‌ ಮೇಲೆ ಕಣ್ಣು

Published:
Updated:
ಯುವಿ, ಹರಭಜನ್‌, ಗಂಭೀರ್‌ ಮೇಲೆ ಕಣ್ಣು

ನವದೆಹಲಿ : ಮುಂಬರುವ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಹರಾಜು ಪ್ರಕ್ರಿಯೆಗಾಗಿ 1122 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ಶನಿವಾರ ಹೇಳಿದೆ.

ಭಾರತದ ಯುವರಾಜ್‌ ಸಿಂಗ್‌, ಹರಭಜನ್‌ ಸಿಂಗ್‌, ಗೌತಮ್‌ ಗಂಭೀರ್ ಕೂಡ ಕಣದಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಜನವರಿ 27 ಮತ್ತು 28ರಂದು ಆಟಗಾರರ ಹರಾಜು ನಡೆಯಲಿದೆ.

2011ರ ವಿಶ್ವಕಪ್‌ನಲ್ಲಿ ಮಿಂಚಿದ್ದ ಭಾರತದ ರವಿಚಂದ್ರನ್ ಅಶ್ವಿನ್‌, ಅಜಿಂಕ್ಯ ರಹಾನೆ ಹಾಗೂ ಸ್ಪಿನ್ನರ್ ಕುಲದೀಪ್‌ ಯಾದವ್‌ ಕೂಡ ಹರಾಜಿಗೆ ಲಭ್ಯರಿದ್ದಾರೆ. ಕೆ.ಎಲ್‌.ರಾಹುಲ್‌, ಮುರಳಿ ವಿಜಯ್‌ ಅವರ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಪ್ರಮುಖ ಫ್ರಾಂಚೈಸ್‌ಗಳು ಅವರನ್ನು ಕೊಂಡುಕೊಳ್ಳಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಹರಾಜಿಗೆ ಲಭ್ಯವಿರುವ ವಿದೇಶಿ ಆಟಗಾರರಲ್ಲಿ ಕ್ರಿಸ್‌ ಗೇಲ್‌ ಹಾಗೂ ಬೆನ್‌ ಸ್ಟೋಕ್ಸ್‌ ಮುಂಚೂಣಿಯಲ್ಲಿದ್ದಾರೆ. 2017ರಲ್ಲಿ ಸ್ಟೋಕ್ಸ್‌ ದುಬಾರಿ ಬೆಲೆಗೆ ಹರಾಜಾಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೇಲ್‌ ಅವರನ್ನು ಉಳಿಸಿಕೊಂಡಿಲ್ಲ. ಆದರೆ ಹರಾಜಿನಲ್ಲಿ ಅವರನ್ನು ಕೊಂಡುಕೊಳ್ಳುವ ಅವಕಾಶ ಇದೆ. ಈ ಮೊದಲು ಐಪಿಎಲ್‌ ಆಡಿದ 281 ಆಟಗಾರರ ಜೊತೆಗೆ ಮೊದಲ ಬಾರಿಗೆ ಆಡುವ ಉದ್ದೇಶ ಹೊಂದಿರುವ 838 ಆಟಗಾರರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 778 ಭಾರತದ ಆಟಗಾರರು ಸೇರಿದಂತೆ ಮೂವರು ವಿದೇಶಿಯರು ಕೂಡ ಇದ್ದಾರೆ ಎಂದು ಐಪಿಎಲ್‌ ಫ್ರಾಂಚೈಸ್‌ಗಳು ಪಟ್ಟಿ ಮಾಡಿವೆ.

ವಿದೇಶದ 282 ಆಟಗಾರರಲ್ಲಿ ಆಸ್ಟ್ರೇಲಿಯಾ (58), ದಕ್ಷಿಣ ಆಫ್ರಿಕಾ (57), ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್‌ (30), ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ (26) ಆಟಗಾರರು ಹರಾಜಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌, ಪ್ಯಾಟ್ ಕಮಿನ್ಸ್‌, ಮೈಕಲ್ ಜಾನ್ಸನ್‌ ಅವರೊಂದಿಗೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಕೂಡ ಹರಾಜಿಗೆ ಲಭ್ಯರಿದ್ದಾರೆ. ಕೆರಿಬಿಯನ್ ತಂಡದ ಡ್ವೇನ್‌ ಬ್ರಾವೊ, ಕಾರ್ಲೋಸ್ ಬ್ರಾಥ್‌ವೇಟ್‌, ಇವಿನ್ ಲೆವಿಸ್‌, ಜಾಸನ್ ಹೋಲ್ಡರ್ ಇದ್ದಾರೆ.

10ನೇ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡದ ಪರ ಶತಕ ದಾಖಲಿಸಿದ್ದ ಹಾಶಿಮ್ ಆಮ್ಲಾ ಹೆಚ್ಚು ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ. ಫಾಫ್‌ ಡು ಪ್ಲೆಸಿಸ್‌, ಕ್ವಿಂಟನ್ ಡಿ ಕಾಕ್‌, ಡೇವಿಡ್ ಮಿಲ್ಲರ್‌, ಮೋರ್ನೆ ಮಾರ್ಕೆಲ್‌, ಕಗಿಸೊ ರಬಾಡ ಕೂಡ ಮುಂಚೂಣಿಯಲ್ಲಿದ್ದಾರೆ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌, ಕೊಲಿನ್ ಮನ್ರೊ, ಟಾಮ್ ಲಥಾಮ್‌ ಕಣದಲ್ಲಿ ಇದ್ದಾರೆ. ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನದ 13 ಆಟಗಾರರು ಹರಾಜಿಗೆ ಅವಕಾಶ ಪಡೆದಿದ್ದಾರೆ. ಐರ್ಲೆಂಡ್ ಹಾಗೂ ಜಿಂಬಾಬ್ವೆಯ ಇಬ್ಬರು ಆಟಗಾರರು ಇದ್ದಾರೆ.

***

ಅಂಕಿ ಅಂಶ

1122

ಹರಾಜಿಗಾಗಿ ನೋಂದಣಿ ಮಾಡಿಕೊಂಡಿರುವ ಆಟಗಾರರು

281

ಈಗಾಗಲೇ ಐಪಿಎಲ್ ಆಡಿರುವ ಆಟಗಾರರು

838

ಮೊದಲ ಬಾರಿ ಐಪಿಎಲ್‌ನಲ್ಲಿ ಆಡಲು ಬಯಸಿರುವವರು

282

ವಿದೇಶಿ ಆಟಗಾರರು

58

ಆಸ್ಟ್ರೇಲಿಯಾದ ಆಟಗಾರರು

57

ದಕ್ಷಿಣ ಆಫ್ರಿಕಾ ಆಟಗಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry