ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಾನ್ಶಿಯರ್‌ ಅಪಹರಿಸಿ ₹100 ಕೋಟಿ ಕೇಳಿದ್ದರು!

ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷೆ ಸೇರಿ ನಾಲ್ವರ ಸೆರೆ
Last Updated 13 ಜನವರಿ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು:‌ ಯಲಹಂಕದ ಫೈನಾನ್ಶಿಯರ್‌ ಮಲ್ಲಿಕಾರ್ಜುನಪ್ಪ (47) ಅಪಹರಣ ಪ್ರಕರಣವನ್ನು ದೂರು ದಾಖಲಾದ 24 ಗಂಟೆಯಲ್ಲೇ ಭೇದಿಸಿರುವ ಈಶಾನ್ಯ ವಿಭಾಗದ ಪೊಲೀಸರು, ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಅರ್ಷಿಯಾ ಅಲಿ (25) ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಜ. 11ರಂದು ಬೆಳಿಗ್ಗೆ ಕೋಗಿಲು ಕ್ರಾಸ್‌ ಬಳಿ ಕಾರಿನಲ್ಲಿ ಹೊರಟಿದ್ದ ಮಲ್ಲಿಕಾರ್ಜುನಪ್ಪ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಪಿಸ್ತೂಲ್‌ ತೋರಿಸಿ ₹3 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದರು. ಬಳಿಕ ಇನ್ನೊಂದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಮಲ್ಲಿಕಾರ್ಜುನಪ್ಪ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡು, ₹100 ಕೋಟಿ ಕೊಡುವಂತೆ ಕುಟುಂಬದವರಿಗೆ ಬೇಡಿಕೆ ಇಟ್ಟಿದ್ದರು. ಜೀವಭಯದಿಂದ ಕುಟುಂಬದವರು ₹60 ಲಕ್ಷ ಕೊಟ್ಟಿದ್ದರು.

ಅದಾದ ಬಳಿಕ ಮಲ್ಲಿಕಾರ್ಜುನಪ್ಪ ಅವರನ್ನು ಆರೋಪಿಗಳು ಬಿಡುಗಡೆ ಮಾಡಿದ್ದರು. ಅಪಹರಣ, ಸುಲಿಗೆ ಬಗ್ಗೆ ಮಗ ರವಿಕುಮಾರ್‌ ಯಲಹಂಕ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದರು. ತನಿಖೆಗೆ ರಚಿಸಿದ್ದ ವಿಶೇಷ ತಂಡವು ಆರೋಪಿಗಳಾದ ಬಾಗಲೂರು ರಸ್ತೆಯ ನಿವಾಸಿ ಅರ್ಷಿಯಾ ಅಲಿ, ಎಚ್‌.ಬಿ.ಆರ್‌ ಲೇಔಟ್‌ನ ಕಾಂತ್‌ರಾಜ್‌ಗೌಡ (30), ಬಾಗಲೂರು ರಸ್ತೆ ರೇಣುಕಾಪ್ರಸಾದ್ (41), ಹೊರಮಾವು ಪ್ರದೀಪ್‌ (27) ಅವರನ್ನು ಬಂಧಿಸಿದೆ.

ಸಂಚು ರೂಪಿಸಿದ್ದು ಅರ್ಷಿಯಾ: ‘ಸಿನಿಮಾ ರಂಗದವರಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಮಲ್ಲಿಕಾರ್ಜುನಪ್ಪ ಫೈನಾನ್ಸ್‌ ಮಾಡುತ್ತಿದ್ದರು. ಅವರ ಬಳಿ ಅರ್ಷಿಯಾ ಸಹ ಹಣ ಪಡೆದಿದ್ದರು. ಹೀಗಾಗಿ ಅವರಿಬ್ಬರಿರೂ ಪರಸ್ಪರ ಪರಿಚಯವಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರ್ಥಿಕ ಸಂಕಷ್ಟವಿದ್ದಿದ್ದರಿಂದ ಅಪಹರಣಕ್ಕೆ ಅರ್ಷಿಯಾ ಸಂಚು ರೂಪಿಸಿದ್ದರು. ಅದಕ್ಕೆ ರಿಯಲ್‌ ಎಸ್ಟೇಟ್‌ ಏಜೆಂಟರಾದ ಕಾಂತರಾಜ್‌ಗೌಡ ಹಾಗೂ ರೇಣುಕಾಪ್ರಸಾದ್ ಸಹಕಾರ ಪಡೆದಿದ್ದರು. ಚಾಲಕ ಪ್ರದೀಪ್‌ ಸಹ ಕೃತ್ಯಕ್ಕೆ ನೆರವಾಗಿದ್ದರು’ ಎಂದರು.

ಸುಳಿವು ನೀಡಿದ ರೈಲು ಶಬ್ದ:ಬಾಗೇಪಲ್ಲಿಯ ಪಾಳು ಮನೆಯೊಂದರಲ್ಲಿ ಅವರನ್ನು ಅಕ್ರಮವಾಗಿ ಬಂಧಿಸಿಡಲಾಗಿತ್ತು. ಕುಟುಂಬದವರು ಹಣ ಕೊಟ್ಟ ಬಳಿಕ, ಅಲ್ಲಿಂದಲೇ ಬಿಟ್ಟು ಕಳುಹಿಸಲಾಗಿತ್ತು.

‘ಕಣ್ಣಿಗೆ ಬಟ್ಟೆ ಕಟ್ಟಿ ಆರೋಪಿಗಳು ನನ್ನನ್ನು ಕರೆದೊಯ್ದಿದ್ದರು. ಎಲ್ಲಿಗೆ? ಹೇಗೆ? ಕರೆದೊಯ್ದರು ಎಂಬುದು ಗೊತ್ತಾಗಲಿಲ್ಲ. ಆದರೆ, ನನ್ನನ್ನು ಕೂಡಿಟ್ಟಿದ್ದ ಮನೆಯ ಸಮೀಪದಲ್ಲಿ ರೈಲು ಹೋಗುತ್ತಿದ್ದ ಶಬ್ದ ಕೇಳಿಸುತ್ತಿತ್ತು’ ಎಂದು ಅವರು ಪೊಲೀಸರಿಗೆ ಹೇಳಿದ್ದರು. ಆ ಸುಳಿವು ಬೆನ್ನತ್ತಿದ್ದ ಪೊಲೀಸರು, ರೈಲ್ವೆ ಇಲಾಖೆ ಹಾಗೂ ಸೈಬರ್‌ ಕ್ರೈಂ ಠಾಣೆಯ ಅಧಿಕಾರಿಗಳ ಸಹಾಯದಿಂದ ಬೆಂಗಳೂರಿನ ನಗರ ರೈಲು ನಿಲ್ದಾಣದಿಂದ ಹಾದು ಹೋಗುವ ರೈಲು ಹಳಿಗಳ ಅಕ್ಕ–ಪಕ್ಕದಲ್ಲಿ ಬಳಕೆಯಾದ ಮೊಬೈಲ್‌ಗಳ ಬಗ್ಗೆ ಮಾಹಿತಿ ಕಲೆಹಾಕಿದ್ದರು.

ಅಪಹರಣ ನಡೆದ ಸ್ಥಳದಲ್ಲಿ ಬಳಕೆಯಾದ ಮೊಬೈಲ್‌ ಮಾಹಿತಿಗೂ ಅದಕ್ಕೂ ಹೋಲಿಕೆ ಮಾಡಿ ನೋಡಿದಾಗ ಕೆಲವು ಅನುಮಾನಾಸ್ಪದ ನಂಬರ್‌ಗಳು ಸಿಕ್ಕಿದ್ದವು. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ವಿಶೇಷ ತಂಡದ ಪೊಲೀಸರು ಶನಿವಾರ ನಸುಕಿನಲ್ಲಿ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

‘ಅರ್ಷಿಯಾ ಮನೆಯಲ್ಲಿದ್ದ ₹20 ಲಕ್ಷ ನಗದು ಹಾಗೂ ಕಾರು ಜಪ್ತಿ ಮಾಡಿದ್ದೇವೆ. ಕಾಂತರಾಜ್‌ಗೌಡ ಮನೆಯಲ್ಲಿ ₹19 ಲಕ್ಷ ನಗದು, ಚಿನ್ನದ ಆಭರಣ, ಕಾರು ಹಾಗೂ ರೇಣುಕಾಪ್ರಸಾದ್‌ ಮನೆಯಲ್ಲಿ ಪಿಸ್ತೂಲ್, 6 ಜೀವಂತ ಗುಂಡು ಸಿಕ್ಕಿವೆ. ಪ್ರದೀಪ್‌ ಬಳಿಯಿಂದ ಚಾಕು, ಚಿನ್ನದ ಉಂಗುರ ಜಪ್ತಿ ಮಾಡಿದ್ದೇವೆ’ ಎಂದು ಡಿಸಿಪಿ ಗಿರೀಶ್‌ ತಿಳಿಸಿದರು.

‘ಕೃತ್ಯದ ಬಗ್ಗೆ ಮಲ್ಲಿಕಾರ್ಜುನಪ್ಪ ದೂರು ನೀಡುವುದಿಲ್ಲವೆಂದು ಆರೋಪಿಗಳು ತಿಳಿದಿದ್ದರು. ಹೀಗಾಗಿಯೇ ತಲಾ ₹20 ಲಕ್ಷ ಹಂಚಿಕೊಂಡು ಶುಕ್ರವಾರ ರಾತ್ರಿ ಮನೆಗೆ ಹೋಗಿ ಮಲಗಿದ್ದರು. ಮರುದಿನ ಎಚ್ಚರವಾಗುವ ಮುನ್ನವೇ ನಮ್ಮ ತಂಡ ಅವರ ಮನೆ ಮುಂದಿತ್ತು’ ಎಂದು ಹೇಳಿದರು.

ಡ್ರಾಪ್ ಕೇಳುವಂತೆ ನಟಿಸಿ ಅಪಹರಣ

ಜ. 1ರಂದು ಚಾಲಕ ರಜೆ ಇದ್ದರು. ಮಲ್ಲಿಕಾರ್ಜುನಪ್ಪ ಅವರೇ ನಸುಕಿನಲ್ಲಿ ಕಾರು ಚಲಾಯಿಸಿಕೊಂಡು ಕೆಲಸ ನಿಮಿತ್ತ ಹೊರಗೆ ಹೋಗಿದ್ದರು. ಬೆಳಿಗ್ಗೆ 7.45ರ ಸುಮಾರಿಗೆ ವಾಪಸ್‌ ಬರುವಾಗ, ಕೋಗಿಲು ಕ್ರಾಸ್‌ ಬಳಿ ಅರ್ಷಿಯಾ ಕೈ ಮಾಡಿ ನಿಲ್ಲಿಸಿದ್ದರು. ಕಾರು ನಿಲ್ಲಿಸುತ್ತಿದ್ದಂತೆ, ಉಳಿದ ಆರೋಪಿಗಳು ಸ್ಥಳಕ್ಕೆ ಬಂದು ಅಪಹರಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ವಿವರಿಸಿದರು.

ಪೊಲೀಸರು ಮನೆಗೆ ಹೋಗಿದ್ದ ವೇಳೆ, ‘ನಾನು ಯಾರು ಗೊತ್ತಾ. ಜೆಡಿಎಸ್‌ ಅಧ್ಯಕ್ಷೆ. ಇಲ್ಲಸಲ್ಲದ ಆರೋಪ ಮಾಡಬೇಡಿ. ಮನೆಯೊಳಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಹೆದರಿಸಿದ್ದರು. ಅದಕ್ಕೆ ಸೊಪ್ಪು ಹಾಕದ ಸಿಬ್ಬಂದಿ, ಮನೆಯೊಳಗೆ ಹೋಗಿ ₹20 ಲಕ್ಷವಿದ್ದ ಬ್ಯಾಗ್‌ ಹೊರಗಡೆ ತಂದಿದ್ದರು. ಅದನ್ನು ನೋಡಿದ ಅರ್ಷಿಯಾ, ತಪ್ಪೊಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT