ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಸೇವಾ ಮನೋಭಾವ ಇರಲಿ

Last Updated 14 ಜನವರಿ 2018, 9:27 IST
ಅಕ್ಷರ ಗಾತ್ರ

ದಾವಣಗೆರೆ: ಸೇವಾ ಮನೋಭಾವ ಹೊಂದಿರುವ ಪ್ರಾಮಾಣಿಕ ವ್ಯಕ್ತಿ ಗಳನ್ನು ರಾಜಕೀಯಕ್ಕೆ ಪರಿಚಯ ಮಾಡಿಕೊಡು ವಂತಹ ದೊಡ್ಡ ಜವಾಬ್ದಾರಿ ಮಠಗಳ ಮೇಲಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಹೇಳಿದರು.

ನಗರದ ಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎಚ್‌.ಶಿವಪ್ಪ ಪ್ರತಿಷ್ಠಾನ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಸೇವೆ ಮಾಡುವಂತಹ ವ್ಯಕ್ತಿಗಳು ರಾಜಕೀಯ ನೆಲಗಟ್ಟಿಗೆ ಬರುವ ಅಗತ್ಯವಿದೆ. ಈ ಹಿಂದೆ ಜಯದೇವ ಜಗದ್ಗುರುಗಳು ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್‌.ಪಟೇಲ್‌ ಒಳಗೊಂಡಂತೆ ಹಲವು ಮಹನೀಯರನ್ನು ರಾಜಕೀಯಕ್ಕೆ ಪರಿಚಯಿಸಿದ್ದರು. ಇಂತಹ ಕೆಲಸವನ್ನು ಪ್ರಸ್ತುತ ಎಲ್ಲಾ ಮಠಾಧೀಶರು ಮಾಡುವ ಅಗತ್ಯವಿದೆ ಎಂದರು.

ಎಚ್‌.ಶಿವಪ್ಪ ಪ್ರಾಮಾಣಿಕ ಹಾಗೂ ಸಕ್ರಿಯ ರಾಜಕಾರಣಿಯಾಗಿದ್ದರು. ಮಕ್ಕಳನ್ನು ಸಕ್ರಿಯ ರಾಜಕೀಯಕ್ಕೆ ತರಲಿಲ್ಲ. ಆದರೆ, ಅವರ ಮಕ್ಕಳು ತಮ್ಮ ಸಾಮರ್ಥ್ಯದ ಮೇಲೆ ರಾಜಕೀಯಕ್ಕೆ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಂದೆಯ ಹೆಸರಿನಲ್ಲಿ ಟ್ರಸ್ಟ್‌ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಎಸ್‌.ಎ. ರವೀಂದ್ರನಾಥ ಮಾತನಾಡಿ, ‘ಎಚ್‌.ಶಿವಪ್ಪ ಹಾಗೂ ನನ್ನ ನಡುವೆ ತುಂಬಾ ಆತ್ಮಿಯತೆ ಇತ್ತು. ಕೆಲವೊಮ್ಮೆ ಜಗಳವನ್ನೂ ಆಡಿದ್ದೇವೆ. ನಾನು ರೈತರ ಪರ ಹೋರಾಟ ಮಾಡುತ್ತಿದ್ದೆ. ಆಗ ಅವರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದರು. ಹೀಗಾಗಿ, ರೈತರ ವಿಚಾರದಲ್ಲಿ ಅವರೊಂದಿಗೆ ಜಗಳವಾಡುತ್ತಿದೆ. ನಂತರ ದಿನಗಳಲ್ಲಿ ಸಿರಿಗೆರೆ ಜಗದ್ಗುರುಗಳ ಆಶೀರ್ವಾದ ದಿಂದ ಇಬ್ಬರೂ ಶಾಸಕರಾದೆವು’ ಎಂದು ಶಿವಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಎಚ್‌.ಶಿವಪ್ಪ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಪುತ್ರ ನಾಗರಾಜ್‌ ಅವರಿಗೆ ರಾಜಕೀಯದಲ್ಲಿ ಉತ್ತಮ ಸ್ಥಾನ ದೊರಕಿಸಿಕೊಡುವಲ್ಲಿ ಸಹಕರಿಸುತ್ತೇನೆ’ ಎಂದರು.

ಬಿಜೆಪಿ ಮುಖಂಡ ಡಾ.ಎ.ಎಚ್.ಶಿವಯೋಗಿಸ್ವಾಮಿ, ‘ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಶಿವಪ್ಪ ಅವರ ಹೆಸರಿನಲ್ಲಿ ಟ್ರಸ್ಟ್‌ ಮಾಡಿರುವುದು ಉತ್ತಮ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಚ್‌.ಬಿ.ಮಂಜುನಾಥ, ಬಿ.ಎನ್‌.ಮಲ್ಲೇಶ್‌, ಈಜು ಕ್ರೀಡಾಪಟು ರೇವತಿ ನಾಯಕ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಮಂಜು ಅವರನ್ನು ಸನ್ಮಾನಿಸಲಾಯಿತು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಮಣಲಾಲ್‌ ಸಂಘವಿ, ಎನ್‌.ಜಿ. ಪುಟ್ಟಸ್ವಾಮಿ, ಬೇತೂರು ನಾಗರಾಜಪ್ಪ, ಕೆ.ಬಿ.ಶಂಕರನಾರಾಯಣ, ಡಾ.ಎಚ್‌.ವಿಶ್ವನಾಥ ಇದ್ದರು. ಮಾಜಿ ಸಂಸದ ಕೆ.ಆರ್‌.ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT